ಬೇಟೆಗಾರರಿಗೆ ದುಸ್ವಪ್ನ ಅರಣ್ಯದ ಮಂಚೂಣಿ ಈ ಸಿಬ್ಬಂದಿ

Published : Oct 01, 2026, 10:31 AM IST
Forest

ಸಾರಾಂಶ

ನಮ್ಮ ರಾಜ್ಯವನ್ನು ಗಂಧದಗುಡಿ ಎಂದು ಹೆಮ್ಮೆಯಿಂದ ಕರೆಯುತ್ತೇವೆ. ಅತಿ ಹೆಚ್ಚು ಆನೆ, ಹುಲಿಗಳನ್ನು ಪೋಷಿಸುತ್ತಿರುವ ಕರುನಾಡಿನ ಕಾಡುಗಳು ಅನೇಕ ನದಿಗಳ ಉಗಮ ಸ್ಥಾನಗಳೂ ಹೌದು. ಮನುಕುಲಕ್ಕೆ ಅತ್ಯಗತ್ಯವಾದ ನೆಲ, ಜಲ ಮತ್ತು ಪರಿಸರವನ್ನು ಅರಣ್ಯ ಇಲಾಖೆ ಸಂರಕ್ಷಣೆ ಮಾಡುತ್ತಿದೆ

 ವನವೈಭವ

ನಮ್ಮ ರಾಜ್ಯವನ್ನು ಗಂಧದಗುಡಿ ಎಂದು ಹೆಮ್ಮೆಯಿಂದ ಕರೆಯುತ್ತೇವೆ. ಅತಿ ಹೆಚ್ಚು ಆನೆ, ಹುಲಿಗಳನ್ನು ಪೋಷಿಸುತ್ತಿರುವ ಕರುನಾಡಿನ ಕಾಡುಗಳು ಅನೇಕ ನದಿಗಳ ಉಗಮ ಸ್ಥಾನಗಳೂ ಹೌದು. ಮನುಕುಲಕ್ಕೆ ಅತ್ಯಗತ್ಯವಾದ ನೆಲ, ಜಲ ಮತ್ತು ಪರಿಸರವನ್ನು ಅರಣ್ಯ ಇಲಾಖೆ ಸಂರಕ್ಷಣೆ ಮಾಡುತ್ತಿದೆ. ಹಲವಾರು ಸಾಹಸ, ಸಂಶೋಧನೆ, ಸಾಧನೆ, ಜಾಗೃತಿಗಳನ್ನು ಅರಣ್ಯ ಇಲಾಖೆ ಮಾಡಿದೆ. ಆದರೆ ಇವುಗಳು ಎಲ್ಲೂ ದಾಖಲಾಗಿಲ್ಲ. ಅರಣ್ಯ ಇಲಾಖೆಯ ಈ ಯಶೋಗಾಥೆಯನ್ನು ದಾಖಲಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ವನವೈಭವ ಎಂಬ ಸರಣಿ ಲೇಖನ ಇಂದಿನಿಂದ ಆರಂಭವಾಗಿದೆ.

ವಿನೋದಕುಮಾರ್ ಬಿ ನಾಯ್ಕ್

ಕಣ್ಣು ಹಾಯಿಸಿದಷ್ಟು ದೂರವೂ ದಟ್ಟವಾದ ಕಾಡು…ಅಲ್ಲೆಲ್ಲೋ ಜೀರುಂಡೆ ಸದ್ದು..ಬಿದಿರಿನ ದಟ್ಟ ಮೆಳೆಯ ನಡುವೆ ಆನೆ ಕಿವಿ ಬಡಿತದ ಶಬ್ದ. ಕೊಲ್ಲಲು ಬರುವ ಕಾಡುಪ್ರಾಣಿಗಳನ್ನೇ ಜೀವದ ಹಂಗು ತೊರೆದು ಕಾಯುವುದೇ ನಿತ್ಯದ ಕೆಲಸ.

ಇಂತಹ ವಾತಾವರಣದ ನಡುವೆ ನಿತ್ಯವೂ ಕರ್ತವ್ಯ ನಿರ್ವಹಣೆ ಮಾಡುತ್ತಾರೆ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ. ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ಕಳ್ಳಬೇಟೆ ತಡೆ ಶಿಬಿರ (Anti-Poaching Camp)ಗಳ ಸಿಬ್ಬಂದಿ ದಿನದ 24 ಗಂಟೆಯೂ ಕಾಡಿನಲ್ಲೇ ಕೆಲಸ ನಿರ್ವಹಿಸುತ್ತಾರೆ. ತಿಂಗಳಿಗೊಮ್ಮೆ ರಜೆ ತೆಗೆದುಕೊಂಡು ಮನೆಗೆ ಹೋಗಿ ಬರುತ್ತಾರೆ. ಉಳಿದಂತೆ ಹೊರ ಜಗತ್ತಿನೊಂದಿಗೆ ಇವರ ಸಂಪರ್ಕ ಕಟ್.

