ಧರ್ಮಸ್ಥಳ ವಿರುದ್ಧ ಆರೋಪಕ್ಕೆ ಪೊಲೀಸ್ ದಾಖಲೆ ಉತ್ತರ!

Published : Oct 01, 2026, 11:20 AM IST
vasanth giliyar

ಸಾರಾಂಶ

ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಅಸಹಜ ಸಾವುಗಳ ಸಂಖ್ಯೆ ಕೇವಲ 131 ಎಂಬುವುದು ಧರ್ಮಸ್ಥಳ ಪೊಲೀಸ್ ಠಾಣೆಯ ದಾಖಲೆಗಳು ತಿಳಿಸಿವೆ. ಆದರೆ ರಾಜ್ಯ ಮಹಿಳಾ ಆಯೋಗದ ನಡೆ ಈಗ ತೀವ್ರ ಅನುಮಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ವಸಂತ ಗಿಳಿಯಾರ್‌

ಸಾಮಾಜಿಕ ಹೋರಾಟಗಾರರು

1,480 ಅಸಹಜ ಸಾವುಗಳು ಸಂಭವಿಸಿವೆ ಎಂಬ ಆರೋಪಗಳು ಇತ್ತೀಚಿನ ದಿನಗಳಲ್ಲಿ ಚರ್ಚೆಗೆ ಬಂದಿದ್ದವು. ಆದರೆ, 1990ರಿಂದ 2025ರವರೆಗೆ ಧರ್ಮಸ್ಥಳ ವಸತಿಗೃಹಗಳು, ನೇತ್ರಾವತಿ ಸ್ನಾನಘಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಅಸಹಜ ಸಾವುಗಳ ಸಂಖ್ಯೆ ಕೇವಲ 131 ಎಂಬುವುದು ಧರ್ಮಸ್ಥಳ ಪೊಲೀಸ್ ಠಾಣೆಯ ದಾಖಲೆಗಳು ತಿಳಿಸಿವೆ. ಆದರೆ ರಾಜ್ಯ ಮಹಿಳಾ ಆಯೋಗದ ನಡೆ ಈಗ ತೀವ್ರ ಅನುಮಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಧರ್ಮಸ್ಥಳದಲ್ಲಿ ಹಲವು ವರ್ಷಗಳಿಂದ ನೂರಾರು ಅಸಹಜ ಸಾವುಗಳು, ಕೊಲೆ ಹಾಗೂ ಅತ್ಯಾಚಾರಗಳು ನಡೆದಿವೆ ಎಂಬ ಆರೋಪಗಳ ನಡುವೆ, ಪೊಲೀಸ್ ಇಲಾಖೆಯ ದಾಖಲೆಗಳು ಈ ಆರೋಪಗಳಲ್ಲಿನ ಕೆಲವು ಅಂಕಿ-ಅಂಶಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಜೊತೆಗೆ ಇವುಗಳ ಸತ್ಯಾಸತ್ಯೆಯನ್ನು ಪರಾಮರ್ಶಿಸದೆ ಮಹಿಳಾ ಆಯೋಗ ತನಿಖೆಗೇ ನೇರ ಶಿಫಾರಸ್ಸು ಮಾಡಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಧರ್ಮಸ್ಥಳದಲ್ಲಿ 16 ವರ್ಷಗಳ ಅವಧಿಯಲ್ಲಿ 1,480 ಅಸಹಜ ಸಾವುಗಳು ಸಂಭವಿಸಿವೆ ಎಂಬ ಆರೋಪಗಳು ಇತ್ತೀಚಿನ ದಿನಗಳಲ್ಲಿ ಚರ್ಚೆಗೆ ಬಂದಿದ್ದವು. ಆದರೆ, 1990ರಿಂದ 2025ರವರೆಗೆ ಧರ್ಮಸ್ಥಳ ವಸತಿಗೃಹಗಳು, ನೇತ್ರಾವತಿ ಸ್ನಾನಘಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಅಸಹಜ ಸಾವುಗಳ ಸಂಖ್ಯೆ ಕೇವಲ 131 ಎಂಬುವುದು ಧರ್ಮಸ್ಥಳ ಪೊಲೀಸ್ ಠಾಣೆಯ ದಾಖಲೆಗಳು ತಿಳಿಸಿವೆ. ಆದರೆ ರಾಜ್ಯ ಮಹಿಳಾ ಆಯೋಗದ ನಡೆ ಈಗ ತೀವ್ರ ಅನುಮಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ‘ಬುರುಡೆ ಗ್ಯಾಂಗ್’ ಹಬ್ಬಿಸಿದ್ದ ಸುಳ್ಳು ಲೆಕ್ಕಾಚಾರಗಳು ಹಾಗೂ ಸುಜಾತಾ ಭಟ್, ಅನನ್ಯಾ ಭಟ್ ಹೆಸರಿನ ಕಟ್ಟುಕಥೆಗಳನ್ನು ಕಣ್ಣು ಮುಚ್ಚಿ ನಂಬಿದ ಮಹಿಳಾ ಆಯೋಗ, ಪೊಲೀಸ್ ಇಲಾಖೆಯ ಅಧಿಕೃತ ದಾಖಲೆಗಳನ್ನು ಒಮ್ಮೆಯೂ ಪರಿಶೀಲಿಸದೆ ಸರ್ಕಾರಕ್ಕೆ ಶಿಫಾರಸ್ಸು ಪತ್ರ ಬರೆದಿದ್ದು ಯಾವ ಹಿತಾಸಕ್ತಿಗಾಗಿ?

