ವಿಕಸಿತ ಭಾರತದತ್ತ ಸಾಗುವ ನಮ್ಮ ಪಯಣ ಹಳ್ಳಿಗಳ ಸಮೃದ್ಧಿ ಆಧರಿಸಿರಬೇಕು.ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅನ್ನದಾತರನ್ನು ಸಬಲಗೊಳಿಸುವುದೇ ನಮ್ಮ ಉದ್ದೇಶ. ‘ಅಗ್ರಿ-ಪಿವಿ’ ಎಂದೂ ಕರೆಯಲಾಗುವ ಅಗ್ರಿ ವೋಲ್ಟಾಯಿಕ್ಸ್, ರೈತರು ತಮ್ಮ ಜಮೀನಿನಲ್ಲಿ ಕೃಷಿಯನ್ನು ಮುಂದುವರಿಸುತ್ತಲೇ ಶುದ್ಧ ವಿದ್ಯುತ್ ಉತ್ಪಾದಿಸಲು ಅನುವು ಮಾಡಿಕೊಡುವ ಮೂಲಕ ನಮ್ಮ ಉದ್ದೇಶ ಈಡೇರಿಕೆಗೆ ಸಹಕಾರಿ
ಪ್ರಲ್ಹಾದ್ ಜೋಶಿ, ಶಿವರಾಜ್ ಸಿಂಗ್ ಚೌಹಾಣ್
ಕೇಂದ್ರ ಸಚಿವರು
( ವಿಕಸಿತ ಭಾರತದತ್ತ ಸಾಗುವ ನಮ್ಮ ಪಯಣ ಹಳ್ಳಿಗಳ ಸಮೃದ್ಧಿ ಆಧರಿಸಿರಬೇಕು.ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅನ್ನದಾತರನ್ನು ಸಬಲಗೊಳಿಸುವುದೇ ನಮ್ಮ ಉದ್ದೇಶ. ‘ಅಗ್ರಿ-ಪಿವಿ’ ಎಂದೂ ಕರೆಯಲಾಗುವ ಅಗ್ರಿ ವೋಲ್ಟಾಯಿಕ್ಸ್, ರೈತರು ತಮ್ಮ ಜಮೀನಿನಲ್ಲಿ ಕೃಷಿಯನ್ನು ಮುಂದುವರಿಸುತ್ತಲೇ ಶುದ್ಧ ವಿದ್ಯುತ್ ಉತ್ಪಾದಿಸಲು ಅನುವು ಮಾಡಿಕೊಡುವ ಮೂಲಕ ನಮ್ಮ ಉದ್ದೇಶ ಈಡೇರಿಕೆಗೆ ಸಹಕಾರಿ)
2030ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ರಾಷ್ಟ್ರೀಯ ಗುರಿಯನ್ನು ಸಾಧಿಸುವತ್ತ ಭಾರತ ಸಾಗುತ್ತಿರುವ ಸಂದರ್ಭದಲ್ಲಿ, ಕೃಷಿ ಕ್ಷೇತ್ರವು ಕೃಷಿ ಭೂಮಿಗಳಲ್ಲಿಯೇ ಸೌರಶಕ್ತಿಯನ್ನು ಬಳಸಿಕೊಳ್ಳುವ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ. ಇದೇ ವೇಳೆ, ಭಾರತ ಸರ್ಕಾರದ ಪಿಎಂ-ಕುಸುಮ್ (ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ) ಯೋಜನೆಯಡಿ ಕೈಗೊಂಡಿರುವ ಯಶಸ್ವಿ ಪ್ರಯತ್ನಗಳು ಈಗಾಗಲೇ ನೀರಾವರಿಯನ್ನು ಸೌರಶಕ್ತಿಗೆ ಪರಿವರ್ತಿಸುವ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತಿವೆ.
