ಸಲ್ಫರಿನೋ ಯುದ್ಧದಿಂದಾಗಿ ಹುಟ್ಟಿದ ರೆಡ್‌ಕ್ರಾಸ್‌!

Published : May 08, 2026, 12:36 PM IST
Red cross

ಸಾರಾಂಶ

 ಸ್ವಿಜರ್ಲೇಂಡ್ ದೇಶದ ವ್ಯಾಪಾರಿ ಹೆನ್ರಿ ಡ್ಯೂನಾಂಟ್ ಯುದ್ಧರಂಗದ ಬಳಿ ಹಾದು ಹೋಗುತ್ತಿದ್ದಾಗ ಈ ಭಯಾನಕ ರಣರಂಗದ ರಕ್ತದೋಕುಳಿ, ನೋವು, ಕಿರುಚಾಟ ಕಂಡು ಮಮ್ಮಲ ಮರುಗಿದನು. 1863ರಲ್ಲಿ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟುಹಾಕಿದರು

 -ಡಾ. ಮುರಲಿ ಮೋಹನ್ ಚೂಂತಾರು,

 ಭಾರತ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು

ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಂಗಳೂರು.

 ಜಗತ್ತಿನಾದ್ಯಂತ ಮೇ 8 ರಂದು ‘ವಿಶ್ವ ರೆಡ್ ಕ್ರಾಸ್ ದಿನ’ ಎಂದು ಆಚರಿಸಲಾಗುತ್ತದೆ. ‘ಮಾನವೀಯತೆಯಿಂದ ಶಾಂತಿಯ ಕಡೆಗೆ’ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುವ ವಿಶ್ವ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟು ಹಾಕಿದ ಮಹಾನ್ ವ್ಯಕ್ತಿ ಹೆನ್ರಿ ಡ್ಯೂನಾಂಟ್, ಇವರು ಹುಟ್ಟಿದ ದಿನ ಮೇ 8. 1859ರ ಜೂನ್ 24ರಂದು ‘ಸಲ್ಫರಿನೋ’ ಕದನದ ಗಾಯಳುಗಳ ಮನ ಕಲುಕುವ ದೃಶ್ಯವನ್ನು ಕಂಡ ಹೆನ್ರಿ ಡ್ಯೂನಾಂಟ್ ಜನರಿಂದ ಜನರಿಗೆ ನೆರವು ಎಂಬ ಕಲ್ಪನೆಯೊಂದಿಗೆ 1863ರಲ್ಲಿ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟುಹಾಕಿದರು. ಭಾರತದಲ್ಲಿ ಕೂಡಾ 1920ರಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಉದಯವಾಯಿತು ಮತ್ತು ಕರ್ನಾಟಕದಲ್ಲಿ 1921ರಲ್ಲಿ ರೆಡ್ ಕ್ರಾಸ್ ಸಂಸ್ಥೆ ಹುಟ್ಟಿಕೊಂಡಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಅತ್ಯಂತ ವಿಶಾಲವಾದ ಹಾಗೂ ದೇಶೀಯ ಮಾನವೀಯ ಸೇವಾ ಸಂಘಟನೆಯಾಗಿದೆ. ಈ ಸಂಸ್ಥೆಯು ವಿಕೋಪಗಳಲ್ಲಿ ಪಾಲ್ಗೊಳ್ಳುವಿಕೆ, ಆರೋಗ್ಯ ಆರೈಕೆ ಸೇವೆಗಳು, ರಕ್ತ ಸಂಗ್ರಹಣ ಸೇವೆಗಳು ಮತ್ತು ಕಿರಿಯ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳು, ಇತ್ಯಾದಿ ಸೇವಾ ಕಾರ್ಯಗಳಿಗೆ ಪ್ರಸಿದ್ಧವಾಗಿದೆ.

