;Resize=(412,232))
ಮತದಾನದ ಹಕ್ಕು ಎಂಬುದು ಕೇವಲ ಶಾಸನಬದ್ಧವಾಗಿ ನೀಡಲಾದ ಸವಲತ್ತಲ್ಲ, ಅದು ಪ್ರಜಾಸತ್ತಾತ್ಮಕ ಗಣರಾಜ್ಯವೊಂದರ ಮೂಲಭೂತ ಜೀವನಾಡಿಯಾಗಿದೆ. ಭಾರತೀಯ ಪ್ರಜೆಯೊಬ್ಬನ ವ್ಯಕ್ತಿತ್ವದಿಂದ ಮತದಾನದ ಹಕ್ಕನ್ನು ಅಥವಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಹಕ್ಕನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಹಾಗೆ ಮಾಡುವುದು ದೇಹದಿಂದ ಆತ್ಮವನ್ನೇ ಹೊರತೆಗೆದಂತಾಗುತ್ತದೆ.
ಇತ್ತೀಚಿನ ದಿನಗಳಲ್ಲಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಂತಹ (ಎಸ್‌ಐಆರ್) ಪ್ರಕ್ರಿಯೆಗಳ ಕುರಿತು ಚರ್ಚೆಗಳು ನಡೆಯುತ್ತಿರುವಾಗ, ನಮ್ಮ ಸಾಂವಿಧಾನಿಕ ವ್ಯವಸ್ಥೆಯ ಮೂಲಭೂತ ತತ್ವಗಳನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕಿದೆ. ಯಾವುದೇ ಪ್ರಕ್ರಿಯೆಯು ಲಕ್ಷಾಂತರ ಭಾರತೀಯ ನಾಗರಿಕರನ್ನು ಮತದಾನದ ಹಕ್ಕಿಲ್ಲದವರನ್ನಾಗಿಸುವ ಮೂಲಕ ಅವರನ್ನು ತಮ್ಮದೇ ದೇಶದಲ್ಲಿ ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಪರಿವರ್ತಿಸಿದರೆ, ಅಂತಹ ಪ್ರಕ್ರಿಯೆಯು ಮೂಲಭೂತವಾಗಿಯೇ ನಿರಂಕುಶವಾದುದಾಗಿರುತ್ತದೆ. ಎಷ್ಟೇ ಪ್ರತ್ಯಾರೋಪ ಅಥವಾ ವಿಷಯಾಂತರ ಮಾಡಿದರೂ, ಇದನ್ನು ಸಮರ್ಥಿಸಲು ಸಾಧ್ಯವಿಲ್ಲ. ಇದು ಸಂವಿಧಾನದ ಮೂಲ ಆಶಯವನ್ನೇ ಬುಡಮೇಲು ಮಾಡುತ್ತದೆ. ಅಷ್ಟೇ ಅಲ್ಲ, ಭಾರತದ ಸಂವಿಧಾನದ ಅಡಿಯಲ್ಲಿ ನಾವು ಅಳವಡಿಸಿಕೊಂಡಿರುವ ಸಾಂವಿಧಾನಿಕ ವ್ಯವಸ್ಥೆಯನ್ನೇ ಇದು ನಿರಾಕರಿಸುವಂತಿದೆ.