ಇದರಿಂದ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುವುದರ ಜೊತೆಗೆ ಪರಿಸರಸ್ನೇಹಿ ಮತ್ತು ಸುಸ್ಥಿರ ಪದ್ಧತಿಗಳಿಗೆ ಉತ್ತೇಜನ ದೊರೆಯುತ್ತಿದೆ. ಇದಲ್ಲದೆ, ಪಿಎಂ-ಕುಸುಮ್ ಯೋಜನೆಯ ಮುಂದಿನ ಹಂತದಲ್ಲಿ ಕೃಷಿ-ದ್ಯುತಿವಿದ್ಯುಜ್ಜನಕ ವ್ಯವಸ್ಥೆಗಳಿಗೆ ಪ್ರತ್ಯೇಕ ಅವಕಾಶ ಕಲ್ಪಿಸುವ ಮೂಲಕ ಸೌರಶಕ್ತಿ ಉತ್ಪಾದನೆಯನ್ನು ತ್ವರಿತಗೊಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ದಿಲ್ಲಿಯಲ್ಲಿ ಅಗ್ರಿವೋಲ್ಟಾಯಿಕ್ಸ್ ಸಮ್ಮೇಳನ
ಅಕ್ಟೋಬರ್ 21ರಿಂದ 23ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ಏಳನೇ ಅಗ್ರಿವೋಲ್ಟಾಯಿಕ್ಸ್ ವಿಶ್ವ ಸಮ್ಮೇಳನವನ್ನು ಭಾರತ ಆಯೋಜಿಸಿದೆ. ‘ಜಾಗತಿಕ ದಕ್ಷಿಣಕ್ಕೆ ಶಕ್ತಿ ತುಂಬುವುದು’ ಎಂಬ ಸಮ್ಮೇಳನದ ವಿಷಯವು ಭಾರತ ವಹಿಸಲು ಸಿದ್ಧವಾಗಿರುವ ಜವಾಬ್ದಾರಿಯನ್ನು ನೇರವಾಗಿ ಪ್ರತಿಬಿಂಬಿಸುತ್ತದೆ. ಕೃಷಿ ನಾವೀನ್ಯತೆ ಮತ್ತು ಇಂಧನ ಪರಿವರ್ತನೆಯ ಪ್ರಯೋಜನಗಳು ಭಾರತದ ಒಟ್ಟು ರೈತರಲ್ಲಿ ಸುಮಾರು ಶೇ. 86ರಷ್ಟಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೂ ತಲುಪಬೇಕು ಎಂಬುದು ನಮ್ಮ ಆಶಯ.
ಉತ್ತಮ ಫಸಲು ಬಂದ ಮಾತ್ರಕ್ಕೆ ಉತ್ತಮ ಆದಾಯ ದೊರೆಯುತ್ತದೆ ಎಂಬ ಖಾತರಿ ಇಲ್ಲ. ಹವಾಮಾನ, ಕೃಷಿ ವೆಚ್ಚ ಮತ್ತು ಮಾರುಕಟ್ಟೆ ಬೆಲೆಗಳು ಕುಟುಂಬದ ಆರ್ಥಿಕ ಲೆಕ್ಕಾಚಾರವನ್ನು ಏರುಪೇರು ಮಾಡಬಹುದು. ಇಂತಹ ಅನಿಶ್ಚಿತತೆಗಳನ್ನು ಎದುರಿಸುವ ರೈತರ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ಹೆಚ್ಚುವರಿ ಆದಾಯ ಗಳಿಸುವ ಅವಕಾಶಗಳನ್ನು ಸೃಷ್ಟಿಸಲು ಸಾರ್ವಜನಿಕ ನೀತಿಗಳು ನೆರವಾಗಬೇಕು.
