;Resize=(412,232))
ಎನ್ ಚಂದ್ರಶೇಖರನ್
ಅಧ್ಯಕ್ಷ, ಟಿಸಿಎಸ್
ನೇಮಕಾತಿ ತಗ್ಗುವಿಕೆಯಿಂದ, ಮುಂದೆ ಅವಕಾಶಗಳೇ ಸಿಗಲಿಕ್ಕಿಲ್ಲ ಎಂದು ಆತಂಕ ಪಡುವ ಅಗತ್ಯವಿಲ್ಲ. ಕಾರಣ, ಇದು ಪರಿವರ್ತನೆಯ ಹಂತಕ್ಕಷ್ಟೇ ಸೀಮಿತವಾಗಿರಲಿದೆ. ಆ ಬಳಿಕ, ಸ್ವತಃ ಎಐ ಇನ್ನಷ್ಟು ಅವಕಾಶಗಳನ್ನು ಸೃಷ್ಟಿಸಲಿದೆ. ಆಗ ಹೊಸ ಕೌಶಲ್ಯಗಳ ಆವಶ್ಯಕತೆ ಉದ್ಭವಿಸಲಿದೆ.
ಎಲ್ಲಾ ಐಟಿ ಕಂಪನಿಗಳಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಕಂಪನಿಯು ಕೃತಕಬುದ್ಧಿಮತ್ತೆ(ಎಐ) ಅಳವಡಿಕೆಯನ್ನು ಮುಂಬರುವ ವರ್ಷಗಳಲ್ಲಿ ಹೆಚ್ಚಿಸಲಿದೆ. ಇನ್ನು 3 ವರ್ಷದಲ್ಲಿ, ಸಿಬ್ಬಂದಿ ಇರುವಷ್ಟೇ ಸಂಖ್ಯೆಯಲ್ಲಿ ಎಐ ಏಜೆಂಟ್‌ಗಳು ಕಾಣಸಿಗಲಿವೆ. ಕಂಪನಿಯಲ್ಲಿ 5 ಲಕ್ಷ ಉದ್ಯೋಗಿಗಳಿದ್ದರೆ, ಅದೇ ಪ್ರಮಾಣದ ಎಐ ಕೂಡ ಅವರೊಂದಿಗೆ ಕೆಲಸ ಮಾಡುವುದನ್ನು ನೋಡುವ ದಿನ ದೂರವಿಲ್ಲ. ಇದೇ ಭವಿಷ್ಯವಾಗಿದೆ. 2028–2030ರ ಹೊತ್ತಿಗೆ ಟಿಸಿಎಸ್ ಒದಗಿಸುವ ಎಲ್ಲಾ ಸೇವೆ ಅಥವಾ ಕೈಗೊಳ್ಳುವ ಯೋಜನೆಗಳಲ್ಲಿ ಎಐ ಪಾತ್ರ ಇದ್ದೇ ಇರುತ್ತದೆ.
ಟಿಸಿಎಸ್ ತನ್ನ ಗ್ರಾಹಕರಿಗೆ ಕೃತಕ ಬುದ್ಧಿಮತ್ತೆಯನ್ನು ಬಳಸಲು ಮತ್ತು ಅವರ ವ್ಯವಹಾರಗಳನ್ನು ಪರಿವರ್ತಿಸಲು ಎಷ್ಟು ಬೇಗ ಸಹಾಯ ಮಾಡುತ್ತದೆಯೋ ಅಷ್ಟು ವೇಗವಾಗಿ ಕಂಪನಿ ಹೆಚ್ಚು ಯಶಸ್ವಿ ಮತ್ತು ಸ್ಪರ್ಧಾತ್ಮಕವಾಗುತ್ತದೆ.
ಎಐ ಅಳವಡಿಕೆ ಹೆಚ್ಚಳವಾಗಲಿರುವ ಕಾರಣ, ಇನ್ನು ಭಾರೀ ಪ್ರಮಾಣದಲ್ಲಿ ನೌಕರರ ನೇಮಕಾತಿ ನಡೆಯುವುದಿಲ್ಲ. ಹಿಂದಿನ ವರ್ಷಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುವುದು. ಮನುಷ್ಯರು ಮಾಡುವ ಕೆಲಸದಲ್ಲಿ ಕೆಲವನ್ನು ಎಐ ಮಾಡಲು ಶಕ್ತವಾಗಲಿರುವ ಕಾರಣ ಈ ಕ್ರಮ ಸೂಕ್ತವಾಗಿರಲಿದೆ. ಈ ಮಾದರಿಯನ್ನು ನಾವು ಈಗಾಗಲೇ ಕಂಪನಿಯ ಕೆಲ ನೇಮಕಾತಿ ವಿಭಾಗಗಳಲ್ಲಿ ನೋಡಬಹುದಾಗಿದೆ.
