ವನವೈಭವ : ಅರಣ್ಯ ಇಲಾಖೆಗೆ ಸೈಂಟಿಸ್ಟ್‌ ಸ್ಟಾಫ್‌ನಿಂದ ಹೊಸ ವರ್ಚಸ್ಸು

Published : Oct 06, 2026, 11:23 AM IST
forest

ಸಾರಾಂಶ

ನಿತ್ಯ ಕೆಲಸದ ಜತೆ ಕೆಲ ಅರಣ್ಯ ಸಿಬ್ಬಂದಿ ಏಡಿಗಳ ಕುರಿತು ಸಂಶೋಧನೆ ಮಾಡಿದರೆ , ಮತ್ತೆ ಹಲವರು ಪಕ್ಷಿ ಮತ್ತು ಸರೀಸೃಪಗಳ ರಿಸರ್ಚ್‌ ಮಾಡಿದ್ದಾರೆ. ಇನ್ನು ಕೆಲವರು ಕಪ್ಪೆಗಳ ಕುರಿತು ಆಳವಾದ ಅಧ್ಯಯನ ಮಾಡಿ ಪುಸ್ತಕಗಳನ್ನೇ ಬರೆದಿದ್ದಾರೆ. ಇನ್ನೂ ಕೆಲವರು ಜೇಡ ಮತ್ತು ಏರೋಪ್ಲೇನ್‌ ಚಿಟ್ಟೆಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿ ಪುಸ್ತಕ ಪ್ರಕಟಿಸಿದ್ದಾರೆ.

ನಿತ್ಯ ಕೆಲಸದ ಜತೆ ಕೆಲ ಅರಣ್ಯ ಸಿಬ್ಬಂದಿ ಏಡಿಗಳ ಕುರಿತು ಸಂಶೋಧನೆ ಮಾಡಿದರೆ , ಮತ್ತೆ ಹಲವರು ಪಕ್ಷಿ ಮತ್ತು ಸರೀಸೃಪಗಳ ರಿಸರ್ಚ್‌ ಮಾಡಿದ್ದಾರೆ. ಇನ್ನು ಕೆಲವರು ಕಪ್ಪೆಗಳ ಕುರಿತು ಆಳವಾದ ಅಧ್ಯಯನ ಮಾಡಿ ಪುಸ್ತಕಗಳನ್ನೇ ಬರೆದಿದ್ದಾರೆ. ಇನ್ನೂ ಕೆಲವರು ಜೇಡ ಮತ್ತು ಏರೋಪ್ಲೇನ್‌ ಚಿಟ್ಟೆಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿ ಪುಸ್ತಕ ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ ಹೀಗೆ ಅನೇಕ ಜಿಲ್ಲೆಗಳಲ್ಲೂ ವಿಶೇಷ ಪ್ರತಿಭೆಗಳ ಅಧಿಕಾರಿಗಳು ಇದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಬಗ್ಗೆ ಕಾಡಂಚಿನ ಗ್ರಾಮಗಳಲ್ಲಿ ಹೋಗಿ ಅಭಿಪ್ರಾಯ ಕೇಳಿದರೆ, ಬರೀ ನಕಾರಾತ್ಮಕ ಉತ್ತರವೇ ಬರುತ್ತದೆ. ಎಲ್ಲದಕ್ಕೂ ಅಡ್ಡ ಬರುತ್ತಾರೆ. ಕಾಡಿನಿಂದ ಏನನ್ನೂ ತರಲು ಬಿಡಲ್ಲ. ಹೀಗೆ ಒಳ್ಳೆಯದಕ್ಕಿಂತ ನೆಗೆಟಿವ್‌ ಅಭಿಪ್ರಾಯವೇ ಹೆಚ್ಚು. ಏಕೆಂದರೆ, ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ ಅಷ್ಟು ಬಿಗಿಯಾಗಿ ಕರ್ತವ್ಯ ನಿರ್ವಹಿಸದೇ ಹೋಗಿದ್ದರೆ, ಈಗಾಗಲೇ ನಾಶವಾಗಿರುವ ಮತ್ತು ನಾನಾ ಕಾರಣಗಳಿಗೆ ನಾಶವಾಗುತ್ತಿರುವ ಅರಣ್ಯ ಪ್ರದೇಶ ಇನ್ನಷ್ಟು ಹಾಳಾಗಿರುತ್ತಿತ್ತು.