ಕೃಷಿಗೆ ಸೂಕ್ತವಾದ ರಚನೆಗಳು ಮತ್ತು ಅಂತರ ವ್ಯವಸ್ಥೆಗಳ ಮೂಲಕ ಒಂದೇ ಭೂಮಿಯಲ್ಲಿ ಬೆಳೆ ಬೆಳೆಯುವುದರ ಜೊತೆಗೆ ಸೌರ ವಿದ್ಯುತ್ ಉತ್ಪಾದಿಸುವುದೇ ಅಗ್ರಿವೋಲ್ಟಾಯಿಕ್ಸ್ನ ಉದ್ದೇಶ. ಇದರಿಂದ ಕೃಷಿಕರಿಗೆ ವಿದ್ಯುತ್ ಮಾರಾಟದ ಮೂಲಕ ಹೆಚ್ಚುವರಿ ಆದಾಯದ ಮೂಲ ದೊರೆಯುತ್ತದೆ. ಸೌರಶಕ್ತಿಯು ಡೀಸೆಲ್ ಅಥವಾ ಖರೀದಿಸಿದ ವಿದ್ಯುತ್ಗೆ ಪರ್ಯಾಯವಾದಾಗ ವೆಚ್ಚವನ್ನೂ ಕಡಿಮೆ ಮಾಡುತ್ತದೆ. ಅಗ್ರಿವೋಲ್ಟಾಯಿಕ್ಸ್ ವ್ಯವಸ್ಥೆಯಡಿ ಸೃಷ್ಟಿಯಾಗುವ ಅನುಕೂಲಕರ ಸೂಕ್ಷ್ಮ ಹವಾಮಾನವು ಅತಿಯಾದ ಶಾಖ, ಬರ, ತೀವ್ರ ಸೌರ ವಿಕಿರಣ ಮತ್ತು ಆಲಿಕಲ್ಲು ಮಳೆಯ ಪರಿಣಾಮಗಳಿಂದ ಬೆಳೆಗಳಿಗೆ ಹೆಚ್ಚುವರಿ ರಕ್ಷಣೆ ಒದಗಿಸುತ್ತದೆ.
ಅಗ್ರಿವೋಲ್ಟಾಯಿಕ್ಸ್ ಮೂಲಕ ಗ್ರಾಮೀಣ ಆರ್ಥಿಕತೆಯ ಇನ್ನಷ್ಟು ವಲಯಗಳಿಗೆ ವಿಸ್ತರಿಸಬಹುದು. ಇದರಲ್ಲಿ ಸೌರ ವ್ಯವಸ್ಥೆಗಳ ಅಳವಡಿಕೆ, ನಿರ್ವಹಣೆ ಮತ್ತು ಕೃಷಿ ಸೇವೆಗಳ ಕ್ಷೇತ್ರಗಳಲ್ಲಿನ ಉದ್ಯೋಗಾವಕಾಶಗಳೂ ಸೇರಿವೆ.
ಬೆಳೆ ಆಯ್ಕೆ ಹೇಗೆ?
ಭಾರತದಲ್ಲಿ ಅಗ್ರಿವೋಲ್ಟಾಯಿಕ್ಸ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲು ಸೂಕ್ತ ಬೆಳೆಗಳ ಆಯ್ಕೆ ಅತ್ಯಗತ್ಯ. ಆದ್ದರಿಂದ, ಬೆಳೆಗಳ ಆಯ್ಕೆಯಲ್ಲಿ ನೆರಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ, ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ರೂಪರಚನೆಯನ್ನು ಬದಲಾಯಿಸಿಕೊಳ್ಳುವ ಗುಣ ಮತ್ತು ಸೂರ್ಯನ ಬೆಳಕು ಮಧ್ಯಂತರವಾಗಿ ದೊರೆಯುವ ಸಂದರ್ಭದಲ್ಲಿಯೂ ಸ್ಥಿರ ಇಳುವರಿ ನೀಡುವ ಸಾಮರ್ಥ್ಯಕ್ಕೆ ಆದ್ಯತೆ ನೀಡಬೇಕು. ಸಾಲುಗಳ ನಡುವಿನ ಜಾಗವನ್ನು ಬಳಸಿಕೊಂಡು ಬೆಳೆ ಬೆಳೆಯುವುದು ಅತ್ಯಗತ್ಯ. ಅಗ್ರಿವೋಲ್ಟಾಯಿಕ್ಸ್ ವಿನ್ಯಾಸಗಳಲ್ಲಿ ಸಾಮಾನ್ಯವಾಗಿ ಬೆಳೆಗಳ ಮೇಲ್ಭಾಗಕ್ಕೆ ತಲುಪುವ ನೈಸರ್ಗಿಕ ಸೂರ್ಯನ ಬೆಳಕಿನ ಶೇ. 70ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣವನ್ನು ಉಳಿಸಿಕೊಳ್ಳುವ ಗುರಿ ಇರಬೇಕು. ಬೆಳಕಿನ ಬದಲಾವಣೆಗಳಿಗೆ ಸೂಕ್ಷ್ಮವಾಗಿರುವ ಬೆಳವಣಿಗೆಯ ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಸೌರ ಫಲಕಗಳು ಹೆಚ್ಚುವರಿ ನಮ್ಯತೆಯನ್ನು ಒದಗಿಸಬಹುದು.
