ಐಐಎಂ ಬೆಂಗಳೂರಿನ ಪದವಿಪೂರ್ವ ಕ್ಯಾಂಪಸ್‌ಗೆ ಟಾಟಾ ಟ್ರಸ್ಟ್ಸ್‌ನಿಂದ ಭಾರಿ ಅನುದಾನ

KannadaprabhaNewsNetwork |  
Published : Jun 18, 2026, 03:00 AM IST
ಟಾಟಾ | Kannada Prabha

ಸಾರಾಂಶ

ಐಐಎಂ ಬೆಂಗಳೂರಿನ ಪದವಿಪೂರ್ವ ಕಾಲೇಜ್‌ ಕ್ಯಾಂಪಸ್‌ಗೆ ಟಾಟಾ ಟ್ರಸ್ಟ್ಸ್‌ ಅನುದಾನ ನೀಡಿದೆ. ಈ ಕುರಿತ ವರದಿ ಇಲ್ಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಐಐಎಂ ಬೆಂಗಳೂರು ಸಂಸ್ಥೆಯು ನಗರದಲ್ಲಿ ಆರಂಭಿಸಲು ಉದ್ದೇಶಿಸಿರುವ ವಿಶ್ವದರ್ಜೆಯ ಪದವಿಪೂರ್ವ ಕಾಲೇಜು ಕ್ಯಾಂಪಸ್‌ಗೆ ಟಾಟಾ ಟ್ರಸ್ಟ್ಸ್ ಸಂಸ್ಥೆಯು ಭಾರಿ ಮೊತ್ತದ ಆರ್ಥಿಕ ನೆರವು ಒದಗಿಸುವುದಾಗಿ ಘೋಷಿಸಿದೆ. ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಟಾಟಾ ಟ್ರಸ್ಟ್ಸ್ ಈ ಬೃಹತ್ ಅನುದಾನ ನೀಡಿದೆ.ಬಹುಶಿಸ್ತೀಯ ಪದವಿಪೂರ್ವ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಟಾಟಾ ಟ್ರಸ್ಟ್ಸ್ ಮತ್ತು ಐಐಎಂಬಿ ಹೊಂದಿರುವ ಜಂಟಿ ದೃಷ್ಟಿಕೋನಕ್ಕೆ ಈ ಅನುದಾನವು ದೊಡ್ಡ ಶಕ್ತಿ ನೀಡಲಿದ್ದು, ಅತ್ಯಾಧುನಿಕ ಮೂಲಸೌಕರ್ಯ, ಗುಣಮಟ್ಟದ ಸಂಶೋಧನಾ ಸಾಮರ್ಥ್ಯ ಹಾಗೂ ಜಾಗತಿಕ ಮಟ್ಟದ ಕಲಿಕಾ ವಾತಾವರಣವನ್ನು ನಿರ್ಮಿಸಲು ನೆರವಾಗಲಿದೆ.ಪ್ರಸ್ತುತ ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂಬಿಯ ಮುಖ್ಯ ಕ್ಯಾಂಪಸ್‌ ನಿಂದ ಸುಮಾರು 27 ಕಿಲೋಮೀಟರ್ ದೂರದಲ್ಲಿ ಈ ನೂತನ ಪದವಿಪೂರ್ವ ಅಧ್ಯಯನ ಶಾಲೆ ತಲೆಯೆತ್ತಲಿದೆ. ಐಐಎಂ ಸಂಸ್ಥೆಯು ತನ್ನ ಸ್ನಾತಕೋತ್ತರ (ಪಿಜಿ) ಮತ್ತು ಕಾರ್ಯನಿರ್ವಾಹಕ (ಎಕ್ಸಿಕ್ಯೂಟಿವ್) ಶಿಕ್ಷಣ ಯೋಜನೆಗಳಲ್ಲಿ ಕಾಯ್ದುಕೊಂಡು ಬಂದಿರುವ ಅದೇ ಶೈಕ್ಷಣಿಕ ಶಿಸ್ತು, ಕಠಿಣತೆ ಹಾಗೂ ಜಾಗತಿಕ ದೃಷ್ಟಿಕೋನವನ್ನು ಈಗ ಪದವಿಪೂರ್ವ ಶಿಕ್ಷಣದಲ್ಲೂ ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹೊಂದಿದೆ. ಅದರ ಭಾಗವಾಗಿಯೇ ಈ ನೂತನ ಕ್ಯಾಂಪಸ್ ರೂಪುಗೊಳ್ಳುತ್ತಿದೆ.