ಗಮನಿಸಬೇಕಾದ ಅಂಶವೆಂದರೆ, ಕಳೆದ ವರ್ಷ ಟಿಸಿಎಸ್‌ನಿಂದ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು. ಇದು ಒಟ್ಟು ಉದ್ಯೋಗಿಗಳ ಶೇ.2ರಷ್ಟಾಗಿತ್ತು. ಹೀಗಿರುವಾಗ, ಎಷ್ಟು ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಿದೆಯೋ, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿಯೇ ನೇಮಕಾತಿ ಮಾಡಿಕೊಳ್ಳುತ್ತಿದೆ. ಆದರೆ ಈ ಸಂಖ್ಯೆಯು ಕಳೆದ ವರ್ಷಕ್ಕಿಂತ ಕಡಿಮೆಯೇ ಇರಲಿದೆ. ಆದರೂ ಆದಾಯದ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರದು.
ಈ ಆರ್ಥಿಕ ವರ್ಷದಲ್ಲಿ(2026-27) ಐಟಿ ಕ್ಷೇತ್ರದಲ್ಲಿ 1.35 ಲಕ್ಷ ಉದ್ಯೋಗಿಗಳ ನೇಮಕವಾಗುವ ನಿರೀಕ್ಷೆಯಿದೆ. ಇದು, 2025-26ಕ್ಕೆ ಹೋಲಿಸಿದರೆ ಶೇ.2.3ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ಆದರೆ ಟಿಸಿಎಸ್‌ನಲ್ಲಿ 2027ನೇ ಆರ್ಥಿಕ ವರ್ಷದಲ್ಲಿ 25 ಸಾವಿರ ಮಂದಿಗೆ ಕೆಲಸ ಕೊಡುವ ಗುರಿ ಇಟ್ಟುಕೊಂಡಿದ್ದು, ಮುಂದಿನ ತ್ರೈಮಾಸಿಕಗಳಲ್ಲಿ ಇದು ಹೆಚ್ಚಳವಾಗಬಹುದು. ಹೀಗಾದರೂ, 2019-2020ರಿಂದೀಚೆಗೆ ಆದ ಅತಿ ಕಡಿಮೆ ಪ್ರಮಾಣದ ನೇಮಕಾತಿ ಎನಿಸಿಕೊಳ್ಳಲಿದೆ.
ನೇಮಕಾತಿ ತಗ್ಗುವಿಕೆಯಿಂದ ಎಐ ಅನ್ನು ಮಾರಕ ಎಂದು ಪರಿಗಣಿಸಲಾಗದು. ಅದರಿಂದಾಗಿ ಮುಂದೆ ಅವಕಾಶಗಳೇ ಸಿಗಲಿಕ್ಕಿಲ್ಲ ಎಂದು ಆತಂಕ ಪಡುವ ಅಗತ್ಯವಿಲ್ಲ. ಕಾರಣ, ತಂತ್ರಜ್ಞಾನ ಸೇವಾ ಉದ್ಯಮಕ್ಕೆ ಕೃತಕ ಬುದ್ಧಿಮತ್ತೆ ಒಂದು ಪರಿವರ್ತನಾ ಶಕ್ತಿಯಾಗಿದೆ. ಅಂತೆಯೇ ನೇಮಕಾತಿ ತಗ್ಗುವಿಕೆಯು ಪರಿವರ್ತನೆಯ ಹಂತಕ್ಕಷ್ಟೇ ಸೀಮಿತವಾಗಿರಲಿದೆ. ಆ ಬಳಿಕ, ಸ್ವತಃ ಎಐ ಇನ್ನಷ್ಟು ಅವಕಾಶಗಳನ್ನು ಸೃಷ್ಟಿಸಲಿದೆ. ಆಗ ಹೊಸ ಕೌಶಲ್ಯಗಳ ಅವಶ್ಯಕತೆ ಉದ್ಭವಿಸಲಿದೆ. ಹೀಗಾಗಿ, ಟಿಸಿಎಸ್ ಇತಿಹಾಸದಲ್ಲೇ ಎಐ ಅಳವಡಿಕೆಯನ್ನು ಬಹುದೊಡ್ಡ ಬೆಳವಣಿಗೆಯ ಅವಕಾಶ ಎಂದು ಪರಿಗಣಿಸಬಹುದು. ಕಂಪನಿಯು ಎಐ, ಅದರ ಆಪರೇಟಿಂಗ್ ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳ ಮೇಲೆ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ.
