;Resize=(412,232))
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಕ್ಷಿಣ ಕನ್ನಡದ ಯು.ಟಿ. ಖಾದರ್ ಹೆಸರು ಘೋಷಣೆಯಾಗಿದೆ. ಇದು ಸಚಿವಾಕಾಂಕ್ಷಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಮುಂದೇನಾಗಲಿದೆ ಎಂಬ ಕುತೂಹಲ ಈಗ ಉಂಟಾಗಿದೆ.ಆದರೆ ಉಸ್ತುವಾರಿ ಪಟ್ಟಕ್ಕಾಗಿ ದುಡಿದು ಸುಸ್ತುವಾರಿಗಳಾದ ಬಗ್ಗೆ ಗುಸುಗುಸು ಸುದ್ದಿ ಹಬ್ಬಿದ್ದಂತೂ ಸತ್ಯ.
ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಮೈಸೂರು ವಿಶ್ವವಿದ್ಯಾಲಯ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದಿಂದ ಬಿಎಂಶ್ರೀ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೆಳಗ್ಗೆ 11ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಪುಸ್ತಕ ಬಿಡುಗಡೆ ಮಾಡಬೇಕಾದ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್ ಅವರು ಮಧ್ಯಾಹ್ನ 12 ಗಂಟೆಯಾದರೂ ಬಾರದಿದ್ದಾಗ ಸಂಘಟಕರು ಕಾರ್ಯಕ್ರಮ ಶುರು ಮಾಡಿದರು. ನಂತರ ಎಸ್. ನಾರಾಯಣ್ ಬಂದು ಸೇರಿಕೊಂಡರು.
ತಮ್ಮ ಭಾಷಣದ ಸರದಿ ಬಂದಾಗ ಎಸ್.ನಾರಾಯಣ ಕ್ಲಾರಿಫಿಕೇಷನ್ ಕೊಡಲು ಶುರು ಮಾಡಿದರು. ‘ಸಾಮಾನ್ಯವಾಗಿ ನಾನು ಯಾವುದೇ ಕಾರ್ಯಕ್ರಮಕ್ಕೆ ಲೇಟಾಗಿ ಹೋಗುವುದಿಲ್ಲ. ಬೆಂಗಳೂರನ್ನು ಬೆಳಗ್ಗೆ 8 ಗಂಟೆಗೆ ಬಿಟ್ಟೆ. ಆದರೆ ಮೊಹರಂ ಕೊನೆಯ ದಿನ, ನಾಲ್ಕನೇ ಶನಿವಾರ ಹಾಗೂ ಭಾನುವಾರ... ಹೀಗೆ ಸರಣಿ ರಜೆ ಬಂದಿದ್ದರಿಂದ ಬೆಂಗಳೂರಿನ ಅರ್ಧ ಜನ ಮೈಸೂರು ಕಡೆ ಹೊರಟಿದ್ರು. ಅಲ್ಲಿ ಫ್ಲೈಓವರ್ ದಾಟಿ ಮೈಸೂರು ರಸ್ತೆ ಸೇರಲು ಒಂದು ಗಂಟೆ ಹಿಡಿಯಿತು. ಮೈಸೂರು ತಲುಪಿದ ನಂತರ ಮಣಿಪಾಲ್ ಆಸ್ಪತ್ರೆ ಬಳಿಯ ಸಿಗ್ನಲ್ ದಾಟಲು ಅರ್ಧ ಗಂಟೆ ಹಿಡಿಯಿತು. ಹೇಗೋ ಮಾನಸ ಗಂಗೋತ್ರಿ ಬಳಿ ಬಂದರೆ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ ಎಲ್ಲಾ ಮಾರ್ಗಗಳೂ ಬಂದ್! ಯಾವ ಕಡೆ ಬರಬೇಕು ಎಂದು ಗೊತ್ತಾಗದೆ ಸುತ್ತು ಹೊಡೆಯುತ್ತಾ ಕೊನೆಗೂ ಬಂದು ತಲುಪಿದೆ’ ಎಂದು ನಿಟ್ಟುಸಿರು ಬಿಟ್ಟರು. ‘ಹೀಗಾಗಿ ಲೇಟಾಗಿ ಬಂದಿದ್ದಕ್ಕೆ ನಾನು ಕಾರಣ ಅಲ್ಲ, ಟ್ರಾಫಿಕ್ಕೂ’ ಅಂದ್ರು! ‘ಅಯ್ಯೋ ನಾರಾಯಣ, ನಾರಾಯಣ, ಅಲ್ಲ ರಾಮ, ರಾಮ’ ಎಂದುಕೊಳ್ಳುತ್ತಾ ಸಭಿಕರು ಬಿದ್ದು ಬಿದ್ದು ನಕ್ಕರು!.