ಸಮ್ಮೇಳನದ ಪೂರ್ವಭಾವಿ ಕಾರ್ಯಕ್ರಮದಲ್ಲಿ, ಪಿಎಂ-ಕುಸುಮ್ ಯೋಜನೆಯ ಮುಂದಿನ ಹಂತವು ಅಗ್ರಿವೋಲ್ಟಾಯಿಕ್ಸ್ಗಾಗಿ ಮೀಸಲಾದ ಘಟಕವೊಂದನ್ನು ಹೊಂದಿರುವುದಾಗಿ ಘೋಷಿಸಲಾಯಿತು. ಇದರ ಉದ್ದೇಶ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವಕಾಶ ದೊರೆಯಬೇಕು. ಹೀಗಾಗಿ, ಅಗ್ರಿವೋಲ್ಟಾಯಿಕ್ಸ್ಗೆ ಸೂಕ್ತವಾದ ಸಣ್ಣ ಮತ್ತು ಅತಿ ಸಣ್ಣ ರೈತರ ಗುಂಪುಗಳ ಜಂಟಿ ಅಥವಾ ಸಾಮಾನ್ಯ ಕೃಷಿ ಭೂಮಿಯನ್ನು ಬಳಸಿಕೊಳ್ಳುವ ಸಾಧ್ಯತೆಗಳನ್ನು ನಾವು ಪರಿಶೀಲಿಸಬೇಕಾಗಿದೆ. ಇದಕ್ಕಾಗಿ ರೈತ ಉತ್ಪಾದಕ ಸಂಸ್ಥೆಗಳು (ಎಫ್ಪಿಒ), ಸಹಕಾರ ಸಂಘಗಳು ಮತ್ತು ಪಂಚಾಯತ್ಗಳನ್ನು ಸಜ್ಜುಗೊಳಿಸಿ ಸಬಲಗೊಳಿಸಬೇಕು. ಈ ಉದ್ದೇಶವನ್ನು ಕಾರ್ಯಸಾಧ್ಯ ಯೋಜನೆಗಳಾಗಿ ಪರಿವರ್ತಿಸಲು ಕೈಗೆಟುಕುವ ಹಣಕಾಸು ನೆರವು, ಸೂಕ್ತ ವಿದ್ಯುತ್ ಸಂಪರ್ಕ ವ್ಯವಸ್ಥೆಗಳು ಮತ್ತು ವಿದ್ಯುತ್ ಮಾರಾಟಕ್ಕೆ ವಿಶ್ವಾಸಾರ್ಹ ಪಾವತಿ ವ್ಯವಸ್ಥೆಗಳು ಅಗತ್ಯವಿದೆ.
ಕೃಷಿ ಮುಂದುವರಿಯುವುದು ಈ ವಿಶ್ವಾಸಕ್ಕೆ ಅತ್ಯಗತ್ಯ. ಅಗ್ರಿವೋಲ್ಟಾಯಿಕ್ಸ್ ಯೋಜನೆ ಎಂದು ಹೇಳಿಕೊಳ್ಳುವ ಯಾವುದೇ ಯೋಜನೆಯು ಕೃಷಿಯನ್ನು ಸುಸ್ಥಿರವಾಗಿಡಬೇಕು. ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ರಚನೆಗಳನ್ನು ವಿನ್ಯಾಸಗೊಳಿಸಬೇಕು. ಸೌರ ಫಲಕಗಳ ಆಯ್ಕೆ ಮತ್ತು ಅವುಗಳ ನಡುವಿನ ಅಂತರವು ಬೆಳೆಗಳ ಅಗತ್ಯಗಳಿಗೆ ಅನುಗುಣವಾಗಿರಬೇಕು. ಬೆಳೆಗಳ ನಡುವಿನ ಅಂತರದಲ್ಲಿ ಕೈಗೊಳ್ಳುವ ಕೃಷಿ ಕಾರ್ಯಗಳಿಗೆ ಕಡಿಮೆ ತೆರವು ಜಾಗ ಸಾಕಾಗುವಂತಹ ಸುಧಾರಿತ ಮತ್ತು ಸಣ್ಣ ಕೃಷಿ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಅನುಕೂಲ ಕಲ್ಪಿಸಬೇಕು. ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಸೂಕ್ತವಾಗಿ ವಿನ್ಯಾಸಗೊಳಿಸಿದ ನೆರಳು ಕೆಲವು ಬೆಳೆಗಳು ಶಾಖ ಮತ್ತು ನೀರಿನ ಕೊರತೆಯ ಒತ್ತಡವನ್ನು ಎದುರಿಸಲು ನೆರವಾಗುತ್ತದೆ.
