ಜೋಗಿ
1. ನಾವೀಗ ಎಲ್ಲಿದ್ದೇವೆ? ಅಂದರೆ ಸಾಹಿತ್ಯದ ಯಾವ ಯುಗದಲ್ಲಿದ್ದೇವೆ ಅಂತ ನೀವು ಭಾವಿಸಿದ್ದೀರಿ?
ಈ ಪ್ರಶ್ನೆ ಸಾಹಿತ್ಯದ ಯಾವ ಕಾಲಘಟ್ಟಕ್ಕೂ ಅನ್ವಯಿಸುವಂತಹ ಪ್ರಶ್ನೆ. ಇದಕ್ಕೆ ತತ್ಕಾಲದಲ್ಲಿ ಉತ್ತರ ಕೊಡುವುದು ಕಷ್ಟ. ಹತ್ತು ಹಲವು ವರ್ಷಗಳ ನಂತರ ಇದನ್ನುಅವಲೋಕಿಸಿ ಅದಕ್ಕೊಂದು ಹಣೆಪಟ್ಟಿಯನ್ನು ಕೊಡಬೇಕಾಗುತ್ತದೆ. ಆದರೂ ನಿಮ್ಮ ಪ್ರಶ್ನೆಯನ್ನು ಲಘುವಾಗಿ ತೆಗೆದುಕೊಳ್ಳದೇ ಚಿಂತಿಸಬೇಕಾದರೆ ನಮ್ಮ ಸುತ್ತಮುತ್ತ ಆಗುತ್ತಿರುವ ಬದಲಾವಣೆಗಳನ್ನು ನಾವು ಹಿನ್ನೆಲೆಯಲ್ಲಿಟ್ಟುಕೊಂಡು ಇದರ ಚರ್ಚೆ ಮಾಡಬೇಕು. ನವ್ಯ, ನವೋದಯ, ಪ್ರಗತಿಶೀಲ, ದಲಿತ-ಬಂಡಾಯ, ನವ್ಯೋತ್ತರ, ಆಧುನಿಕೋತ್ತರ ಎಂದು ನಮ್ಮ ಚಿಂತಕರು ಹೆಸರಿಸಿದ ಕಾಲಘಟ್ಟದ ನಂತರ ಬೆಳೆದು ಬರುತ್ತಿರುವ ಸಾಹಿತ್ಯವನ್ನು ಪರಿಭಾಷಿಸಿ ಅದಕ್ಕೊಂದು ಹಣೆಪಟ್ಟಿ ಹಚ್ಚುವ ಯಾವುದೇ ಪ್ರಯತ್ನ ಸಫಲವಾಗಿಲ್ಲ. ಹೆಚ್ಚೆಂದರೆ ಲ್ಯಾಟಿನ್ ಅಮೆರಿಕದಿಂದ ಬಂದ ಸಾಹಿತ್ಯವನ್ನು ಮ್ಯಾಜಿಕ್ ರಿಯಲಿಸಂ (ಎಸ್.ದಿವಾಕರ್ ಇದನ್ನು ಅದ್ಭುತರಮ್ಯ ಎಂದು ಕರೆಯುತ್ತಾರೆ) ಮತ್ತು ಮಾತಿನಲ್ಲಿ ಬರುವ ಪೋಸ್ಟ್ ಟ್ರುಥ್ ಎನ್ನುವ ಎರಡು ಹಣೆಪಟ್ಟಿಗಳನ್ನು ನಾವು ಕಾಣಬಹುದು.
ಮ್ಯಾಜಿಕ್ ರಿಯಲಿಸಂ
- ಒಂದು ರೀತಿಯಲ್ಲಿ ಯಾವ ಕಾಲಘಟ್ಟಕ್ಕೂ ಸಲ್ಲದೇ, ಒಂದು ನಿರಂತರ ಸಾಹಿತ್ಯಿಕ ಶೈಲಿಯಾಗಿ ಮುಂದುವರೆದು ಬಂದಿದೆ. ನಾನು ಇತ್ತೀಚೆಗೆ ಪ್ರಕಟಿಸಿದ ಇಪ್ಪತ್ತೊಂದು ಲ್ಯಾಟಿನ್ ಅಮೆರಿಕನ್ ಕಥೆಗಳ ಅನುವಾದ ಸಂಕಲನದಲ್ಲಿ (ನದಿಯ ಮೂರನೆಯ ದಂಡೆ) ಇರುವ ಮೊದಲ ಕಥೆಯ ಲೇಖಕ ಹುಟ್ಟಿದ್ದು 1805ರಲ್ಲಿ. ಇನ್ನೂರು ವರ್ಷಗಳ ಕಾಲಪ್ರವಾಹದಲ್ಲಿ ಇರುವ ಕಥನ ಶೈಲಿಯ ಭಿನ್ನತೆ ಹಾಗೂ ಅದರಲ್ಲಿರುವ ನಿರಂತರತೆಯನ್ನು ಕಂಡು ನಾನು ಆಶ್ಚರ್ಯಗೊಂಡದ್ದು ನಿಜ. 1838ರಲ್ಲಿ ರಚಿಸಿದ ‘ಕಸಾಯಿಖಾನೆ’ ಕಥೆಯನ್ನು ನಾವು ಅತ್ಯಲ್ಪ ಹೆಸರಿನ ಮತ್ತು ಭೂಗೋಳದ ಬದಲಾವಣೆಗಳನ್ನು ಮಾಡಿದರೆ ಇಂದಿನ ಭಾರತದ ಸಂದರ್ಭದ ರಾಮನವಮಿಯ ಮೆರವಣಿಗೆ ಮತ್ತು ಅದರ ಸುತ್ತಮುತ್ತ ಆಗಬಹುದಾದ ರಾಜಕೀಯ, ಕೋಮು ಸಂಘರ್ಷ ಮತ್ತು ಸರ್ಕಾರದ ನಿರಂಕುಶತೆಗೆ ವರ್ತಿಸಿ ನೋಡಬಹುದು. ಸಾಂದರ್ಭಿಕವಾಗಿಯೂ, ಸಾರ್ವತ್ರಿಕವಾಗಿಯೂ, ನಿರಂತರವಾಗಿಯೂ ನಿಲ್ಲಬಹುದಾದ ಸಾಹಿತ್ಯವೇ ಒಳ್ಳೆಯ ಸಾಹಿತ್ಯ. ಇದು ಖಂಡಿತವಾಗಿಯೂ ಮ್ಯಾಜಿಕ್ ರಿಯಲಿಸಂಗೆ ವರ್ತಿಸುತ್ತದೆ.
ಕನ್ನಡದ ಸಂದರ್ಭದಲ್ಲಿ ನಾವು ಒಂದು ವಿಚಿತ್ರ ಆಧುನಿಕೋತ್ತರ ಪರಿಸ್ಥಿತಿಯಲ್ಲಿದ್ದೇವೆ. ಬಹುಶಃ ಒಂದು ದಶಕದ ನಂತರ ಹಿಂದಿರುಗಿ ನೋಡಿದರೆ ಇದರಲ್ಲಿ ಯಾವುದೇ ಒಂದು ನಮೂನೆ ನಮಗೆ ಸಿಗಬಹುದು. ಆದರೆ ಈಗಿನ ಸಂಕ್ರಮಣ ಕಾಲದಲ್ಲಿ ಆಧುನಿಕ ಪರಿಕರಗಳನ್ನು ನಾವು ಎಷ್ಟು ಸೃಜನಾತ್ಮಕವಾಗಿ ಉಪಯೋಗಿಸಿಕೊಳ್ಳುತ್ತೇವೆ ಎನ್ನುವ ಸವಾಲನ್ನು ಎದುರಿಸಿ, ಸ್ವೀಕರಿಸಬೇಕು ಅಂತ ನನಗನ್ನಿಸುತ್ತದೆ.
