ಕನ್ನಡಪ್ರಭ ವಾರ್ತೆ ಬೆಂಗಳೂರು
ಭವಿಷ್ಯದ ನಮ್ಮ ಮೆಟ್ರೋ ಎಲೆವೆಟೆಡ್ ಕಾರಿಡಾರ್ ಕೆಳಭಾಗದಲ್ಲಿ ಮಣ್ಣುರಹಿತ ಹಾಗೂ ಗೊಬ್ಬರ ಆಧಾರಿತವಾಗಿ ಗಾರ್ಡನ್ ನಿರ್ಮಿಸಿಕೊಳ್ಳಲು ಯೋಜಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು ಈ ಸಂಬಂಧ ಕಾರ್ಪೋರೆಟ್ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ.ಪೆಲಿಕನ್ ಕೆಂಟೆರ್ರಾ ಮತ್ತು ವಿಪ್ರೋ ಪ್ರತಿಷ್ಠಾನದ ಸಹಯೋಗದಲ್ಲಿ ಬಿಎಂಆರ್‌ಸಿಎಲ್ ಈ ಯೋಜನೆ ಕೈಗೆತ್ತಿಕೊಂಡಿದೆ. ಈಗಾಗಲೇ ಪ್ರಾಯೋಗಿಕವಾಗಿ ಇದನ್ನು ಮಂಜುನಾಥ ನಗರ ಮೆಟ್ರೋ ನಿಲ್ದಾಣ ಬಳಿಯ ನೂರು ಮೀಟರ್ ಮಿಡೆವಿಯಲ್ ನಲ್ಲಿ ಆರಂಭಿಸಿತ್ತು. ಇಲ್ಲಿ ಐದು ಪಿಲ್ಲರ್‌ಗಳ ನಡುವೆ 20 ಮೆಟ್ರಿಕ್ ಟನ್ ಗೊಬ್ಬರವನ್ನು ಬಳಸಿ ಮಣ್ಣು ರಹಿತವಾಗಿ ಅಲಂಕಾರಿಕ ಸಸಿಗಳನ್ನು ನೆಟ್ಟು ಗಾರ್ಡನ್ ನಿರ್ಮಾಣ ಮಾಡಿದೆ.
ಮೆಟ್ರೋ ಪಿಲ್ಲರ್‌ಗಳ ಮಧ್ಯ ಹಸಿರೀಕರಣಕ್ಕಾಗಿ ಈವರೆಗೆ ಕೃಷಿಭೂಮಿ ಮತ್ತು ನಗರದ ಸನಿಹದ ಬೆಟ್ಟಗಳ ಮಣ್ಣನ್ನು ತಂದು ಮಿಡೆವಿಯಲ್‌ನಲ್ಲಿ ಸುರಿಯಲಾಗುತ್ತಿತ್ತು. ಈ ರೀತಿ ಮಣ್ಣನ್ನು ತೆಗೆದುಕೊಂಡು ಬರುವುದನ್ನು ತಪ್ಪಿಸಲು ಮೆಟ್ರೋದ ಉದ್ದಕ್ಕೆ ಈ ರೀತಿ ಮಣ್ಣು ರಹಿತ ಗಾರ್ಡನ್ ನಿರ್ಮಿಸಿಕೊಳ್ಳುವ ಯೋಜನೆಯಿದೆ. ಇದಕ್ಕಾಗಿ ವಸತಿ ಸಂಕಿರ್ಣ ಮತ್ತು ಹೋಟೆಲ್, ರೆಸ್ಟೋರೆಂಟ್ ಸೇರಿ ಇತರೆಡೆಗಳಿಂದ ಗೊಬ್ಬರ ಮತ್ತು ನಗರದ ಉದ್ಯಾನ ತ್ಯಾಜ್ಯವನ್ನು ಸಂಗ್ರಹಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.ಪ್ರಾಯೋಗಿಕ ಯಶಸ್ಸಿನ ಬಳಿಕ ಇದೀಗ ಬಿಎಂಆರ್‌ಸಿಎಲ್ ಎಚ್‌ಎಸ್‌ಆರ್ ಲೇಔಟ್‌ನಿಂದ ಬೆಳ್ಳಂದೂರು ವರೆಗಿನ ಮೆಟ್ರೋ ಎಲಿವೆಟೆಡ್ ಕೆಳಭಾಗದಲ್ಲಿ 5 ಕಿ.ಮೀ.ವರೆಗೆ ಈ ರೀತಿ ಗೊಬ್ಬರ ಆಧಾರಿತವಾಗಿ ಹಸಿರೀಕರಣ ಮಾಡಿಕೊಳ್ಳಲು ಮುಂದಾಗಿದೆ. ಸುಮಾರು 12 ಪಿಲ್ಲರ್‌ಗಳ ನಡುವಿನ ಜಾಗವನ್ನು ಈಗಾಗಲೇ ಹಸ್ತಾಂತರ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಎಂಆರ್‌ಸಿಎಲ್, ಮುಂದಿನ ದಿನಗಳಲ್ಲಿ ನಗರದ ವಸತಿ ಸಂಕಿರ್ಣ ಸೇರಿ ಇತರೆಡೆಗಳಿಂದ ಸಂಗ್ರಹವಾಗುವ ತ್ಯಾಜ್ಯವನ್ನು ಮೆಟ್ರೋದ ಮಿಡೆವಿಯಲ್ ಭಾಗದ ಹಸಿರೀಕರಣಕ್ಕೆ ಬಳಸಿಕೊಳ್ಳಲಾಗುವುದು. ಇದರಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಒಂದಿಷ್ಟು ಪ್ರಮಾಣದಲ್ಲಿ ಪರಿಹಾರ ಸಿಕ್ಕಂತಾಗಲಿದೆ ಎಂದು ತಿಳಿಸಿದರು.