ಈ ನೂತನ ಸಂಸ್ಥೆಯು ಆರಂಭದಲ್ಲಿ ನಾಲ್ಕು ವರ್ಷಗಳ ಅವಧಿಯ ಎರಡು ಪೂರ್ಣಾವಧಿ ವಸತಿ (ರೆಸಿಡೆನ್ಶಿಯಲ್) ಪದವಿ ಕೋರ್ಸ್ ಗಳನ್ನು ಒದಗಿಸಲಿದೆ. ಇದರಲ್ಲಿ ಡೇಟಾ ಸೈನ್ಸ್ ಅನ್ನು ಮೈನರ್ ವಿಷಯವಾಗಿ ಒಳಗೊಂಡ ಬಿಎಸ್‌ಸಿ (ಆನರ್ಸ್) ಎಕನಾಮಿಕ್ಸ್ ಹಾಗೂ ಎಕನಾಮಿಕ್ಸ್ ಅನ್ನು ಮೈನರ್ ವಿಷಯವಾಗಿ ಒಳಗೊಂಡ ಬಿಎಸ್‌ಸಿ (ಆನರ್ಸ್) ಡೇಟಾ ಸೈನ್ಸ್ ಕೋರ್ಸ್‌ಗಳು ಸೇರಿವೆ. ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಿನಿಂದಲೇ ಈ ತರಗತಿಗಳು ಆರಂಭವಾಗಲಿವೆ. ಇಂದಿನ ಸಂಕೀರ್ಣ ಹಾಗೂ ದತ್ತಾಂಶ ಆಧಾರಿತ ಮಾರುಕಟ್ಟೆಯ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಡೇಟಾ ಸೈನ್ಸ್, ಅರ್ಥಶಾಸ್ತ್ರ ಮತ್ತು ಬ್ಯುಸಿನೆಸ್ ಸ್ಟಡೀಸ್ ವಿಷಯಗಳನ್ನು ಒಳಗೊಂಡ ಬಹುಶಿಸ್ತೀಯ ಪಠ್ಯಕ್ರಮವನ್ನು ಇಲ್ಲಿ ರೂಪಿಸಲಾಗಿದೆ. ಆರಂಭಿಕ ಹಂತದಲ್ಲಿ ಪ್ರತಿ ವಿಭಾಗಕ್ಕೆ 40 ರಂತೆ ಒಟ್ಟು 80 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದ್ದು, ಇದು ವಿದ್ಯಾರ್ಥಿಗಳ ಮೇಲೆ ವೈಯಕ್ತಿಕ ಗಮನ ಹರಿಸಲು ಮತ್ತು ಐಐಎಂಬಿ ವಾತಾವರಣದಲ್ಲಿ ಅತ್ಯುತ್ತಮ ಶೈಕ್ಷಣಿಕ ಮಾರ್ಗದರ್ಶನ ನೀಡಲು ಸಹಕಾರಿಯಾಗಲಿದೆ.ಈ ಐತಿಹಾಸಿಕ ಸಂದರ್ಭದಲ್ಲಿ ಮಾತನಾಡಿದ ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಅವರು, ‘ಟಾಟಾ ಟ್ರಸ್ಟ್ಸ್ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಟಾಟಾ ಮೆಮೋರಿಯಲ್ ಆಸ್ಪತ್ರೆ ಮತ್ತು ಇಂಡಿಯನ್ ಇನ್‌ ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ನಂತಹ ಭಾರತದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳನ್ನು ಬೆಂಬಲಿಸುತ್ತಾ ಬಂದಿದೆ. ಐಐಎಂಬಿಯ ಈ ಹೊಸ ಪ್ರಯತ್ನಕ್ಕೆ ನಾವು ನೀಡುತ್ತಿರುವ ಬೆಂಬಲವೂ ಅದೇ ಆಶಯವನ್ನು ಪ್ರತಿಬಿಂಬಿಸುತ್ತದೆ. ಯಾವುದೇ ಒಂದು ಸಂಸ್ಥೆಯು ಆರಂಭಿಕ ಹಾಗೂ ರೂಪುಗೊಳ್ಳುವ ಹಂತದಲ್ಲಿರುವಾಗ ದೊರೆಯುವ ಬಂಡವಾಳವು ಕೇವಲ ಒಂದು ಕಟ್ಟಡ ಅಥವಾ ಬಜೆಟ್ ಅನ್ನು ಮಾತ್ರ ರೂಪಿಸುವುದಿಲ್ಲ; ಬದಲಿಗೆ ಆ ಸಂಸ್ಥೆಯ ಚಾರಿತ್ರ್ಯ ಮತ್ತು ಮಹತ್ವಾಕಾಂಕ್ಷೆಯನ್ನೇ ಸೃಷ್ಟಿಸುತ್ತದೆ. ಅಂತಹ ಶಾಶ್ವತ ಮೌಲ್ಯವುಳ್ಳ ಸಂಸ್ಥೆಗಳನ್ನು ಕಟ್ಟುವುದು ನಮ್ಮ ಉದ್ದೇಶವಾಗಿದೆ’ ಎಂದರು.ಟಾಟಾ ಟ್ರಸ್ಟ್ಸ್‌ನ ಈ ಮಹತ್ವದ ಕೊಡುಗೆಯನ್ನು ಸ್ವಾಗತಿಸಿದ ಐಐಎಂ ಬೆಂಗಳೂರಿನ ಆಡಳಿತ ಮಂಡಳಿ (ಬೋರ್ಡ್ ಆಫ್ ಗವರ್ನರ್ಸ್) ಅಧ್ಯಕ್ಷ ಡಾ. ದೇವಿ ಶೆಟ್ಟಿ ಅವರು, ‘ಟಾಟಾ ಟ್ರಸ್ಟ್ಸ್ ನೀಡಿರುವಂತಹ ಅಭೂತಪೂರ್ವ ಆರ್ಥಿಕ ನೆರವು, ಐಐಎಂ ಬೆಂಗಳೂರಿನಂತಹ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳನ್ನು ಜಾಗತಿಕ ನಾಯಕತ್ವದ ಹಾದಿಯಲ್ಲಿ ದೃಢವಾಗಿ ಮುನ್ನಡೆಸಲು ಅತ್ಯಗತ್ಯವಾಗಿವೆ’ ಎಂದು ಹೇಳಿದರು.ಈ ಜಂಟಿ ಸಹಭಾಗಿತ್ವದ ಕುರಿತು ಮಾತನಾಡಿದ ಟಾಟಾ ಟ್ರಸ್ಟ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಿದ್ದಾರ್ಥ್ ಶರ್ಮಾ ಅವರು, ‘ಟಾಟಾ ಟ್ರಸ್ಟ್ಸ್‌ನಲ್ಲಿ ನಾವು ಯಾವಾಗಲೂ ಮಹತ್ವಾಕಾಂಕ್ಷಿ ದೃಷ್ಟಿಕೋನ ಹಾಗೂ ವಾಸ್ತವಿಕ ಸವಾಲುಗಳಿಗೆ ಪರಿಹಾರ ನೀಡುವಂತಹ ಯೋಜನೆಗಳನ್ನು ಪ್ರೋತ್ಸಾಹಿಸಲು ಬಯಸುತ್ತೇವೆ’ ಎಂದು ಅಭಿಪ್ರಾಯಪಟ್ಟರು.ನೂತನ ಪಠ್ಯಕ್ರಮದ ವಿನ್ಯಾಸದ ಕುರಿತು ವಿವರಿಸಿದ ಐಐಎಂ ಬೆಂಗಳೂರಿನ ಪ್ರಭಾರ ನಿರ್ದೇಶಕ ಪ್ರೊ. ಯು. ದಿನೇಶ್ ಕುಮಾರ್ ಅವರು, ‘ನಾವು ರೂಪಿಸಿರುವ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಕೇವಲ ತಾಂತ್ರಿಕ ನೈಪುಣ್ಯತೆಯನ್ನು ನೀಡುವುದಷ್ಟೇ ಅಲ್ಲದೆ, ಯುವ ಮನಸ್ಸುಗಳು ಸೂಕ್ತ ಪ್ರಶ್ನೆಗಳನ್ನು ಕೇಳುವಂತೆ, ಸಂಕೀರ್ಣತೆಗಳನ್ನು ಅರ್ಥೈಸಿಕೊಳ್ಳುವಂತೆ ಮತ್ತು ಪುರಾವೆಗಳ ಆಧಾರದ ಮೇಲೆ ಮುನ್ನಡೆಯುವಂತೆ ಸಜ್ಜುಗೊಳಿಸುತ್ತವೆ’ ಎಂದರು.

PREV

Recommended Stories

ತೆರಿಗೆ ಮುಕ್ತ ಆದಾಯ ಗಳಿಸುವ 5 ದಾರಿಗಳು
ಇನ್ನು ಮನುಷ್ಯರ ಸಂಖ್ಯೆಯಷ್ಟೇ ಎಐ ನೌಕರರ ನೇಮಕ