ಮೃಗಾಲಯಗಳು ಮನರಂಜನೆಗೂ ಸೈ, ಕಲಿಕೆಗೂ ಸೈ

Published : Oct 04, 2026, 05:49 AM IST
Animals

ಸಾರಾಂಶ

ನಿಮಗೆ ಪ್ರಾಣಿ, ಪಕ್ಷಿಗಳೆಂದರೆ ಇಷ್ಟಾನಾ? ಆದರೆ ಅದನ್ನು ಸಾಕಲು ಆಗುತ್ತಿಲ್ಲವೇ? ಚಿಂತೆ ಬೇಡ. ಮೃಗಾಲಯಗಳು ಪ್ರಾಣಿಗಳನ್ನು ದತ್ತು ಪಡೆಯುವ ಯೋಜನೆ ಜಾರಿಗೆ ತಂದಿವೆ. ನೀವು ನಿಮಗಿಷ್ಟವಾದ ಪ್ರಾಣಿ-ಪಕ್ಷಿಗಳನ್ನು ಒಂದು ವರ್ಷದ ಅವಧಿಗೆ ದತ್ತು ತೆಗೆದುಕೊಳ್ಳಬಹುದು

ನಿಮಗೆ ಪ್ರಾಣಿ, ಪಕ್ಷಿಗಳೆಂದರೆ ಇಷ್ಟಾನಾ? ಆದರೆ ಅದನ್ನು ಸಾಕಲು ಆಗುತ್ತಿಲ್ಲವೇ? ಚಿಂತೆ ಬೇಡ. ಮೃಗಾಲಯಗಳು ಪ್ರಾಣಿಗಳನ್ನು ದತ್ತು ಪಡೆಯುವ ಯೋಜನೆ ಜಾರಿಗೆ ತಂದಿವೆ. ನೀವು ನಿಮಗಿಷ್ಟವಾದ ಪ್ರಾಣಿ-ಪಕ್ಷಿಗಳನ್ನು ಒಂದು ವರ್ಷದ ಅವಧಿಗೆ ದತ್ತು ತೆಗೆದುಕೊಳ್ಳಬಹುದು. ನೀವು ಅದಕ್ಕಾಗಿ ಪಾವತಿಸುವ ಶುಲ್ಕಕ್ಕೆ ನಿಮಗೆ ಪ್ರಮಾಣಪತ್ರದ ಜೊತೆಗೆ ಒಂದು ವರ್ಷಕ್ಕೆ ಇಂತಿಷ್ಟು ಸಲ ಉಚಿತ ಪ್ರವೇಶ ನೀಡಲಾಗುತ್ತದೆ.

ವಿನೋದಕುಮಾರ್ ಬಿ ನಾಯ್ಕ್

ಶಾಲೆಗೆ ರಜೆ ಬಂತೆಂದರೆ ಸಾಕು ಮಕ್ಕಳನ್ನು ಮನೆಯಲ್ಲಿ ಹಿಡಿದಿಡೋದು ಬಹಳ ಕಷ್ಟ. ಮಕ್ಕಳನ್ನು ಹೊರಗೆ ಕರೆದೊಯ್ದು ಸುತ್ತಾಡಿಸಲು ಸೂಕ್ತವಾದ ತಾಣವೆಂದರೆ ಝೂಗಳು. ಅಂದರೆ, ಮೃಗಾಲಯಗಳು.

ಝೂಗಳನ್ನು ಈಗ ಹೊಸ ಹೆಸರುಗಳಿಂದ ಕರೆಯಲು ಶುರು ಮಾಡಿದ್ದಾರೆ. ಬಯಾಲಜಿಕಲ್ ಪಾರ್ಕ್, ಜೂವಾಲಾಜಿಕಲ್ ಪಾರ್ಕ್ ಹೀಗೆ ಹೊಸ ಹೆಸರುಗಳು ಬಂದಿವೆಯಾದರೂ, ಝೂ ಅನ್ನೋದು ಎಲ್ಲರಿಗೂ ಪರಿಚಿತ ಹಾಗೂ ಅತ್ಯಾಪ್ತ ಹೆಸರು. ಮೃಗಾಲಯಗಳು ಕೇವಲ ಖುಷಿಪಡುವ ತಾಣಗಳಲ್ಲ. ಅವುಗಳು ಇದೀಗ ಅತ್ಯಂತ ಮಾಹಿತಿಪೂರ್ಣ ಕಲಿಕಾ ಕೇಂದ್ರಗಳಾಗಿ ಹೊರ ಹೊಮ್ಮಿವೆ. ಒಂದು ರೀತಿಯಲ್ಲಿ ಪರ್ಯಾಯ ಶಿಕ್ಷಣ ಕೇಂದ್ರಗಳಾಗಿ ರೂಪುಗೊಂಡಿವೆ.