2. ಇದೀಗ ದಾಟುವ ಕಾಲವೇ? ದಾಟುವುದಕ್ಕೆ ಏನಾದರೂ ಉಳಿದಿದೆಯೇ? ಅಥವಾ ನಾವು ಕೊನೆಯ ಹಂತ ತಲುಪಿದ್ದೇವೆಯೇ?
ಬದುಕು ಸಾಹಿತ್ಯದಲ್ಲಿ ಕೊನೆಯ ಹಂತ ಅನ್ನುವುದು ಇಲ್ಲ. ವ್ಯಕ್ತಿಗಳು ನಶ್ವರ. ನಾವುಗಳು ಕಾಲಾಂತರದಲ್ಲಿ ಇಲ್ಲವಾಗುತ್ತೇವೆ. ಆದರೆ, ವಿಚಾರ ಮತ್ತು ಸಾಹಿತ್ಯ ನದಿಗಳ ಹಾಗೆ ನಿರಂತರವಾಗಿ ಸಾಗುತ್ತದೆ. ಕೆಲವು ನದಿಗಳು ಒಣಗಿ ಬರಡಾಗಿವೆ, ಸತ್ತಿವೆ ಎಂದು ನಾವು ವಾದಿಸಬಹುದಾದರೂ, ನದಿಗಳನ್ನು - ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸುವ, ಮತ್ತು ಪ್ರಕೃತಿಯ ನಿಯಮಗಳನ್ನು ಅರ್ಥೈಸಿ ಹೊಸ ದಾರಿಗಳನ್ನು ಕಂಡುಕೊಳ್ಳುವ ಪ್ರಕ್ರಿಯೆ ಸಾಗುತ್ತಲೇ ಇರುತ್ತದೆ. ಇದು ಸಂಕ್ರಮಣ ಕಾಲವಿರಬಹುದು. ಆದರೆ ಕೊನೆಯ ಹಂತ ಖಂಡಿತವಾಗಿಯೂ ಅಲ್ಲ.
3. ಸಾಹಿತ್ಯ ಅನುವಾದಗೊಂಡ ತಕ್ಷಣ ಇಡೀ ಜಗತ್ತನ್ನೇ ತಲುಪುತ್ತದೆ. ಅದರಿಂದ ನಿಜಕ್ಕೂ ಭಾಷೆಗೆ ಏನಾದರೂ ಲಾಭವಿದೆಯೇ? ಭಾಷೆಯ ಬೆಳವಣಿಗೆಗೂ ಅದಕ್ಕೂ ಸಂಬಂಧ ಇದೆಯೇ? ಯಾಕೆ ಕೇಳಿದೆ ಎಂದರೆ ಅನೇಕ ಕನ್ನಡಿಗರು, ಯಾರಾದರೂ ಪುಸ್ತಕ ಇಂಗ್ಲಿಷಿಗೆ ತಂದರೆ ಓದಬಹುದು, ನನಗೆ ಕನ್ನಡ ಓದಲು ಬರೋದಿಲ್ಲ ಅನ್ನುತ್ತಾರೆ.
ಸಾಹಿತ್ಯದ ಅನುವಾದದಿಂದ ಭಾಷೆ ಸಮೃದ್ಧವಾಗುತ್ತದೆ ಅನ್ನುವುದರಲ್ಲಿ ಅನುಮಾನವಿಲ್ಲ. ವಿಶ್ವದ ಭಿನ್ನ ಅನುಭವಗಳು ಮತ್ತು ಆಲೋಚನಾಕ್ರಮ, ಭಾಷಾಪ್ರಯೋಗ ಎಲ್ಲವೂ ನಮ್ಮ ಭಾಷೆಯನ್ನು ವಿಸ್ತರಿಸುತ್ತ ಸಮೃದ್ಧಗೊಳಿಸುತ್ತದೆ. ಕನ್ನಡದಿಂದ ಇತರೆ ಭಾಷೆಗಳಿಗೆ ನಮ್ಮ ಸಾಹಿತ್ಯ ಅನುವಾದಗೊಂಡಾಗ ಅದು ಒಂದು ವಿಶಾಲ ಕ್ಯಾನ್ವಾಸಿನ ಸಂದರ್ಭದ ಸಂಭಾಷಣೆಗೆ ಎಡೆಮಾಡಿಕೊಡುತ್ತದೆ. ಕನ್ನಡದ ಮಕ್ಕಳು ಕನ್ನಡ ಭಾಷೆಯನ್ನು ಕಲಿಯದೇ ಇರುವುದು ಇಂಗ್ಲೀಷಿನಲ್ಲಿ ಓದಲು ಬಯಸುವುದನ್ನು ನಾವು ಒಂದು ವಿಶಾಲವಾದ ಸಂದರ್ಭದಲ್ಲಿ ನೋಡಬೇಕೇ ಹೊರತು ಅದನ್ನು ಭಾಷೆಯ ಅವನತಿಯ ಸಂದರ್ಭದಲ್ಲಿ ನೋಡಬಾರದು.
ನಮ್ಮ ಸಮಾಜದ ಒಂದು ವರ್ಗದ ಜನ ತಮ್ಮ ಜೀವನೋಪಾಯಕ್ಕಾಗಿ ನಾಡಿನಿಂದ ದೂರವಾಗಬಹುದು. ಅದು ಕಡಲ ಪ್ರಾಂತದಿಂದ ಮುಂಬೈಗೆ ಹೋದವರು, ವಿದೇಶಕ್ಕೆ ಹೋದವರು, ದೇಶದ ಇತರೆ ಪ್ರಾಂತಗಳಿಗೆ ವಲಸೆಹೋದವರು ಇದ್ದಾರೆ. ಉದಾಹರಣೆಗೆ ಉತ್ತರ ಭಾರತದಿಂದ ಕರ್ನಾಟಕಕ್ಕೆ ವಲಸೆ ಬಂದ ಜನರು ನಮ್ಮ ಭಾಷೆಯನ್ನು ಕಲಿತು ನಮ್ಮ ಸಂಸ್ಕೃತಿಯನ್ನು ಅರಿಯಲೆಂದು ನಾವು ಹೇಗೆ ಬಯಸುತ್ತೇವೆಯೋ, ಹಾಗೆಯೇ, ನಾನು ಗುಜರಾತಿಗೆ ಹೋದಾಗ ಅಲ್ಲಿನ ಭಾಷೆ ಸಂಸ್ಕೃತಿಯನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನಿಸುವುದೂ, ನನ್ನ ಮಕ್ಕಳು ಅಲ್ಲಿನ ಶಾಲೆಗಳಲ್ಲಿ ಕಲಿಸುವ ಭಾಷೆಯನ್ನು ಕಲಿಯುವುದೂ ಸಹಜವೇ ಆಗಿದೆ. ಅಂಥ ಸಂದರ್ಭದಲ್ಲಿ ಕನ್ನಡ ಕಲಿಯುವ ಅವಕಾಶವಿಲ್ಲದೇ ಬೆಳೆದ ಕನ್ನಡಿಗರು ನಾಡನ್ನು ಅನುವಾದದ ಮೂಲಕ ಅರ್ಥಮಾಡಿಕೊಳ್ಳಬೇಕೆಂದು ಬಯಸುವುದು ಸಹಜವೇ. ಕನ್ನಡ ತಿಳಿಯದ, ಆದರೆ ನಮ್ಮ ಸಾಹಿತ್ಯದ ಬಗ್ಗೆ ಅಸಕ್ತಿಯಿರುವವರೂ ಇದ್ದಾರೆ. ಅಥವಾ ಅಂಥ ಆಸಕ್ತಿಯನ್ನು ಹುಟ್ಟುಹಾಗುವ ಕೆಲಸವನ್ನೂ ಅನುವಾದ ಮಾಡುತ್ತದೆ.
