;Resize=(412,232))
1983ರ ಕರ್ನಾಟಕ ವಿಧಾನಸಭೆ ಚುನಾವಣೆಯು ರಾಜ್ಯ ರಾಜಕೀಯದಲ್ಲಿ ಒಂದು ನಿರ್ಣಾಯಕ ಘಟ್ಟ. ಜನತಾ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಹೆಗಡೆಯವರು ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಭಾರತೀಯ ಜನತಾ ಪಕ್ಷ, ಕಮ್ಯುನಿಸ್ಟ್ (ಬಲ-ಎಡ) ಪಕ್ಷಗಳು ಹಾಗೂ ಸ್ವತಂತ್ರ ಶಾಸಕರ ಹೊರಗಿನ ಬೆಂಬಲದೊಂದಿಗೆ ಅವರು ಸ್ಥಿರ ಸರ್ಕಾರವನ್ನು ರಚಿಸಿದರು. 1984ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಹಿನ್ನಡೆ ಅನುಭವಿಸಿದಾಗ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಸಾರ್ವಜನಿಕರಿಂದ ಹೊಸದಾಗಿ ಜನಾದೇಶವನ್ನು ಕೋರಿದರು. 1985ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷವು ಸ್ಪಷ್ಟ ಬಹುಮತ ಗಳಿಸಿತು, ಇದು ಅವರ ನಾಯಕತ್ವದ ಮೇಲಿದ್ದ ಜನರ ಅಚಲ ವಿಶ್ವಾಸವನ್ನು ಮರುಸ್ಥಾಪಿಸಿತು.
ರಾಮಕೃಷ್ಣ ಮಹಾಬಲೇಶ್ವರ ಹೆಗಡೆ
(29 ಆಗಸ್ಟ್ 1926 - 12 ಜನವರಿ 2004)
ಆರಂಭಿಕ, ಸಾರ್ವಜನಿಕ ಜೀವನದ ಪ್ರಾರಂಭ:
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 1926ರ ಆಗಸ್ಟ್ 29ರಂದು ಜನಿಸಿದ ರಾಮಕೃಷ್ಣ ಮಹಾಬಲೇಶ್ವರ ಹೆಗಡೆಯವರು ಮಹಾಬಲೇಶ್ವರ ಹೆಗಡೆ ಮತ್ತು ಸರಸ್ವತಿಯಮ್ಮ ದಂಪತಿ ಪುತ್ರ. ವಾರಣಾಸಿಯ ಕಾಶಿ ವಿದ್ಯಾಪೀಠದಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರೈಸಿದ ಇವರು, ಬಳಿಕ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ವೃತ್ತಿಯಿಂದ ವಕೀಲರಾಗಿದ್ದ ಇವರು, 1942ರ ‘ಕ್ವಿಟ್ ಇಂಡಿಯಾ’ (ಭಾರತ ಬಿಟ್ಟು ತೊಲಗಿ) ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಸಾರ್ವಜನಿಕ ಜೀವನವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿ ಪ್ರಾರಂಭಿಸಿದರು.
ರಾಜಕೀಯ ಜೀವನದ ಆರಂಭ:
1950ರ ದಶಕದಲ್ಲಿ ಇವರ ರಾಜಕೀಯ ಪ್ರಯಾಣವು ಪ್ರಗತಿ ಪಡೆಯಿತು. 1954ರಿಂದ 1957ರವರೆಗೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು, 1957ರಲ್ಲಿ ಪ್ರಥಮ ಬಾರಿಗೆ ಕರ್ನಾಟಕ ವಿಧಾನ ಸಭೆಯನ್ನು ಪ್ರವೇಶಿಸಿದರು. ತದನಂತರ, ಎಸ್.ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಅವರ ಸಚಿವ ಸಂಪುಟಗಳಲ್ಲಿ ಹಣಕಾಸು, ಕೈಗಾರಿಕೆ, ಯೋಜನೆ, ಪಂಚಾಯತ್ ರಾಜ್, ಸಹಕಾರ, ಯುವಜನ ಸೇವೆ ಮತ್ತು ಕ್ರೀಡೆ, ವಾರ್ತಾ ಮತ್ತು ಪ್ರಚಾರ, ಅಬಕಾರಿ ಹಾಗೂ ಅಭಿವೃದ್ಧಿ ಮುಂತಾದ ಪ್ರಮುಖ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದರು. ಅಲ್ಲದೆ, 1958ರಿಂದ 1962ರವರೆಗೆ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು.
