ಬಿಸಿಲೂರು ವಿಜಯಪುರದಲ್ಲಿ ಗ್ರೇಟ್‌ ಗ್ರೀನ್‌ ವಾಲ್‌, ಏಪ್ರಿಲ್‌ಕೂಲ್‌

Published : Oct 03, 2026, 08:20 AM IST
forest

ಸಾರಾಂಶ

ಏಪ್ರಿಲ್‌ ಫೂಲ್‌ ಅಂತಾ ನಾವು ಏನು ಏಪ್ರಿಲ್‌ 1ನೇ ತಾರೀಕನ್ನು ಆಚರಿಸುತ್ತೇವೆಯೋ ಅದೇ ದಿನವನ್ನು ಏಪ್ರಿಲ್‌ ಕೂಲ್‌ ದಿನ ಎಂದು ವಿಜಯಪುರದಲ್ಲಿ ಆಚರಿಸಲು ಶುರು ಮಾಡಲಾಯಿತು. ವಿಜಯಪುರದ ಬಿಸಿಲ ಬೇಗೆಯನ್ನು ತಗ್ಗಿಸಿ, ಏಪ್ರಿಲ್‌ ಕೂಲ್‌ ಮಾಡೋಣ ಎನ್ನುವ ಸಂಕಲ್ಪ ಮಾಡಲಾಗಯಿತು.

ಏಪ್ರಿಲ್‌ ಫೂಲ್‌ ಅಂತಾ ನಾವು ಏನು ಏಪ್ರಿಲ್‌ 1ನೇ ತಾರೀಕನ್ನು ಆಚರಿಸುತ್ತೇವೆಯೋ ಅದೇ ದಿನವನ್ನು ಏಪ್ರಿಲ್‌ ಕೂಲ್‌ ದಿನ ಎಂದು ವಿಜಯಪುರದಲ್ಲಿ ಆಚರಿಸಲು ಶುರು ಮಾಡಲಾಯಿತು. ಆ ದಿನ ಜಿಲ್ಲೆಯಾದ್ಯಂತ ಗಿಡಗಳನ್ನು ನೆಡುವ ಮೂಲಕ ವಿಜಯಪುರದ ಬಿಸಿಲ ಬೇಗೆಯನ್ನು ತಗ್ಗಿಸಿ, ಏಪ್ರಿಲ್‌ ಕೂಲ್‌ ಮಾಡೋಣ ಎನ್ನುವ ಸಂಕಲ್ಪ ಮಾಡಲಾಗಯಿತು.

ವಿಜಯಪುರ ಜಿಲ್ಲೆಯಲ್ಲಿ ಈಗ ಈ ಹಿಂದಿನಷ್ಟು ಸೆಕೆ ಆಗಲ್ಲ. ಹೀಗೆ ಹೇಳಿದರೆ, ಯಾರೂ ನಂಬುವುದಿಲ್ಲ. ಆದರೆ, ನಿಜವಾಗಿಯೂ ಅಲ್ಲಿ ಈಗ ಬಿಸಿಲಿನ ಧಗೆ ಕಡಿಮೆಯಾಗಿದೆ. 2016ರಲ್ಲಿ ಶುರುವಾದ ಕೋಟಿ ವೃಕ್ಷ ಅಭಿಯಾನದ ಫಲ ಏನೆಂದರೆ ಇದೀಗ ಇಡೀ ವಿಜಯಪುರ ಜಿಲ್ಲೆಯಲ್ಲಿ ಹಸಿರಿನ ಹೊದಿಕೆ ಹೆಚ್ಚಳಗೊಂಡಿದೆ. ರಾಜಸ್ಥಾನದ ಜೈಸಲ್ಮೇರ್‌ ನಂತರ ದೇಶದಲ್ಲೇ ಅತಿ ಹೆಚ್ಚು ಬರ ಪೀಡಿತ ಪ್ರದೇಶ ಎಂದರೆ ಅದು ವಿಜಯಪುರ. ಇಂತಹ ಬರ ಪೀಡಿತ ಜಿಲ್ಲೆ ಇದೀಗ ಹಸಿರು ಹೊದ್ದು ನಳನಳಿಸುತ್ತಿದೆ.