ಅಭಿವೃದ್ಧಿಗೆ ಹಲವು ಸಂಸ್ಥೆಗಳು:
ಭಾರತದಲ್ಲಿ ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಈಗಾಗಲೇ ಅಮೂಲ್ಯ ಅನುಭವಗಳಿವೆ. ಜೋಧಪುರದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಸೆಂಟ್ರಲ್ ಅರಿಡ್ ಝೋನ್ ರಿಸರ್ಚ್ ಇನ್ಸ್ಟಿಟ್ಯೂಟ್ ಸೌರ ವಿದ್ಯುತ್ ಉತ್ಪಾದನೆ ಮತ್ತು ಮಳೆನೀರು ಕೊಯ್ಲಿನ ಜೊತೆಗೆ ಕೃಷಿ ಮಾಡುವ ಸಾಧ್ಯತೆಗಳನ್ನು ಪರಿಶೀಲಿಸಿದೆ. ಪುಣೆಯಲ್ಲಿರುವ ಬಿಎಐಎಫ್ನ ರೂರಲ್ ಇನ್ನೋವೇಶನ್ ಸೆಂಟರ್ ವಿವಿಧ ಬೆಳೆಗಳಲ್ಲಿ ವಿಭಿನ್ನ ವಿನ್ಯಾಸಗಳನ್ನು ಪರೀಕ್ಷಿಸುತ್ತಿದೆ. ಭಾರತ ಸರ್ಕಾರವು 2025ರಲ್ಲಿ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಆವರಣದಲ್ಲಿ 100 ಕಿಲೋವ್ಯಾಟ್ ಸಾಮರ್ಥ್ಯದ ಅಗ್ರಿ-ಫೋಟೋವೋಲ್ಟಾಯಿಕ್ಸ್ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವ ಮೂಲಕ ಅಗ್ರಿವೋಲ್ಟಾಯಿಕ್ಸ್ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ಸಂಶೋಧನಾ ಕಾರ್ಯಕ್ರಮವನ್ನು ಆರಂಭಿಸುವ ಉಪಕ್ರಮ ಕೈಗೊಂಡಿದೆ. ಈ ಉತ್ಕೃಷ್ಟತಾ ಕೇಂದ್ರವು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಮಾರ್ಗದರ್ಶನದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ರಾಷ್ಟ್ರೀಯ ಸೌರಶಕ್ತಿ ಸಂಸ್ಥೆ (ಎನ್ಐಎಸ್ಇ) ಜಂಟಿ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಈ ಕೇಂದ್ರವು ಸೂಕ್ತ ಬೆಳೆಗಳು ಮತ್ತು ಸೌರ ಫಲಕಗಳ ಅತ್ಯುತ್ತಮ ಸಂಯೋಜನೆಯನ್ನು ಗುರುತಿಸಲು, ಇಳುವರಿ ನಷ್ಟವನ್ನು ಕನಿಷ್ಠ ಮಟ್ಟದಲ್ಲಿಡುವ ಬೆಳೆಗಳ ಪಟ್ಟಿಯನ್ನು ರೂಪಿಸಲು ಹಾಗೂ ಅಗ್ರಿವೋಲ್ಟಾಯಿಕ್ಸ್ ವ್ಯವಸ್ಥೆಗೆ ಹೊಂದಿಕೊಳ್ಳುವ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಲು ಸಂಶೋಧನಾ ಅಧ್ಯಯನಗಳನ್ನು ನಡೆಸುತ್ತಿದೆ. ಈ ಸಂಶೋಧನಾ ಪ್ರಯೋಗಗಳಲ್ಲಿ ಹೂಕೋಸು, ಮೂಲಂಗಿ, ಪಡವಲಕಾಯಿ, ಪಾಲಕ್ ಸೊಪ್ಪು, ಸೋರೇಕಾಯಿ ಮತ್ತು ಕುಂಬಳಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ಬಳಸಲಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಉತ್ಕೃಷ್ಟತಾ ಕೇಂದ್ರದಿಂದ ಸಂಗ್ರಹವಾಗುವ ದತ್ತಾಂಶವು ಭಾರತದ ಪ್ರಮುಖ ಸಂಭಾವ್ಯ ಪ್ರದೇಶಗಳಲ್ಲಿ ಯಾವ ಬೆಳೆಗಳು ಸೂಕ್ತವಾಗಿವೆ, ಯಾವ ಪರಿಸ್ಥಿತಿಗಳನ್ನು ಪಾಲಿಸಬೇಕು ಮತ್ತು ಕೃಷಿ ಭೂಮಿ ಹಾಗೂ ಸೌರ ಫಲಕಗಳನ್ನು ಹೇಗೆ ಅತ್ಯುತ್ತಮವಾಗಿ ಸಂಯೋಜಿಸಬೇಕು ಎಂಬುದರ ಕುರಿತು ತಾಂತ್ರಿಕ ಸಲಹೆಗಳನ್ನು ನೀಡಲು ನೆರವಾಗಲಿದೆ.
ವಿಶ್ವ ಸಮ್ಮೇಳನವನ್ನು ಆಯೋಜಿಸುವುದರಿಂದ ಈ ರಾಷ್ಟ್ರೀಯ ಪ್ರಯತ್ನದಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಸಮುದಾಯವೂ ಪಾಲ್ಗೊಳ್ಳಲು ಅವಕಾಶ ದೊರೆಯುತ್ತದೆ. ಮೊದಲ ಎರಡು ಆವೃತ್ತಿಗಳನ್ನು 2020 ಮತ್ತು 2021ರಲ್ಲಿ ಆನ್ಲೈನ್ ಮೂಲಕ ನಡೆಸಲಾಗಿತ್ತು. ನಂತರ ಇಟಲಿಯ ಪಿಯಾಚೆನ್ಸಾ, ದಕ್ಷಿಣ ಕೊರಿಯಾದ ಡೇಗು, ಅಮೆರಿಕದ ಡೆನ್ವರ್ ಮತ್ತು ಜರ್ಮನಿಯ ಫ್ರೈಬರ್ಗ್ನಲ್ಲಿ ಸಮ್ಮೇಳನಗಳು ನಡೆದಿವೆ.
ಜಾಗತಿಕವಾಗಿಯೂ ಛಾಪು:
ಜಾಗತಿಕ ದಕ್ಷಿಣದ ದೇಶಗಳೊಂದಿಗಿನ ಭಾರತದ ಸಹಭಾಗಿತ್ವವನ್ನು ಮತ್ತಷ್ಟು ಗಾಢಗೊಳಿಸಲು ಇದೊಂದು ಅವಕಾಶವೂ ಹೌದು. ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ಆರಂಭಿಸಿದ ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಸೌರಶಕ್ತಿ ಕ್ಷೇತ್ರದಲ್ಲಿ ಸಹಕಾರಕ್ಕೆ ಈಗಾಗಲೇ ಭದ್ರ ಬುನಾದಿಯನ್ನು ಒದಗಿಸಿದೆ. ಅಗ್ರಿವೋಲ್ಟಾಯಿಕ್ಸ್ ಮೂಲಕ ಜಂಟಿ ಕ್ಷೇತ್ರ ಸಂಶೋಧನೆ, ತರಬೇತಿ ಮತ್ತು ಪ್ರಾಯೋಗಿಕ ಅನುಭವಗಳ ವಿನಿಮಯಕ್ಕೆ ಮತ್ತಷ್ಟು ಅವಕಾಶಗಳು ಸೃಷ್ಟಿಯಾಗುತ್ತವೆ.