ಹುಲಿ, ಸಿಂಹ, ಚಿರತೆ, ಹಾವುಗಳನ್ನು ಅತ್ಯಂತ ಹತ್ತಿರದಿಂದ ನೋಡುವ ಜೊತೆಗೆ ಇಲ್ಲಿ ದೇಶ-ವಿದೇಶಗಳ ಹಕ್ಕಿ-ಪಕ್ಷಿಗಳು ಮತ್ತು ಖಗ-ಮೃಗಗಳನ್ನೂ ನೋಡುವ ಅವಕಾಶ ಸಿಗುತ್ತದೆ. ಅತಿ ಎತ್ತರದ ಜಿರಾಫೆ ನೋಡಲು ಆಫ್ರಿಕಾಗೆ ಹೋಗಬೇಕಿಲ್ಲ. ಅದೇ ರೀತಿ ಅನಕೊಂಡ ನೋಡಲು ಬ್ರಿಜಿಲ್ ಕಾಡುಗಳನ್ನೇ ಹೊಕ್ಕಬೇಕು ಅಂತಾನೂ ಇಲ್ಲ. ಮರಿಯಾನೆ ತನ್ನ ತಾಯಿಯ ಜೊತೆ, ಕುಟುಂಬದ ಜೊತೆ ಆಟ ಆಡುವುದನ್ನು ಗಂಟೆಗಟ್ಟಲೇ ಸುರಕ್ಷಿತವಾಗಿ ನಿಂತು ಮನದಣಿಯೇ ನೋಡಬಹುದು. ಇಂತಹ ಅವಕಾಶ ಸಿಗುವುದು ಝೂಗಳಲ್ಲಿ ಮಾತ್ರ.

ಕರ್ನಾಟಕದಲ್ಲಿ ಝೂ ಎಂದರೆ ದಶಕಗಳಿಂದಲೂ ನೆನಪಿಗೆ ಬರೋದು ಮೈಸೂರು ಮೃಗಾಲಯ. ನಂತರ ಅದರಷ್ಟೇ ಫೇಮಸ್ ನಮ್ಮ ಬೆಂಗಳೂರಿನ ಬನ್ನೇರುಘಟ್ಟ ಝೂ. ಇವೆಲ್ಲವೂ ಮಕ್ಕಳಿಗೆ ಅಚ್ಚುಮೆಚ್ಚಿನ ತಾಣ. ಇದೀಗ ಇವುಗಳು ಪ್ರವಾಸಿಗರಿಗೆ ಮತ್ತು ಮಕ್ಕಳಿಗೆ ಮಾತ್ರವಲ್ಲ, ವಯಸ್ಕರಿಗೂ ಕಲಿಕಾ ತಾಣಗಳಾಗಿವೆ. ಸಣ್ಣ ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ವಿದ್ಯಾರ್ಥಿಗಳು ಪಿಎಚ್ಡಿ ಮಾಡುವ ತನಕ ಝೂಗಳು ಅಭಿವೃದ್ಧಿಗೊಂಡಿವೆ. ಈ ಕಲಿಕಾ ತಾಣಗಳನ್ನು ಕರ್ನಾಟಕ ಅರಣ್ಯ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಮೃಗಾಲಯ ಪ್ರಾಧಿಕಾರ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಇದೀಗ ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ಎನಿಸುವ 8 ಮೃಗಾಲಯಗಳು ಇವೆ.

ಶ್ರೀ ಚಾಮರಾಜೇಂದ್ರ ಮೃಗಾಲಯ, ಮೈಸೂರು, ಬನ್ನೇರುಘಟ್ಟ ಜೈವಿಕ ಉದ್ಯಾನ, ಬೆಂಗಳೂರು, ಹುಲಿ ಮತ್ತು ಸಿಂಹಧಾಮ, ತ್ಯಾವರೆಕೊಪ್ಪ, ಶಿವಮೊಗ್ಗ, ಶ್ರೀಅಟಲ್ ಬಿಹಾರಿ ವಾಜಪೇಯಿ ಮೃಗಾಲಯ, ಕಮಲಾಪುರ, ಕಿತ್ತೂರು ರಾಣಿ ಚೆನ್ನಮ್ಮ ನಿಸರ್ಗಧಾಮ(ಮಿನಿ ಝೂ), ಬೆಳಗಾವಿ, ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯ, ದಾವಣಗೆರೆ, ಕಲಬುರಗಿ ಮಿನಿ ಝೂ, ಬಿಂಕದಕಟ್ಟಿ ಮಿನಿ ಝೂ, ಗದಗ, ಆಡುಮಲ್ಲೇಶ್ವರ ಮಕ್ಕಳ ಉದ್ಯಾನ ಮತ್ತು ಮಿನಿ ಝೂ, ಚಿತ್ರದುರ್ಗ. ಇವು ಕರ್ನಾಟಕದ ಪ್ರಮುಖ ಮೃಗಾಲಯಗಳು.