ರೆಡ್ ಕ್ರಾಸ್ ಸಂಸ್ಥೆಯ ಉಗಮ:

ರೆಡ್ ಕ್ರಾಸ್ ಸಂಸ್ಥೆಯ ಉಗಮ ಮಾನವ ಇತಿಹಾಸದಲ್ಲಿ ಒಂದು ಕುತೂಹಲಕಾರಿ ಅಧ್ಯಾಯ. ಒಂದೆಡೆ ಫ್ರಾನ್ಸ್ ಮತ್ತು ಇಟಲಿಯ ಸಂಯುಕ್ತ ಸೈನ್ಯ, ಇನ್ನೊಂದೆಡೆ ಆಸ್ಟ್ರೀಯಾ ಸೈನ್ಯ ಆ ರಣರಂಗದಲ್ಲಿ ಇದ್ದವು. ಮೂರು ಲಕ್ಷಕ್ಕೂ ಹೆಚ್ಚಿನ ಸೈನಿಕರು ಆ ರಣರಂಗದಲ್ಲಿ ಕಾದಾಡುತ್ತಿದ್ದರು. 1859ರ ಜೂನ್ 24 ರಂದು ‘ಸಲ್ಫೆರಿನೋ’ದಲ್ಲಿ ನಡೆದ ಈ ಯುದ್ಧ 15 ಗಂಟೆ ನಡೆದಿತ್ತು. ಯುದ್ಧ ಮುಗಿದಾಗ ರಣರಂಗದ ತುಂಬಾ ಸತ್ತ ಹಾಗೂ ಗಾಯಗೊಂಡ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸೈನಿಕರು ನೋವಿನಿಂದ ಚೀರಾಡುತ್ತಿದ್ದರೂ, ಸಹಾಯ ಹಸ್ತ ನೀಡಲು ಕೈಗಳೇ ಇರಲಿಲ್ಲ. ಸ್ವಿಜರ್ಲೇಂಡ್ ದೇಶದ ವ್ಯಾಪಾರಿ ಹೆನ್ರಿ ಡ್ಯೂನಾಂಟ್ ಯುದ್ಧರಂಗದ ಬಳಿ ಹಾದು ಹೋಗುತ್ತಿದ್ದಾಗ ಈ ಭಯಾನಕ ರಣರಂಗದ ರಕ್ತದೋಕುಳಿ, ನೋವು, ಕಿರುಚಾಟ ಕಂಡು ಮಮ್ಮಲ ಮರುಗಿದನು. ಸೂರ್ಯ ಮುಳುಗುವ ಹೊತ್ತಲ್ಲಿ ಅಲ್ಲಿ ಬಂದಿದ್ದ ‘ಡ್ಸೂನಾಂಟ್’ ಮರುದಿನ ಸೂರ್ಯ ಉದಯಿಸುವವರೆಗೆ ಸ್ಥಳೀಯ ಗ್ರಾಮಸ್ಥರ ಸಹಕಾರ ಪಡೆದು ಗಾಯಾಳುಗಳನ್ನು ಎತ್ತಿನ ಗಾಡಿಗಳಲ್ಲಿ ಹಾಕಿಕೊಂಡು ಕ್ರಾಸ್ಟೆಗ್ಲಿಯನ್ ಪ್ರದೇಶಕ್ಕೆ ಸಾಗಿಸಿದನು. ಯುದ್ಧ ಗಾಯಾಳುಗಳನ್ನು ಖಾಸಗಿ ಮನೆಗಳಲ್ಲಿ, ಚರ್ಚ್‌ಗಳಲ್ಲಿ, ಆಶ್ರಮಗಳಲ್ಲಿ, ಮಸೀದಿಗಳಲ್ಲಿ ಸೇನಾ ಸ್ಥಳಗಳಲ್ಲಿ ಇರಿಸಿ ಉಪಚರಿಸಿದನು.