ಕಾಂಗ್ರೆಸ್‌ನಿಂದ ಜನತಾ ಚಳವಳಿಯತ್ತ:
1969ರಲ್ಲಿ ಕಾಂಗ್ರೆಸ್ ಪಕ್ಷವು ಇಬ್ಭಾಗವಾದಾಗ, ಹೆಗಡೆಯವರು ತಮ್ಮ ರಾಜಕೀಯ ಮಾರ್ಗದರ್ಶಿ ಎಸ್.ನಿಜಲಿಂಗಪ್ಪ ಅವರೊಂದಿಗೆ ಸಂಸ್ಥಾ ಕಾಂಗ್ರೆಸ್ (ಕಾಂಗ್ರೆಸ್-ಒ) ಪಕ್ಷವನ್ನು ಸೇರಿದರು. ನಂತರ 1974ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. 1975-77ರ ತುರ್ತು ಪರಿಸ್ಥಿತಿಯ ಅವಧಿಯಲ್ಲಿ, ಅವರು ಇತರ ಪ್ರಮುಖ ವಿರೋಧ ಪಕ್ಷದ ನಾಯಕರೊಂದಿಗೆ ಜೈಲುವಾಸ ಅನುಭವಿಸಿದರು. ತುರ್ತು ಪರಿಸ್ಥಿತಿಯ ನಂತರ ಜನತಾ ಪಕ್ಷವನ್ನು ಸೇರಿದ ಇವರು, ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಲೇ ಜನತಾ ಪಕ್ಷದ ಕರ್ನಾಟಕ ಘಟಕದ ಪ್ರಥಮ ಪ್ರಧಾನ ಕಾರ್ಯದರ್ಶಿಯಾದರು.
ಕರ್ನಾಟಕದ ಮುಖ್ಯಮಂತ್ರಿಯಾಗಿ:
1983ರ ಕರ್ನಾಟಕ ವಿಧಾನಸಭೆ ಚುನಾವಣೆಯು ರಾಜ್ಯ ರಾಜಕೀಯದಲ್ಲಿ ಒಂದು ನಿರ್ಣಾಯಕ ಘಟ್ಟ. ಜನತಾ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಹೆಗಡೆಯವರು ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಭಾರತೀಯ ಜನತಾ ಪಕ್ಷ, ಕಮ್ಯುನಿಸ್ಟ್ (ಬಲ-ಎಡ) ಪಕ್ಷಗಳು ಹಾಗೂ ಸ್ವತಂತ್ರ ಶಾಸಕರ ಹೊರಗಿನ ಬೆಂಬಲದೊಂದಿಗೆ ಅವರು ಸ್ಥಿರ ಸರ್ಕಾರವನ್ನು ರಚಿಸಿದರು. 1984ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಹಿನ್ನಡೆ ಅನುಭವಿಸಿದಾಗ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಸಾರ್ವಜನಿಕರಿಂದ ಹೊಸದಾಗಿ ಜನಾದೇಶವನ್ನು ಕೋರಿದರು. 1985ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷವು ಸ್ಪಷ್ಟ ಬಹುಮತ ಗಳಿಸಿತು, ಇದು ಅವರ ನಾಯಕತ್ವದ ಮೇಲಿದ್ದ ಜನರ ಅಚಲ ವಿಶ್ವಾಸವನ್ನು ಮರುಸ್ಥಾಪಿಸಿತು.