ಆನೆ ಊರಿಗೆ ಬಂದರೆ ಓಡಿಸಲು ಇದೇ ಸಿಬ್ಬಂದಿ ಬರಬೇಕು. ಕಾಡಿಗೆ ಬೆಂಕಿ ಬಿದ್ದರೆ ಇದೇ ಕಾವಲುಗಾರರು ಓಡಿ ಹೋಗಿ ಬೆಂಕಿ ಆರಿಸಬೇಕು. ಹುಲಿ ಓಡಾಡುತ್ತಿದ್ದರೆ, ಹೆದರದೇ ಹೋಗಿ ಬೋನಿಗೆ ಬೀಳಿಸಬೇಕು. ಹೀಗೆ ತಮ್ಮ ಜೀವವನ್ನು ಸದಾ ಪಣಕ್ಕಿಟ್ಟು ಕೆಲಸ ಮಾಡುತ್ತಾರೆ. ಈ ಮುಂಚೂಣಿ ಸಿಬ್ಬಂದಿಗೆ ರಜೆ ಸಿಗುವುದೇ ಕಷ್ಟ. ಸದಾ ಜಾಗ್ರತಾವಸ್ಥೆಯಲ್ಲೇ ಇರಬೇಕು. ಕುಟುಂಬದಿಂದ ದೂರ, ಜನರಿಂದ ಟೀಕೆ-ಟಿಪ್ಪಣಿ, ಜನಪ್ರತಿನಿಧಿಗಳಿಂದ ಕುಹಕವನ್ನು ಕೇಳಿಸಿಕೊಳ್ಳುತ್ತ ತಮ್ಮ ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಇಂತಹ ಒತ್ತಡದ ನಡುವೆಯೇ ಅರಣ್ಯ ಪಡೆಯಲ್ಲಿ ಅತ್ಯಂತ ಪ್ರತಿಭಾನ್ವಿತ, ವೈಜ್ಞಾನಿಕ ಮನೋಭಾವ ಹೊಂದಿರುವ ಸಿಬ್ಬಂದಿಯೂ ಬಹಳ ಇದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ..??

ಹೌದು, ಅರಣ್ಯ ಇಲಾಖೆಯಲ್ಲಿ ಅನೇಕ ವಿಜ್ಞಾನಿ ಸಿಬ್ಬಂದಿ ಅಂದರೆ ಸೈಂಟಿಸ್ಟ್‌ ಸ್ಟಾಫ್‌ ಗಳಿದ್ದಾರೆ. ಈ ಸಿಬ್ಬಂದಿ ತಮ್ಮ ನಿತ್ಯದ ಕೆಲಸದ ಜೊತೆಗೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ತಮ್ಮ ಇಷ್ಟದ ಮರ, ಗಿಡ, ಜೇಡ, ಹಾವುಗಳ ಬಗ್ಗೆ ಸತತ 2006ರಿಂದ ವೈಜ್ಞಾನಿಕ ಅಧ್ಯಯನಗಳನ್ನು ಮಾಡುತ್ತಾ, ಜೀವವೈವಿಧ್ಯದ ರಹಸ್ಯಗಳನ್ನು ಬೇಧಿಸುತ್ತಾ ಇಲಾಖೆಗೆ ಹೆಮ್ಮೆ ಮತ್ತು ಹೊಸ ಇಮೇಜನ್ನು ತಂದು ಕೊಡುತ್ತಿದ್ದಾರೆ. ಈ ವಿಜ್ಞಾನಿಗಳು ಇಲಾಖೆ ಜೊತೆಗೆ ನಮ್ಮ ಸಮಾಜಕ್ಕೂ ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ.