ಕನ್ನಡ ಮಾಧ್ಯಮ, ಕರ್ನಾಟಕದಲ್ಲಿ ಕನ್ನಡದ ಕಲಿಕೆ, ಕನ್ನಡ ಶಾಲೆಗಳು - ಇವು ಕನ್ನಡ ಭಾಷೆಯ ಸಮಸ್ಯೆಗಳು. ಸಾಹಿತ್ಯದ ಅನುವಾದ ಭಾಷೆಯ ವಿಸ್ತಾರದ ಅವಕಾಶ. ಈ ಎರಡೂ ವಿಚಾರಗಳು ಒಂದು ಹಂತದಲ್ಲಿ ಸಣ್ಣ ಕೊಂಡಿ ಹಾಕಿ ಬಂಧನದಲ್ಲಿವೆಯಾದರೂ, ಅದನ್ನು ಭಿನ್ನವಾಗಿ ನೋಡುವ ಅವಶ್ಯಕತೆಯಿದೆ.
ಈಚೆಗೆ ನಾನು ವಿ ಎಸ್ ನೈಪಾಲರ ‘ಇಂಡಿಯಾ ಎ ವೂಂಡೆಡ್ ಸಿವಿಲಿಸೇಷನ್’ ಪುಸ್ತಕವನ್ನು ಓದುತ್ತಿದ್ದೆ. ಅದರಲ್ಲಿ ಭಾರತ ಮೂಲದ ಆದರೆ ತಲೆಮಾರುಗಳ ಹಿಂದೆ ವಲಸೆ ಹೋದ ವಿದೇಶೀಯರಾಗಿ ನೈಪಾಲ್ ಭಾರತವನ್ನು ಅರ್ಥಮಾಡಿಕೊಳ್ಳಲು ಉಪಯೋಗಿಸುವ ಒಂದು ದೊಡ್ಡ ಪರಿಕರವೆಂದರೆ - ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿ. ಎಲ್ಲಿಯ ತೀರ್ಥಹಳ್ಳಿ? ಎಲ್ಲಿಯ ಟ್ರಿನಿಡಾಡ್? ಎಲ್ಲಿಯ ಇಲ್ಲಸ್ಟ್ರೇಟೆಡ್ ವೀಕ್ಲಿ ಎನ್ನುವ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿರುವ ಸಂಸ್ಕಾರ?ದೂರದ ಶಿಕಾಗೋದಲ್ಲಿ ಕೂತು ನಮ್ಮ ಕನ್ನಡ-ತಮಿಳು ಬಲ್ಲ ಇಂಗ್ಲೀಷ್ ಪದ್ಯಗಳನ್ನೂ ಬರೆವ ರಾಮಾನುಜಮ್ ಅವರ ಅನುವಾದ... ಇದನ್ನ ನೋಡಿದಾಗ ನಮಗೆ ಅನುವಾದ ಸಾಗರದ ವಿಸ್ತಾರ ಕಾಣುತ್ತದೆ.
4. ಹಿಂಜರಿಯುತ್ತಾ ಬರೆಯುವುದು, ಸ್ಪರ್ಧೆಗೆ ಕಳಿಸುವುದು, ಗೆಲ್ಲುವುದು, ಸಂಕಲನ ತರುವುದು, ಮತ್ತೆ ಬರೆಯುವುದು, ಪ್ರಶಸ್ತಿ ಪಡೆಯುವುದು- ಇದೊಂದು ಸರ್ಕಲ್ ಅಂತ ಅನ್ನಿಸುವುದಿಲ್ಲವೇ. ನೂರು ವರ್ಷಗಳಿಂದಲೂ ಇದೇ ನಡೆಯುತ್ತಿರುವಂತಿದೆ. ಇದು ಸರಿಯೋ, ಇದಕ್ಕೆ ಕೊನೆ ಬೇಕೋ ಬೇಡವೋ..
ಇದು ಎಲ್ಲರ ಜೀವನದಲ್ಲೂ ನಡೆವ ವೃತ್ತ. ಇದೂ ಸರಿಯೇ. ಪ್ರಾರಂಭದ ಹಂತದಲ್ಲಿ ಹಿಂಜರಿಕೆ ಮತ್ತು ಅನುಮಾನಗಳು ಸಹಜ. ಅದಕ್ಕೆ ಒಂದು ಎಂಡಾರ್ಸ್‌ಮೆಂಟ್ ಬಹುಮಾನ-ಸಂಕಲನ-ವಿಮರ್ಶೆಗಳಿಂದ ಬರುತ್ತವೆ. ಆ ವೃತ್ತದ ಪರಿಮಿತಿಗಳನ್ನು ನಾವು ಅರ್ಥ ಮಾಡಿಕೊಂಡರೆ – ಮೊದಲ ಹಂತದಿಂದ ಮುಂದಕ್ಕೆ ಸಾಗುತ್ತೇವೆ. ನನ್ನ ಅಭಿಪ್ರಾಯದಲ್ಲಿ ಕನ್ನಡದ ಅತ್ಯಂತ ಸೃಜನಶೀಲ ಲೇಖಕರಾಗಿದ್ದ ತಿರುಮಲೇಶ್‌ಗೆ ಅವರ ಪ್ರತಿಭೆಗೆ ತಕ್ಕಂತಹ ಪ್ರಶಸ್ತಿಗಳು ಬರಲಿಲ್ಲ, ಅವರ ಅನೇಕ ಸಂಕಲನಗಳು ಪ್ರಕಟವಾಗುವುದೂ ಸರಳವಾಗಿರಲಿಲ್ಲ. ಆದರೆ ಅವರಿಗಿದ್ದ ನಿರ್ಲಿಪ್ತತೆ ಮೆಚ್ಚುವಂತಹದ್ದು. ತಮ್ಮ ಆತ್ಮವಿಶ್ವಾಸದಿಂದ ಅವರು ಬರೆಯುತ್ತಿದ್ದರು. ಒಬ್ಬ ಮನುಷ್ಯನಾಗಿ ಅವರಿಗೂ ತಮ್ಮ ಸಾಹಿತ್ಯ ಚರ್ಚೆಗೊಳಗಾಗಬೇಕೆನ್ನುವ ಬಯಕೆಯಿತ್ತು. ಆಗಲಿಲ್ಲ ಎನ್ನುವ ಬೇಸರವಿತ್ತು. ಆದರೆ ಅದನ್ನು ಮೀರಿ ಮುಂದುವರೆಯುವ ಒಂದು ಸ್ಥಿತಪ್ರಜ್ಞತೆಯೂ ಇತ್ತು. ಪ್ರಶಸ್ತಿ-ಮೆಚ್ಚುಗೆಯೇ ಬೇಕೆಂದು ಬರೆಯುವವರೂ ಇದ್ದಾರೆ. ಅವರನ್ನೂ ನಾವು ಸ್ವಾಗತಿಸೋಣ – ಅವರ ಸಾಹಿತ್ಯ ಗಟ್ಟಿಯಾಗಿದ್ದರೆ ಅದು ನಿಲ್ಲುತ್ತದೆ. ಆದರೆ ಮನುಷ್ಯರಿಗೆ ಬಹುಮಾನ, ಪ್ರಶಸ್ತಿ, ವಿಮರ್ಶೆ, ಚರ್ಚೆ ಎನ್ನುವ ಒಂದು ಸಾಧ್ಯತೆ ಇರುವುದೂ ಅತ್ಯವಶ್ಯಕ ಅನ್ನಿಸುತ್ತದೆ.