ಸುಧಾರಣೆ ಮತ್ತು ವಿಕೇಂದ್ರೀಕರಣ:
ಮುಖ್ಯಮಂತ್ರಿಯಾಗಿ ಹೆಗಡೆಯವರ ಆಡಳಿತಾವಧಿಯು ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಅಭಿವೃದ್ಧಿ ಹಾಗೂ ಜನಪರ ಆಡಳಿತದ ಅವಧಿಯೆಂದು ಗುರುತಿಸಲ್ಪಟ್ಟಿದೆ. ಸಹಕಾರ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಸತ್ತಾತ್ಮಕ ವಿಕೇಂದ್ರೀಕರಣದ ಪ್ರಬಲ ಪ್ರತಿಪಾದಕರಾಗಿದ್ದ ಅವರು, ಅಧಿಕಾರವು ಕೆಳಹಂತದ ಜನರಿಗೆ ತಲುಪಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ ಎಂದು ಬಲವಾಗಿ ನಂಬಿದ್ದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಅಬ್ದುಲ್ ನಜೀರ್ ಸಾಬ್ ಅವರೊಂದಿಗೆ ನಿಕಟವಾಗಿ ಶ್ರಮಿಸಿದ ಇವರು, ಜಿಲ್ಲಾ ಪರಿಷತ್, ತಾಲೂಕು ಪಂಚಾಯತ್ ಮತ್ತು ಮಂಡಲ ಪಂಚಾಯತ್ ಎಂಬ ಕ್ರಾಂತಿಕಾರಿ ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು, ಸ್ಥಳೀಯ ಸಂಸ್ಥೆಗಳಿಗೆ ವ್ಯಾಪಕ ಹಣಕಾಸು ಮತ್ತು ಆಡಳಿತಾತ್ಮಕ ಅಧಿಕಾರಗಳನ್ನು ಹಸ್ತಾಂತರಿಸಿದರು.
ಹೊಣೆಗಾರಿಕೆ ಮತ್ತು ಸಾರ್ವಜನಿಕ ಆಡಳಿತ:
ಅವರು ಆಡಳಿತಾತ್ಮಕ ಸಂಸ್ಥೆಗಳ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೂ ಹೆಚ್ಚಿನ ಒತ್ತು ನೀಡಿದರು. 1984ರಲ್ಲಿ ಅವರ ಸರ್ಕಾರವು ‘ಕರ್ನಾಟಕ ಲೋಕಾಯುಕ್ತ’ ಸಂಸ್ಥೆಯನ್ನು ಸ್ಥಾಪಿಸಿತು ಹಾಗೂ ‘ಕನ್ನಡ ಕಾವಲು ಸಮಿತಿ’ಯಂತಹ ಉಪಕ್ರಮಗಳನ್ನು ಜಾರಿಗೆ ತಂದಿತು. ಹಣಕಾಸು ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಅವರು ಒಟ್ಟು 13 ಬಾರಿ ರಾಜ್ಯ ಆಯವ್ಯಯವನ್ನು (ಬಜೆಟ್) ಮಂಡಿಸಿದ್ದು, ಸಾರ್ವಜನಿಕ ಹಣಕಾಸು ಮತ್ತು ಆಡಳಿತದ ಮೇಲಿದ್ದ ಅವರ ಗಂಭೀರ ಹಾಗೂ ಆಳವಾದ ಪರಿಜ್ಞಾನಕ್ಕೆ ಸಾಕ್ಷಿಯಾಗಿದೆ.
ಅವರ ಆಡಳಿತದ ವರ್ಷಗಳು ಹಲವು ರಾಜಕೀಯ ಸವಾಲುಗಳಿಗೂ ಸಾಕ್ಷಿಯಾದವು. 1986ರಲ್ಲಿ, ಸಾರಾಯಿ ಬಾಟಲಿಂಗ್ ಗುತ್ತಿಗೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮಾಡಿದ ಟೀಕೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಮುಖಂಡರ ಮತ್ತು ಪಕ್ಷದ ತೀರ್ಮಾನದಂತೆ ಅವರು, ಮೂರು ದಿನಗಳ ನಂತರ ಅದನ್ನು ಹಿಂಪಡೆದರು. ನಂತರ 1988ರಲ್ಲಿ, ರಾಜಕಾರಣಿಗಳು ಮತ್ತು ಉದ್ಯಮಿಗಳ ದೂರವಾಣಿ ಕದ್ದಾಲಿಕೆ (ಫೋನ್ ಟ್ಯಾಪಿಂಗ್) ಆರೋಪಗಳು ಕೇಳಿಬಂದಾಗ, ತನಿಖೆ ಎದುರಿಸುತ್ತಲೇ ರಾಜಕೀಯ ಜವಾಬ್ದಾರಿ ವಹಿಸಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ರಾಷ್ಟ್ರೀಯ ನಾಯಕತ್ವ:
ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಿದ ನಂತರವೂ ಹೆಗಡೆಯವರು ರಾಷ್ಟ್ರೀಯ ರಾಜಕೀಯದಲ್ಲಿ ಪ್ರಭಾವಿ ಪಾತ್ರವನ್ನು ಮುಂದುವರಿಸಿದರು. ಪ್ರಧಾನಿ ವಿ.ಪಿ.ಸಿಂಗ್ ಅವರ ಆಡಳಿತಾವಧಿಯಲ್ಲಿ ಅವರು ರಾಷ್ಟ್ರೀಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಮುಂದೆ ಜನತಾ ದಳದಲ್ಲಾದ ಭಿನ್ನಾಭಿಪ್ರಾಯಗಳಿಂದಾಗಿ 1996ರಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ತದನಂತರ ಅವರು ‘ರಾಷ್ಟ್ರೀಯ ನವ ನಿರ್ಮಾಣ ವೇದಿಕೆ’ಯನ್ನು ಮತ್ತು ಮುಂದೆ ‘ಲೋಶಶಕ್ತಿ’ ಎಂಬ ತಮ್ಮದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು.