ಮತ್ತೊಂದು ಕಾರ್ಯಕ್ರಮಕ್ಕೆ ಬಂದಿದ್ದ ಖ್ಯಾತ ಗಾಯಕ ವಿಜಯಪ್ರಕಾಶ್ ಅವರು ಮೈಸೂರಿನವರು. ‘ನಾವು ಇಲ್ಲಿದ್ದಾಗ ಯಾವುದಾದರೂ ಕಾರು ಬಂದ್ರೆ ಸಿಗ್ನಲ್‌ನಲ್ಲಿ ನಿಂತು ಕಾರು ಬಂತು ಕಾರು ಬಂತು ಅಂಥ ನೋಡ್ತಾ ಇದ್ವಿ. ಈಗ ಏನ್ ಟ್ರಾಫಿಕ್, ಎಷ್ಟೊಂದು ಕಾರುಗಳು’ ಅಂದ್ರು. ‘ಪಾರಂಪರಿಕ ನಗರಿ’, ‘ಅರಮನೆಗಳ ನಗರಿ’, ‘ಯೋಗ ನಗರಿ’ ಮೈಸೂರು ಮತ್ತೊಂದು ಬೆಂಗಳೂರು ಆಗ್ತಾ ಇದೆಯಾ? ಎಂಬ ಅನುಮಾನ ಕಾಡಲು ಶುರುವಾಗಿದೆ ಅಲ್ಲವೇ?
ಇದೇನಪ್ಪ? ಹಾವಿಗೆ ಹಲ್ಲಿಲ್ಲ ಎಂಬುದನ್ನು ಕೇಳಿದ್ದೇವೆ. ಇದೇನಿದು ಜೆಸಿಬಿಗಳಿಗೆ ಹಲ್ಲಿಲ್ಲ ಎಂದರೆ ಎಂಬ ಪ್ರಶ್ನೆ ಬಂತಾ. ಇದಕ್ಕೆ ಕಾರಣವೂ ಉಂಟು.
ಏನಪ್ಪ ಅಂದ್ರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವ ಕುರಿತು ಕಾವೇರಿದ ಚರ್ಚೆ ನಡೆಯುತ್ತಿತ್ತು. ಖಾಲಿ ನಿವೇಶನಗಳಲ್ಲಿ ಗಿಡ-ಗಂಟಿಗಳು ವಿಪರೀತ ಬೆಳೆದಿವೆ. ಅವುಗಳನ್ನು ಮಾಲೀಕರು ಸ್ವಚ್ಛಗೊಳಿಸುವುದಿಲ್ಲ. ಇತ್ತ ಪಾಲಿಕೆಯೂ ಸ್ವಚ್ಛಗೊಳಿಸುವುದಿಲ್ಲ. ಇದರಿಂದ ಹಾವು, ಹುಳು- ಹುಪ್ಪಟಗಳ ಕಾಟ ವಿಪರೀತವಾಗಿದೆ ಎಂದು ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ಷೇಪಿಸಿದರು. ಆಗ ಮೇಯರ್ ಜ್ಯೋತಿ ಪಾಟೀಲ ‘ಪಾಲಿಕೆಯಿಂದಲೇ ಸ್ವಚ್ಛಗೊಳಿಸಿ; ಮಾಲೀಕರ ಕಡೆಯಿಂದ ಡಬಲ್ ಟ್ಯಾಕ್ಸ್ ವಸೂಲಿ ಮಾಡಿ’ ಎಂದು ಸೂಚಿಸಿದರು.