ಮತದಾನದ ಹಕ್ಕಿಗಾಗಿ ಹೋರಾಟ:
ಸಾರ್ವತ್ರಿಕ ವಯಸ್ಕರ ಮತದಾನದ ಹಕ್ಕಿನತ್ತ ಸಾಗಿಬಂದ ಪಯಣವು ಆಕಸ್ಮಿಕವೂ ಆಗಿರಲಿಲ್ಲ ಅಥವಾ ನಿಷ್ಕ್ರಿಯವೂ ಆಗಿರಲಿಲ್ಲ. ಭಾರತದಲ್ಲಿ ವಯಸ್ಕರ ಮತದಾನದ ಹಕ್ಕಿನ ಕುರಿತಾದ ಅತ್ಯಂತ ಆರಂಭಿಕ ಪ್ರಸ್ತಾಪವನ್ನು ‘ಸ್ವರಾಜ್ ಮಸೂದೆ’ ಎಂದೇ ಪ್ರಸಿದ್ಧವಾದ ‘ಭಾರತದ ಸಂವಿಧಾನ ಮಸೂದೆ, 1895’ರಲ್ಲಿ ಕಾಣಬಹುದು. ದಶಕಗಳ ಕಾಲ ನಡೆದ ಸ್ವಾತಂತ್ರ್ಯ ಹೋರಾಟ ಮತ್ತು ವಿದೇಶಿ ಆಳ್ವಿಕೆಯ ವಿರುದ್ಧದ ಚಳವಳಿಯು, ಸಾರ್ವತ್ರಿಕ ವಯಸ್ಕರ ಮತದಾನದ ಹಕ್ಕನ್ನು ಅಳವಡಿಸಿಕೊಳ್ಳುವುದನ್ನು ಒಂದು ಸಹಜ ಆಯ್ಕೆಯನ್ನಾಗಿಸಿತು. ಅಲ್ಲದೆ, ನಾವು ಅಂತಿಮವಾಗಿ ಆರಿಸಿಕೊಂಡ ಆಡಳಿತ ವ್ಯವಸ್ಥೆಯ ಅತ್ಯಗತ್ಯ ಅಂಗವನ್ನಾಗಿಸಿತು.
ಸಂವಿಧಾನ ರಚನಾ ಸಭೆಯು ಸಂವಿಧಾನದ ಕರಡಿನ ಕುರಿತು ಚರ್ಚಿಸಿದಾಗ, 2 ಪ್ರಮುಖ ವಿಧಿಗಳು ಗಮನ ಸೆಳೆದವು. ಅವು ಕರಡು ವಿಧಿ 289ಎ ಮತ್ತು 289ಬಿ. ಇವು ನಂತರ ಭಾರತದ ಸಂವಿಧಾನದ ವಿಧಿ 325 ಮತ್ತು 326 ಆಗಿ ಪರಿವರ್ತನೆಗೊಂಡವು.
*ವಿಧಿ 325ರ ಪ್ರಕಾರ, ಪ್ರತಿಯೊಂದು ಪ್ರಾದೇಶಿಕ ಚುನಾವಣಾ ಕ್ಷೇತ್ರಕ್ಕೂ ಒಂದೇ ಸಾಮಾನ್ಯ ಮತದಾರರ ಪಟ್ಟಿ ಇರಬೇಕು. ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಇವುಗಳಲ್ಲಿ ಯಾವುದಾದರೂ ಒಂದರ ಆಧಾರದ ಮೇಲೆ ಮಾತ್ರ ಯಾರನ್ನೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಅನರ್ಹರೆಂದು ಪರಿಗಣಿಸುವಂತಿಲ್ಲ ಎಂದು ಇದು ಸ್ಪಷ್ಟಪಡಿಸುತ್ತದೆ.
* ವಿಧಿ 326ರ ಪ್ರಕಾರ, ಲೋಕಸಭೆ ಮತ್ತು ಪ್ರತಿ ರಾಜ್ಯದ ವಿಧಾನಸಭೆಗಳಿಗೆ ನಡೆಯುವ ಚುನಾವಣೆಗಳು ವಯಸ್ಕ ಮತದಾನದ ಆಧಾರದ ಮೇಲೆ ನಡೆಯಬೇಕು. ವಾಸಸ್ಥಳದ ಕೊರತೆ, ಅಸ್ವಸ್ಥ ಮನಃಸ್ಥಿತಿ, ಅಪರಾಧ ಅಥವಾ ಭ್ರಷ್ಟಾಚಾರದಂತಹ ನಿರ್ದಿಷ್ಟ ಕಾರಣಗಳಿಂದಾಗಿ ಅನರ್ಹಗೊಂಡಿರದ, 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬ ನಾಗರಿಕನು ಮತದಾರನಾಗಿ ನೋಂದಾಯಿಸಿಕೊಳ್ಳಲು ಅರ್ಹನಾಗಿರುತ್ತಾನೆ.