ಸಾರ್ವಜನಿಕ ಜೀವನದ ಕೊನೆಯ ವರ್ಷಗಳು:
ನಂತರದ ದಿನಗಳಲ್ಲಿ ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಇವರು, 1998ರ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ 1998ರಿಂದ 1999ರವರೆಗೆ ಸೇವೆ ಸಲ್ಲಿಸಿದರು. 1999ರಲ್ಲಿ, ಲೋಶಶಕ್ತಿ ಪಕ್ಷವು ಜನತಾ ದಳ (ಸಂಯುಕ್ತ) ಪಕ್ಷದೊಂದಿಗೆ ವಿಲೀನಗೊಂಡಿತು.
ಹೆಗಡೆಯವರ ಬದುಕಿನ ಅಪರೂಪದ ಘಟನೆಗಳು:
1.ಸರಳತೆ, ವಿನಯ ಮತ್ತು ಶಿಕ್ಷಣದ ಅಡಿಪಾಯ:
*ವಿನೋಬಾ ಭಾವೆ ಆಶ್ರಮದ ಶಿಕ್ಷಣ: ಹೆಗಡೆಯವರ ಅಕ್ಕ ಮಹದೇವತಾಯಿ ಹೆಗಡೆಯವರು ಇವರನ್ನು ವಿನೋಬಾ ಭಾವೆಯವರ ಆಶ್ರಮಕ್ಕೆ ಸೇರಿಸಿ ಶಿಕ್ಷಣ ಕೊಡಿಸಿದರು. ಬ್ರಾಹ್ಮಣಿಕೆ ಎಂಬ ಅಹಂಕಾರ ಮನಸ್ಸಿನಿಂದ ತೊಲಗಲಿ ಎಂದು ವಿನೋಬಾ ಭಾವೆಯವರ ಸೂಚನೆಯಂತೆ ಹೆಗಡೆಯವರು ಪ್ರತಿದಿನ ರಸ್ತೆ ಬದಿಯ ಮಲವನ್ನು ಎತ್ತುವ ಕಾರ್ಯವನ್ನು ಆಶ್ರಮದಲ್ಲಿದ್ದಾಗ ಮಾಡುತ್ತಿದ್ದರು.
*ಖಾದಿ ಧಾರಣೆ: ತಮ್ಮ ಜೀವನದುದ್ದಕ್ಕೂ ಕೇವಲ ಖಾದಿ ವಸ್ತ್ರಗಳನ್ನು ಮಾತ್ರ ಧರಿಸುತ್ತಿದ್ದರು.
*ಅತಿಥಿಗಳಿಗೆ ಗೌರವ: ಮನೆಗೆ ಬಂದ ಅತಿಥಿಗಳನ್ನು ಸ್ವತಃ ಬಾಗಿಲ ಬಳಿ ನಿಂತು ಕೈಮುಗಿದು ಸ್ವಾಗತಿಸುತ್ತಿದ್ದರು. ಒಮ್ಮೆ ಎಸ್.ಎಂ.ಕೃಷ್ಣ ಅವರು ಮನೆ ಒಳಗೆ ಬಂದದ್ದು ತಿಳಿದು, ಮತ್ತೆ ಅವರನ್ನು ಬಾಗಿಲ ಬಳಿ ಕರೆತಂದು ಕೈಮುಗಿದು ಬರ ಮಾಡಿಕೊಂಡಿದ್ದರು.