1,480 ಅಸಹಜ ಸಾವುಗಳು ಧರ್ಮಸ್ಥಳದಲ್ಲೇ ನಡೆದಿದೆ ಎಂಬ ಆರೋಪಕ್ಕೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ, 1,480 ಎಂಬ ಸಂಖ್ಯೆ ಯಾವ ದಾಖಲೆ ಅಥವಾ ಮೂಲದ ಆಧಾರದ ಮೇಲೆ ಹೇಳಲಾಗಿದೆ ಅಥವಾ ಆರೋಪಿಸಲಾಗಿದೆ ಎಂಬ ಪ್ರಶ್ನೆ ಇದೀಗ ಮಹತ್ವ ಪಡೆದಿದೆ. ಅಸಲಿಗೆ ದಾಖಲೆಗಳಲ್ಲಿ ಇರುವ ಹಾಗೂ ಉಗ್ರಪ್ಪನವರ ವರದಿಯಲ್ಲಿರುವ 1480 ಸಾವುಗಳ ಅಂಕಿ-ಅಂಶ ಹೌದಾದರೂ ಅದು ಕೇವಲ ಧರ್ಮಸ್ಥಳ ವ್ಯಾಪ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ.

ಇಡೀ ತಾಲೂಕಿನ ಸಾವಿಗೆ ಧರ್ಮಸ್ಥಳ ಹೊಣೆ..!?

ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯಂತ ವಿಶಾಲವಾದ ಹಾಗೂ ಭೌಗೋಳಿಕವಾಗಿ ದಟ್ಟಾರಣ್ಯಗಳಿಂದ ಕೂಡಿದ ಪ್ರದೇಶ. 1,36,202 ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶ ಹೊಂದಿರುವ ತಾಲೂಕಿನಲ್ಲಿ ಪಶ್ಚಿಮ ಘಟ್ಟಗಳ ಅಂಚಿನಲ್ಲಿರುವ ಈ ತಾಲೂಕಿನಲ್ಲಿ ಕಾಡಾನೆ ಸೇರಿದಂತೆ ಇತರೆ ವನ್ಯಜೀವಿಗಳ ದಾಳಿ, ಮಳೆಗಾಲದಲ್ಲಿ ಉಕ್ಕಿ ಹರಿಯುವ ನೇತ್ರಾವತಿ ಮತ್ತಿತರ ನದಿಗಳು ಅಪಾಯಕಾರಿಯಾಗಿರುವುದು ಸಾಮಾನ್ಯ. ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳನ್ನೂ ಬೆಸೆಯುವ ಎರಡು ಘಾಟ್‌ಗಳು ತಾಲೂಕಿನಲ್ಲಿವೆ. ಚಾರ್ಮಾಡಿ ಮತ್ತು ಶಿರಾಡಿ ಘಾಟ್‌ನಲ್ಲಿ ಆಗಾಗ್ಯೆ ಮೃತದೇಹಗಳು ಪತ್ತೆಯಾಗುವುದು, ಅನಾಥ ಶವಗಳು ಸಿಕ್ಕುವುದು, ಅಪಘಾತಗಳಿಂದಾದ ಸಾವುಗಳು, ಕೊಲೆ ಮಾಡಿ ಮೃತ ದೇಹಗಳನ್ನು ಘಾಟಿಯಲ್ಲಿ ಎಸೆಯುವುದು ಹೀಗೆ ನಾನಾ ಕಾರಣಕ್ಕೆ ಆದ ಸಾವುಗಳು ಬೆಳ್ತಂಗಡಿ ವ್ಯಾಪ್ತಿಗೇ ಬರುತ್ತವೆ. ಈ ಮೂಲಕ ಕಳೆದ 35 ವರ್ಷಗಳಲ್ಲಿ 1,480 ಅಸಹಜ ಸಾವುಗಳ ದಾಖಲೆ ಪೊಲೀಸ್ ಇಲಾಖೆಯಲ್ಲಿದೆ. ಬೆಳ್ತಂಗಡಿ ತಾಲೂಕಿನಲ್ಲಿ79 ಗ್ರಾಮಗಳು, 43 ಗ್ರಾಮ ಪಂಚಾಯತ್‌ಗಳು, 55385 ಮನೆಗಳಿವೆ. 2011ರ ಜನಗಣತಿ ಪ್ರಕಾರ, ತಾಲೂಕಿನಲ್ಲಿ ಸುಮಾರು 2 ಲಕ್ಷದ ಅರವತ್ತು ಸಾವಿರ ಜನರಿದ್ದಾರೆ. ಸುಮಾರು 2000 ಸಾವಿರ ಕಿ.ಮೀ. ಉದ್ದದ ರಸ್ತೆ ಸಂಪರ್ಕ ಜಾಲವಿದೆ. ಇಷ್ಟು ದೊಡ್ಡ ವಿಸ್ತೀರ್ಣದ ತಾಲೂಕಿನ ಯಾವುದೋ ಮೂಲೆಯ ಹಳ್ಳಿಯಲ್ಲಿ ನಡೆದ ಕಾಡಾನೆ ದಾಳಿ, ನದಿಯಲ್ಲಿ ಮುಳುಗಿದ ಸಾವು, ರಸ್ತೆ ಅಪಘಾತ ಅಥವಾ ವೈಯಕ್ತಿಕ ಕಾರಣಗಳ ಆತ್ಮಹತ್ಯೆಗಳನ್ನೆಲ್ಲಾ ತಂದು ಧರ್ಮಸ್ಥಳ ಕ್ಷೇತ್ರದ ತಲೆಗೆ ಕಟ್ಟಲು ಈ ಗ್ಯಾಂಗ್ ಸಂಚು ರೂಪಿಸಿದ್ದು ಇಲ್ಲಿ ಸ್ಪಷ್ಟವಾಗಿದೆ.

ಧರ್ಮಸ್ಥಳ ಠಾಣೆ ಯುಡಿಆರ್ ಕೇಸ್‌ ಎಷ್ಟು?

ಧರ್ಮಸ್ಥಳ ಪೊಲೀಸ್ ಠಾಣೆಯ ಮಾಹಿತಿಯ ಪ್ರಕಾರ, 1990ರಿಂದ 2025ರವರೆಗೆ ಠಾಣೆಯಲ್ಲಿ ಒಟ್ಟು 689 ಅಸಹಜ ಸಾವುಗಳ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಆದರೆ, ಈ 689 ಪ್ರಕರಣಗಳೆಲ್ಲವೂ ಧರ್ಮಸ್ಥಳದಲ್ಲೇ ಸಂಭವಿಸಿದವು ಎಂಬುದು ಸರಿಯಲ್ಲ. ಧರ್ಮಸ್ಥಳ ವಸತಿಗೃಹಗಳು, ನೇತ್ರಾವತಿ ಸ್ನಾನಘಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ 131 ಎಂದು ಪೊಲೀಸ್ ದಾಖಲೆಗಳು ಸೂಚಿಸುತ್ತವೆ. ಉಳಿದ ಪ್ರಕರಣಗಳು ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಇತರ ಗ್ರಾಮಗಳಲ್ಲಿ ಸಂಭವಿಸಿದ ಘಟನೆಗಳಿಗೆ ಸಂಬಂಧಿಸಿವೆ ಎಂದು ಹೇಳಲಾಗಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿ ಎಷ್ಟು?

ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಧರ್ಮಸ್ಥಳ, ಪುದುವೆಟ್ಟು, ಬಂದಾರು, ನೆರಿಯ, ಚಾರ್ಮಾಡಿ, ಅರಸಮಕ್ಕಿ, ಕಾಯರ್ತಡ್ಕ, ಕಲ್ಮಂಜ ಸೇರಿದಂತೆ ಒಟ್ಟು 18 ಗ್ರಾಮಗಳು ಬರುತ್ತವೆ, ಸುಮಾರು 25000-35000 ಜನರು ವಾಸಿಸುತ್ತಿದ್ದಾರೆ ಎಂದು ಪೊಲೀಸ್ ಇಲಾಖೆಯ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರದೇಶಗಳಲ್ಲಿ ಸಂಭವಿಸುವ ಅಸಹಜ ಸಾವುಗಳು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತವೆ. ಹೀಗಾಗಿ, ಠಾಣೆಯಲ್ಲಿ ದಾಖಲಾಗಿರುವ ಒಟ್ಟು 689 ಅಸಹಜ ಸಾವುಗಳನ್ನೇ ಧರ್ಮಸ್ಥಳದಲ್ಲಿ ಸಂಭವಿಸಿದ ಸಾವುಗಳೆಂದು ಪರಿಗಣಿಸುವುದು ಸರಿಯಾದ ಚಿತ್ರಣ ನೀಡುವುದಿಲ್ಲ. ಪೊಲೀಸ್ ದಾಖಲೆಗಳ ಪ್ರಕಾರ, 689 ಪ್ರಕರಣಗಳಲ್ಲಿ131 ಪ್ರಕರಣಗಳು ಮಾತ್ರ ಧರ್ಮಸ್ಥಳ ವಸತಿಗೃಹಗಳು, ನೇತ್ರಾವತಿ ಸ್ನಾನಘಟ್ಟ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಬಂಧಿಸಿವೆ ಎಂಬುದು ಪ್ರಮುಖ ಅಂಶವಾಗಿದೆ.

ಮಹಿಳೆಯರ ಸಾವು: ದಾಖಲೆಗಳೇನು ಹೇಳುತ್ತವೆ?

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 35 ವರ್ಷಗಳಲ್ಲಿ ದಾಖಲಾಗಿರುವ 689 ಅಸಹಜ ಸಾವುಗಳ ಪೈಕಿ 506 ಪ್ರಕರಣಗಳು ಪುರುಷರಿಗೆ ಹಾಗೂ 184 ಪ್ರಕರಣಗಳು ಮಹಿಳೆಯರಿಗೆ ಸಂಬಂಧಿಸಿದವು ಎಂದು ನೀಡಲಾಗಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಮಹಿಳೆಯರಿಗಿಂತ, ಪುರುಷರ ಅಸಹಜ ಸಾವಿನ ಸಂಖ್ಯೆ ಇಲ್ಲಿ ದಾಖಲಾಗಿರುವುದು ದಾಖಲೆಯಲ್ಲಿ ಕಂಡುಬಂದಿದೆ.

689 ಅಸಹಜ ಸಾವುಗಳು ಹೇಗೆ ಸಂಭವಿಸಿವೆ?

ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಅಸಹಜ ಸಾವುಗಳೆಲ್ಲವೂ ಕೊಲೆ ಪ್ರಕರಣಗಳಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ, ನೀರಿನಲ್ಲಿ ಮುಳುಗುವುದು, ರಸ್ತೆ ಅಪಘಾತಗಳು, ಅನಾರೋಗ್ಯ, ಆತ್ಮಹತ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಸಾವುಗಳು ಸಂಭವಿಸಿವೆ.ಆದ್ದರಿಂದ, ಪೊಲೀಸ್ ದಾಖಲೆಗಳಲ್ಲಿ ‘ಅಸಹಜ ಸಾವು’ ಅಥವಾ ಯುಡಿಆರ್ ಪ್ರಕರಣ ಎಂದು ದಾಖಲಾಗಿರುವ ಪ್ರತಿಯೊಂದು ಘಟನೆಯನ್ನು ಕೊಲೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪ್ರತಿ ಪ್ರಕರಣದ ಅಂತಿಮ ತನಿಖಾ ವರದಿ ಹಾಗೂ ಸಾವಿನ ಕಾರಣವನ್ನು ಪ್ರತ್ಯೇಕವಾಗಿ ಪರಿಶೀಲಿಸುವುದು ಅಗತ್ಯವಾಗಿದೆ.

