;Resize=(412,232))
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಭಾರತೀಯ ಜಿರಳೆ ಪಕ್ಷದ ಹೋರಾಟದ ವೇಳೆ ಪೊಲೀಸರು ಬಂದೂಕಿನಿಂದ ಪೆಲೆಟ್ ಗುಂಡು ಹಾರಿಸಿದ ಆರೋಪ ಕೇಳಿಬಂದಿದೆ. ಪೆಲೆಟ್ ಗುಂಡು ತಾಗಿ ಕಣ್ಣಿಗೆ ಹಾನಿ ಆಗಿದೆ ಎಂದು ಮೂವರು ವ್ಯಕ್ತಿಗಳು ಸುಪ್ರೀಂ ಕೋರ್ಟ್‌ನ ಕದ ತಟ್ಟಿದ್ದಾರೆ. ವಿಚಾರಣೆ ವೇಳೆ ನ್ಯಾಯಪೀಠವು ಹಾನಿಕಾರಕ ಪರಿಸ್ಥಿತಿಯ ವೇಳೆ ಪೊಲೀಸರು ಗುಂಡು ಹಾರಿಸಲು ಅನುಮತಿ ಇದೆ. ಆದರೆ ನೀವು ಕೇವಲ ಪೆಲೆಟ್ ಗುಂಡು ಬಳಕೆ ನಿಷೇಧಿಸುವಂತೆ ಕೇಳುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಹಾಗಾದರೆ ಏನಿದು ಪೆಲೆಟ್, ಇಲ್ಲಿದೆ ಮಾಹಿತಿ.
ಸರ್ಕಾರಗಳು ಮೊದಲು ಕಾನೂನು ಸುವ್ಯವಸ್ಥೆ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತವೆ. ದೇಶ ಅಥವಾ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದ್ದರೆ ಉಳಿದ ಸಂಗತಿಗಳ ಬಗ್ಗೆ ಗಮನ ಹರಿಸುವುದು ಸುಲಭ ಎನ್ನುವುದು ಸರ್ಕಾರದ ಆಲೋಚನೆ. ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ಬೇಡಿಕೆಗೆ ಸರ್ಕಾರಗಳು ಸ್ಪಂದಿಸದೇ ಇದ್ದಾಗ ಪ್ರತಿಭಟನೆ, ಹರತಾಳ, ಧರಣಿಯ ಹಾದಿ ಹಿಡಿಯುತ್ತವೆ. ಶಾಂತಿಯುತ ಪ್ರತಿಭಟನೆಗೆ ಭಾರತ ದೇಶದಲ್ಲಿ ಅವಕಾಶವಿದೆ. ಆದರೆ ಒಮ್ಮೊಮ್ಮೆ ಪ್ರತಿಭಟನೆಗೆ ಕರೆ ನೀಡಿದ ಸಂಘಗಳ ಮುಖಂಡರ ನಿಯಂತ್ರಣ ತಪ್ಪಿ ಕಾರ್ಯಕರ್ತರು ಅಥವಾ ಅಭಿಮಾನಿಗಳು ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿ, ಜೀವ ಹಾನಿಗೆ ಮುಂದಾಗುವ ಸಾಧ್ಯತೆಗಳು ಇರುತ್ತವೆ. ಇಂತಹ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹೆಣಗಾಡಬೇಕಾಗುತ್ತದೆ. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗದಿದ್ದಾಗ ಗುಂಡು ಹಾರಿಸಲು ಪೊಲೀಸರಿಗೆ ವಿವೇಚನಾ ಅಧಿಕಾರ ಇರುತ್ತದೆ. ಈ ವೇಳೆ ಪೊಲೀಸರು ಹಾರಿಸುವ ಗುಂಡು ಪ್ರತಿಭಟನಾನಿರತರಿಗೆ ಬಿದ್ದು ಸಾಯುವ ಸ್ಥಿತಿ ಬರಬಹುದು. ಸಾವನ್ನು ತಡೆಯುವ ಉದ್ದೇಶದಿಂದ ಭಾರತ ಸರ್ಕಾರವು ಪೆಲೆಟ್ ಗುಂಡುಗಳನ್ನು ಹಾರಿಸುವ ವ್ಯವಸ್ಥೆ ಜಾರಿಗೆ ತಂದಿತು.