ರಾಜ್ಯದ ಬೃಹತ್‌ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಂ.ಬಿ.ಪಾಟೀಲರ ದೂರದೃಷ್ಟಿ ಮತ್ತು ಪರಿಶ್ರಮದ ಫಲವಾಗಿ ವಿಜಯಪುರ ಜಿಲ್ಲೆ ಮರುಭೂಮಿಯಿಂದ ಹಸಿರು ಭೂಮಿಯಾಗಿ ಪರಿವರ್ತನೆಗೊಂಡಿದೆ. ವಿಜಯಪುರ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಬಿಸಿಲಿನ ಝಳ ಇದೀಗ 2 ರಿಂದ 3 ಡಿಗ್ರಿ ಕಡಿಮೆಯಾಗಿದೆ. ಅಷ್ಟೇ ಅಲ್ಲ, ಜಿಲ್ಲೆಯಲ್ಲಿ ಮಳೆ ಬೀಳುವ ಪ್ರಮಾಣ ಸಹ 550 ಮಿಲಿ ಮೀಟರ್‌ನಿಂದ 650 ಮಿಲಿ ಮೀಟರ್‌ಗೆ ಹೆಚ್ಚಳಗೊಂಡಿದೆ. ವಾರ್ಷಿಕ ಮಳೆ ದಿನಗಳ ಸಂಖ್ಯೆಯೂ ಸಹ 20-30 ದಿನಗಳಿಂದ ಈಗ 30-40 ದಿನಗಳಿಗೆ ಹೆಚ್ಚಳಗೊಂಡಿದೆ.

2016ರಲ್ಲಿ ಅರಣ್ಯ ಅಧಿಕಾರಿಗಳ ಜೊತೆ ಎಂ ಬಿ ಪಾಟೀಲರು ಸಭೆ ನಡೆಸುತ್ತಿದ್ದರು. ಆಗ ನಮ್ಮ ಜಿಲ್ಲೆಯಲ್ಲಿ ಹಸಿರು ಹೊದಿಕೆ ಪ್ರಮಾಣ ಎಷ್ಟಿದೆ ಎಂದು ಕೇಳಿದರು. ಆಗ ಅರಣ್ಯಾಧಿಕಾರಿಯೊಬ್ಬರು ಜಿಲ್ಲೆಯಲ್ಲಿ ಕೇವಲ ಶೇ.೦.17ರಷ್ಟು ಹಸಿರ ಹೊದಿಕೆ ಇದೆ ಎಂದಾಗ ಸಚಿವ ಪಾಟೀಲರಿಗೆ ಆಶ್ಚರ್ಯ ಮತ್ತು ಆಘಾತ ಆಯಿತು. ಅರಣ್ಯ ಪ್ರಮಾಣ ಹೆಚ್ಚಿಸಲು ಚಿಂತಿಸಲಾಯಿತು. ಇದು ಕೋಟಿ ವೃಕ್ಷದ ಅಭಿಯಾನ”ವಾಗಿ ರೂಪುಗೊಂಡಿತು.

ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಭೂಮಿಯು ಅತ್ಯಂತ ವೇಗವಾಗಿ ಮರುಭೂಮಿಕರಣಗೊಳ್ಳುತ್ತಿದೆ. ಅಂದರೆ, ಭೂಮಿ ವಿಪರೀತ ಶಾಖದಿಂದಾಗಿ ಗಟ್ಟಿಯಾಗುತ್ತಿದೆ. ಆನಂತರ ಅದು ಏನೂ ಬೆಳೆಯದ ಪರಿಸ್ಥಿತಿಗೆ ಹೋಗಿ, ಕ್ರಮೇಣ ಮರುಭೂಮಿಯಾಗಿಬಿಡುತ್ತದೆ. ಆದ್ದರಿಂದಲೇ ಅನೇಕ ವಿಜ್ಞಾನಿಗಳು ಈ ಅಪಾಯವನ್ನು ಇತ್ತೀಚೆಗೆ ಪದೇ ಪದೇ ಎಚ್ಚರಿಸುತ್ತಲೇ ಬಂದಿದ್ದಾರೆ. ಕಳೆದ ರಾಜ್ಯ ಬಜೆಟ್‌ನಲ್ಲಿ “ಗ್ರೇಟ್‌ ಗ್ರೀನ್‌ ವಾಲ್‌” ನಿರ್ಮಾಣಕ್ಕೆ ಆದ್ಯತೆ ಕೊಡಬೇಕು ಎಂದು ಸಲಹೆ ನೀಡಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಘೋಷಣೆ ಬರಲಿಲ್ಲ. ಆದರೆ, 10 ವರ್ಷ ಮುಂಚೆಯೇ ಇಂತಹ ಅಪಾಯವನ್ನು ಮನಗಂಡು ಎಂ ಬಿ ಪಾಟೀಲರು ವಿಜಯಪುರ ಜಿಲ್ಲೆಗೆ “ಗ್ರೇಟ್‌ ಗ್ರೀನ್‌ ವಾಲ್‌” ಯೋಜನೆ ಈಗಾಗಲೇ ಜಾರಿಗೊಳಿಸಿಬಿಟ್ಟಿದ್ದಾರೆ.

ಇದರ ಪರಿಣಾಮ 0.17ರಷ್ಟಿದ್ದ ಹಸಿರಿನ ಹೊದಿಕೆ ಶೇ 2.4ಕ್ಕೆ ಹೆಚ್ಚಳಗೊಂಡಿದೆ. ಕರ್ನಾಟಕ ಅರಣ್ಯ ಇಲಾಖೆಯ ಪ್ರಾದೇಶಿಕ ಅರಣ್ಯ, ಸಾಮಾಜಿಕ ಅರಣ್ಯ ವಿಭಾಗದ ಸಹಯೋಗದ ಜೊತೆಗೆ ತೋಟಗಾರಿಕೆ, ಕೃಷಿ ಮತ್ತು ಕೆಬಿಜೆಎನ್‌ಎಲ್‌ ಅರಣ್ಯ ವಿಭಾಗ ಮತ್ತು ಜಿಲ್ಲಾಡಳಿತ ಎಲ್ಲರೂ ಸೇರಿ ಎಂ.ಬಿ.ಪಾಟೀಲ್‌ ಅವರ ನೇತೃತ್ವದಲ್ಲಿ ಈ ಅಭಿಯಾನ ಶುರು ಮಾಡಿದರು.

ಕೋಟಿ ವೃಕ್ಷ ಅಭಿಯಾನದ ವೇಗ ಹೇಗಿತ್ತೆಂದರೆ, ಜಿಲ್ಲೆಯ ನಾನಾ ಗ್ರಾಮಾಂತರ ಮತ್ತು ನಗರ ಪ್ರದೇಶ, ಶಾಲೆ-ಕಾಲೇಜುಗಳು, ರಸ್ತೆ ಬದಿ, ಸ್ಮಶಾನ ಮತ್ತು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರಿದ ವ್ಯಾಪ್ತಿಗೆ ಬರುವ ಉದ್ಯಾನಗಳು ಹೀಗೆ ಎಲ್ಲಾ ಕಡೆ ಗಿಡಗಳನ್ನು ನೆಡಲಾಯಿತು. ಖಾಲಿ ಜಾಗ ಕಂಡ ಕಡೆಯೆಲ್ಲವೂ ಸಸಿಗಳನ್ನು ನೆಟ್ಟು ಪೋಷಿಸಲಾಯಿತು.