‘ಸಾವಿರಾರು ಶವ ಹೂತಿದ್ದೆ’ ಆರೋಪ: ಸಿಕ್ಕಿದ್ದೇನು?

ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಮತ್ತು ಅವುಗಳಲ್ಲಿ ಮಹಿಳೆಯರ ಶವಗಳೇ ಹೆಚ್ಚಿನವು ಎಂದು ಚಿನ್ನಯ್ಯ ಎಂಬ ವ್ಯಕ್ತಿ ಆರೋಪಿಸಿದ್ದನು. ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಭದ್ರತೆ ಒದಗಿಸಿ, ಆತ ಗುರುತಿಸಿದ್ದ ಸ್ಥಳಗಳಲ್ಲಿ ಶೋಧ ಮತ್ತು ಗುಂಡಿ ಅಗೆಯುವ ಕಾರ್ಯ ನಡೆಸಲಾಗಿತ್ತು. ಆದರೆ, ಆತ ಸೂಚಿಸಿದ್ದ ಸ್ಥಳಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಿರೀಕ್ಷಿತ ರೀತಿಯ ಮಾನವ ಅಸ್ಥಿಪಂಜರಗಳು ಅಥವಾ ಬುರುಡೆಗಳು ಪತ್ತೆಯಾಗಿಲ್ಲ ಎಂಬ ಮಾಹಿತಿ ಹೊರಬಂದಿದೆ. ಈ ಮೂಲಕ ಆರೋಪದ ಸತ್ಯಾಸತ್ಯತೆ ಹೊರಬಂದಿದೆ.

1,480 ಅಸಹಜ ಸಾವು: ಮೂಲ ಯಾವುದು?

ಧರ್ಮಸ್ಥಳದಲ್ಲಿ 16 ವರ್ಷಗಳಲ್ಲಿ 1,480 ಅಸಹಜ ಸಾವುಗಳು ಸಂಭವಿಸಿವೆ ಎಂಬ ಆರೋಪ ಮತ್ತು ಪೊಲೀಸ್ ದಾಖಲೆಗಳಲ್ಲಿ ಕಾಣಿಸುವ ಅಂಕಿ-ಅಂಶಗಳ ನಡುವೆ ಗಮನಾರ್ಹ ವ್ಯತ್ಯಾಸ ಕಂಡುಬರುತ್ತಿದೆ. ಒಂದೆಡೆ, 1,480 ಎಂಬ ಸಂಖ್ಯೆ ಪ್ರಸ್ತಾಪವಾಗುತ್ತಿದ್ದರೆ, ಮತ್ತೊಂದೆಡೆ 1990ರಿಂದ 2025ರವರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿರುವ ಒಟ್ಟು 689 ಯುಡಿಆರ್ ಪ್ರಕರಣಗಳಲ್ಲಿ ಧರ್ಮಸ್ಥಳದ ನಿರ್ದಿಷ್ಟ ಪ್ರದೇಶಗಳಿಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ 131 ಎಂದು ಹೇಳಲಾಗಿದೆ. ಹೀಗಾಗಿ, 1,480 ಎಂಬ ಅಂಕಿ-ಅಂಶದ ಮೂಲ, ಅದರ ವ್ಯಾಪ್ತಿ, ಅವಧಿ ಮತ್ತು ದಾಖಲೆ ಆಧಾರ ಏನು ಎಂಬುದನ್ನು ಸ್ಪಷ್ಟಪಡಿಸುವುದು ಅತ್ಯಂತ ಅಗತ್ಯವಾಗಿದೆ. ಅದೇ ರೀತಿ, ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಯ 18 ಗ್ರಾಮಗಳಲ್ಲಿ ಸಂಭವಿಸಿದ ಸಾವುಗಳನ್ನು ಮತ್ತು ಧರ್ಮಸ್ಥಳದ ನಿರ್ದಿಷ್ಟ ಪ್ರದೇಶಗಳಲ್ಲಿ ಸಂಭವಿಸಿದ ಸಾವುಗಳನ್ನು ಪ್ರತ್ಯೇಕವಾಗಿ ಗುರುತಿಸಿ ಪರಿಶೀಲಿಸುವ ಅಗತ್ಯವೂ ಇದೆ.