ಪೆಲೆಟ್ ಎನ್ನುವುದು ಮೆಟಲ್, ಗಟ್ಟಿ ರಬ್ಬರ್ ಅಥವಾ ಪ್ಲಾಸ್ಟಿಕ್‌ನಿಂದ ಮಾಡಿದ ಗುಂಡು. ಒಂದೇ ಗುಂಡು ಅಥವಾ ಗುಂಡುಗಳ ಗೊಂಚಲನ್ನು ಒಳಗೊಂಡಿರುತ್ತದೆ. ಒಂದು ಕಾಡತೂಸುವಿನಲ್ಲಿ (ಬುಲೆಟ್) 12ರಿಂದ 100 ಗುಂಡುಗಳ ಬಂಚ್ (ಗೊಂಚಲು) ಇರುತ್ತವೆ. ಒಂದೇ ಪೆಲಟ್ ಗುಂಡನ್ನು ಏರ್‌ಗನ್‌ಗಳಲ್ಲಿ ಬಳಸಿ ಹಾರಿಸಬಹುದು. ಈ ಗುಂಡುಗಳನ್ನು ಮಾಮೂಲಿ ಗುಂಡು ಹಾರಿಸಿದಂತೆ ಹಾರಿಸಬಹುದು. ಆದರೆ ಮಾಮೂಲಿ ಗುಂಡುಗಳಂತೆ ತುಂಬಾ ದೂರ ಹಾರುವುದಿಲ್ಲ. ನಿರ್ದಿಷ್ಟ ದೂರದವರೆಗೆ ಹಾರುತ್ತವೆ. ಬಂಚ್ ಇರುವ ಪೆಲೆಟ್ ಬುಲೆಟ್ ಮಾಮೂಲಿ ಗುಂಡಿನಂತೆ ಒಂದೇ ಗುರಿಯತ್ತ ಹೋಗುವುದಿಲ್ಲ, ಬದಲಿಗೆ ಟ್ರಿಗರ್ ಎಳೆದಾಕ್ಷಣ ಗುಂಡುಗಳು ಚದುರತ್ತವೆ. ಹಾಗಾಗಿ ಒಮ್ಮೆಲೇ ಪೆಲೆಟ್‌ಗಳು ಚದರುವುದರಿಂದ ಅದರ ವ್ಯಾಪ್ತಿಗೆ ಸಿಕ್ಕವರಿಗೆ ತಾಗುತ್ತವೆ. ಪೆಲೆಟ್‌ಗಳನ್ನು ಸಾಮಾನ್ಯ ಬಂದೂಕು ಅಥವಾ ಪೆಲೆಟ್ ಗನ್ ಅಥವಾ ಏರ್‌ಗನ್‌ನಿಂದ ಹಾರಿಸಬಹುದು.
ಪೆಲೆಟ್ ಬಳಕೆಗೆ ಇರುವ ನಿಯಮಗಳು
ಪೆಲೆಟ್ ಗುಂಡುಗಳನ್ನು ಬಳಸಲು ನಿಯಮವಿದೆ. ಪೊಲೀಸರು ಅಥವಾ ರಕ್ಷಣಾ ಪಡೆಗಳು ಉದ್ರಿಕ್ತರ ಮೇಲೆ ಮನಸ್ಸೋ ಇಚ್ಛೆ ಪೆಲೆಟ್ ಗುಂಡುಗಳನ್ನು ಹಾರಿಸಲು ಅವಕಾಶ ಇರುವುದಿಲ್ಲ. ಸರ್ಕಾರದ ನಿಯಮಗಳನ್ನು ಅನುಸರಿಸಬೇಕು. ಪ್ರತಿಭಟನಾ ನಿರತರು, ಧರಣಿ ನಡೆಸುವವರು ಪೊಲೀಸರಿಂದ ಅನುಮತಿ ಪಡೆಯಬೇಕು. ಪೊಲೀಸರು ನಿಗದಿ ಪಡಿಸಿದ ಸ್ಥಳದಲ್ಲಿ ಕಾನೂನಿನ ಉಲ್ಲಂಘನೆ ಆಗದಂತೆ ನೋಡಿಕೊಂಡು ಪ್ರತಿಭಟಿಸಲು ಅವಕಾಶ ಇರುತ್ತೆ. ಆದರೆ ಕೆಲವೊಮ್ಮೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುವುದುಂಟು. ಇಂತಹ ವೇಳೆ ಉದ್ರಿಕ್ತರು ಕಾನೂನನ್ನು ಕೈಗೆತ್ತಿಕೊಳ್ಳದಂತೆ ತಡೆಯಲು ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿರುತ್ತಾರೆ. ಆದರೆ ಕಾನೂನು ಸುವ್ಯವಸ್ಥೆ ಕೈಮೀರುತ್ತಿರುವುದು ಗಮನಕ್ಕೆ ಬಂದಾಕ್ಷಣ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಾರೆ. ಒಂದು ವೇಳೆ ಅಲ್ಲಿಯೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಅಶ್ರುವಾಯು, ಜಲ ಫಿರಂಗಿಗಳ ಬಳಕೆ ಮಾಡುತ್ತಾರೆ. ಆಗಲೂ ಪರಿಸ್ಥಿತಿ ಹತೋಟಿಗೆ ಬಾರದಿದ್ದಾಗ ಪೊಲೀಸರು ಈ ಹಿಂದೆ ಗನ್‌ಗಳನ್ನು ಬಳಸಿ ಗುಂಡು ಹಾರಿಸುತ್ತಿದ್ದರು. ಆದರೆ ತನ್ನದೇ ನಾಗರಿಕರ ಹತ್ಯೆ ಆಗುವುದನ್ನು ತಪ್ಪಿಸಲು, ಕೇವಲ ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ತರಲು ಹೆಚ್ಚು ಹಾನಿ ಆಗದ ಪೆಲೆಟ್ ಗುಂಡುಗಳನ್ನು ಹಾರಿಸಲು ಸರ್ಕಾರ ನಿರ್ಧರಿಸಿತು. ಪೆಲೆಟ್ ಹಾರಿಸಲು ನಿಯಮವಿದ್ದು, 500 ಮೀಟರ್ ದೂರದಿಂದ ಪೆಲೆಟ್ ಹಾರಿಸಬೇಕು ಎಂದು ಸರ್ಕಾರ ಸೂಚಿಸಿದೆ. ಅಲ್ಲದೆ ಕಾಲಿಗೆ ಪೆಲೆಟ್ ತಗಲುವಂತೆ ಫೈರ್ ಮಾಡಬೇಕು ಎಂಬ ನಿರ್ದೇಶನವಿದೆ.
ಪೆಲೆಟ್ ಗುಂಡೇಟಿನಿಂದ ಶಾಶ್ವತ ಅಂಗವಿಕಲ ಆಗುತ್ತಾರಾ?
ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷದವರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಟ ನಡೆಸಿದರು. ಜೂ.20ರಂದು ಪ್ರತಿಭಟನಾ ನಿರತರು ಸಂಸತ್ ಭವನದತ್ತ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಬೀಸಿದರು, ಅಶ್ರುವಾಯು ಸಿಡಿಸಿದರು. ಆದರೆ ಉದ್ರಿಕ್ತರು ದೊಡ್ಡ ಸಂಖ್ಯೆಯಲ್ಲಿ ಇದ್ದ ಕಾರಣ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಅನಿವಾರ್ಯವಾಗಿ ಪೊಲೀಸರು ಪೆಲೆಟ್ ಗುಂಡು ಹಾರಿಸಿದ್ದಾರೆ. ಇದರಿಂದ ಕಾಕ್ರೋಚ್ ಪಕ್ಷದ ಸಹಿಲ್ ಮತ್ತು ಜೌಟ್‌ಲುಕ್ ಇಂಡಿಯಾ ಪತ್ರಿಕೆಯ ವರದಿಗಾರ ಗಾಯಗೊಂಡಿದ್ದಾರೆ. ಅವರ ಕಣ್ಣುಗಳಿಗೆ ಹಾನಿ ಆಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಪೆಲೆಟ್ ಗುಂಡು ಮನುಷ್ಯರ ಯಾವ ಭಾಗಕ್ಕೆ ತಗುಲಿದೆ ಎನ್ನುವುದು ಮುಖ್ಯವಾಗುತ್ತದೆ. ತುಂಬಾ ಹತ್ತಿರದಿಂದ ಪೆಲೆಟ್ ಮನುಷ್ಯರಿಗೆ ತಗುಲಿದರೆ ಗಂಭೀರ ಗಾಯಗಳಾಗುತ್ತವೆ. ಮುಖ, ಕಣ್ಣು, ಚರ್ಮಕ್ಕೆ ಹಾನಿ ಆಗುತ್ತದೆ. ಮೂಳೆಯೂ ಮುರಿಯುತ್ತದೆ. ಶಾಶ್ವತ ಅಂಗವಿಕಲ, ಪಾರ್ಶ್ವವಾಯು ಪೀಡಿತರೂ ಆಗಬಹುದು.