ಕಾಲಚಕ್ರ ಉರುಳುತ್ತಿತ್ತು, ಜನ ಎಲ್ಲವನ್ನೂ ಮರೆತರೂ, ಹೆನ್ರಿ ಡ್ಸೂನಾಂಟ್ ಕನಸಲ್ಲೂ ಬೆಚ್ಚಿ ಬೀಳುತ್ತಿದ್ದ. ಯುದ್ಧದ ಭೀಕರತೆ ಹೆನ್ರಿಯ ಮನದಲ್ಲಿ ಆಳವಾಗಿ ಬೇರೂತ್ತಿತ್ತು. ಹಗಲೂ ರಾತ್ರಿ ಯುದ್ಧದ ಬಗ್ಗೆಯೇ ಯೋಚಿಸುತ್ತಿದ್ದ ಆತ, ಇದಕ್ಕೊಂದು ಶಾಶ್ವತ ಪರಿಹಾರ ಪಡೆಯಲೇ ಬೇಕೆಂಬ ದೃಢ ಚಿತ್ತದಿಂದ ಕಾರ್ಯಪ್ರವತ್ತವಾದ. ಯುದ್ಧಕಾಲದಲ್ಲಿ ಮಾನವ ಜನಾಂಗ ಎದುರಿಸುವ ಭಯಂಕರ ಯಾತನೆಯನ್ನು ತಪ್ಪಿಸಲು ಹೆನ್ರಿ ಡ್ಯೂನಾಂಟ್ ತನ್ನದೇ ಆದ ಎರಡು ಅಂಶಗಳನ್ನು ಮನದಟ್ಟು ಮಾಡಿಕೊಂಡ. ಆ ನಿಟ್ಟಿನಲ್ಲಿ ಹೆನ್ರಿ ಡ್ಯೂನಾಂಟ್ ‘ದಿ ಮೆಮಾರಿ ಆಫ್‌ ಸಾಲ್ಫರಿನೋ’ ಪುಸ್ತಕವನ್ನು ಪ್ರಕಟಿಸಿ, ಅದರ ಪ್ರತಿಗಳನ್ನು ವಿಶ್ವದಾದ್ಯಂತ ಹಂಚಿದ. ಆ ಪುಸ್ತಕದಲ್ಲಿ ಯುದ್ಧ ಕಾಲದಲ್ಲಿ ಮಾನವೀಯತೆಯನ್ನು ಮೆರೆಯಲು ಎರಡು ಕಾರ್ಯಸೂಚಿಯನ್ನು ಜಾರಿಗೆ ತರಬೇಕೆಂದು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಿದ. ಆ ಎರಡು ಅಂಶಗಳು ಯಾವುದೆಂದರೆ,

ಅಂತಾರಾಷ್ಟ್ರೀಯ ಸ್ವಯಂಸೇವಕರ ಸಂಘಟನೆಯನ್ನು ಎಲ್ಲಾ ರಾಷ್ಟ್ರಗಳಲ್ಲೂ ಶಾಂತಿಕಾಲದಲ್ಲಿ ಪ್ರತಿಷ್ಠಾಪಿಸಬೇಕು. ಇದರಲ್ಲಿ ಸ್ವಯಂ ಸೇವಕ ತಂಡವು ಯುದ್ಧ ಮುಕ್ತಾಯವಾದ ಬಳಿಕ ಅಲ್ಲಿನ ಗಾಯಾಳುಗಳನ್ನು ಅವರ ಜಾತಿ, ಮತ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಗಮನಿಸದೇ ಉಪಚರಿಸಬೇಕು.

ಗಾಯಾಳು ಸೈನಿಕರನ್ನು ಉಪಚರಿಸಲು ಸಾಧ್ಯವಾಗುವಂತೆ ರಾಷ್ಟ್ರಗಳು ಗಾಯಾಳು ಸೈನಿಕರನ್ನು, ವೈದ್ಯರನ್ನು ಹಾಗೂ ಇತರ ಸಹಾಯಕರನ್ನು ತಟಸ್ಥರೆಂದು, ಯಾವ ಪಕ್ಷಕ್ಕೂ ಸೇರದವರೆಂದು ಘೋಷಿಸಿ, ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಬೇಕು.