ಇದಕ್ಕೆ ಅಧಿಕಾರಿ ವರ್ಗವೂ ಸಮ್ಮತಿಸಿದೆ. ಆದರೆ, ಸದಸ್ಯ ಚಂದ್ರಶೇಖರ ಮನಗುಂಡಿ ಅವರು, ‘ಪಾಲಿಕೆಯಲ್ಲಿನ ಜೆಸಿಬಿಗಳಿಗೆ ಹಲ್ಲೇ ಇಲ್ಲ. ಅದ್ಹೇಗೆ ಸ್ವಚ್ಛಗೊಳಿಸುತ್ತೀರಿ?’ ಎಂದು ಕೇಳಿ ಬಿಡೋದೆ. ಈ ಮಾತು ಕೇಳುತ್ತಿದ್ದಂತೆ, ಇಡೀ ಸಭೆ ನಗೆಗಡಲಲ್ಲಿ ತೇಲಾಡಿತು. ಆಗ ಮನಗುಂಡಿ, ‘ನಗಬೇಡಿ. ನಾ ಹೇಳಿದ್ದರ ಅರ್ಥ- ಪಾಲಿಕೆಯಲ್ಲಿ 10-12 ಜೆಸಿಬಿಗಳಿದ್ದರೂ ಸರಿಯಾಗಿ ನಿರ್ವಹಣೆ ಇಲ್ಲದೇ ಮೂಲೆ ಸೇರಿವೆ. ಎಷ್ಟೋ ಜೆಸಿಬಿಗಳಿಗೆ ಬರಲು ಹಲ್ಲುಗಳೇ ಇಲ್ಲ. ನಿರ್ವಹಣೆ ಇಲ್ಲದೆ ಹಲ್ಲಿಲ್ಲದ ಹಾವಿನಂತೆ ನಮ್ಮ ಪಾಲಿಕೆಯ ಜೆಸಿಬಿಗಳ ಪರಿಸ್ಥಿತಿ ಆಗಿದೆ’ ಎಂದರು. ಬಳಿಕ ಮೇಯರ್ ಅವರು ನಗುತ್ತಲೇ, ಮೊದಲೇ ಎಲ್ಲ ಜೆಸಿಬಿಗಳ ಹಲ್ಲು ಸರಿ ಮಾಡಿಸಿ (ರಿಪೇರಿ) ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ ಎಂದು ರೂಲಿಂಗ್ ನೀಡಿದರು. ಆದರೆ, ಹಲ್ಲುಗಳಿಲ್ಲದ ಜೆಸಿಬಿಗಳಾ ಎಂಬ ಮಾತು ಮಾತ್ರ ಸಭೆ ಮುಗಿದರೂ ಸದಸ್ಯರಲ್ಲಿನ ನಗೆ ಮಾತ್ರ ಮುಂದುವರಿಯಲು ಕಾರಣವಾಗಿದ್ದಂತೂ ಸತ್ಯ.
ಚುನಾವಣೆ ಎಂದರೇ ಹಾಗೆ... ಮತದಾನ ಮಾಡುವುದಕ್ಕೂ ಮುನ್ನ ಮತದಾರರನ್ನು ಇಂದ್ರ, ಚಂದ್ರ ಎಂದು ಹೊಗಳಿ, ಅವರ ಬೇಡಿಕೆಗಳನ್ನು ಈಡೇರಿಸಲು ಪ್ರತಿ ರಾಜಕಾರಣಿಗಳು ಮುಂದಾಗುತ್ತಾರೆ. ಮತದಾನದ ನಂತರ ಮತದಾರರತ್ತ ತಿರುಗಿಯೂ ನೋಡುವುದಿಲ್ಲ.
ಇದು ಸಾಮಾನ್ಯ ಮತದಾರನಿಗಷ್ಟೇ ಅಲ್ಲ, ವಿಧಾನಸಭೆ ಚುನಾವಣೆಯಲ್ಲಿ ನಿಂತು ಶಾಸಕರಾಗಿ ಗೆದ್ದು ಬೀಗಿದವರದ್ದೂ ಇದೇ ಪರಿಸ್ಥಿತಿ. ಶಾಸಕರು ಮತ ಚಲಾಯಿಸಿದ ನಂತರ ಅವರಿಗೂ ಬೆಲೆ ಇರುವುದಿಲ್ಲ. ಇಂತಹ ಪರಿಸ್ಥಿತಿ ಎದುರಾಗಿದ್ದು ಮಾತ್ರ ಬಿಜೆಪಿಯ ಹಿರಿಯ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ್ ಅವರಿಗೆ, ಅದೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ವಿಧಾನಸೌಧದ ಕಚೇರಿಯಲ್ಲಿ.
ವಿಷಯ ಏನೆಂದರೆ- ಇತ್ತೀಚೆಗೆ ವಿಧಾನಪರಿಷತ್ ಚುನಾವಣೆ ನಡೆಯಿತು. ಎಲ್ಲ ಪಕ್ಷದ ಶಾಸಕರು ಒಬ್ಬೊಬ್ಬರಾಗಿ ಬಂದು ಮತ ಚಲಾವಣೆ ಮಾಡಿದರು. ಅದಾದ ನಂತರ ಫಲಿತಾಂಶದ ನಿರೀಕ್ಷೆಯಲ್ಲಿ ಕಾಯುತ್ತಿದ್ದರು. ಸಿ.ಸಿ. ಪಾಟೀಲ್ ಅವರು ಕೂಡ ವಿಪಕ್ಷ ನಾಯಕ ಆರ್.ಅಶೋಕ್ ಅವರ ಕಚೇರಿಯಲ್ಲಿ ಕುಳಿತು ಇತರ ನಾಯಕರೊಂದಿಗೆ ಚರ್ಚೆ ಮಾಡುತ್ತಾ, ಫಲಿತಾಂಶವನ್ನು ಎದುರು ನೋಡುತ್ತಿದ್ದರು. ಆಗ ಅಲ್ಲೇ ಇದ್ದ ವಿಪಕ್ಷ ನಾಯಕರ ಕಚೇರಿ ಸಿಬ್ಬಂದಿಗೆ ನೀರು ತಂದು ಕೊಡುವಂತೆ ಸಿ.ಸಿ. ಪಾಟೀಲ್ ಕೇಳಿದರು. ಕೂಡಲೇ ಸಿಬ್ಬಂದಿ ಗಾಜಿನ ಲೋಟದಲ್ಲಿ ಫಿಲ್ಟರ್ ನೀರು ತಂದು ಕೊಟ್ಟರು.