5. ಈಗ ಕೂತು ಬರೆಯುವಾಗ ನಿಮ್ಮ ಓದುಗರು ಯಾರು ಅನ್ನುವುದು ನಿಮಗೆ ಗೊತ್ತಾಗುತ್ತದೆಯೇ? ಓರಗೆಯ ನಾಲ್ಕಾರು ಮಿತ್ರರು ಬಿಟ್ಟರೆ ಮಿಕ್ಕ ಜಗತ್ತಿಗೂ ಲೇಖಕನಿಗೂ ಸಂಬಂಧ ಇರಬೇಕೇ, ಇರುತ್ತದೆಯೇ
ನನ್ನ ಓದುಗರು ಯಾರು ಎನ್ನುವುದು ನನಗೆ ನಿಜಕ್ಕೂ ಗೊತ್ತಿಲ್ಲ. ಓರಗೆಯ ನಾಲ್ಕಾರು ಮಿತ್ರರ ಪ್ರತಿಕ್ರಿಯೆಯಿಂದ ಬರವಣಿಗೆಯ ಗುಣಮಟ್ಟದ ಅರಿವಾಗುತ್ತದೆ. ಅದಕ್ಕೆ ಒಂದು ಕಡ್ಡಾಯ ನಿಯಮವಿರಬೇಕು. ನಿಮ್ಮ ಮಿತ್ರರು ನಿಷ್ಠುರವಾಗಿರಬೇಕು. ನನ್ನ ಮಿತ್ರಬಳಗದಲ್ಲಿ ನಿಷ್ಠುರವಾಗಿ ಬರವಣಿಗೆಯನ್ನು ನೋಡಿ ಅದನ್ನು ಛಿದ್ರಗೊಳಿಸುವ ಪ್ರಾಮಾಣಿಕತೆಯಿರುವ ದಿವಾಕರ್, ವಿವೇಕ ಶಾನಭಾಗ, ಇಸ್ಮಾಯಿಲ್, ಎಚ್.ಎಸ್.ಆರ್ ರಂತಹ ಗೆಳೆಯರಿದ್ದಾರೆ. ಅಕ್ಕಿ ಬೆಂದಿದೆಯೇ ಎಂದು ತಿಳಿಯಲು ಈ ನಾಲ್ಕಾರು ಮಿತ್ರರ ಫೀಡ್‌ಬ್ಯಾಕ್ ಸಾಕು. ಅದಲ್ಲದೇ ನಾನು, ನಾನು ಮೆಚ್ಚುವ ಗೌರವಿಸುವ ಹೊಸ ತಲೆಮಾರಿನ ಯುವ ಲೇಖಕರ ಪ್ರತಿಕ್ರಿಯೆಯನ್ನೂ ಕಾಲಾಕಾಲಕ್ಕೆ ಪಡೆಯುತ್ತಿರುತ್ತೇನೆ. ಬೊರ್ಹೇಸ್ ಹೇಳಿದಂತೆ ನಮಗೆ ಗೊತ್ತಿರುವ 20-30 ಓದುಗರಿಗಾಗಿ ನಾವು ಬರೆಯುತ್ತೇವೆ. ಅದು ಸಾಕು. ನನ್ನ ಹೊಸ ಪುಸ್ತಕ ಪ್ರಕಟವಾದಾಗ ಸುಮಾರು 30-40 ಜನರಿಗೆ ನಾನು ಹುಡುಕಿಹೋಗಿ ಪ್ರತಿಗಳನ್ನು ಕೊಟ್ಟುಬರುತ್ತೇನೆ. ಅವರುಗಳೂ ನನ್ನ ಪರಿಚಿತ ಓದುಗರೇ.
ಅದೇ ಕಾಲಕ್ಕೆ ನಾವು ಬರೆದ ಪುಸ್ತಕಗಳ ಸಾವಿರ ಪ್ರತಿಗಳು ಮಾರಾಟವಾದರೆ, ನಮಗೆ ತಿಳಿಯದ ಇನ್ನೂರು ಜನರಾದರೂ ಅದನ್ನು ಓದಿರಬಹುದು. ಯಾವುದೋ ಸಭೆಯಲ್ಲಿ ಪರಿಚಯವಿಲ್ಲದವರು ಬಂದು ನಿಮ್ಮ ವಿಶೇಷಾಂಕದ ಕಥೆ ಓದಿದೆ, ನಿಮ್ಮ ಕಾಲಂ ಓದಿದೆ, ನಿಮ್ಮ ಕಾದಂಬರಿ ಓದಿದೆ ಎಂದು ಹೇಳುವುದೂ ಇದೆ. ಇವೆಲ್ಲಾ ಜಗತ್ತು ನಮಗೆ ಕೊಡುತ್ತಿರುವ ಫೀಡ್‌ಬ್ಯಾಕ್ ಎಂದು ಪರಿಗಣಿಸಿ ಮುಂದುವರೆಯಬೇಕು. ಬರವಣಿಗೆಗೂ ಜಗತ್ತಿಗೂ ಸಂಬಂಧವಿಲ್ಲವಾದರೆ ಅದು ಗಿಟ್ಟದ ಬರವಣಿಗೆ.
6. ಹೊಸಬರನ್ನು ಎಷ್ಟು ಓದುತ್ತೀರಿ? ಓದುವ ಹುಮ್ಮಸ್ಸು ಉಳಿದಿದೆಯೇ? ಒಂಥರದ ಜಡತೆ ಆವರಿಸಿದ ಜಗತ್ತು ಈಗ ನಮ್ಮೆದುರು ಇದ್ದಂತಿದೆ. ಎಂಥಾ ಶ್ರೇಷ್ಠ ಕತೆ ಬರೆದರೂ ಯಾರಿಗೂ ಏನೂ ಅನ್ನಿಸುವುದಿಲ್ಲ ಅಂತ ಎಂದಾದರೂ ಅನಿಸಿದ್ದುಂಟಾ..