ಈ ಅದ್ಭುತವಾದ ಪುಸ್ತಕವನ್ನು ಓದಿದ ಬಳಿಕ ಜಿನಿವಾದ ಸಮಾಜಕಲ್ಯಾಣ ಸಂಸ್ಥೆಯೊಂದು, ಹೆನ್ರಿ ಡ್ಯೂನಾಂಟ್‍ನ ಸಂಕಲ್ಪಗಳನ್ನು ಸಾಕಾರಗೊಳಿಸಲು ಸಹಾಯ ಮಾಡಲು ಮುಂದೆ ಬಂದಿತು. 5 ಮಂದಿಯ ಒಂದು ಸಮಿತಿ ಮಾಡಿ, ಹೆನ್ರಿ ಡ್ಯೂನಾಂಟ್‍ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಈ ಸಮಿತಿಯು ಒಬ್ಬ ಸೇನೆಯ ನಿವೃತ್ತ ಕಮಾಂಡರ್, ಒಬ್ಬ ವೈದ್ಯ, ಒಬ್ಬ ಸಮಾಜ ಸೇವಕ, ಒಬ್ಬ ವ್ಯಾಪಾರಿ ಹಾಗೂ ಮತ್ತೊಬ್ಬ ನಿವೃತ್ತ ಅಧ್ಯಾಪಕರನ್ನು ಒಳಗೊಂಡಿತ್ತು. ಇವರ ಶ್ರಮದ ಫಲವಾಗಿ 1863, ಅಕ್ಟೋಬರ್ 26ರಂದು ಜಿನೇವಾದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ನಡೆದು, 16 ರಾಷ್ಟ್ರಗಳ ವಿವಿಧ ಆಮಂತ್ರಿಕರು ಇದರಲ್ಲಿ ಪಾಲ್ಗೊಂಡಿದ್ದರು. ‘ಗಾಯಗೊಂಡ ಸೈನಿಕರ ಸಹಕಾರ ಸಂಸ್ಥೆ’ ಹೆಸರಿನ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲು ಈ ಸಮ್ಮೇಳನದಲ್ಲಿ ತೀರ್ಮಾನಿಸಲಾಯಿತು. ಮುಂದೆ ಇದೇ ಸಂಸ್ಥೆ ‘ರೆಡ್ ಕ್ರಾಸ್ ಸಂಸ್ಥೆ’ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು.

1901ರಲ್ಲಿ ಹೆನ್ರಿ ಡ್ಯೂನಾಂಟ್ ವಿಶ್ವದ ಅತ್ಯುನ್ನತ ಗೌರವವಾದ ‘ನೋಬೆಲ್ ಶಾಂತಿ ಪುರಸ್ಕಾರ’ ಪ್ರಪ್ರಥಮವಾಗಿ ದೊರಕಿತು. ರೆಡ್ ಕ್ರಾಸ್ ಸಂಸ್ಥೆಯ ಅಂತಾರಾಷ್ಟ್ರೀಯ ಸಮಿತಿಯು ಹೆನ್ರಿ ಡ್ಯೂನಾಂಟ್ ಬಗ್ಗೆ ಜಿನೀವಾದಿಂದಲೇ ಕಳಿಸಿದ ಸಂದೇಶ ಈ ರೀತಿಯಾಗಿತ್ತು. ‘ಇಂಥ ಘನತ್ತರವಾದ ಗೌರವಕ್ಕೆ ನಿಮ್ಮಂತೆ ಪಾತ್ರರಾದವರು ಬೇರೆ ಯಾರೋಬ್ಬರೂ ಇಲ್ಲ. 40 ವರ್ಷಗಳ ಸತತ ಪರಿಶ್ರಮದಿಂದ ಈ ಅಂತಾರಾಷ್ಟ್ರೀಯ ಸಂಘಟನೆಯನ್ನು ಯುದ್ಧರಂಗದಲ್ಲಿನ ಗಾಯಾಳುಗಳ ಪರಿಹಾರಕ್ಕಾಗಿ ನೀವು ಆರಂಭಿಸಿದಿರಿ. ನೀವಿಲ್ಲದಿದ್ದರೆ 19ನೇ ಶತಮಾನದ ಸರ್ವೋಚ್ಚ ಮಾನವೀಯ ಸಾಧನೆಯಾದ ರೆಡ್ ಕ್ರಾಸ್ ಸಂಸ್ಥೆ ಉದಯಿಸುತ್ತಿರಲಿಲ್ಲ’. ಹೆನ್ರಿ ಡ್ಯೂನಾಂಟ್ 30ನೇ ಅಕ್ಟೋಬರ್ 1910ರಂದು ಹ್ರೆಡನ್ ನಗರದಲ್ಲಿ ಮರಣ ಹೊಂದಿದ. ಹೆನ್ರಿ ಡ್ಯೂನಾಂಟ್‍ನ ಜನ್ಮದಿನವಾದ ಮೇ 8 ಅನ್ನು ಪ್ರತಿ ವರ್ಷ ‘ವಿಶ್ವ ರೆಡ್ ಕ್ರಾಸ್’ ದಿನ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.

