ರೈತ ಬೆಳೆದ ಕಬ್ಬಿಗೆ ಉತ್ತಮ ಬೆಲೆ ನೀಡುವಲ್ಲಿ ವಿಫಲವಾಗಿದೆ. ಗೊಬ್ಬರಗಳು ದುಬಾರಿ ಬೆಲೆ, ಪಶು ಆಹಾರಗಳ ಬೆಲೆ ಹೆಚ್ಚಳ, ಹಾಲಿನ ದರದಲ್ಲಿ ರೈತರ ಪಾಲು ಇಲ್ಲ, ಪ್ರತಿ ವರ್ಷ ಹಾಲಿಗೆ ಬೆಂಬಲ ಬೆಲೆ ನೀಡುತ್ತೇವೆ ಎಂದು ಹೇಳಿ ಮರೆ ಮಾಚುತ್ತಿವೆ. ಇದರ ಜೊತೆ ರೈತರ ಸಾಲ ಮನ್ನಾ ಮಾಡದೆ ಇರುವ ಸರ್ಕಾರಗಳು ನುಡುದಂತೆ ನಡೆಯುವಲ್ಲಿ ವಿಫಲ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿ ಹಾಗೂ ರೈತರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅ.23ರಂದು ಮೈಸೂರು- ಬೆಂಗಳೂರು ಹೆದ್ದಾರಿಯ ಗಣಂಗೂರು ಬಳಿಯ ಟೋಲ್‍ ಬಂದ್ ಮಾಡಲು ಕರ್ನಾಟಕ ರಾಜ್ಯ ರೈತ ಸಂಘ ತೀರ್ಮಾನಿಸಿದೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪೂಗೌಡ ನೇತೃತ್ವದಲ್ಲಿ ವಿವಿಧ ರೈತ ಪರ ಸಂಘಟನೆಗಳ ಮುಖಂಡರು ಪೂರ್ವಭಾವಿ ಸಭೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಡಳಿತಕ್ಕೆ ಬಂದ ದಿನದಿಂದ ರೈತರನ್ನು ಸಂಪೂರ್ಣ ಕಡೆಗಣಿಸಿದೆ. ಪ್ರತಿ ಬಾರಿ ಹೋರಾಟ ಮಾಡುವ ವೇಳೆ, ರೈತರ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿಕೊಳ್ಳುವ ಸರ್ಕಾರಗಳು ಅಧಿಕಾರಕ್ಕೆ ಬಂದ ದಿನದಿಂದ ರೈತರ ಕಷ್ಟಗಳನ್ನು ಮರೆಯುತ್ತಿವೆ ಎಂದು ದೂರಿದರು.

ರೈತ ಬೆಳೆದ ಕಬ್ಬಿಗೆ ಉತ್ತಮ ಬೆಲೆ ನೀಡುವಲ್ಲಿ ವಿಫಲವಾಗಿದೆ. ಗೊಬ್ಬರಗಳು ದುಬಾರಿ ಬೆಲೆ, ಪಶು ಆಹಾರಗಳ ಬೆಲೆ ಹೆಚ್ಚಳ, ಹಾಲಿನ ದರದಲ್ಲಿ ರೈತರ ಪಾಲು ಇಲ್ಲ, ಪ್ರತಿ ವರ್ಷ ಹಾಲಿಗೆ ಬೆಂಬಲ ಬೆಲೆ ನೀಡುತ್ತೇವೆ ಎಂದು ಹೇಳಿ ಮರೆ ಮಾಚುತ್ತಿವೆ. ಇದರ ಜೊತೆ ರೈತರ ಸಾಲ ಮನ್ನಾ ಮಾಡದೆ ಇರುವ ಸರ್ಕಾರಗಳು ನುಡುದಂತೆ ನಡೆಯುವಲ್ಲಿ ವಿಫಲವಾಗಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.

ರೈತರು ನಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಹೆದ್ದಾರಿ ತಡೆ ಪ್ರತಿಭಟನೆಯೊಂದೆ ದಾರಿ ಎಂದು ತೀರ್ಮಾನಿಸಿ ಶಾಸಕ ದರ್ಶನ್‍ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರಾಜ್ಯದ ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿ ಪ್ರಗತಿಪರ ಸಂಘಟನೆಗಳೊಂದಿಗೆ ಅ. 23ರ ಬೆಳಗ್ಗೆ 10ಗಂಟೆಗೆ ಮೈಸೂರು ಬೆಂಗಳೂರು ಹೆದ್ದಾರಿಯ ಗಣಂಗೂರು ಗ್ರಾಮದ ಬಳಿ ಇರುವ ಟೋಲ್‍ ಬಂದ್ ಮಾಡಲು ತೀರ್ಮಾನಿಸಿದ್ದೇವೆ ಎಂದು ಕೆಂಪೂಗೌಡ ಮಾಹಿತಿ ನೀಡಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಶಂಭೂಗೌಡ ಮಾತನಾಡಿ, ಕಬ್ಬಿನ ಪ್ರತಿ ಟನ್ ಗೆ 5500 ರು. ನೀಡಬೇಕು, ರೈತರ ಸಾಲ ಸಂಪೂರ್ಣ ಮನ್ನಾ, ಹಾಲಿನ ದರ ಹೆಚ್ಚಳದ ಜೊತೆ 10 ರು ಬೆಂಬಲ ಬೆಲೆ ನೀಡಬೇಕು. ಗೊಬ್ಬರ ಹಾಗೂ ಪಶು ಆಹಾರದ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಬೇಡಿಕೆಗಳನ್ನು ಈ ಡೇರಿಸದಿದ್ದರೆ ಹೆದ್ದಾರಿ ಬಂದ್‍ ಒಂದೇ ಆಲ್ಲ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಮರಳಗಾಲ ಕೃಷ್ಣೇಗೌಡ, ದೊಡ್ಡಪಾಳ್ಯ ಜಯರಾಮೇಗೌಡ, ಪಾಂಡು, ಬಿ.ಎಸ್‍ ರಮೇಶ್‍, ರುಕ್ಮಾಗದ, ಕೃಷ್ಣಪ್ಪ, ಪುರುಷೋತ್ತಮ್‍, ಅಭಿಷೇಕ್‍, ಮಧು ಸೇರಿದಂತೆ ಇತರ ರೈತ ಪರ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಇದ್ದರು.