ಪಶ್ಚಿಮ ಘಟ್ಟದ ಮಡಿಲಲ್ಲಿ ಇರುವ ಉತ್ತರ ಕನ್ನಡ ಜಿಲ್ಲೆ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನೇಕ ಸಿಬ್ಬಂದಿ ನಾನಾ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಕೆಲವರು ಏಡಿಗಳ ಕುರಿತು ಸಂಶೋಧನೆ ಮಾಡಿದರೆ , ಮತ್ತೆ ಹಲವರು ಪಕ್ಷಿ ಮತ್ತು ಸರೀಸೃಪಗಳ ರಿಸರ್ಚ್‌ ಮಾಡಿದ್ದಾರೆ. ಇನ್ನು ಕೆಲವರು ಕಪ್ಪೆಗಳ ಕುರಿತು ಆಳವಾದ ಅಧ್ಯಯನ ಮಾಡಿ ಪುಸ್ತಕಗಳನ್ನೇ ಬರೆದಿದ್ದಾರೆ. ಇನ್ನೂ ಕೆಲವರು ಜೇಡ ಮತ್ತು ಏರೋಪ್ಲೇನ್‌ ಚಿಟ್ಟೆಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿ ಪುಸ್ತಕ ಪ್ರಕಟಿಸಿದ್ದಾರೆ. ಈ ಜಿಲ್ಲೆಯಲ್ಲಿ ಅತ್ಯಂತ ಆಳವಾದ ವೈಜ್ಞಾನಿಕ ದೃಷ್ಟಿಕೋನ ಹೊಂದಿರುವ ಮತ್ತು ವೈಜ್ಞಾನಿಕ ಚಟುವಟಿಕೆಗಳನ್ನು ಮಾಡುತ್ತಿರುವ ಪ್ರತಿಭಾನ್ವಿತ ಅರಣ್ಯ ಅಧಿಕಾರಿಗಳ ತಂಡವೇ ಇದೆ. ಇದು ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ ಹೀಗೆ ಅನೇಕ ಜಿಲ್ಲೆಗಳಲ್ಲೂ ವಿಶೇಷ ಪ್ರತಿಭೆಗಳ ಅಧಿಕಾರಿಗಳು ಇದ್ದಾರೆ. ಇವರಿಲ್ಲರಿಗೂ ಆರಂಭ ಒದಗಿಸಿದ್ದು, ಸಿ ಆರ್‌ ನಾಯ್ಕ್‌ ಎನ್ನುವ ವಿಶಿಷ್ಟ ಅಧಿಕಾರಿ. ಕಳೆದ 20 ವರ್ಷಗಳಿಂದ ಸಿ ಆರ್‌ ನಾಯ್ಕ್‌ ತಾವೂ ವೈಜ್ಞಾನಿಕವಾಗಿ ಕಲಿತಿದ್ದಲ್ಲದೇ, ತಮ್ಮೊಂದಿಗೆ ಕೆಲಸ ಮಾಡುವ ಇತರೆ ಸಿಬ್ಬಂದಿಗಳಿಗೂ ಸಂಶೋಧನೆಯ ಮಹತ್ವ ಕಲಿಸಿದರು. ಇವರಿಂದ ಶುರುವಾದ ಪರಂಪರೆ ಈಗ ಬೃಹತ್‌ ದೊಡ್ಡ ಸಂಖ್ಯೆಗೆ ಬಂದು ನಿಂತಿದೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗುರುರಾಜ ಗೌಡ ಜೇಡ ಮತ್ತು ಏರೋಪ್ಲೇನ್‌ ಚಿಟ್ಟೆಗಳ ಕುರಿತು ವಿಶೇಷ ಅಧ್ಯಯನ ನಡೆಸಿದ್ದಲ್ಲದೇ, ಒಂದು ಪುಸ್ತಕವನ್ನೇ ಪ್ರಕಟಿಸಿದ್ದಾರೆ. ಡಿಆರ್‌ಎಫ್‌ಒ ಆನಂದ್‌ ಪಕ್ಷಿಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ಜೇನು ಮತ್ತು ಕಾಡುಹಣ್ಣುಗಳ ಬಗ್ಗೆ ಸಂಶೋಧನೆ ನಡೆಸಿರುವ ಹಾಸನದ ಚರಣಕುಮಾರ್‌ ಸಹ ಪುಸ್ತಕ ಬರೆದಿದ್ದಾರೆ. ಯಲ್ಲಾಪುರದ ಉಪ ವಲಯ ಅರಣ್ಯಾಧಿಕಾರಿ ಶ್ರೀಧರ್‌ ಸಜ್ಜನ್‌ ಚಿಟ್ಟೆಗಳ ಬಗ್ಗೆ ಸಂಶೋಧನೆ ನಡೆಸಿದ್ದಲ್ಲದೇ, ಅನೇಕ ಕಡೆ ಚಿಟ್ಟೆಗಳ ಉದ್ಯಾನ ಸ್ಥಾಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಯಲ್ಲಾಪುರದ ಡಿಆರ್‌ಎಫ್‌ಓ ಪ್ರಸನ್ನ ಅಮರಾವತಿ ಹಾವುಗಳ ಬಗ್ಗೆ ಅಧ್ಯಯನ ಮಾಡಿದ್ದಲ್ಲದೇ, ಅತ್ಯುತ್ತಮ ಉರಗ ರಕ್ಷಕರೂ ಹೌದು. ಅಶ್ವಿನ್‌ ಭಟ್‌ ಆನೆಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಈ ಎಲ್ಲ ಸಿಬ್ಬಂದಿಗಳಿಗೆ ಬೆನ್ನೆಲುಬಾಗಿ ಅನೇಕ ವಿಜ್ಞಾನಿಗಳು ನಿಂತಿದ್ದಾರೆ. ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ನಾನಾ ವಿಷಯಗಳ ಮೇಲೆ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳಿಂದ ಪ್ರಭಾವಿತಗೊಂಡಿರುವ ಸಿಬ್ಬಂದಿ, ಇಲಾಖೆಯಲ್ಲಿ ಹೊಸ ವೈಜ್ಞಾನಿಕ ಭಾಷೆಯನ್ನೇ ಬರೆಯುತ್ತಿದ್ದಾರೆ. ಇವರಿಂದ ಸ್ಫೂರ್ತಿಗೊಂಡ ಅನೇಕ ಸಿಬ್ಬಂದಿ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ಆಸಕ್ತಿ ತೋರಿಸಲಾರಂಭಿಸಿದ್ದಾರೆ.