ಹೆನ್ರಿ ಡ್ಯೂನಾಂಟ್ ತನ್ನ ಜೀವನದ ಉದ್ದೇಶವನ್ನು ತುಂಬಾ ಸರಳವಾದ 3 ಶಬ್ದಗಳಲ್ಲಿ ಬರೆದಿದ್ದಾನೆ. ‘ಜನತೆಯಿಂದ, ಜನತೆಗೆ ನೆರವು’ ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯಗಳನ್ನು ಈ ಶಬ್ದಗಳೇ ವಿವರಿಸುತ್ತದೆ.

ರೆಡ್ ಕ್ರಾಸ್ ಸಂಸ್ಥೆ ಮೂಲ ತತ್ವಗಳು

‘ಮಾನವೀಯತೆಯಿಂದ ಶಾಂತಿಯ ಕಡೆಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಣೆ ನಡೆಸುವ ರೆಡ್ ಕ್ರಾಸ್ ಸಂಸ್ಥೆಯ ಮೂಲ ಧ್ಯೇಯಗಳನ್ನು ಈ ರೀತಿ ವಿಂಗಡಿಸಲಾಗಿದೆ.

1.‘ಮಾನವೀಯತೆ: ಯುದ್ಧರಂಗದಲ್ಲಿನ ಗಾಯಾಳುಗಳಿಗೆ ತಾರತಮ್ಯವಿಲ್ಲದೇ ಸೇವೆ ಸಲ್ಲಿಸುವ ಉದ್ದೇಶದಿಂದ ರೆಡ್ ಕ್ರಾಸ್ ಸಂಸ್ಥೆ ಜನ್ಮ ತಾಳಿತು. ಮಾನವೀಯ ಸಂಕಟಗಳನ್ನು ಅಂತಾರಾಷ್ಟ್ರೀಯ ವ್ಯಾಪ್ತಿಯಲ್ಲಿ ಸಮರ್ಥವಾಗಿ ತಡೆಗಟ್ಟುವುದು ಅಥವಾ ಉಪಶಮನ ಮಾಡುವುದೇ ಅದರ ಪರಮ ಗುರಿ. ಜೀವನ ಸಂರಕ್ಷಣೆ, ಆರೋಗ್ಯ ಪಾಲನೆ ಹಾಗೂ ಮಾನವನ ಘನತೆ ಕಾಪಾಡುವುದು. ಇವುಗಳು ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯೋದ್ದೇಶಗಳು. ಅದು ಪರಸ್ಪರ ತಿಳುವಳಿಕೆ, ಸ್ನೇಹ, ಸಹಕಾರ ಹಾಗೂ ಶಾಶ್ವತ ಶಾಂತಿ ಇವುಗಳನ್ನು ಜನರಲ್ಲಿ ಅಭಿವೃದ್ಧಿ ಪಡಿಸುತ್ತದೆ.

2. ನಿಷ್ಪಕ್ಷಪಾತ: ರೆಡ್ ಕ್ರಾಸ್ ಸಂಸ್ಥೆ ವ್ಯಕ್ತಿಯ ರಾಷ್ಟ್ರೀಯತೆ, ಜನಾಂಗ, ಧಾರ್ಮಿಕ ಶ್ರದ್ಧೆ, ವರ್ಗ ಅಥವಾ ರಾಜಕೀಯ ಅಭಿಪ್ರಾಯ ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ಪಕ್ಷಪಾತ ಮಾಡುವುದಿಲ್ಲ.