ಅಭಿವೃದ್ಧಿಯ ಪ್ರಯೋಜನ ಯಾರಿಗೆ ದೊರೆಯುತ್ತದೆ ಎಂಬುದರ ಮೇಲೆ ಅಗ್ರಿವೋಲ್ಟಾಯಿಕ್ಸ್ನ ರಾಜಕೀಯ ಮಹತ್ವ ನಿಂತಿದೆ. ಇಂಧನ ಭದ್ರತೆಯ ಹೆಚ್ಚಳವು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸಬೇಕು. ಶುದ್ಧ ತಂತ್ರಜ್ಞಾನದಲ್ಲಿನ ಹೂಡಿಕೆಗಳು ಕೃಷಿಕರು ಮತ್ತು ಗ್ರಾಮೀಣ ಯುವಜನರಿಗೆ ಅವಕಾಶಗಳನ್ನು ಸೃಷ್ಟಿಸಬೇಕು. ವಿಕೇಂದ್ರೀಕೃತ ಅಗ್ರಿವೋಲ್ಟಾಯಿಕ್ಸ್ ವ್ಯವಸ್ಥೆಗಳು ಮತ್ತು ಪಿಎಂ-ಕುಸುಮ್ ಯೋಜನೆಯ ಮುಂದಿನ ಹಂತವು ಡೀಸೆಲ್ ಹಾಗೂ ಗ್ರಿಡ್ ವಿದ್ಯುತ್ ವೆಚ್ಚದ ಮೇಲಿನ ದೇಶದ ಅವಲಂಬನೆ ಮತ್ತು ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಅಪಾರ ಸಾಮರ್ಥ್ಯ ಹೊಂದಿವೆ.
ನವದೆಹಲಿಗೆ ವಿಶ್ವದ ಪ್ರತಿನಿಧಿಗಳನ್ನು ಸ್ವಾಗತಿಸುವ ಈ ಸಂದರ್ಭದಲ್ಲಿ ನಮ್ಮ ನಿರೀಕ್ಷೆ ಪ್ರಾಯೋಗಿಕ ಫಲಿತಾಂಶಗಳ ಮೇಲಿದೆ. ಈ ಚರ್ಚೆಗಳು ಉತ್ತಮವಾಗಿ ಪರೀಕ್ಷಿಸಲ್ಪಟ್ಟ ಯೋಜನೆಗಳು, ಜ್ಞಾನ ಹಂಚಿಕೊಳ್ಳುವ ಸಹಭಾಗಿತ್ವಗಳು ಮತ್ತು ರೈತರು ವಿಶ್ವಾಸವಿಡಬಹುದಾದ ವ್ಯವಹಾರ ವ್ಯವಸ್ಥೆಗಳನ್ನು ರೂಪಿಸಲು ನೆರವಾಗಬೇಕು. ಸಣ್ಣ ರೈತರು ಸಮೃದ್ಧಿಯ ಹೊಸ ಮೂಲಗಳಲ್ಲಿ ಪಾಲ್ಗೊಳ್ಳುವ ಆತ್ಮವಿಶ್ವಾಸ ಮತ್ತು ಸಾಮರ್ಥ್ಯವನ್ನು ಪಡೆದಾಗ ಮಾತ್ರ ವಿಕಸಿತ ಭಾರತದ ಗುರಿಯತ್ತ ನಮ್ಮ ಪಯಣ ಮತ್ತಷ್ಟು ವೇಗ ಪಡೆಯುತ್ತದೆ. ಕೃಷಿಯನ್ನು ತಳಹದಿಯಾಗಿ ಮತ್ತು ಅನ್ನದಾತರನ್ನು ಕೇಂದ್ರಸ್ಥಾನದಲ್ಲಿ ಇರಿಸಿಕೊಂಡು ಅಗ್ರಿವೋಲ್ಟಾಯಿಕ್ಸ್ ಈ ಗುರಿ ಸಾಧನೆಗೆ ಕೊಡುಗೆ ನೀಡಬಲ್ಲದು.