ಓದುವ ಹುಮ್ಮಸ್ಸು ಖಂಡಿತವಾಗಿಯೂ ಇದೆ. ನಾನು ಹೊಸಬರನ್ನೂ, ಹೊಸ ರೀತಿಯ ಬರವಣಿಗೆಯನ್ನೂ ಆಸಕ್ತಿಯಿಂದ ಓದುತ್ತೇನೆ. ಆದರೆ ನನ್ನ ಓದು ತುಸು ವಿಸ್ತಾರವಾದದ್ದು. ಹೀಗಾಗಿ ಕನ್ನಡದ ಹೊಸ ಲೇಖಕರನ್ನು ಹುಡುಕಿ ಓದುತ್ತೇನೆಯೇ ಎಂದು ಕೇಳಿದರೆ ಅದಕ್ಕೆ ಪ್ರಾಮಾಣಿಕವಾದ ಉತ್ತರ ಇಲ್ಲವೆಂದೇ ಹೇಳಬೇಕು. ಕನ್ನಡದ ಹೊಸ ಲೇಖಕರ ಪರಿಚಯ ನನಗೆ ಇತರರು ಓದಿ ಹೇಳಿದ್ದರ ಮೂಲಕ, ಸ್ಪರ್ಧೆಗಳಿಗೆ ತೀರ್ಪುಗಾರನಾಗುವುದರ ಮೂಲಕ, ಹೊಸ ಲೇಖಕರಿಗೆ ಮುನ್ನುಡಿ ಬರೆಯುವ ಮೂಲಕ ಪರಿಚಯವಾಗುತ್ತದೆ. ನಾನು ಎಂದೂ ತೀರ್ಪುಗಾರನಾಗುವುದಕ್ಕಾಗಲೀ, ಮುನ್ನುಡಿ ಬರಿಯುವುದಕ್ಕಾಗಲೀ, ನನ್ನ ಗಮನಕ್ಕೆ ಬಂದ ಲೇಖಕರ ಬೆಳವಣಿಗೆಯನ್ನು - ಅವರ ಹೊಸ ಸಾಹಿತ್ವವನ್ನು ಕೊಂಡು ಓದುವುದಕ್ಕಾಗಲೀ ಹಿಂಜರಿದಿಲ್ಲ. ಹೀಗಾಗಿ ಹೊಸ ತಲೆಮಾರಿನ ಜೊತೆ ನಾನು ಟಚ್‌ನಲ್ಲಿ ಸೀಮಿತವಾಗಿಯಾದರೂ ಇದ್ದೇನೆ ಅನ್ನಿಸುತ್ತದೆ. ಆದರೆ ನಾನು ಸೋಷಿಯಲ್ ಮೀಡಿಯಾದಲ್ಲಿ ಇಲ್ಲವಾದ್ದರಿಂದ ಫೇಸ್‌ಬುಕ್ ಇನ್ಸ್ಟಾಗಳ ಹೀರೋಗಳು ನನಗೆ ಗೊತ್ತಿಲ್ಲ.
7. ನೀವು ಎದುರುನೋಡುವ ಬರಹ, ಈಗ ಯಾವ ಥರದ್ದಿರಬೇಕು, ಯಾರನ್ನು ಓದಲು ಕಾಯುತ್ತೀರಿ.
ನನ್ನನ್ನು ಅವಾಕ್ಕುಗೊಳಿಸುವ ಬರಹವನ್ನು, ನನ್ನನ್ನು ಸ್ಪಂದಿಸುವ ಬರಹವನ್ನು ನಾನು ಓದಲು ಬಯಸುತ್ತೇನೆ. ಮೂರು ವರ್ಷಗಳ ಕಾಲ ನಾನು ಪಠಣ ಕುತೂಹಲ ಎನ್ನುವ ಕಾಲಂ ಬರೆದೆ. ಅದರಲ್ಲಿಯೇ ನನ್ನ ಓದಿನ ಆಸಕ್ತಿಯ ಹೊಳಹುಗಳು ಕಾಣಬಹುದು. ಈಚೆಗೆ ಓದಿದ, ನನ್ನನ್ನು ಆಳವಾಗಿ ತಟ್ಟಿದ ಕವಿತೆಗಳು ತಿರುಮಲೇಶರ ಅರಬ್ಬಿ ಸಂಕಲನದ ಸನಾ ಡೈರಿ ಎನ್ನುವ ಸರಣಿ. ತಿರುಮಲೇಶ್ ಈ ಕವಿತೆಗಳನ್ನು ಹದಿನೈದು ವರ್ಷಗಳ ಹಿಂದೆ ಬರೆದಿದ್ದರಾದರೂ ನಾನು ಓದಿರಲಿಲ್ಲ. ಒಬ್ಬ ಲೇಖಕ ಒಂದು ದೇಶದಲ್ಲಿ ಆಗುತ್ತಿರುವ ತೀವ್ರಗತಿಯ ರಾಜಕೀಯ ತಳಮಳವನ್ನು ಪ್ರತ್ಯಕ್ಷದರ್ಶಿಯಾಗಿ ಹೇಗೆ ಕವಿತೆಗಳ ಮೂಲಕ ದಾಖಲಿಸಬಹುದು ಎನ್ನುವುದನ್ನ ಕಂಡು ನಾನು ದಂಗಾದೆ. ಹಾಗೆಯೇ ಸೋಫಿ ರಾಬರ್ಟ್ ಬರೆದ ಲಾಸ್ಟ್ ಪಿಯೋನೋಸ್ ಆಫ ಸೈಬೀರಿಯಾ ಪುಸ್ತಕ – ಕಳೆದುಹೋದ ಪಿಯಾನೋಗಳ ಹುಡುಕಾಟದ ಮೂಲಕ ಒಂದು ಕಾಲಖಂಡದ ಚರಿತ್ರೆಯನ್ನ ದಾಖಲಿಸುವ ರೀತಿಯನ್ನು ಕಂಡು ದಂಗಾದೆ. ನನಗೆ ಯಾವುದೇ ಓದು ವರ್ಜ್ಯವಲ್ಲ. ಕುತೂಹಲದಿಂದ ಎಲ್ಲವನ್ನೂ ಓದುತ್ತೇನೆ.
ಕನ್ನಡದ ಸಂದರ್ಭದಲ್ಲಿ ಏನೇ ಬಂದರೂ ಆಸಕ್ತಿಯಿಂದ ಓದುವ ಬರಹಗಾರರಲ್ಲಿ ಜಯಂತ ಕಾಯ್ಕಿಣಿ ಅಗ್ರಸ್ಥಾನದಲ್ಲಿರುತ್ತಾರೆ. ಜೊತೆಗೆ ಗುರುಪ್ರಸಾದ ಕಾಗಿನೆಲೆಯ ಬರವಣಿಗೆಯನ್ನೂ ನಾನು ಕಾತರದಿಂದ ಕಾಯುತ್ತೇನೆ.