3. ತಟಸ್ಥತೆ: ಎಲ್ಲರ ವಿಶ್ವಾಸವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ರೆಡ್ ಕ್ರಾಸ್ ಸಂಸ್ಥೆ ಯಾವುದೇ ದ್ವೇಷಗಳಲ್ಲಿ ಭಾಗಿಯಾಗುವುದಿಲ್ಲ ಅಥವಾ ಯಾವುದೇ ರಾಜಕೀಯ, ಜನಾಂಗೀಯ, ಧಾರ್ಮಿಕ ಮತ್ತು ಆದರ್ಶವಾದಗಳ ವಿವಾದ ಪ್ರಸಂಗಗಳಲ್ಲಿ ಪಾಲ್ಗೊಳ್ಳುವುದಿಲ್ಲ.

4. ಸ್ವಾತಂತ್ರ: ರೆಡ್ ಕ್ರಾಸ್ ಸಂಸ್ಥೆ ಅಂತಾರಾಷ್ಟ್ರೀಯ ಮತ್ತು ಸ್ವತಂತ್ರ ಸಂಘಟನೆಯಾಗಿದೆ. ಯಾವುದೇ ದೇಶದಲ್ಲಿನ ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ಆ ದೇಶದ ಸಹಾಯಕ ಮಾನವ ಸೇವೆಗಳ ಪರಿಹಾರಕಾರಕ ಸಂಘಟನೆಯಾಗಿದ್ದು, ಅದು ತನ್ನದೇ ಆದ ನೀತಿ, ನಿಯಮಗಳಿಗೆ ಒಳಪಟ್ಟ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಯಾವುದೇ ವಿಪತ್ತಿನ ಸಂದರ್ಭದಲ್ಲಿ ತಾನು ರೂಪಿಸಿದ ನೀತಿ ನಿಯಮಗಳಿಗೆ ಬದ್ಧವಾಗಿ. ಮೂಲತತ್ವಗಳಿಗೆ ಧಕ್ಕೆಯಾಗದಂತೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಮರ್ಥವಾಗಿರುತ್ತದೆ.

5.ಸ್ವಯಂ ಪ್ರೇರಣ ಸೇವೆಗಳು: ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಪ್ರೇರಿತ ಪರಿಹಾರಕಾರಕ ಸಂಘಟನೆಯಗಿದ್ದು, ಈ ಸಂಸ್ಥೆಯನ್ನು ಯಾವುದೇ ರೂಪದಲ್ಲಿಯೂ ಲಾಭಗಳಿಕೆಯ ಉದ್ದೇಶದಿಂದ ನಿರ್ಮಿಸಿರುವುದಿಲ್ಲ.

6.ಏಕತೆ: ಯಾವುದೇ ದೇಶದಲ್ಲಿ ಕೇವಲ ಒಂದೇ ಒಂದು ರಾಷ್ಟ್ರೀಯ ರೆಡ್ ಕ್ರಾಸ್ ಸಂಘಟನೆ ಇರುತ್ತದೆ. ಅದು ಎಲ್ಲರಿಗೂ ಮಕ್ತವಾಗಿರುತ್ತದೆ. ಅದು ರಾಷ್ಟ್ರವ್ಯಾಪಿ ತನ್ನ ಮಾನವೀಯ ಸೇವೆಗಳನ್ನು ನೆರವೇರಿಸುತ್ತದೆ.

7.ವಿಶ್ವವ್ಯಾಪಕತ್ವ: ರೆಡ್ ಕ್ರಾಸ್ ಸಂಸ್ಥೆ ವಿಶ್ವವ್ಯಾಪಿ ಸಂಘಟನೆಯಾಗಿದ್ದು, ಎಲ್ಲಾ ಸಂಸ್ಥೆಗಳಿಗೂ ಸಮಾನ ಸ್ಥಾನಮಾನ ಹೊಂದಿದ್ದು, ಇತರರಿಗೆ ಸಹಾಯ ಮಾಡುವಲ್ಲಿನ ಹೊಣೆಗಾರಿಕೆ ಮತ್ತು ಕರ್ತವ್ಯಗಳನ್ನು ಹಂಚಿಕೊಳ್ಳುತ್ತದೆ.