ವಾಸ್ತವವಾಗಿ, ನಮ್ಮ ಸಂವಿಧಾನದ 14ನೇ ವಿಧಿಯಲ್ಲಿ ಅಡಕವಾಗಿರುವ ಸಮಾನತೆಯ ತತ್ವಕ್ಕೆ 326ನೇ ವಿಧಿಯು ನಿಜವಾದ ಅರ್ಥ ಮತ್ತು ಸಾರವನ್ನು ನೀಡುತ್ತದೆ.
ಭವಿಷ್ಯದಲ್ಲಿ ರಾಜಕೀಯ ಅಧಿಕಾರದ ಅತಿಯಾದ ಚಲಾವಣೆಯನ್ನು ತಡೆಯುವ ಉದ್ದೇಶದಿಂದಲೇ ಈ ನಿಬಂಧನೆಗಳನ್ನು ರೂಪಿಸಲಾಯಿತು. ಸಾರ್ವತ್ರಿಕ ವಯಸ್ಕರ ಮತದಾನದ ಹಕ್ಕನ್ನು ಸಮರ್ಥಿಸುತ್ತಾ, ಡಾ. ಬಿ.ಆರ್. ಅಂಬೇಡ್ಕರ್ ಅವರು ಹೀಗೆ ಪ್ರತಿಪಾದಿಸಿದರು: ರಾಷ್ಟ್ರವು ಹಿಂದಿನಿಂದಲೂ ಬೇರೂರಿದ್ದ ಅಸಮಾನತೆಗಳನ್ನು ವಾಸ್ತವಿಕವಾಗಿ ಇಲ್ಲವಾಗಿಸುವಂತಹ ಒಂದು ಬೃಹತ್ ಹೆಜ್ಜೆಯನ್ನು ಇಡುತ್ತಿರುವುದರಿಂದ, ಸಂವಿಧಾನವು ವಯಸ್ಕರ ಮತದಾನದ ಹಕ್ಕನ್ನು ಮೂಲಭೂತ ಆಧಾರವಾಗಿ ಸ್ಪಷ್ಟವಾಗಿ ಭದ್ರಪಡಿಸುವುದು ಅತ್ಯಗತ್ಯವಾಗಿತ್ತು.
ಸಂವಿಧಾನ ಸಭೆಯಲ್ಲಿ ಡಾ. ಅಂಬೇಡ್ಕರ್ ಅವರು ನೀಡಿದ ಸಮಾರೋಪ ಭಾಷಣವು ಒಂದು ಪ್ರಮುಖ ಎಚ್ಚರಿಕೆಯನ್ನು ಒಳಗೊಂಡಿತ್ತು. ಮತದಾನದ ಹಕ್ಕು ಮತ್ತು ಭಾರತೀಯ ಪ್ರಜೆಯೊಬ್ಬರ ವಯಸ್ಕ ಮತದಾನದ ಹಕ್ಕನ್ನು ಸಂಸದೀಯ ಶಾಸನಗಳ ಇಚ್ಛೆಗಳಿಗೆ ಅಥವಾ ಅನಿಶ್ಚಿತತೆಗಳಿಗೆ ಬಿಟ್ಟುಕೊಡುವ ಬದಲು, ಅವುಗಳನ್ನು ಸಂವಿಧಾನದಲ್ಲಿಯೇ ಸ್ಪಷ್ಟವಾಗಿ ಅಳವಡಿಸಬೇಕು ಎಂದು ಅವರು ಎಚ್ಚರಿಸಿದ್ದರು.