ಶತಮಾನಗಳ ಇತಿಹಾಸ ಹೊಂದಿರುವ ಮೈಸೂರು ಮೃಗಾಲಯ ಪ್ರಾಣಿ ಪಾಲನೆಯಲ್ಲಿ ವಿಶ್ವದರ್ಜೆಯ ಅಂಶಗಳನ್ನು ಅಳವಡಿಸಿಕೊಂಡಿರುವುದರಿಂದ ಅದೇ ಹಾದಿಯಲ್ಲಿ ಉಳಿದ ಮೃಗಾಲಯಗಳೂ ಸಹ ಅತ್ಯಂತ ಉತ್ಕಷ್ಟ ದರ್ಜೆಯ ಸವಲತ್ತುಗಳನ್ನು ನೀಡುತ್ತಿವೆ. ಪ್ರಾಣಿ ಪಾಲನೆ, ಅವುಗಳ ಊಟೋಪಚಾರ ಹಾಗೂ ಭೇಟಿ ನೀಡುವ ಪ್ರವಾಸಿಗರಿಗೆ ಅಗತ್ಯ ಮಾಹಿತಿಗಳನ್ನು ನೀಡುವ ಮೂಲಕ ಇವುಗಳು ಹೊಸ ಕಲಿಕಾ ಕೇಂದ್ರಗಳಾಗಿ ಬದಲಾಗಿವೆ.

ಈಗ ಕೆಲ ಮೃಗಾಲಯಗಳು ವನ್ಯಜೀವಿ ವಿಜ್ಞಾನದಲ್ಲಿ ಅತಿ ಎತ್ತರದ ಸಾಧನೆಗಳನ್ನು ಮಾಡಿವೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ರಣಹದ್ದುಗಳ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಅಳಿವಿನ ಅಂಚಿನಲ್ಲಿರುವ ರಣಹದ್ದುಗಳನ್ನು ತಂದು ಸಾಕಿ, ಸಲಹಿ, ಸಂತಾನೋತ್ಪತ್ತಿ ನಂತರ ಅವುಗಳ ಸಂಖ್ಯೆ ಹೆಚ್ಚಳವಾದ ಮೇಲೆ ರಣಹದ್ದುಗಳನ್ನು ಮರಳಿ ಕಾಡಿಗೆ ಬಿಡುವ ಯೋಜನೆ ರೂಪಿಸಲಾಗಿದೆ. ಅಂದರೆ, ಅಳಿವಿನ ಅಂಚಿನಲ್ಲಿರುವ ಒಂದು ಜೀವಿಯನ್ನು ಮೃಗಾಲಯಗಳಲ್ಲಿ ಅತ್ಯಂತ ಸೂಕ್ತ ವಾತಾವರಣ ನಿರ್ಮಿಸಿ ಅವುಗಳ ಸಂತತಿಯನ್ನು ಉಳಿಸಿ ಬೆಳೆಸುವ ಮಹತ್ವದ ಕೆಲಸವನ್ನು ಸಹ ಈ ಮೃಗಾಲಯಗಳು ಮಾಡುತ್ತಿವೆ.

ಇಷ್ಟೇ ಅಲ್ಲ, ಕಾಡಂಚಿನ ಗ್ರಾಮಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಪದೇ ಪದೇ ಕಾರಣವಾಗುವ ಆನೆ, ಹುಲಿ, ಚಿರತೆ ಮತ್ತಿತರ ಪ್ರಾಣಿಗಳನ್ನು ತಂದು ಅವುಗಳನ್ನು ಪುನರ್ವಸತಿ ಕೇಂದ್ರದಲ್ಲಿಟ್ಟು ಪೋಷಣೆ ಮಾಡಲಾಗುತ್ತಿದೆ. ಈ ವನ್ಯಜೀವಿ ಪುನರ್ವಸತಿ ಕೇಂದ್ರಗಳು ಸಹ ಇದೇ ಅರಣ್ಯ ಇಲಾಖೆಯ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಯೊಳಗೆ ಕಾರ್ಯ ನಿರ್ವಹಿಸುತ್ತದೆ.