*ಮೇಯರ್ ಜೆ.ಹುಚ್ಚಪ್ಪನವರಿಗೆ ನೀಡಿದ ಗೌರವ:
ಜೆ. ಹುಚ್ಚಪ್ಪನವರು ಮೇಯರ್ ಆಗಿದ್ದಾಗ ಹೆಗಡೆಯವರು ಕಾರಿನ ಬಾಗಿಲು ತೆಗೆದು ಗೌರವಿಸಿದರು. ಹುಚ್ಚಪ್ಪ ಗಾಬರಿಯಾದಾಗ, ‘ನೀವು ನಮ್ಮ ಮನೆಗೆ ಬಂದಿರುವುದು ಹುಚ್ಚಪ್ಪನಾಗಿ ಅಲ್ಲ, ಬೆಂಗಳೂರಿನ ಮಹಾಪೌರರಾಗಿ. ನಿಮಗೆ ಗೌರವ ಕೊಡುವುದು ನಮ್ಮ ಕರ್ತವ್ಯ’ ಎಂದಿದ್ದರು.
*ಕಾರ್ಯಕರ್ತರ ಮೇಲೆ ಗೌರವ:
ಸಾಮಾನ್ಯ ಕಾರ್ಯಕರ್ತರನ್ನೂ ಎಂದೂ ಏಕವಚನದಲ್ಲಿ ಮಾತನಾಡಿಸುತ್ತಿರಲಿಲ್ಲ. (ವೀರೇಂದ್ರ ಪಾಟೀಲ್ ಮತ್ತು ಹೆಗಡೆಯವರು ಮಾತ್ರ ಪರಸ್ಪರ ಏಕವಚನದಲ್ಲಿ ಮಾತನಾಡಿಕೊಳ್ಳುತ್ತಿದ್ದರು).
*ಹಿರಿಯ ಚಳುವಳಿಗಾರರಿಗೆ ಗೌರವ:
ಬಸವನಗುಡಿಯಲ್ಲಿ ಪ್ರವಾಸ ಮಾಡುವಾಗ ನಡೆದು ಹೋಗುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರನ್ನು ಕಂಡು ಕಾರಿನಿಂದ ಇಳಿದು ಹೋಗಿ ಅವರ ಕೈಹಿಡಿದು ಕುಶಲೋಪಚಾರಿ ಮಾತನಾಡಿಸಿದ್ದರು.
*ತಾಯಿಯ ಮೇಲಿನ ಅಪಾರ ಭಕ್ತಿ:
ಪ್ರತಿದಿನ ಮನೆಯಿಂದ ಹೊರಡುವಾಗ ತಾಯಿಗೆ ಹೇಳಿ ಹೋಗುತ್ತಿದ್ದರು. ಬೆಂಗಳೂರಿನಲ್ಲಿ ಇದ್ದಾಗ ಮಧ್ಯಾಹ್ನ ತಾಯಿಯೊಡನೆಯೇ ಕುಳಿತು ಊಟ ಮಾಡುತ್ತಿದ್ದರು. ತಡವಾದರೂ ತಾಯಿ ಮಗನಿಗಾಗಿ ಕಾಯುತ್ತಿದ್ದರು. ಒಮ್ಮೆ ಹೇಳದೇ ತಡವಾದಾಗ ತಾಯಿ ಕಾಯುತ್ತಿದ್ದುದನ್ನು ತಿಳಿದು ಹೆಗಡೆಯವರು ಮರುಗಿದ್ದರು.
*ಧರ್ಮಪತ್ನಿಯ ತ್ಯಾಗ:
ನೆಹರೂ ಅವರ ಕರೆಯ ಮೇರೆಗೆ ಹೆಗಡೆಯವರ ಧರ್ಮಪತ್ನಿ ಶಕುಂತಲಾ ಹೆಗಡೆಯವರು ತಮ್ಮ ಮೈಮೇಲಿನ ಮಾಂಗಲ್ಯಸರ ಸೇರಿದಂತೆ ಮನೆಯಲ್ಲಿದ್ದ ಎಲ್ಲ ಬಂಗಾರದ ಒಡವೆಗಳನ್ನು ಸೈನಿಕರ ನಿಧಿಗೆ ನೀಡಿದರು. ಅಂದಿನಿಂದ ಹೆಗಡೆ ದಂಪತಿ ಬಂಗಾರದ ಆಭರಣಗಳನ್ನು ಧರಿಸಲಿಲ್ಲ.