ಸಾರ್ವತ್ರಿಕ ವಯಸ್ಕರ ಮತದಾನದ ಹಕ್ಕನ್ನು ಅಳವಡಿಸಿಕೊಳ್ಳುವ ನಿರ್ಧಾರವು, ಭಾರತದ ಸಾಮಾನ್ಯ ಮನುಷ್ಯನ ಪ್ರಾಯೋಗಿಕ ದೃಷ್ಟಿಕೋನ, ವಿವೇಕ ಮತ್ತು ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುವ ಸಾಮರ್ಥ್ಯದ ಮೇಲೆ ನಮ್ಮ ರಾಷ್ಟ್ರ ನಿರ್ಮಾತೃಗಳು ಇರಿಸಿದ್ದ ಗಾಢವಾದ ನಂಬಿಕೆಯ ಸಂಕೇತವಾಗಿತ್ತು. ತೀವ್ರವಾಗಿ ವಿಭಜಿತವಾಗಿದ್ದ ಸಮಾಜದಲ್ಲಿ ನೈಜ ಸಮಾನತೆಯನ್ನು ಸಾಧಿಸುವ ದಿಕ್ಕಿನಲ್ಲಿ ಇಡಲಾದ ಅತ್ಯಂತ ಮೊದಲ ಹೆಜ್ಜೆ ಇದಾಗಿತ್ತು.
ಸಮಾನ ಮೌಲ್ಯದ ಮತಶಕ್ತಿ:
ಮತದಾನದ ಸಂದರ್ಭದಲ್ಲಿ ಸಾಮಾಜಿಕ-ಆರ್ಥಿಕ ಶ್ರೇಣಿಗಳನ್ನು ಬದಿಗೊತ್ತಿ, ಎಲ್ಲರನ್ನೂ ಸಂಪೂರ್ಣವಾಗಿ ಸಮಾನಗೊಳಿಸುವುದರಲ್ಲೇ ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ ಅಡಗಿದೆ. ಒಬ್ಬ ಶತಕೋಟ್ಯಧಿಪತಿಯಾಗಿರಬಹುದು ಮತ್ತು ಇನ್ನೊಬ್ಬ ರಿಕ್ಷಾ ಚಾಲಕನಾಗಿರಬಹುದು. ಆದರೂ ಇಬ್ಬರಿಗೂ ಮತದಾನದ ಹಕ್ಕಿರುತ್ತದೆ ಮತ್ತು ಅವರ ಮತಗಳ ಮೌಲ್ಯ ಸಮಾನವಾಗಿರುತ್ತದೆ. ಅದೇ ರೀತಿ, ಒಂದು ಕಡೆ ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿರುವ ದೇವಾಲಯದ ಅರ್ಚಕ ಮತ್ತು ಇನ್ನೊಂದೆಡೆ ಮಲ ಹೊರುವ ಕೆಲಸ ಅನಿವಾರ್ಯವಾಗಿರುವ ಸಮಾಜದ ಅತ್ಯಂತ ಕೆಳಸ್ತರದ ವ್ಯಕ್ತಿ - ಇವರಿಬ್ಬರಿಗೂ ಸಮಾನ ಮೌಲ್ಯದ ಸಮಾನ ಮತದ ಹಕ್ಕಿದೆ.
ಸಮಾನತೆಯನ್ನು ತರುವ ಈ ಶಕ್ತಿಯೇ ಭಾರತೀಯ ಸಂವಿಧಾನದ ಮೂಲ ಪರಿವರ್ತನಾಶೀಲ ದೃಷ್ಟಿಕೋನವಾಗಿದೆ. ಸಾಮೂಹಿಕ ಹೊರಗಿಡುವಿಕೆಗೆ ಕಾರಣವಾಗುವ ಆಡಳಿತಾತ್ಮಕ ಪ್ರಕ್ರಿಯೆಗಳ ಮೂಲಕ ಆ ಸಮಾನತೆಗೆ ಧಕ್ಕೆ ತರುವುದು, ನಮ್ಮ ಪ್ರಜಾಪ್ರಭುತ್ವದ ಮೂಲ ಚೌಕಟ್ಟನ್ನೇ ದುರ್ಬಲಗೊಳಿಸಿದಂತಾಗುತ್ತದೆ. ನಾಗರಿಕರ ಧ್ವನಿ ಹಾಗೂ ತಮ್ಮ ಮಾತಿಗೆ ಮನ್ನಣೆ ಸಿಗಬೇಕೆಂಬ ಅವರ ಮೂಲಭೂತ ಹಕ್ಕು ಅಚಲವಾಗಿ ಉಳಿಯುವಂತೆ ನಾವು ಖಚಿತಪಡಿಸಿಕೊಳ್ಳಬೇಕು.