ದೇಶದ ಗಡಿ ಕಾಯುವ ಸೈನಿಕರಷ್ಟೇ ಕಷ್ಟಕರ ಪರಿಸ್ಥಿತಿಯಲ್ಲಿ ಇಂತಹ ಕಳ್ಳಬೇಟೆ ಶಿಬಿರದ ಸಿಬ್ಬಂದಿ ಕರ್ತವ್ಯ ಮಾಡುತ್ತಾರೆ. ಕೈಯಲ್ಲೊಂದು ಕೋಲು, ಇನ್ನೊಂದು ಕೈಯಲ್ಲಿ ಮಚ್ಚು…ಬೆನ್ನ ಹಿಂದಿನ ಬ್ಯಾಗಿನಲ್ಲಿ ಊಟ ಮತ್ತು ವಾಟರ್ ಬಾಟಲ್. ಇವಿಷ್ಟೇ ಇವರ ಆಯುಧಗಳು. ಆನೆ ಬರಲಿ…ಹುಲಿ ಇರಲಿ…ಧೈರ್ಯದಿಂದಲೇ ತನ್ನ ಕೆಲಸ ಮಾಡಿಕೊಂಡಿರಬೇಕು.

ಈ ಕ್ಯಾಂಪಿನ ಸ್ಥಾಪನೆಯೇ ಕಾಡಿನ ಸಂಪತ್ತನ್ನು ಉಳಿಸುವುದು. ಈ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಮೂರರಿಂದ ನಾಲ್ವರು ಸಿಬ್ಬಂದಿ ಇರುತ್ತಾರೆ. ಇಬ್ಬರು ಅಥವಾ ಮೂವರು ಹಂಗಾಮಿ ಸಿಬ್ಬಂದಿ ಒಬ್ಬ ಬೀಟ್ ಗಾರ್ಡ್ ಅಥವಾ ಕಾಯಂ ವಾಚರ್ ಇರುತ್ತಾರೆ. ಇಷ್ಟೂ ಜನರಿಗೆ ಸೇರಿ ಒಂದು ಬಂದೂಕು. ಒಂದು ವಾಕಿಟಾಕಿ. ಶಿಬಿರದಲ್ಲೊಂದು ವೈರಲೆಸ್ ಮಿನಿ ಸ್ಟೇಷನ್. ಅಡುಗೆ ಪದಾರ್ಥಗಳು. ತಮ್ಮ ಅಡುಗೆ ತಾವೇ ಮಾಡಿಕೊಂಡು, ಕಾಡನ್ನು ಗಸ್ತು ತಿರುಗುವುದು ಇವರ ನಿತ್ಯದ ಡ್ಯೂಟಿ.

ಇಂತಹ ಒಂದು ಕ್ಯಾಂಪು…ಅಂಡೆ ಕುರುಬನ ದೊಡ್ಡಿ ಕಳ್ಳಬೇಟೆ ತಡೆ ಶಿಬಿರ. ಇದು ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ವನ್ಯಜೀವಿಧಾಮದಲ್ಲಿದೆ. ಈ ಕ್ಯಾಂಪಿಗೆ ನಾನು ತಲುಪಿದಾಗ ಮಧ್ಯಾಹ್ನ 12 ಗಂಟೆ. ಕ್ಯಾಂಪಿನ ಸಿಬ್ಬಂದಿ ಆತ್ಮೀಯ ಸ್ವಾಗತದ ನಂತರ ಒಂದಷ್ಟು ಹೊತ್ತು ವಿರಾಮ. ಅಷ್ಟರೊಳಗೆ ಬಿಸಿಬಿಸಿ ಅಡುಗೆ ರೆಡಿ ಆಗಿತ್ತು. ಎಲ್ಲರೂ ಊಟ ಮಾಡಿ ಸ್ವಲ್ಪ ಹೊತ್ತು ಕಾಡಿನ ಬಗ್ಗೆ ಹರಟೆ ಹೊಡೆದಿದ್ದಾಯಿತು.