8. ಅನಂತಮೂರ್ತಿ, ಲಂಕೇಶ್, ವೈಯನ್ಕೆ, ಅಡಿಗ, ಚಿತ್ತಾಲ – ಹೀಗೆ ಒಂದು ಕಾಲದಲ್ಲಿ ಸ್ಫೂರ್ತಿಯನ್ನು ತುಂಬುವುದಕ್ಕೆ ಹತ್ತಾರು ಹೆಸರುಗಳಿದ್ದವು. ಈಗ ಪ್ರತಿ ಹೆಸರು ಕೂಡ ವಿಚಿತ್ರ ಸಂಯೋಗದ ಜತೆ ಹಾಜರಾಗುತ್ತದೆ. ಇದಕ್ಕೆ ಕಾಲ ಕಾರಣವೇ, ಆಧುನಿಕತೆಯೇ, ಸಂಕುಚಿತ ಮನೋಭಾವವೇ
ಈ ಗಂಟನ್ನು ನನಗೆ ಬಿಡಿಸಲು ಸಾಧ್ಯವಾಗಿಲ್ಲ. ಒಂದು ರೀತಿಯಲ್ಲಿ ಅವರುಗಳು ಒಂದು ಚಳುವಳಿಯ ಭಾಗವಾಗಿದ್ದರು. ಸ್ಫೂರ್ತಿದಾಯಕರಾಗಿದ್ದರು. ಹಿಂದಿ ಸಿನಿಮಾ ರಂಗದಲ್ಲಿ ಶಾರುಖ್ ಖಾನ್ ಇಸ್ ದ ಲಾಸ್ಟ್ ಸೂಪರ್ ಸ್ಟಾರ್ ಎನ್ನುವ ಒಂದು ಮಾತಿದೆ. ಅಲ್ಲಿಂದ ಮುಂದಕ್ಕೆ ಫಾರ್ಮಾಟ್ ಬದಲಾಗಿದೆ. ಎರಡು ವಾರ ಸಿನೇಮಾ ಓಡಿದರೆ ಅದು ಸೂಪರ್ ಹಿಟ್. ದೊಡ್ಡ ಕಥೆಗಳು ವೆಬ್ ಸೀರಿಯಲ್‌ಗಳಾಗಿ ಬರುತ್ತಿವೆ. ಗುರುತಿಗೆ ಸಿಗುವಅನೇಕ ಸ್ಟಾರ್‌ಗಳಿದ್ದರೂ ಸೂಪರ್ ಸ್ಟಾರ್‌ಗಳು ಇಲ್ಲ. ಹಾಗೇ ಕನ್ನಡ ಸಾಹಿತ್ಯ ಸಂದರ್ಭವೂ ಬದಲಾಗಿದೆ. ನಮ್ಮ ಕಡೆಯ ಸೂಪರ್ ಸ್ಟಾರ್ ಕನ್ನಡದ ಮಟ್ಟಿಗೆ ದೇವನೂರ ಮಹಾದೇವ ಎನ್ನಬಹುದು. ದೇವನೂರರ ನಂತರ ಆ ಮಟ್ಟದಲ್ಲಿ ಪ್ರಭಾವ ಬೀರುವ ಯಾವುದೇ ಲೇಖಕರು ಉದಯವಾಗಿಲ್ಲ.
9. ನಿಮ್ಮ ಬರೆವಣಿಗೆ ಹೇಗೆ ಸಾಗಿದೆ. ಬರೆಯಲು ಬೇಕಾದ ಅಂತರಂಗದ, ಬಹಿರಂಗದ ಚೈತನ್ಯ ಎಷ್ಟರ ಮಟ್ಟಿಗೆ ಉಳಿದಿದೆ. ಮಾತುಗಳು ಫೇಕ್ ಅನ್ನಿಸುತ್ತಿಲ್ಲ ಅಂತ ಧೈರ್ಯವಾಗಿ ಹೇಳಬಹುದೇ..
ನನ್ನ ಬರವಣಿಗೆ ಎಂದಿನಂತೆ ಸಾಗುತ್ತಿದೆ. ಚೈತನ್ಯವೂ ಉಳಿದಿದೆ. ನಾನು ಹಿಂದೆ ಹೇಳಿದಂತೆ 20-30 ಜನರ ಓದುಗ ವರ್ಗ ಇರುವುದೇ ನಮಗೆ ಚೈತನ್ಯವನ್ನು ನೀಡುತ್ತದೆ. ಅಂದಹಾಗೆ ಈ 20-30 ಜನರ ಓದುಗ ವರ್ಗ ಸ್ಥಾಯಿ ವರ್ಗವಲ್ಲ. ಸೆನ್ಸೆಕ್ಸ್‌ನಲ್ಲಿ ಹೊಸ ವ್ಯಾಪಾರಗಳು ಸೇರಿ, ಹಳೆ ವ್ಯಾಪಾರಗಳು ಹೊರಬೀಳುವಂತೆ ಈ ಓದುಗವರ್ಗವೂ ಬದಲಾಗುತ್ತಿರುತ್ತದೆ. ಅದರಲ್ಲಿ ಕೆಲವರು ಆಸಕ್ತಿ ತೋರುತ್ತಿಲ್ಲವಾದ್ದರಿಂದ ಹೊರಬೀಳುತ್ತಾರೆ, ಹೊಸ ಪೀಳಿಗೆಯವರು ಸೇರುತ್ತಾರೆ. ಹೀಗೆ – ಈ ಸಣ್ಣ ಮತ್ತು ಚಲನಶೀಲ ಓದುಗವರ್ಗ ಇರುವವರೆಗೂ ಅದನ್ನು ನಾವು ನಿರಂತರವಾಗಿ ನವೀಕರಿಸುತ್ತಿರುವವರೆಗೂ ಉತ್ಸಾಹವೂ ಚೈತನ್ಯವೂ ಇರುತ್ತದೆ.
10. ವಿಮರ್ಶೆಗಾಗಿ ಒಬ್ಬ ಲೇಖಕ ಕಾಯುತ್ತಿರುತ್ತಾನೆ ಅನ್ನುತ್ತಾರೆ. ಅದು ವಿಮರ್ಶೆಯೇ, ಮೆಚ್ಚುಗೆಯೇ, ಒಪ್ಪಿಗೆಯೇ?
ಎಲ್ಲವೂ. ಲೇಖಕನಿಗೆ ಅತ್ಯಂತ ಚಡಪಡಿಕೆಯ ವಿಷಯ ತನ್ನ ಬರವಣಿಗೆ ಚರ್ಚೆಯೇ ಆಗದಿರುವುದು. ಈ ಚಡಪಡಿಕೆಯನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಅನುಭವಿಸುತ್ತಲೂ ಇದ್ದೇವೆ.
11. ನಿಮ್ಮನ್ನು ಸಮುದ್ರದ ನಡುವಿನ ದ್ವೀಪಕ್ಕೆ ಏಕಾಂತವಾಗಿರಲು ಕಳಿಸಿದರೆ ಯಾವ ಪುಸ್ತಕ ಒಯ್ಯಲು ಇಷ್ಟಪಡುತ್ತೀರಿ?
ಇದು ಕಷ್ಟದ ಪ್ರಶ್ನೆ. ಆದರೆ ಅನೇಕ ಸಾಧ್ಯತೆಗಳಿರುವ – ಮತ್ತೆ ಮತ್ತೆ ಮರುಓದಿಗೆ ಒಳಗೊಳ್ಳುವಂತಹ ಕೃತಿಯಾಗಿರಬೇಕು. ಮಹಾಭಾರತ ಈ ರೀತಿಯ ಅನಂತ ಸಾಧ್ಯತೆಗಳಿರುವ ಸಾಹಿತ್ಯ ಕೃತಿ ಎಂದು ನನಗನ್ನಿಸುತ್ತದೆ.