ಮೊದಲು ಬಳಕೆ ಆಗಿದ್ದು ಜಮ್ಮುಕಾಶ್ಮೀರದಲ್ಲಿ
ಭಾರತದಲ್ಲಿ ಮೊದಲು ಜಮ್ಮು ಕಾಶ್ಮೀರದಲ್ಲಿ 2009-2010ರಲ್ಲಿ ಪೆಲೆಟ್ ಬಳಕೆ ಆಯಿತು. ಪ್ರತಿಭಟನಾಕಾರರು ನಿರಂತರವಾಗಿ ಕಾನೂನನ್ನು ಉಲ್ಲಂಘಿಸುತ್ತಿದ್ದರು. ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುತ್ತಿದ್ದರು. ಭದ್ರತಾ ಪಡೆಗಳ ಮೇಲೆ ಕಲ್ಲು, ಕಾರದ ಪುಡಿ ಎಸೆಯುತ್ತಿದ್ದರು. ಇದರಿಂದ ಭದ್ರತಾ ಪಡೆಗಳಿಗೆ ಅವರನ್ನು ನಿಯಂತ್ರಿಸುವುದು ದೊಡ್ಡ ಸವಾಲಾಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಬಳಸಿದ ಎಲ್ಲಾ ವಿಧಾನಗಳೂ ವಿಫಲವಾದವು. ಆಗ ಡಿಆರ್‌ಡಿಒ ಪೆಲೆಟ್ ಗನ್‌ಗಳನ್ನು ಅಭಿವೃದ್ಧಿ ಪಡಿಸಿತು. ಸಾಮಾನ್ಯವಾಗಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ (ಆರ್‌ಎಫ್) ಪೆಲೆಟ್ ಗನ್‌ಗಳನ್ನು ಬಳಕೆ ಮಾಡುತ್ತಿದ್ದರು. ಇದನ್ನೇ ಜಮ್ಮು ಕಾಶ್ಮೀರದ ಪೊಲೀಸರು ಮತ್ತು ಸಿಆರ್‌ಪಿಎಫ್ ಯೋಧರು ಕಲ್ಲು ತೂರಾಟ ನಡೆಸುತ್ತಿದ್ದವರನ್ನು ನಿಯಂತ್ರಿಸಲು ಬಳಸಿದರು.
ಪೆಲೆಟ್‌ಗೆ ಪರ್ಯಾಯಗಳೇನು?
ಪೆಲೆಟ್‌ಗೆ ಪರ್ಯಾಯವಾಗಿ ಜೆಲ್ ಬ್ಲಾಸ್ಟರ್ಸ್, ಏರ್‌ಸಾಫ್ಟ್ ಗನ್, ಬುಲೆಟ್ ಬಾಲ್ (ಬಿಬಿ) ಗನ್, ಪೇಪರ್ ಬಾಲ್ ಲಾಂಚರ್, ಚಿಲ್ಲಿ (ಕಾರದ ಪುಡಿ) ಗ್ರೆನೇಡ್‌ಗಳನ್ನು ಬಳಸಬಹುದು. ಆದರೂ ಬಳಕೆಯ ಉದ್ದೇಶ ಮುಖ್ಯವಾಗುತ್ತದೆ. ಜೆಲ್ ಬ್ಲಾಸ್ಟರ್ಸ್‌ಗಳು ಎಲೆಕ್ಟ್ರಿಕ್ ಪವರ್‌ನಿಂದ ಕೂಡಿದ್ದು, ಸುರಕ್ಷಿತ, ಕಡಿಮೆ ಪರಿಣಾಮ ಬೀರುತ್ತವೆ. ಇವುಗಳ ನಿರ್ಮಾಣಕ್ಕೆ ಹೆಚ್ಚು ವೆಚ್ಚ ಆಗುವುದಿಲ್ಲ. ಇನ್ನು ಏರ್‌ಸಾಫ್ಟ್ ಬುಲೆಟ್‌ಗಳು ಕಡಿಮೆ ವೇಗದಿಂದ ಚಲಿಸುತ್ತವೆ. ಕಡಿಮೆ ಹಾನಿ ಮಾಡುತ್ತವೆ. ಬಿಬಿ ಗನ್ ಎಂದರೆ ಏರ್‌ಗನ್ ಇವು ಹತ್ತಿರದ ವಸ್ತುಗಳನ್ನು ಟಾರ್ಗೆ ಮಾಡಲು ಬಳಸಲಾಗುತ್ತದೆ. ಪೇಪರ್ ಬಾಲ್, ಚಿಲ್ಲಿ ಗ್ರೆನೇಡ್‌ಗಳನ್ನು ಉದ್ರಿಕ್ತರ ಮೇಲೆ ಬಳಸಬಹುದು. ಆದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎನ್ನುವುದರ ಮೇಲೆ ಇವುಗಳ ಬಳಕೆ ನಿರ್ಧಾರ ಆಗುತ್ತದೆ.