- ಟಿ.ಎನ್. ಸೀತಾರಾಮ್
ನಾನು ಓದಿದ ಭೈರಪ್ಪನವರ ಮೊದಲ ಕಾದಂಬರಿ ‘ನಾಯಿ ನೆರಳು’. ಅಮ್ಮ ಅದನ್ನೋದಿ ನನಗೆ ಓದಲು ಕೊಟ್ಟಿದ್ದರು. ವಿಚಿತ್ರ ಪುನರ್ಜನ್ಮದ ಕಥೆಯಾದರೂ ಬಹಳ ಆಕರ್ಷಕವಾಗಿತ್ತು. ಆ ಬಳಿಕ ‘ಗೃಹಭಂಗ’ ಕಾದಂಬರಿ ಓದಿದೆ. ನನ್ನ ಬಾಲ್ಯದ ದಿನಗಳು ಕಣ್ಣೆದುರು ಬಂದ ಹಾಗಾಗಿತ್ತು. ದೊಡ್ಡಬಳ್ಳಾಪುರದ ತಳವಾರ ಅನ್ನುವ ನನ್ನೂರು, ಚೆನ್ನರಾಯ ಪಟ್ಟಣ ಸಮೀಪದ ಭೈರಪ್ಪ ಅವರ ಸಂತೇಶಿವರ ಒಂದೇ ಥರದ ಹಳ್ಳಿಗಳಿರಬೇಕು, ಅವರ ಕಾದಂಬರಿಯಲ್ಲಿ ಬರುತ್ತಿದ್ದ ಅಮ್ಮ, ನಮ್ಮ ತಾಯಿ ಒಂದೇ ರೀತಿ ಇದ್ದರು. ನಮ್ಮ ಜನಜೀವನದಲ್ಲಿ ಸಾಮ್ಯತೆ ಇತ್ತು. ಅವರ ಊರಿನಲ್ಲಿ ನಡೆದಂಥಾ ಘಟನೆಗಳು ನಮ್ಮೂರಲ್ಲೂ ನಡೆದಿದ್ದವು. ಹೀಗಾಗಿ ಈ ಕಾದಂಬರಿ ಹೆಚ್ಚು ಹತ್ತಿರ ಅನಿಸಿ ತುಂಬ ಸಲ ಓದಿದ್ದೇನೆ. ಅವರು ಕಾದಂಬರಿ ಶುರು ಮಾಡುತ್ತಿದ್ದ ರೀತಿಯೇ ಬಹಳ ಅನನ್ಯವಾದದ್ದು.
‘ಪರ್ವ’ ಕಾದಂಬರಿಯಲ್ಲಿ ಪೌರಾಣಿಕ ಪಾತ್ರಗಳನ್ನು ಸಹಜವಾದ ಮನುಷ್ಯರ ರೀತಿ ಓದುಗರಿಗೆ ಕಾಣಿಸಿದರು. ನಾನು ಅವರ ‘ಮತದಾನ’ ಕಾದಂಬರಿಯನ್ನು ಸಿನಿಮಾ ಮಾಡಲು ಹೊರಟ ಸನ್ನಿವೇಶ ನನಗೆ ನೆನಪಿದೆ. ಆಗತಾನೆ ಮಾಯಾಮೃಗ ಮುಗಿದಿತ್ತು. ಗೌರಿ ಬಿದನೂರಲ್ಲಿ ಎಲೆಕ್ಷನ್‌ಗೆ ನಿಂತು ಸೋತಿದ್ದೆ. ಆಗ ಆಪ್ತರು ಸಿನಿಮಾ ಮಾಡೋಣ ಅಂದಿದ್ದರು. ನಾನು ಭೈರಪ್ಪನವರ ‘ಮತದಾನ’ ಕಾದಂಬರಿ ಹಿಡಿದು ಕೂತಿದ್ದೆ. ಅದರಲ್ಲಿ ಎಲೆಕ್ಷನ್‌ಗೆ ನಿಂತು ಸೋತ ಡಾ. ಶಿವಪ್ಪ ಎಂಬವರ ಕಥೆ ಇದೆ. ಅದು ನನ್ನದೇ ಕತೆ ಥರ ಅನಿಸಿತು. ನನ್ನ ಮನಸ್ಸಲ್ಲಿ ಯಾಕೆ ಸೋತೆ, ಜನ ಹೇಗೆ ಪ್ರತಿಕ್ರಿಯೆ ನೀಡಿದರು ಅನ್ನೋದೆಲ್ಲ ಹಸಿಹಸಿಯಾಗಿತ್ತು. ಆ ಹೊತ್ತಿಗೆ ಮನಸ್ಸಿಗೆ ಹತ್ತಿರವಾದ ಆ ಕಾದಂಬರಿಯನ್ನೇ ಸಿನಿಮಾ ಮಾಡಲು ಮುಂದಾದೆ.