ಸಿಬ್ಬಂದಿ ಹುದ್ದೆ ಸಂಶೋಧನೆ ವಿಷಯ

ಸಿ ಆರ್‌ ನಾಯ್ಕ್‌ ಉಪ ವಲಯ ಅರಣ್ಯಾಧಿಕಾರಿ ಕಪ್ಪೆ ಮತ್ತು ಸಸ್ಯ ಸಂಕುಲ

ಗುರುರಾಜ್‌ ಎಸ್‌ ಗೌಡ ಉಪ ವಲಯ ಅರಣ್ಯಾಧಿಕಾರಿ ಜೇಡ, ಏರೋಪ್ಲೇನ್‌ ಚಿಟ್ಟೆ, ಪುಸ್ತಕ ರಚನೆ

ಚರಣಕುಮಾರ್‌ ಉಪ ವಲಯ ಅರಣ್ಯಾಧಿಕಾರಿ ಜೇನು, ಕಾಡುಹಣ್ಣುಗಳು, ಪುಸ್ತಕ ರಚನೆ

ಪ್ರಸನ್ನ ಅಮರಾವತಿ ಉಪ ವಲಯ ಅರಣ್ಯಾಧಿಕಾರಿ ಹಾವುಗಳ ಕುರಿತು ಸಂಶೋಧನೆ

ಅಶ್ವಿನ್‌ ಭಟ್‌ ಬಯೊಲಾಜಿಸ್ಟ್‌ ಆನೆಗಳ ಬಗ್ಗೆ ಸಂಶೋಧನೆ

ಆನಂದ್‌ ಆರ್‌ ಬಿ ಉಪ ವಲಯ ಅರಣ್ಯಾಧಿಕಾರಿ ಪಕ್ಷಿಗಳ ವಿಶೇಷ ಅಧ್ಯಯನ

ಶ್ರೀಧರ ಸಜ್ಜನ ಉಪ ವಲಯ ಅರಣ್ಯಾಧಿಕಾರಿ ಚಿಟ್ಟೆಗಳ ಅಧ್ಯಯನ

PREV
Read more Articles on

Recommended Stories

ಅಶೋಕ್ ಸಿಂಘಾಲ್ ನಿಸ್ವಾರ್ಥ ಭಾವದ ಕರ್ಮಯೋಗಿ
ಮೃಗಾಲಯಗಳು ಮನರಂಜನೆಗೂ ಸೈ, ಕಲಿಕೆಗೂ ಸೈ