ದಾಖಲೆಗಳ ಆಧಾರದ ಮೇಲೆ ಸ್ಪಷ್ಟತೆ ಅಗತ್ಯ

ಧರ್ಮಸ್ಥಳದ ಕುರಿತು ಹಲವು ವರ್ಷಗಳಿಂದ ಕೇಳಿಬರುತ್ತಿರುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿವೆ. ಇಂತಹ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ಸಂಖ್ಯೆಯನ್ನು ಅಥವಾ ಆರೋಪವನ್ನು ಅಂತಿಮ ಸತ್ಯವೆಂದು ಪರಿಗಣಿಸುವ ಮೊದಲು ಅದರ ಮೂಲ ದಾಖಲೆಗಳನ್ನು ಪರಿಶೀಲಿಸುವುದು ಅಗತ್ಯ. 1,480 ಅಸಹಜ ಸಾವುಗಳ ಆರೋಪಕ್ಕೆ ಸಂಬಂಧಿಸಿದ ಮೂಲ ದಾಖಲೆಗಳು ಯಾವುವು? ಪೊಲೀಸ್ ಠಾಣೆಯ 689 ಯುಡಿಆರ್ ಪ್ರಕರಣಗಳಲ್ಲಿ 131 ಪ್ರಕರಣಗಳು ಧರ್ಮಸ್ಥಳದ ನಿರ್ದಿಷ್ಟ ಪ್ರದೇಶಗಳಿಗೆ ಸಂಬಂಧಿಸಿರುವುದನ್ನು ಹೇಗೆ ವರ್ಗೀಕರಿಸಲಾಗಿದೆ? ಉಳಿದ ಪ್ರಕರಣಗಳು ಯಾವ ಗ್ರಾಮಗಳಿಗೆ ಸಂಬಂಧಿಸಿವೆ? ಹಾಗೆಯೇ, ಚಿನ್ನಯ್ಯ ಸೂಚಿಸಿದ ಸ್ಥಳಗಳಲ್ಲಿ ನಡೆದ ಶೋಧದ ಸಂಪೂರ್ಣ ವರದಿ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಅಧಿಕೃತ ದಾಖಲೆಗಳು ಮತ್ತು ತನಿಖಾ ಸಂಸ್ಥೆಗಳ ವರದಿಗಳ ಆಧಾರದ ಮೇಲೆ ಸ್ಪಷ್ಟ ಉತ್ತರ ದೊರೆತರೆ, ಧರ್ಮಸ್ಥಳದ ಕುರಿತು ಹರಿದಾಡುತ್ತಿರುವ ವಿವಿಧ ಹೇಳಿಕೆಗಳ ನಡುವಿನ ವಾಸ್ತವಾಂಶವನ್ನು ಸಾರ್ವಜನಿಕರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ. ಆದ್ದರಿಂದ, ಈ ವಿಚಾರದಲ್ಲಿ ಆರೋಪ-ಪ್ರತ್ಯಾರೋಪಗಳಿಗಿಂತಲೂ, ಅಧಿಕೃತ ದಾಖಲೆಗಳು, ತನಿಖಾ ವರದಿಗಳು ಮತ್ತು ಪರಿಶೀಲಿಸಬಹುದಾದ ಸಾಕ್ಷ್ಯಗಳ ಆಧಾರದ ಮೇಲೆ ಸತ್ಯಾಂಶವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸುವ ಅಗತ್ಯವಿದೆ.

PREV
Read more Articles on

Recommended Stories

ಬೇಟೆಗಾರರಿಗೆ ದುಸ್ವಪ್ನ ಅರಣ್ಯದ ಮಂಚೂಣಿ ಈ ಸಿಬ್ಬಂದಿ
ಯುವಜನರಲ್ಲೂ ಬ್ಯಾಡ್ ಕೊಲೆಸ್ಟ್ರಾಲ್ ಆತಂಕ : ವೈದ್ಯರ ಬಳಿ ನೀವು ಕೇಳಲೇಬೇಕಾದ 3 ಪ್ರಶ್ನೆಗಳು