ಇವುಗಳ ಜೊತೆಗೆ ಮೃಗಾಲಯಗಳು “ದತ್ತು ಯೋಜನೆ”ಯನ್ನು ಸಹ ಶುರು ಮಾಡಿವೆ. ಅಂದರೆ, ನೀವು ನಿಮಗಿಷ್ಟವಾದ ಪ್ರಾಣಿ-ಪಕ್ಷಿಗಳನ್ನು ಒಂದು ವರ್ಷದ ಅವಧಿಗೆ ದತ್ತು ತೆಗೆದುಕೊಳ್ಳಬಹುದು. ನೀವು ಅದಕ್ಕಾಗಿ ಪಾವತಿಸುವ ಶುಲ್ಕಕ್ಕೆ ನಿಮಗೆ ಪ್ರಮಾಣಪತ್ರದ ಜೊತೆಗೆ ಒಂದು ವರ್ಷಕ್ಕೆ ಇಂತಿಷ್ಟು ಸಲ ಉಚಿತ ಪ್ರವೇಶ ನೀಡಲಾಗುತ್ತದೆ. ದತ್ತು ಯೋಜನೆಯಡಿ ನಾನಾ ಸಂಘ ಸಂಸ್ಥೆಗಳು ಹಾಗೂ ವ್ಯಕ್ತಿಗಳು ನೂರಾರು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.

ಮೈಸೂರು ಮೃಗಾಲಯ ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನಗಳು ಜಗತ್ತಿನ ಅತಿ ದೊಡ್ಡ ಹಾಗೂ ಅತ್ಯುತ್ತಮ ಝೂಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಮೃಗಾಲಯಗಳು ಅರಣ್ಯ ಇಲಾಖೆಗೆ ಆದಾಯ ತಂದು ಕೊಡುವುದರ ಜೊತೆಗೆ ಮಕ್ಕಳು ಹಾಗೂ ವಯಸ್ಕರಲ್ಲಿ ಪ್ರಾಣಿ-ಪಕ್ಷಿಗಳ ಬಗ್ಗೆ ಪ್ರೀತಿ ಹಾಗೂ ಜ್ಞಾನವನ್ನು ಪಸರಿಸುವ ಕೇಂದ್ರಗಳಾಗಿ ಸೇವೆ ಸಲ್ಲಿಸುತ್ತಿವೆ.

ಝೂಗಳಿಗೆ ವೀಕ್ಷಕರ ಭೇಟಿ (2025-26)

70,20,549

ಒಟ್ಟು ಆದಾಯ – 117,36,02,807 ರು.

ನಮ್ಮ ಮೃಗಾಲಯಗಳು ಈಗ ವಿಶ್ವದರ್ಜೆಯ ಸೌಲಭ್ಯಗಳನ್ನು ಪ್ರಾಣಿಗಳಿಗೆ ನೀಡುತ್ತಿವೆ. ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಈಗ ಇವು ಶೈಕ್ಷಣಿಕ ಕೇಂದ್ರಗಳಾಗಿ ರೂಪುಗೊಂಡಿವೆ. ಮುಂದಿನ ದಿನಗಳಲ್ಲಿ ವನ್ಯಜೀವಿ ಸಂರಕ್ಷಣೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮೃಗಾಲಯಗಳು ಇನ್ನೂ ಹೆಚ್ಚಿನ ಪ್ರಮುಖ ಪಾತ್ರವನ್ನು ವಹಿಸಲಿವೆ.

• ಡಾ ರವಿಶಂಕರ್ ಎಸ್ ಎಸ್, ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ಮೃಗಾಲಯ ಪ್ರಾಧಿಕಾರ

PREV
Read more Articles on

Recommended Stories

ಭಾರತಕ್ಕೆ ಬೇಕಿದೆ ಸ್ವದೇಶಿ ಎಐ ಚಿಪ್ ಶಕ್ತಿ
ಬಿಸಿಲೂರು ವಿಜಯಪುರದಲ್ಲಿ ಗ್ರೇಟ್‌ ಗ್ರೀನ್‌ ವಾಲ್‌, ಏಪ್ರಿಲ್‌ಕೂಲ್‌