ಅದನ್ನು ನೋಡಿದ ಸಿ.ಸಿ. ಪಾಟೀಲ್, ‘ಮತ ಹಾಕುವುದಕ್ಕೂ ಮುನ್ನ ಬಾಟಲಿ ನೀರು ತಂದು ಕೊಡುತ್ತಿದ್ದರು. ಈಗ ಮತ ಹಾಕಿ ಆದ ಮೇಲೆ ಲೋಟದಲ್ಲಿ ನೀರು ಕೊಡುತ್ತಿದ್ದೀರಲ್ಲಪ್ಪ. ಕೆಲಸವಾದ ಮೇಲೆ ಇಷ್ಟೇ ಬಿಡಿ’ ಎಂದು ಛೇಡಿಸಿದರು.
ಆಗ ಅಲ್ಲಿದ್ದ ಉಳಿದ ನಾಯಕರು ಮತ್ತು ಪತ್ರಕರ್ತರು, ಚುನಾವಣೆ ನಂತರ ಮತದಾರರಿಗೂ ಹೀಗೆ ಮಾಡುವುದಲ್ಲವೇ ಎಂದು ಮುಸಿಮುಸಿ ನಕ್ಕು ಸುಮ್ಮನಾದರು.
ಉಸ್ತುವಾರಿ ಪಟ್ಟಕ್ಕಾಗಿ ದುಡಿದು ಸುಸ್ತುವಾರಿಗಳಾದರು
ಯಾವಾಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಘೋಷಣೆ ಆಯಿತೋ ಆವಾಗಲೇ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿ ಶಾಸಕರುಗಳಿಂದ ಭಾರೀ ಲಾಬಿ ಆರಂಭವಾಯಿತು. ಮೊದಲ ಹಂತದ ಸಂಪುಟ ರಚನೆಯಲ್ಲೇ ಪ್ರಮಾಣ ವಚನ ಸ್ವೀಕರಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರು.
ಸ್ಥಳೀಯ ಮುಖಂಡರಿಂದ ಹಿಡಿದು ಡಿ.ಕೆ.ಶಿವಕುಮಾರ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಅವರ ತನಕ ಅಹವಾಲು ತಲುಪಿಸಿದರು.
ಅಷ್ಟೆ ಅಲ್ಲ ತಮ್ಮ ಬೆಂಬಲಿಗರಲ್ಲಿ ಸಿಎಂ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸುವುದಾಗಿ ಗುಟ್ಟಾಗಿ ಹೇಳಿಕೊಂಡರು. ಆ ಬಗ್ಗೆ ಸಿದ್ಧತೆಯನ್ನೂ ನಡೆಸಿದರು.
ಆದರೆ ಸಚಿವರ ಪಟ್ಟಿ ಬಹಿರಂಗವಾದಾಗ ಜಿಲ್ಲೆಯ ಯಾವೊಬ್ಬ ಶಾಸಕರ ಹೆಸರೂ ಪಟ್ಟಿಯಲ್ಲಿ ಇರಲಿಲ್ಲ.
ಆಂದಿನಿಂದಲೇ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯತ್ತ ಕಣ್ಣಿಟ್ಟು ಮತ್ತೆ ಲಾಬಿ ಶುರುವಿಟ್ಟುಕೊಂಡಿದ್ದಾರೆ. ಮತ್ತೆ ಕಂಡ ಕಂಡಲ್ಲಿ ಹರಕೆ ಜೊತೆಗೆ ಮುಖಂಡರಿಗೆ ಗಂಟುಬೀಳುತ್ತಿದ್ದಾರೆ. ಆದರೆ ಈ ನಡುವೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಕ್ಷಿಣ ಕನ್ನಡದ ಯು.ಟಿ. ಖಾದರ್ ಹೆಸರು ಘೋಷಣೆಯಾಗಿದೆ. ಇದು ಸಚಿವಾಕಾಂಕ್ಷಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಮುಂದೇನಾಗಲಿದೆ ಎಂಬ ಕುತೂಹಲ ಈಗ ಉಂಟಾಗಿದೆ.
ಆದರೆ ಉಸ್ತುವಾರಿ ಪಟ್ಟಕ್ಕಾಗಿ ದುಡಿದು ಸುಸ್ತುವಾರಿಗಳಾದ ಬಗ್ಗೆ ಗುಸುಗುಸು ಸುದ್ದಿ ಹಬ್ಬಿದ್ದಂತೂ ಸತ್ಯ.