ಹಾ ಮಾ ನಾಯಕರು ಭೈರಪ್ಪ ಅವರಿಗೆ ಹತ್ತಿರದ ಸ್ನೇಹಿತರು. ಅವರೇ ಭೈರಪ್ಪನವರ ಬಳಿ, ‘ಇವರಿಗೆ ಕಾದಂಬರಿ ರೈಟ್ಸ್ ಕೊಡಿ, ಒಳ್ಳೆ ಸಿನಿಮಾ ಮಾಡ್ತಾರೆ’ ಅಂದಿದ್ದರು. ಭೈರಪ್ಪನವರ ಭೇಟಿಗೆ ಹೋದಾಗ ‘ನೀವೇನು ಮಾಡಿದ್ದೀರಿ?’ ಅಂತ ಕೇಳಿದ್ದರು. ‘ಮಾಯಾಮೃಗ’ ಅಂದೆ. ‘ಓಹ್ ಹೌದಲ್ವಾ..’ ಅಂತ ಹೇಳಿ ಹಾ.ಮಾ. ನಾಯಕರು ನನ್ನ ಬಗ್ಗೆ ಹೇಳಿದ್ದನ್ನು ನೆನಪಿಸಿಕೊಂಡು ಕಾದಂಬರಿಯನ್ನು ಸಿನಿಮಾ ಮಾಡಲು ಒಪ್ಪಿಗೆ ನೀಡಿದರು. ಅದರ ಕಾಲಘಟ್ಟವನ್ನು ಬದಲಾಯಿಸುವುದಾಗಿ ಹೇಳಿದ್ದೆ. ಅವರ ಕಾದಂಬರಿ 1952ರಲ್ಲಿ ನಡೆಯುತ್ತದೆ. ನಾನು 1971ರ ಕಾಲಘಟ್ಟಕ್ಕೆ ತಂದಿದ್ದೆ. ನಾನು ನೋಡಿದ ಕಾಲವೇ ಇರಲಿ ಅನ್ನೋದರ ಜೊತೆಗೆ ಐವತ್ತರ ದಶಕವನ್ನು ಮರು ರೂಪಿಸುವುದು ಕಷ್ಟ ಅನ್ನುವುದೂ ಇತ್ತು. ಕಥೆ ಈ ಕಾಲಘಟ್ಟಕ್ಕೂ ಒಗ್ಗುತ್ತಿತ್ತು.
ಅಶೋಕ ಹೊಟೇಲಿನಲ್ಲಿ ನಡೆದ ಸಿನಿಮಾ ಲಾಂಚ್ ಕಾರ್ಯಕ್ರಮಕ್ಕೆ ಭೈರಪ್ಪ ಅವರು ಬಂದಿದ್ದರು. ಮೈಸೂರಿಗೆ ಹೋಗಿ ಮತ್ತೆ ಸಿನಿಮಾ ನೋಡಿ ‘ಸಿನಿಮಾ ಚೆನ್ನಾಗಿ ಮಾಡಿದ್ದೀರಿ, ಜೊತೆಗೆ ಬದಲಾವಣೆಯನ್ನೂ ಮಾಡಿದ್ದೀರಿ. ಅದೇನು ಪರ್ವಾಗಿಲ್ಲ’ ಎಂದು ಆ ಬಗ್ಗೆ ಸ್ವಲ್ಪ ಹೊತ್ತು ಮಾತನಾಡಿದ್ದರು. ಇದು ಬಿಟ್ಟರೆ ಅವರು ಮೈಸೂರಿನಲ್ಲಿದ್ದ ಕಾರಣಕ್ಕೋ ಏನೋ ಹೆಚ್ಚಿನ ಒಡನಾಟ ಇರಲಿಲ್ಲ.
ಉಳಿದಂತೆ ಅವರದ್ದು ವಿಶಿಷ್ಠ ವ್ಯಕ್ತಿತ್ವ. ಬದುಕಿನ ಕಟುತನಗಳನ್ನು ಹೇಳ್ತೀನಿ ಅನ್ನುತ್ತಿದ್ದರು. ಕಾದಂಬರಿಯಲ್ಲಿ ಕನ್ನಡಿಗರಿಗೆ ಹೊಸ ಲೋಕ ಕಟ್ಟಿ ಕೊಟ್ಟವರು. ದೊಡ್ಡ ಓದುಗ ಬಳಗ ಹೊಂದಿದ ಅಸಾಮಾನ್ಯ ಸಾಹಿತಿ.