12. ನೀವು ಹುಮ್ಮಸ್ಸಿನಿಂದ ಹುರುಪಿನಿಂದ ಬರೆಯುತ್ತಿದ್ದವರು. ಆಗ್ಡನ್ ನ್ಯಾಶ್ ಮುಂತಾದವವರ ಬಗ್ಗೆ ಬರೆದ ಬರಹ ನನ್ನ ಕಣ್ಣ ಮುಂದಿದೆ. ಕತೆಯಲ್ಲಿ ಕಾದಂಬರಿಯಲ್ಲಿ ಮಾಡಿದ ಪ್ರಯೋಗಗಳು ನೆನಪಿವೆ. ಈಗಲೂ ಅಂಥ ಸಾಹಸಮಯತೆ ಇದೆಯೇ..
ಖಂಡಿತವಾಗಿ ಇದೆ. ನನ್ನ ಈಚಿನ ಕಥಾಂಬರಿ ಬೇಟೆಯಲ್ಲ ಆಟವೆಲ್ಲ ಹತ್ತು ಭಿನ್ನ ಕಾಲಘಟ್ಟಗಳಲ್ಲಿ ಬರೆದ ಹತ್ತು ಬಿಡಿ ಕಥೆಗಳ ಸಂಗ್ರಹ. ಕಥೆಗಳಾಗಿ ಒಂದೊಂದು ಅಧ್ಯಾಯವೂ ನಿಲ್ಲುವಂತೆ, ಸಮಗ್ರವಾಗಿ ಹತ್ತೂ ಕಥೆಗಳನ್ನು ಒಟ್ಟಾಗಿ ಓದಿದಾಗ ಕಾದಂಬರಿಯಂತೆ ಓದಿಸಿಕೊಳ್ಳುವ ಪ್ರಯೋಗ ಅದಾಗಿತ್ತು. ಅದು ನನ್ನ ಮಟ್ಟಿಗೆ ಮಹತ್ವಾಕಾಂಕ್ಷೆಯ ಪ್ರಯೋಗವಾಗಿತ್ತು. ಹಾಗೂ ಶಿಕಾರಿಯ ನಂತರ ಕಾರ್ಪರೇಟ್ ಜಗತ್ತಿನ ರಾಜಕೀಯದ ರೋಚಕತೆಯ ಮಹತ್ವದ ಪ್ರಯೋಗವಾಗಿತ್ತು. ಇದರಲ್ಲಿ ಮೇಲ್ವರ್ಗದವರ ಆಧುನಕತೆಯಲ್ಲಿನ ತುಮುಲಗಳೂ ಇದ್ದುವು. ಆದರೆ ಆ ಪ್ರಯೋಗವನ್ನು ಯಾರೂ ಗಮನಿಸಿಯೇ ಇಲ್ಲವೆನ್ನಿಸಿತು. ಈಗ ಬರೆಯುತ್ತಿರುವ ಕಥೆಗಳು ಪ್ರಬುದ್ಧರ ಏಕಾಂಗಿತನ, ಮತ್ತು ಅಡುಗೆ ಮಾಡುವುದರಿಂದ ಬಿಡುಗಡೆ ಪಡೆಯಬಹುದಾದ ಸಾಧ್ಯತೆಗಳ ಕಥೆಗಳಾಗಿವೆ. ಇಂಗ್ಲೀಷಿನಲ್ಲಿ ಇದನ್ನು ಬರೆದಿದ್ದರೆ, ದ ಸಾಲಿಟ್ಯೂಟ್ ಆಫ್ ಕುಕ್ಸ್ ಎಂದು ಹೆಸರು ಕೊಡುತ್ತಿದ್ದೆ. ಬಾಣಸಿಗರ ಏಕಾಂಗಿತನ ಎನ್ನುವುದು ಕನ್ನಡದಲ್ಲಿ ಅಷ್ಟು ಸಮರ್ಪಕವಾಗಿ ನಿಲ್ಲುವುದಿಲ್ಲ. ಈ ಸಂಕಲನ ಮುಂದಿನ ವರ್ಷದಲ್ಲಿ ಬರಬಹುದು. ಇದಕ್ಕೆ ಸ್ಫೂರ್ತಿ ನೀಡಿದ್ದು ವಾಸ್ತು ಶಿಲ್ಪಿಯಾಗಿದ್ದ – ಗೇ ಆಗಿದ್ದ, ವೆಂಡೆಲ್ ರಾಡ್ರಿಗ್ಸ್ ಎಂಬ ಗೋವಾದ ಲೇಖಕ ಮತ್ತು ಅವನ ಪೋಷ್ಕೆಮ್ ಎನ್ನುವ ಕಥಾಸಂಕಲನ. ಆತ ಈಚೆಗೆ ತೀರಿಕೊಂಡ. ಹೀಗೆ ನಮ್ಮ ಸ್ಪೂರ್ತಿಯ ಸೆಲೆಗಳು ಕಟ್ಟಾ ಸಾಹಿತಿಗಳಿಂದಲೇ ಬರಬೇಕೆಂದೇನೂ ಇಲ್ಲ. ಬಹುಶಃ ಈ ಕಥಾಸಂಕಲನ ವೆಂಡೆಲ್ ರಾಡ್ರಿಗ್ಸ್‌ನ ಏಕೈಕ ಕಥಾಸಂಕಲನವಾಗಿರಬಹುದು. ನನಗೆ ಈ ರೀತಿಯ ಪ್ರಯೋಗಗಳನ್ನು ನಿರಂತರ ಮಾಡುವುದು ಇಷ್ಟದ ವಿಷಯ.
13. ಒಳಗಿರುವುದು- ಮನೆಯಲ್ಲೇ ಕೂತು ಬೇಕಾದದ್ದು ಓದುವುದು ಬರೆಯುವುದು, ಹೊರಗಿರುವುದು- ಪುಸ್ತಕ ಬಿಡುಗಡೆ, ಸೆಮಿನಾರು, ಕಾವ್ಯಗೋಷ್ಠಿ, ಚರ್ಚೆಗಳಲ್ಲಿ ತೊಡಗುವುದು- ಯಾವುದು ಇಷ್ಟ.
ಈಚೆಗೆ ಒಳಗಿರುವುದು, ಹೆಚ್ಚಿನ ಓದು, ಏಕಾಂತವೇ ನನಗೆ ಹಿಡಿಸುತ್ತದೆ. ನಾನು ಹೆಚ್ಚಾಗಿ ಹೊರಗೆ ಬರದಿರುವುದಕ್ಕೆ, ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಿರುವುದಕ್ಕೆ ಇದೇ ಕಾರಣ. ಸೋಶಿಯಲೈಸೇಷನ್‌ನ ಆ ಘಟ್ಟ ನನ್ನ ಮಟ್ಟಿಗೆ ಈದಿನಗಳಲ್ಲಿ ಆಕರ್ಷಕವಾಗಿಲ್ಲ. ಬದಲಿಗೆ ದೊಡ್ಡ ಮಗ್ಗಿನಲ್ಲಿ ಕಾಫಿ ಹಿಡಿದು ಪುಸ್ತಕ ಓದುವುದು ಅಥವಾ ಕಿವಿಗೆ ಆಡಿಯೋ ಬುಕ್ಕಿನ ಧ್ವನಿಯ ಹೆಡ್ಫೋನುಗಳನ್ನು ತೂರಿಸಿ ಉದ್ದನೆ ವಾಕ್ ಹೋಗುವುದೇ ಹೆಚ್ಚು ಇಷ್ಟ.