*ತಾಯಿಯ ಜೈಲುವಾಸ, ಹೋರಾಟ:
ತಾಯಿ ಸರಸ್ಪತಿ ಹೆಗಡೆಯವರು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬಂಧಿಯಾಗಿ ಜೈಲಿನಲ್ಲಿದ್ದಾಗ, ಮಹಿಳಾ ಕೈದಿಗಳ ಸೌಕರ್ಯ ಮತ್ತು ಸೌಲಭ್ಯಗಳಿಗಾಗಿ ಜೈಲಿನಲ್ಲಿಯೇ ಹೋರಾಟ ನಡೆಸಿದ್ದರು.
*ತಂದೆ ಮತ್ತು ಅಣ್ಣನ ಹೋರಾಟ:
ತಂದೆ ಮತ್ತು ಅಣ್ಣ ನಾಗೇಶ್ ಹೆಗಡೆಯವರು ಸಿರ್ಸಿ-ಸಿದ್ದಾಪುರದಲ್ಲಿ ನಡೆದ ಕರ ನಿರಾಕರಣೆ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
*ಬ್ರಿಟಿಷರ ದಾಳಿ:
ಸ್ವಾತಂತ್ರ್ಯ ಹೋರಾಟಗಾರರಿಗೆ ಹೆಗಡೆ ಕುಟುಂಬ ಹಣದ ನೆರವು ನೀಡುತ್ತಿತ್ತು ಎಂಬ ಕಾರಣಕ್ಕೆ ಬ್ರಿಟಿಷರು ಇವರ ಮನೆ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಚಿನ್ನ ಮತ್ತು ನಗದನ್ನು ವಶಪಡಿಸಿಕೊಂಡಿದ್ದರು.
*ಅಕ್ಕ ಮಹದೇವತಾಯಿ ಸಮಾಜಸೇವೆ:
ಆಶ್ರಮವಾಸಿಯಾಗಿದ್ದ ಅಕ್ಕ ಮಹದೇವತಾಯಿ ಸಣ್ಣ ವಯಸ್ಸಿನಲ್ಲಿಯೇ ವಿಧವೆಯಾಗಿದ್ದು, ಹರಿಜನ ಬಾಲಕಿಯನ್ನು ದತ್ತು ತೆಗೆದುಕೊಂಡಿದ್ದರು. ಅಲ್ಲದೆ, ವಿನೋಬಾ ಭಾವೆಯವರ ಅಂತ್ಯಸಂಸ್ಕಾರವನ್ನೂ ಮಹದೇವತಾಯಿಯವರೇ ನೆರವೇರಿಸಿದ್ದರು.
*ಸುದೀರ್ಘ ರಾಜಕೀಯ ಪಯಣ:
5 ಬಾರಿ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, 2 ಬಾರಿ ರಾಜ್ಯಸಭಾ ಸದಸ್ಯರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಕೇಂದ್ರ ಸಚಿವರಾಗಿ ಹಾಗೂ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
*ಸ್ವಜನರ ಮೇಲೂ ಮುಕ್ತ ತನಿಖೆ:
ಅಣ್ಣ ಗಣೇಶ ಹೆಗಡೆ ಮೇಲೆ ಅಕ್ಕಿ ಕಳ್ಳಸಾಗಾಣಿಕೆ ಆರೋಪ ಬಂದಾಗ ತನಿಖಾ ಸಮಿತಿ ರಚಿಸಿದರು. ಮಗನ ಮೇಲೆ ಮೆಡಿಕಲ್ ಸೀಟು ಆರೋಪ ಬಂದಾಗ ‘ಪುಟ್ಟಸ್ವಾಮಿ ಆಯೋಗ’ ರಚಿಸಿ ತನಿಖೆಗೆ ಆದೇಶಿಸಿದರು.
*ಸ್ವಜನಪಕ್ಷಪಾತ ತಡೆ ನಿಯಮ:
ಸಚಿವರು ತಮ್ಮ ಸ್ವಜಾತಿ ಅಥವಾ ಬಂಧು ಬಳಗದವರನ್ನು ಆಪ್ತ ಸಹಾಯಕರನ್ನಾಗಿ ಅಥವಾ ಕಚೇರಿ ಸಿಬ್ಬಂದಿಯಾಗಿ ನೇಮಿಸಿಕೊಳ್ಳಬಾರದೆಂಬ ನಿಯಮ ತಂದರು.