ರೆಡ್ ಕ್ರಾಸ್ ಲಾಂಛನ

ಬಿಳಿ ಹಿನ್ನೆಲೆಯಲ್ಲಿ ಕೆಂಪು ಕ್ರಾಸ್ ಹೊಂದಿದ ಲಾಂಛನ ರೆಡ್ ಕ್ರಾಸ್ ಸಂಸ್ಥೆಯ ಸಂಕೇತ ಚಿಹ್ನೆ. ಕ್ರಾಸ್‍ನ ಎಲ್ಲಾ ಬಾಹುಗಳೂ ಪರಸ್ಪರ ಸಮವಾಗಿವೆ.

ಈ ಚಿಹ್ನೆಯನ್ನು ಯುದ್ಧ ತಟಸ್ಥ ಸಂಕೇತವೆಂದು ಸಾರ್ವತ್ರಿಕವಾಗಿ ಗುರುತಿಸಲಾಗುತ್ತದೆ. ವೈದ್ಯಕೀಯ ಸೇವೆಗಾಗಿ ಬಳಸುವ ಉಪಕರಣಗಳ ಮೇಲೆ ಮತ್ತು ಧ್ವಜದ ಮೇಲೆ ಈ ಲಾಂಛನವನ್ನು ಬಳಸಬಹುದಾಗಿದೆ. ಯುದ್ಧಕಾಲದಲ್ಲಿ, ಸೇನಾ ದಂಗೆಯ ಸಮಯದಲ್ಲಿ, ಅಗತ್ಯವಿರುವ ಸೇವೆ, ಉಪಕಾರ ಮತ್ತು ತುರ್ತು ವೈದ್ಯಕೀಯ ನೆರವು ಇತ್ಯಾದಿಗಳನ್ನು ಒದಗಿಸುವಾಗ, ಈ ಸೇವಾ ಕಾರ್ಯದಲ್ಲಿ ತೊಡಗಿರುವರು. ಯುದ್ಧದಿಂದ ಹೊರತಾರವರು ಎಂಬ ಸಂಕೇತ, ಈ ಲಾಂಛನದಿಂದ ಸೂಚಿಸಲಾಗುತ್ತದೆ. ರೆಡ್ ಕ್ರಾಸ್ ಸಂಘಟನೆಯ ಚಟುವಟಿಕೆಗಳನ್ನು ಯುದ್ಧಕಾಲದ ಚಟುವಟಿಕೆ ಮತ್ತು ಶಾಂತಿ ಕಾಲದ ಚಟುವಟಿಕೆ ಎಂದು ವಿಂಗಡಿಸಲಾಗುತ್ತದೆ.

ನಾವೆಲ್ಲಾ ಸೇರಿ ದೇಶ, ಜಾತಿ ಮತ, ಜನಾಂಗ, ಕುಲ, ಗೋತ್ರ, ವರ್ಣ ಬೇಧಗಳನ್ನು ಮೆಟ್ಟಿ ನಿಂತು, ವಿಶ್ವ ಭಾತೃತ್ವದ ಮತ್ತು ವಿಶ್ವ ಶಾಂತಿಯ ಸಂದೇಶವನ್ನು ಜಗತ್ತಿಗೆ ಸಾರಿದಲ್ಲಿ, ಅದುವೇ ಆ ಮಹಾನ್ ಜೇತನಕ್ಕೆ ನೀಡುವ ಬಹುದೊಡ್ಡ ಗೌರವ ಎಂದರೂ ಅತಿಶಯೋಕ್ತಿಯಲ್ಲ.

 

PREV
Read more Articles on

Recommended Stories

ದಣಿವರಿಯದ ಅವಿಶ್ರಾಂತ ಚೇತನ ಯಡಿಯೂರಪ್ಪ
ಒಂದು ಬ್ಯಾಂಕ್‌ ಸ್ಪೆಷಲ್‌ ಊಟ: ನಕ್ಕು ನಲಿಸುವ ಹಾಸ್ಯ ಪ್ರಸಂಗಗಳು!