ಜಿಲ್ಲೆಯಲ್ಲಿ ನೆಟ್ಟಿರುವ ಎಲ್ಲ ಸಸಿಗಳೂ ಸಹ ಸ್ಥಳೀಯ ಜಾತಿಗೆ ಸೇರಿದವು. ಅಂದರೆ, ಅಲ್ಲಿನ ಪರಿಸರಕ್ಕೆ ಅತ್ಯಂತ ಸೂಕ್ತವಾಗಿ ಹೊಂದಿಕೊಳ್ಳುವ ಗಿಡಗಳನ್ನೇ ನರ್ಸರಿಗಳಲ್ಲಿ ಬೆಳೆಸಿ ಪೋಷಣೆ ಮಾಡಿ ನೆಡಲಾಯಿತು. ಹುಣಸೆ, ಮುತ್ತುಗ, ಬೇವು, ಶ್ರೀಗಂಧ, ತೇಗ, ಆಲ, ಅರಳಿ, ಸಂಪಿಗೆ, ಹೊನ್ನೆ, ನಂದಿ ಹೀಗೆ 184 ಜಾತಿಯ ಎಲ್ಲವೂ ಸ್ಥಳೀಯ ಗಿಡಗಳನ್ನೇ ನೆಟ್ಟು ಪೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲ, ಹಣ್ಣಿನ ಗಿಡಗಳ ಜೊತೆಗೆ ಮಣ್ಣಿನ ಸವಕಳಿ ತಡೆಯುವ ಗಿಡಗಳನ್ನು ಗುರುತಿಸಿ ಅವುಗಳನ್ನೇ ನೆಡಲಾಯಿತು. ಇದರಿಂದಾಗಿ ಇಲ್ಲಿನ ಭೂಮಿ ಮರುಭೂಮೀಕರಣವಾಗುವ ವೇಗ ಸಹ ತಗ್ಗಿತು. ಇದೀಗ ಈ ಎಲ್ಲ ಗಿಡಗಳು ದೊಡ್ಡದಾಗಿರುವುದರಿಂದ ಹೊಸ ಪರಿಸರ ವ್ಯವಸ್ಥೆಯನ್ನೇ ಸೃಷ್ಟಿಸಿಬಿಟ್ಟಿವೆ. ಈ ಗಿಡಗಳಲ್ಲಿ ಇದೀಗ ಅನೇಕ ಜಾತಿ ಪಕ್ಷಿಗಳು, ಕೀಟಗಳು ಸೇರಿ ಜೀವವೈವಿಧ್ಯತೆಯನ್ನೇ ರೂಪಿಸಿವೆ. ಕೃಷ್ಣಮೃಗ, ಚಿರತೆಗಳ ಸಂಖ್ಯೆಯಲ್ಲಿ ವೃದ್ಧಿಯಾಗಿದೆ.

ಏಪ್ರಿಲ್‌ ಫೂಲ್‌ ಎಲ್ಲರಿಗೂ ಗೊತ್ತು…ಆದರೆ, ಇಲ್ಲಿ ಮಾಡಿದ್ದು, ಏಪ್ರಿಲ್‌ ಕೂಲ್‌..ಅಂದರೆ, ಏಪ್ರಿಲ್‌ ಫೂಲ್‌ ಅಂತಾ ನಾವು ಏನು ಏಪ್ರಿಲ್‌ 1ನೇ ತಾರೀಕನ್ನು ಆಚರಿಸುತ್ತೇವೆಯೋ ಅದೇ ದಿನವನ್ನು ಏಪ್ರಿಲ್‌ ಕೂಲ್‌ ದಿನ ಎಂದು ವಿಜಯಪುರದಲ್ಲಿ ಆಚರಿಸಲು ಶುರು ಮಾಡಲಾಯಿತು. ಆ ದಿನ ಜಿಲ್ಲೆಯಾದ್ಯಂತ ಗಿಡಗಳನ್ನು ನೆಡುವ ಮೂಲಕ ವಿಜಯಪುರದ ಬಿಸಿಲ ಬೇಗೆಯನ್ನು ತಗ್ಗಿಸಿ, ಏಪ್ರಿಲ್‌ ಕೂಲ್‌ ಮಾಡೋಣ ಎನ್ನುವ ಸಂಕಲ್ಪ ಮಾಡಲಾಯಿತು. ಅದು ಈಗ ಜಿಲ್ಲೆಯ ಉಷ್ಣಾಂಶವನ್ನು ತಗ್ಗಿಸಿ, ಜನರಿಗೆ ಕೂಲ್‌ ಕೂಲ್‌ ಫೀಲಿಂಗ್‌ ಕೊಡುತ್ತಿದೆ.