ಮೂರು ಗಂಟೆಯಾಗುತ್ತಿದ್ದಂತೆಯೇ ಸಿಬ್ಬಂದಿ ಗಸ್ತು ತಿರುಗಲು ಹೋಗಬೇಕು ರೆಡಿ ಆಗಿ ಎಂದರು. ನಾನೂ ಅವರೊಂದಿಗೆ ಹೊರಡಲು ರೆಡಿಯಾದೆ. ನಾನೂ ಜೊತೆಗಿದ್ದ ಕಾರಣ, ಅವರು ಬಂದೂಕನ್ನು ಜೊತೆಗಿಟ್ಟುಕೊಂಡರು. ಕ್ಯಾಂಪಿಂದ ಹೊರಟ ನಾವು, ಇ-ಗಸ್ತು ಆಪ್‌ನಲ್ಲಿ ನಮ್ಮ ಜಿಪಿಎಸ್ ಲೊಕೇಶನ್ ಫೀಡ್ ಮಾಡಿದೆವು. ಅಲ್ಲಿಂದ ನಮ್ಮ ಗಸ್ತು ಶುರುವಾಯಿತು. ಕ್ಯಾಂಪಿನ ಸಿಬ್ಬಂದಿ ಬೆಳಿಗ್ಗೆಯೇ 8 ಗಂಟೆಗೆ ಗಸ್ತಿಗೆ ಹೊರಡುತ್ತಾರೆ. ಆದ್ರೆ, ಅವತ್ತು ನಾನು ಅವರ ಜೊತೆಗೆ ಹೋಗಬೇಕಿದ್ದರಿಂದ ಒಂದು ತಂಡ ಬೆಳಿಗ್ಗೆಯೇ ಹೋಗಿತ್ತು, ಇನ್ನೊಂದು ತಂಡ ನನ್ನನ್ನು ಕರೆದೊಯ್ಯಲು ಮಧ್ಯಾಹ್ನದ ತನಕ ಕಾದಿತ್ತು.

ಈ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಗೆ ವಲಯ ಅರಣ್ಯಾಧಿಕಾರಿಗಳ ಕಚೇರಿಯಿಂದ ರೇಷನ್ ಪೂರೈಕೆಯಾಗುತ್ತದೆ. ಅದನ್ನೇ ಮಿತವಾಗಿ ಬಳಸಿಕೊಂಡು ಕೆಲಸ ಮಾಡುತ್ತಾರೆ. ಬೆಳಿಗ್ಗೆ 8 ಗಂಟೆಗೆ ಗಸ್ತು ಶುರು ಮಾಡುತ್ತಾರೆ. ಗಸ್ತು ಆಪ್‌ನಲ್ಲಿ ಮೊದಲ ಫೋಟೋ ಹೊಡೆದು ಅದನ್ನು ಜಿಪಿಎಸ್ ಸಮೇತ ಅಪ್ ಲೋಡ್ ಮಾಡುತ್ತಿದ್ದಂತೆಯೇ ಇವರ ಕೆಲಸ ಶುರುವಾಗುತ್ತದೆ. ಅಲ್ಲಿಂದ ನಡೆದುಕೊಂಡೇ ಕಾಡು ಸುತ್ತಲು ಶುರು ಮಾಡುತ್ತಾರೆ. ದಾರಿಯಲ್ಲಿ ಸಿಗುವ ವನ್ಯಜೀವಿಗಳ ಫೋಟೋ ಅಥವಾ ಹೆಜ್ಜೆ ಗುರುತುಗಳ ಫೋಟೋ ಹೊಡೆದು ಅಪ್ ಲೋಡ್ ಮಾಡುತ್ತಾ ಸಾಗುತ್ತಾರೆ. ಕೆರೆ ಕಟ್ಟೆಗಳಿಗೆ ಭೇಟಿ ನೀಡಿ ಫೋಟೋ ದಾಖಲು ಮಾಡಬೇಕು. ಮಧ್ಯಾಹ್ನ ಯಾವುದಾದರೂ ಮರದ ನೆರಳಿನಲ್ಲಿ ಕುಳಿತು ತಮ್ಮ ಜೊತೆ ಕ್ಯಾಂಪಿನಿಂದ ತಂದಿದ್ದ ಊಟ ಮಾಡಿಕೊಂಡು ಮತ್ತೆ ಗಸ್ತು ಶುರು ಮಾಡುತ್ತಾರೆ. ಸಂಜೆ 5 ಗಂಟೆ ಹೊತ್ತಿಗೆ ವಾಪಸ್ ಕ್ಯಾಂಪಿಗೆ ಬಂದು ಸೇರಿಕೊಳ್ಳುತ್ತಾರೆ. ಈ ಗಸ್ತಿನ ವಿಶೇಷ ಏನೆಂದರೆ, ಹೋದ ದಾರಿಯಲ್ಲೇ ವಾಪಸ್ ಬರುವುದಿಲ್ಲ. ಹೋಗುವ ದಾರಿ ಮತ್ತು ಬರುವ ದಾರಿ ಬೇರೆ ಬೇರೆ ಇರುತ್ತದೆ.

ಈ ಮುಂಚೂಣಿ ಸಿಬ್ಬಂದಿಯ ತಂಡ ದಿನಕ್ಕೆ ಕನಿಷ್ಠ 10 ರಿಂದ 15 ಕಿಲೋ ಮೀಟರ್ ನಡೆಯುತ್ತಾರೆ. ಕಾಡಿನಲ್ಲಿ ಮಾತನಾಡಿಕೊಂಡು ಸದ್ದು ಮಾಡುತ್ತಾ ಗಸ್ತು ತಿರುಗಬೇಕು. ಎಲ್ಲೋ ಪೊದೆಯ ಹಿಂದೆ, ಬಿದಿರು ಮೆಳೆ ಹಿಂದೆ ಸದ್ದು ಮಾಡದೇ ನಿಂತಿರುವ ಸಲಗದ ಕಣ್ಣಿಗೆ ಅಕಸ್ಮಾತ್ ಆಗಿ ಬೀಳಬಾರದು. ಕಾಡಿನಲ್ಲೇ ಕಣ್ಣಿಗೇ ಕಾಣದಂತೆ ಕುಳಿತು ಹೊಂಚು ಹಾಕುತ್ತಿರುವ ಹುಲಿಯ ಹತ್ತಿರವೂ ಸುಳಿಯಬಾರದು. ಎಲ್ಲಾ ಸಂದರ್ಭಗಳಲ್ಲೂ ಅತ್ಯಂತ ಎಚ್ಚರಿಕೆಯ ದೂರವನ್ನು ಕಾಯ್ದುಕೊಂಡು ಗಸ್ತು ತಿರುಗಬೇಕು. ಆನೆ, ಹುಲಿಗೇನು ಗೊತ್ತು…ಈ ಸಿಬ್ಬಂದಿ ನನ್ನ ಕಾಪಾಡಲು, ಉಳಿಸಿ, ಬೆಳೆಸಲು ಕಾಡನ್ನು ಕಾಯುತ್ತಿರುವ ಕಾವಲುಗಾರರು ಎಂದು…?

ಈ ಸಿಬ್ಬಂದಿ ಕ್ಯಾಂಪಿಗೆ ಬಂದ ನಂತರವೂ ಡ್ಯೂಟಿ ಮುಗಿಯಿತು ಎಂದು ನೆಮ್ಮದಿಯಿಂದ ಮಲಗುವಂತಿಲ್ಲ. ಸಂಜೆ ಬಂದು ರಾತ್ರಿಯ ಅಡುಗೆ ತಯಾರಿ ಮಾಡಬೇಕು. ಊಟ ಮಾಡಿದ ಮೇಲೆ ಸ್ವಲ್ಪ ಹೊತ್ತು ಆಚೆ ಎತ್ತರದ ಪ್ರದೇಶದಲ್ಲಿ ರಾತ್ರಿ ನಿಂತುಕೊಂಡು ಯಾವುದಾದರೂ ಟಾರ್ಚ್ ಬೆಳಕು ಬರುತ್ತಿದೆಯೇ ಎಂದು ಗಮನಿಸಬೇಕು. ರಾತ್ರಿ ಮಲಗಿದ ಮೇಲೆ ಅಪ್ಪಿ ತಪ್ಪಿ ಗುಂಡಿನ ಸದ್ದು ಕೇಳಿಸಿದರೆ ತಕ್ಷಣ ಅಲರ್ಟ್ ಆಗುವ ಜೊತೆಗೆ ಮೇಲಧಿಕಾರಿಯ ಕಚೇರಿಗೆ ವೈರ್ ಲೆಸ್ ಮೆಸೆಜ್ ಕಳಿಸಿ ಗುಂಡಿನ ಸದ್ದು ಕೇಳಿದ ಸ್ಥಳಕ್ಕೆ ಗಾಢಾಂಧಕಾರದಲ್ಲೇ ನಡೆದುಕೊಂಡೇ ಹೋಗಿ ತಲುಪಬೇಕು. ಜೀಪು ಬಂದು ಕರೆದೊಯ್ಯುವವರೆಗೆ ಕಾಯುವಂತಿಲ್ಲ.

