ಜಿಲ್ಲೆಯಲ್ಲಿ ಕೃಷಿ ಮತ್ತು ಪಶುಸಂಗೋಪನೆಯೇ ಬಹುತೇಕ ಗ್ರಾಮೀಣ ಕುಟುಂಬಗಳ ಜೀವನಾಧಾರವಾಗಿದೆ. ಮಳೆಯ ಕೊರತೆ, ಅಂತರ್ಜಲ ಮಟ್ಟ ಕುಸಿತ ಹಾಗೂ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತರ ಬೆಳೆ ಪರಿಹಾರ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಕನ್ನಡಪ್ರಭ ವಾರ್ತೆ ಕೋಲಾರ

ಮಳೆಯ ಅನಿಶ್ಚಿತತೆ, ಬರಗಾಲ, ಬೆಳೆ ನಷ್ಟ, ಕೃಷಿ ವೆಚ್ಚದ ಹೆಚ್ಚಳ, ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆ ಸೇರಿದಂತೆ ರೈತರು ಹಾಗೂ ಗ್ರಾಮೀಣ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಪಿ. ಆರ್. ಸೂರ್ಯನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಮತ್ತು ಪಶುಸಂಗೋಪನೆಯೇ ಬಹುತೇಕ ಗ್ರಾಮೀಣ ಕುಟುಂಬಗಳ ಜೀವನಾಧಾರವಾಗಿದೆ. ಮಳೆಯ ಕೊರತೆ, ಅಂತರ್ಜಲ ಮಟ್ಟ ಕುಸಿತ ಹಾಗೂ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ರೈತರ ಬದುಕು ರಕ್ಷಿಸಲು ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಎನ್.ಎನ್. ಶ್ರೀರಾಮ್ ಮಾತನಾಡಿ, ಬೆಳೆ ನಷ್ಟದಿಂದ ರೈತರ ಆದಾಯ ಕುಸಿದಿದ್ದು, ಕೃಷಿ ಕೂಲಿಕಾರರಿಗೆ ಉದ್ಯೋಗದ ಕೊರತೆ ಎದುರಾಗಿದೆ. ಹೈನುಗಾರರು, ಕುರಿ-ಮೇಕೆ ಮತ್ತು ಕೋಳಿ ಸಾಕಾಣಿಕೆದಾರರೂ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರು ಹಾಗೂ ಗ್ರಾಮೀಣ ಬಡಜನರಿಗೆ ಅಗತ್ಯ ನೆರವು ಒದಗಿಸುವ ಮೂಲಕ ಅವರ ಜೀವನೋಪಾಯವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್‌ಕುಮಾರ್ ಮಾತನಾಡಿ, ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ೨೨ ಬೇಡಿಕೆಗಳ ಕುರಿತು ಚರ್ಚಿಸಬೇಕು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ತಲುಪುವಂತೆ ಕ್ರಮ ಕೈಗೊಂಡು, ಬೇಡಿಕೆಗಳ ಅನುಷ್ಠಾನಕ್ಕೆ ಕಾಲಮಿತಿ ನಿಗದಿಪಡಿಸಬೇಕು. ಕೈಗೊಂಡ ಕ್ರಮಗಳ ಬಗ್ಗೆ ಸಂಘಕ್ಕೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕೃಷಿ ಉತ್ಪಾದನೆ ಕುಸಿತ, ಸಾಲದ ಹೊರೆ, ಉದ್ಯೋಗದ ಕೊರತೆ ಹಾಗೂ ಗ್ರಾಮೀಣ ಬಡತನ ಹೆಚ್ಚಾಗುವ ಅಪಾಯವಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಂಕಷ್ಟ ನಿವಾರಣೆಗೆ ಸಮಗ್ರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಂಘದ ಉಪಾಧ್ಯಕ್ಷರಾದ ವೆಂಕಟಪ್ಪ, ಗಂಗಮ್ಮ, ವಕೀಲ ವೆಂಕಟೇಶ್, ಸೈಯದ್ ಫಾರೂಕ್, ಸಹ ಕಾರ್ಯದರ್ಶಿಗಳಾದ ಮುನಿರತ್ನ, ಜಿ. ಮಂಜುಳ, ರಂಗನಾಥ್, ವಿ. ನಾರಾಯಣರೆಡ್ಡಿ, ಡಿ.ಎಸ್. ವೆಂಕಟಚಲಪತಿ ಇದ್ದರು.