ಗಿಫ್ಟ್‌ ಕೊಡುವ ಪದ್ಧತಿಯೇ ಬದಲಾಯಿತು-

ವಿಜಯಪುರದಲ್ಲಿ ಎಂ ಬಿ ಪಾಟೀಲ್‌ ಮತ್ತವರ ತಂಡ ಅದ್ಯಾವ ಪರಿ ಕೋಟಿ ವೃಕ್ಷ ಅಭಿಯಾನವನ್ನು ಜನರ ಮನಸಲ್ಲಿ ಬಿತ್ತಿದರೆಂದರೆ, ಯಾವುದೇ ಸಮಾರಂಭವಿರಲಿ, ಜನರು ಗಿಫ್ಟ್‌ ಕೊಡುವ ಪದ್ಧತಿಯೇ ಬದಲಾಗಿ ಹೋಯಿತು. ಬರ್ತ್‌ ಡೇ, ಮದುವೆ, ಯಾವುದೇ ಸಮಾರಂಭಗಳಿರಲಿ ಎಲ್ಲಾ ಕಡೆ ಸಸಿಗಳನ್ನೇ ಗಿಫ್ಟ್‌ ಆಗಿ ನೀಡುವ ಪರಿಪಾಠ ಶುರು ಮಾಡಿಬಿಟ್ಟರು. ಕಡೆಗೆ ಮದುವೆಗಳಲ್ಲಿ ಕೊಡುವ ರಿಟರ್ನ್‌ ಗಿಫ್ಟ್‌ ಜಾಗದಲ್ಲೂ ಸಹ ಸಸಿ ಹೋಗಿ ಕುಳಿತುಬಿಟ್ಟಿತು. ಈಗ ಎಲ್ಲಾ ಕಡೆ ಗಿಫ್ಟ್‌ ಅಂದರೆ, ಗಿಡ ಎನ್ನುವಂತಾಗಿಬಿಟ್ಟಿದೆ. ವಿಜಯಪುರ ಜಿಲ್ಲೆಯಲ್ಲಿ ಇದೀಗ ಸಸಿಗಳಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ಸಸಿಗಳಿಂದಾಗಿ ನರ್ಸರಿಗಳೂ ಹೆಚ್ಚಳಗೊಂಡಿವೆ.

ಇದೀಗ, ಒಂದು ಕೋಟಿ ವೃಕ್ಷ ಅಭಿಯಾನ ಯಶಸ್ವಿಯಾಗಿದೆ. ಎಂ ಬಿ ಪಾಟೀಲರು ಮತ್ತವರ ತಂಡ ಇಷ್ಟಕ್ಕೇ ಸುಮ್ಮನಾಗಿಲ್ಲ. ಇದೀಗ ಈ ಎಲ್ಲ ಹಸಿರ ಯೋಧರು ಐದು ಕೋಟಿ ಗಿಡಗಳನ್ನು ನೆಡುವ ಸಂಕಲ್ಪ ಮಾಡಿದ್ದಾರೆ. ಅದಕ್ಕಾಗಿ ಈಗಾಗಲೇ ಸಸಿಗಳನ್ನು ನರ್ಸರಿಗಳಲ್ಲಿ ರೆಡಿ ಮಾಡಲಾಗುತ್ತಿದೆ. ಮತ್ತೊಂದು ಮಹಾ ಅಭಿಯಾನ ಶುರುವಾಗಲಿದೆ.

ವಿನೋದಕುಮಾರ್‌ ಬಿ ನಾಯ್ಕ್‌

PREV
Read more Articles on

Recommended Stories

ಧರ್ಮಸ್ಥಳ ವಿರುದ್ಧ ಆರೋಪಕ್ಕೆ ಪೊಲೀಸ್ ದಾಖಲೆ ಉತ್ತರ!
ಬೇಟೆಗಾರರಿಗೆ ದುಸ್ವಪ್ನ ಅರಣ್ಯದ ಮಂಚೂಣಿ ಈ ಸಿಬ್ಬಂದಿ