ಇಷ್ಟೆ ಅಲ್ಲ, ಈ ಸಿಬ್ಬಂದಿಗೆ ಅತಿ ಹೆಚ್ಚು ಸವಾಲು ಎದುರಾಗುವುದು ಬೇಸಿಗೆಯಲ್ಲಿ. ನಮ್ಮ ಕಾಡುಗಳು ಬೇಸಿಗೆಯಲ್ಲಿ ಎಲೆ ಉದುರಿಸಿಕೊಂಡು ಬೋಳು ಬೋಳಾಗಿರುತ್ತವೆ. ಆಗ ಕೆಲ ಕಿಡಿಗೇಡಿಗಳು ಯಾವುದೋ ದ್ವೇಷಕ್ಕೆ, ವೈಷಮ್ಯಕ್ಕೆ ಅಥವಾ ತಮ್ಮ ದನಕರುಗಳಿಗೆ ಮೇಯಲು ಹೊಸ ಹುಲ್ಲು ಹುಟ್ಟಲಿ ಎನ್ನುವ ಕಾರಣಕ್ಕೆ ಕಾಡಿಗೆ ಬೆಂಕಿ ಹಚ್ಚುತ್ತಾರೆ. ಆ ಬೆಂಕಿಯನ್ನು ಹೊಗೆಯ ಮೂಲಕ ಗ್ರಹಿಸಿ ತಕ್ಷಣ ಆರಿಸಲು ಕ್ರಮ ಕೈಗೊಳ್ಳದಿದ್ದರೆ ಅದು ಇಡೀ ಕಾಡನ್ನೇ ದಹಿಸಿಬಿಡುತ್ತದೆ. ಇಂಥಹ ಅನೇಕ ಸಂದರ್ಭಗಳಲ್ಲಿ ದಿನಗಟ್ಟಲೇ ಊಟ ನಿದ್ರೆ ಬಿಟ್ಟು ಕಾಡಿನ ಬೆಂಕಿ ಹತೋಟಿಗೆ ತಂದಿದ್ದಾರೆ.

ಹೀಗೆ, ನಾವು ಕ್ಯಾಂಪಿನ ಸಿಬ್ಬಂದಿ ಜೊತೆ ಮಾತನಾಡುತ್ತಾ, ಅವರ ನಿತ್ಯದ ಕಾರ್ಯ ವಿಧಾನ ತಿಳಿದುಕೊಳ್ಳುತ್ತಾ ಕಾಡಿನೊಳಗೆ ಗಸ್ತು ತಿರುಗುವ ಕಷ್ಟದ ಕೆಲಸವನ್ನು ನೋಡುತ್ತಾ, ಅವರ ಮೇಲೆ ವಿಪರೀತ ಅಭಿಮಾನ ಮತ್ತು ಗೌರವ ಉಂಟಾಯಿತು.

ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಯ ಕೆಲಸವನ್ನು ಬೇರೆ ಯಾವ ಕೆಲಸಕ್ಕೂ ಹೋಲಿಸಲಾಗುವುದಿಲ್ಲ. ಅಷ್ಟೊಂದು ಕಠಿಣ ಕೆಲಸ. ಮುಂದಿನ ಪೀಳಿಗೆಗೆ ಈ ಕಾಡು, ವನ್ಯಜೀವಿ, ನದಿ ತೊರೆ, ಬೆಟ್ಟ ಗುಡ್ಡ ಉಳಿಯಲಿ ಎಂದು ತಮ್ಮ ಜೀವದ ಹಂಗನ್ನೇ ತೊರೆದು ಇವರು ಕೆಲಸ ಮಾಡುತ್ತಾರೆ. ಆದರೆ, ಇವರಿಗೆ ಸಿಗುವ ಸಂಬಳ ಸವಲತ್ತುಗಳು ಮಾತ್ರ ಬಹಳ ಕಡಿಮೆ.

ಈ ಹಸಿರ ಸೇನಾನಿಗಳಿಗೆ ನಿಮ್ಮದೊಂದು ಹೆಮ್ಮೆಯ ಸಲ್ಯೂಟ್ ಇರಲಿ.

PREV
Read more Articles on

Recommended Stories

ಯುವಜನರಲ್ಲೂ ಬ್ಯಾಡ್ ಕೊಲೆಸ್ಟ್ರಾಲ್ ಆತಂಕ : ವೈದ್ಯರ ಬಳಿ ನೀವು ಕೇಳಲೇಬೇಕಾದ 3 ಪ್ರಶ್ನೆಗಳು
ಅನಿಸಿಕೆಗಿಂತ ಡೇಟಾಗೆ ಆದ್ಯತೆ: ವಿಮಾ ಕ್ಷೇತ್ರದಲ್ಲಿ ಹೊಸ ಪರಿವರ್ತನೆ