14. ನಿಮ್ಮ ಅಂತರಂಗದ ಗೆಳೆಯರು ಯಾರು, ಅವರು ಈಗ ಹೇಗೆ ನಿಮ್ಮನ್ನು ಒಳಗೊಳ್ಳುತ್ತಾರೆ. ಯಾವುದು ನೀವು ಭೇಟಿಯಾಗುವಂತೆ ಮಾಡುವ ಆಕರ್ಷಣೆ..
ಈಗ ನನ್ನ ಅಂತರಂಗದ ಗೆಳೆಯ ಜಯಂತ ಕಾಯ್ಕಿಣಿ. ಭಾಷೆಯ ಪರಿವಿಲ್ಲದೇ, ನಮ್ಮಿಬ್ಬರ ಸಾಹಿತ್ಯ ಕೃಷಿಯ ಪರಿವಿಲ್ಲದೇ, ಸಹಜವಾಗಿ ಯಾವುದೇ ವಿಷಯದ ಬಗ್ಗೆ ಬಂಬೈಯ್ಯಾ ಹಿಂದಿಯಲ್ಲಿ ಮಾತಾಡುವುದು ನಮ್ಮ ಪರಿಪಾಠ. ಅವನು ಮತ್ತು ಅವನ ಮಕ್ಕಳ ಜೊತೆ ತಲೆಮಾರಿನ ಅಂತರವಿಲ್ಲದೇ ಚರ್ಚೆ ನಡೆಸಬಹುದು. ಹಾಗೇ ನನ್ನ ಮಗ ಅರ್ಜುನ್, ಮತ್ತು ಕೆಲಸದ ವಿಷಯದಲ್ಲಿ ಬಂದಾಗ ಅಹಮದಾಬದಾರಿನಲ್ಲಿರುವ ಸಹ ಪ್ರಾಧ್ಯಾಪಕರಾದ ಅಂಕುರ್ ಸರೀನ್ – ಇವರುಗಳ ಜೊತೆ ಯಾವುದೇ ಪೂರ್ವಾಗ್ರಹವಿಲ್ಲದೇ, ಯಾವುದೇ ವಿಷಯದ ಬಗ್ಗೆ ಮಾತನಾಡಬಹುದು. ಅವರುಗಳೆಲ್ಲಾ ನನ್ನನ್ನ ನನ್ನ ಬಲಹೀನತೆಗಳೊಂದಿಗೆ ಒಳಗೊಳ್ಳುತ್ತಾರೆ.
15. ಕನ್ನಡದಲ್ಲಿ ಮುಂದಿನ ಜ್ಞಾನಪೀಠ ಯಾರಿಗೆ ಬಂದರೆ ನಿಮಗೆ ಸಾಹಿತ್ಯ ಮೇಲಿನ ನಂಬಿಕೆ ಉಳಿಯುತ್ತದೆ.
ಇದು ಕಷ್ಟದ ಪ್ರಶ್ನೆ. ಮೊದಲಿಗೆ ಜ್ಞಾನಪೀಠದ ಮೇಲೆ ನಂಬಿಕೆ ಉಳಿದಿದೆಯೇ ಎನ್ನುವ ಪ್ರಶ್ನೆಯನ್ನು ಕೇಳಬೇಕು. ರಾಮಭದ್ರಾಚಾರ್ಯ ಮತ್ತು ವೈರಮುತ್ತು ಎನ್ನುವ ಭಿನ್ನ ಸಾಹಿತಿಗಳಿಗೆ ಜ್ಞಾನಪೀಠ ಕೂಟ್ಟಿರುವ ಈ ಸಂದರ್ಭದಲ್ಲಿ ಜ್ಞಾನಪೀಠ ಯಾವುದನ್ನು ಸಾಹಿತ್ಯ ಎಂದು ಪರಿಭಾಷಿಸುತ್ತಿದೆ ಎನ್ನುವುದನ್ನು ನಾವು ದೀರ್ಘವಾಗಿ ಯೋಚಿಸಬೇಕು. ಅದೇ ಕಾಲಕ್ಕೆ ಅಮಿತಾವ್ ಘೋಷ್, ವಿನೋದ್ ಶುಕ್ಲಾ ಮತ್ತು ಗಲ್ಜಾರ್‌ಗೆ ಜ್ಞಾನಪೀಠ ಬಂದಾಗ ಖುಷಿಯ ಆಶ್ಚರ್ಯವೂ ಉಂಟಾಗಿದೆ. ಬಾಬ್ ಡೈಲನ್‌ಗೆ ನೊಬೆಲ್ ಬಂದಾಗಲೂ ಈ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಉದ್ಭವಿಸಿದ್ದುವು. ಹಾಗಯೇ ವಿನ್ಸ್ಟನ್ ಚರ್ಚಿಲ್ ನೊಬೆಲ್ ಸಾಹಿತ್ಯ ಪುರಸ್ಕಾರ ಪಡೆದಾಗಲೂ ಸಾಹಿತ್ಯ ಎಂದರೇನು ಎನ್ನುವ ಡೆಫೆನಿಷನ್ನನನ್ನು ವಿಸ್ತರಿಸುವ ಯತ್ನ ನಡೆದಿತ್ತು. ಈ ನಿಟ್ಟಿನಲ್ಲಿ ನಾನು ಕುತೂಹಲದಿಂದ ಜ್ಞಾನಪೀಠವನ್ನು ಗಮನಿಸುತ್ತಿದ್ದೇನೆ. ಜ್ಞಾನಪೀಠ ಪಡೆದು ಮಠಾಧೀಶರಾಗುವುದಕ್ಕೆ ಬದಲು ನಮ್ಮ ಸಾಹಿತಿಗಳು ಸಾಮಾನ್ಯರಾಗಿ ಇದ್ದಹಾಗೇ ಇದ್ದು ಬರೆಯಲಿ ಎಂದು ನಾನು ಆಶಿಸುತ್ತೇನೆ. ಬಿರುದು ಬಾವಲಿಗಳ ತೂಕ ಹೆಚ್ಚಾದಾಗ ಜನ ಲಘುವಾಗುವುದನ್ನು ನಾವು ಕಂಡಿದ್ದೇನೆ.
ಹೀಗಾದರೂ ಕನ್ನಡದ ಸಂದರ್ಭದಲ್ಲಿ ಒಂದು ದೊಡ್ಡ ಬಹುಮಾನಕ್ಕೆ ಯಾರಾದರೂ ಪಾತ್ರರಾಗಬಹುದೇ ಎಂದು ಏಕವ್ಯಕ್ತಿ ತೀರ್ಪುಗಾರನನ್ನಾಗಿ ನನ್ನನ್ನು ನೇಮಿಸಿದರೆ ನಾನು ಆ ಬಹುಮಾನವನ್ನು ದೇವನೂರು ಮತ್ತು ವೈದೇಹಿಯವರಿಗೆ ಕೊಡಲು ಬಯಸುತ್ತೇನೆ. ದೇವನೂರು ಅದನ್ನು ಸ್ವೀಕರಿಸಲು ನಿರಾಕರಿಸುತ್ತಾರೆಂಬ ಅನುಮಾನವಿದೆ. ವೈದೇಹಿಯವರು ಒಪ್ಪುತ್ತಾರೆಂಬ ನಂಬಿಕೆ ನನಗಿದೆ.