*ಜಾತ್ಯತೀತ ಆಡಳಿತ:
ನಾಮನಿರ್ದೇಶನ ಹಾಗೂ ಸಂಪುಟ ರಚನೆಯಲ್ಲಿ ಜಾತ್ಯತೀತವಾಗಿ ನಡೆದುಕೊಂಡರು. ಪ್ರಮೋದ್ ಹೆಗಡೆಯವರನ್ನು ಉತ್ತರ ಕನ್ನಡ ಜಿಲ್ಲಾ ಪರಿಷತ್ ಅಧ್ಯಕ್ಷರನ್ನಾಗಿ ಮಾಡಬಹುದಾಗಿದ್ದರೂ, ನಾಯಕ ಸಮಾಜದ ಬೇರೆಯವರಿಗೆ ಅಧ್ಯಕ್ಷಸ್ಥಾನ ನೀಡಿ ಪ್ರಮೋದ್ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಿದರು. ಸಿದ್ದಲಿಂಗಯ್ಯ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿದರು. ಯಾವುದೇ ಜಾತಿಯ ಸಂಘಟನೆ/ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ.
5.ಜನಪರ ಯೋಜನೆ, ಆಡಳಿತಾತ್ಮಕ ಮೈಲುಗಲ್ಲುಗಳು:
*18 ವರ್ಷಕ್ಕೆ ಮತದಾನದ ಹಕ್ಕು:
ದೇಶದಲ್ಲೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮತದಾನದ ವಯಸ್ಸನ್ನು 18 ವರ್ಷಕ್ಕೆ ಇಳಿಸಿದರು (ನಂತರ ರಾಜೀವ್ ಗಾಂಧಿ ಇದನ್ನು ದೇಶಾದ್ಯಂತ ಜಾರಿಗೆ ತಂದರು).
*ಮಹಿಳಾ ಸಬಲೀಕರಣ:
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.25 ಮೀಸಲಾತಿ ನೀಡಿದರು ಹಾಗೂ ಮಹಿಳಾ ಅಭಿವೃದ್ಧಿ ನಿಗಮ ಸ್ಥಾಪಿಸಿದರು.
*ಗರ್ಭಿಣಿ ಕೂಲಿ ಕಾರ್ಮಿಕರ ಯೋಜನೆ:
ಗರ್ಭಿಣಿ ಮಹಿಳೆಯೊಬ್ಬಳು ತಲೆಯ ಮೇಲೆ ಮಣ್ಣು ಹೊರುವುದನ್ನು ಕಂಡು, ಹೆರಿಗೆಗೆ ಮುಂಚೆ ಮತ್ತು ನಂತರ 6 ತಿಂಗಳು ಧನಸಹಾಯ ನೀಡುವ ಯೋಜನೆ ರೂಪಿಸಿದರು.
*ಅಂತ್ಯೋದಯ ಯೋಜನೆ:
ಪ್ರತಿ ಪಂಚಾಯಿತಿಯಲ್ಲಿ 5 ಬಡ ಕುಟುಂಬಗಳನ್ನು (ದಲಿತ ಮತ್ತು ಹಿಂದುಳಿದ ವರ್ಗಕ್ಕೆ ಆದ್ಯತೆ) ಗುರುತಿಸಿ ಆರ್ಥಿಕವಾಗಿ ಉತ್ತೇಜಿಸುವ ಕಾರ್ಯಕ್ರಮ ತಂದರು.
*ಮಾತೃಭೂಮಿಯ ಮೇಲಿನ ಪ್ರೀತಿ (2003):
ಅನಾರೋಗ್ಯದ ಕಾರಣ ಅಮೆರಿಕದಲ್ಲಿ ಚಿಕಿತ್ಸೆ ಪಡೆದು 2003ರಲ್ಲಿ ಭಾರತಕ್ಕೆ ಹಿಂತಿರುಗಿದಾಗ, ಬೆಳಗ್ಗೆ 7 ಗಂಟೆಗೆ ಮನೆ ಮುಂದೆ ನಿಂತಿದ್ದ ಕಾರ್ಯಕರ್ತರನ್ನು ಕಂಡು, ‘ಈಗ ನನಗೆ ಸಮಾಧಾನವಾಗಿದೆ, ನನ್ನ ಪ್ರಾಣ ನನ್ನ ಮಾತೃಭೂಮಿಯಲ್ಲಿ ಹೋಗುತ್ತದೆ ಎನ್ನುವ ತೃಪ್ತಿ ಇದೆ’ ಎಂದು ನಾಡಿನ ಬಗ್ಗೆ ತಮಗಿದ್ದ ಗೌರವವನ್ನು ವ್ಯಕ್ತಪಡಿಸಿದ್ದರು.