ಪ್ರಪಂಚದಾದ್ಯಂತ ಸುಮಾರು ಮುಕ್ಕಾಲು ಭಾಗದಷ್ಟು ಉದ್ಯಮಗಳು ಮುಂದಿನ ಎರಡು ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರದ ಮೇಲಿನ ವೆಚ್ಚವನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿದ್ದು, ಇದಕ್ಕೆ ಪ್ರಮುಖ ಕಾರಣ ಎಐ ಮೇಲಿನ ಹೂಡಿಕೆಯಾಗಿದೆ. ವ್ಯವಹಾರಗಳಲ್ಲಿ ಬಳಕೆಯಾಗುವ ಎಐ ಮಾದರಿಗಳನ್ನು ಪಡೆಯುವುದು ಇನ್ನು ಕಷ್ಟದ ವಿಷಯವಲ್ಲ. ಬದಲಿಗೆ, ಸರಿಯಾದ ದತ್ತಾಂಶ, ವಿಶ್ವಾಸಾರ್ಹತೆ ಹಾಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಬೆಳವಣಿಗೆಗೆ 5 ಅವಕಾಶ:
ಎಐ ಯುಗದಲ್ಲಿ ಬೆಳವಣಿಗೆಗೆ 5 ಪ್ರಮುಖ ಅವಕಾಶಗಳು ತೆರೆದುಕೊಳ್ಳಲಿವೆ. ಮೊದಲನೆಯದಾಗಿ, ಹಳೆಯ ತಂತ್ರಜ್ಞಾನ ಮೂಲಸೌಕರ್ಯ ಮತ್ತು ವಿಭಜಿತ ದತ್ತಾಂಶ ಪರಿಸರಗಳು ಸೇರಿದಂತೆ ಹಳೆಯ ವ್ಯವಸ್ಥೆಗಳು ಆಧುನೀಕರಣಗೊಳ್ಳುತ್ತವೆ. ಎರಡನೆಯದಾಗಿ, ಪೂರೈಕೆ ಸರಪಳಿಯನ್ನು ಒಳಗೊಂಡಂತೆ, ಎಐ ಅನ್ನು ಬಳಸಿಕೊಂಡು ಆರಂಭದಿಂದ ಕೊನೆಯ ವರೆಗಿನ ಎಲ್ಲಾ ವ್ಯವಹಾರ ಪ್ರಕ್ರಿಯೆಗಳನ್ನು ಮರುವಿನ್ಯಾಸಗೊಳಿಸಬಹುದು. ಮೂರನೆಯದಾಗಿ, ಭದ್ರತೆ ಮತ್ತು ವೆಚ್ಚದ ಸಮರ್ಥ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಎಐ ಏಜೆಂಟ್‌ಗಳನ್ನು ಬಳಸಬಹುದಾಗಿದೆ.
ನಾಲ್ಕನೆಯದಾಗಿ, ಸರ್ಕಾರಗಳು ತಮ್ಮ ಸ್ವಂತ ಮೂಲಸೌಕರ್ಯ, ಅಂಕಿಅಂಶ, ಕೌಶಲ್ಯವನ್ನು ಬಳಸಿಕೊಂಡು ಎಐ ಅನ್ನು ಅಭಿವೃದ್ಧಿಪಡಿಸಿ, ಬಳಸಿ, ಅದನ್ನು ನಿಯಂತ್ರಿಸಬಹುದು. ಐದನೇ ಕ್ಷೇತ್ರ ಭೌತಿಕ ಎಐ ಆಗಿದ್ದು, ಇದನ್ನು ಕಾರ್ಖಾನೆಗಳು, ಗೋದಾಮುಗಳು ಮತ್ತು ವಾಹನಗಳಲ್ಲಿ ಬಳಸಬಹುದಾಗಿದೆ. ಇದಕ್ಕೆ ಸೂಕ್ತ ಉದಾಹರಣೆಯೆಂದರೆ, ಗೋದಾಮುಗಳ ಮೇಲ್ವಿಚಾರಣೆಗೆ ಜಾಗತಿಕ ಕೃಷಿ ವ್ಯವಹಾರ ಕಂಪನಿಯೊಂದು 4 ಕಾಲುಗಳ ರೋಬೋಟ್ ಅನ್ನು ಬಳಸುತ್ತಿರುವುದು.