ದೇಶದ 2ನೇ ಮತ್ತು 3ನೇ ಹಂತದ ಪಟ್ಟಣಗಳ ಸಣ್ಣ ಉದ್ದಿಮೆಗಳು ಇಂದು ಡಿಜಿಟಲ್ ತಂತ್ರಜ್ಞಾನದ ಬಲದಿಂದ ರಾಷ್ಟ್ರಮಟ್ಟದ ಬ್ರ್ಯಾಂಡ್‌ಗಳಾಗಿ ರೂಪಾಂತರಗೊಳ್ಳುತ್ತಿವೆ. ಅಮೆಜಾನ್ ಇಂಡಿಯಾದಲ್ಲಿ 17 ಲಕ್ಷಕ್ಕೂ ಅಧಿಕ ನೋಂದಾಯಿತ ಮಾರಾಟಗಾರರ ಪೈಕಿ ಶೇ. 70ಕ್ಕೂ ಹೆಚ್ಚು ಮಂದಿ ಸಣ್ಣ ನಗರಗಳಿಂದಲೇ ಬಂದಿರುವುದು ವಿಶೇಷ. ಈ ಕುರಿತು ಅಮೆಜಾನ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕಿ ಅರುಣಾ ದರ್ಯಾನಾನಿ ಅವರು ಹಂಚಿಕೊಂಡಿರುವ ವಿಶೇಷ ಒಳನೋಟಗಳು ಇಲ್ಲಿವೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾರತದ ಡಿಜಿಟಲ್ ಆರ್ಥಿಕತೆ ಮತ್ತು ಇ-ಕಾಮರ್ಸ್ ಪರಿಸರವು ಹೊಸ ಮನ್ವಂತರಕ್ಕೆ ಸಾಕ್ಷಿಯಾಗುತ್ತಿದೆ. ಸಾಂಪ್ರದಾಯಿಕ ನಗರಗಳಿಗೆ ಸೀಮಿತವಾಗಿದ್ದ ವ್ಯಾಪಾರ-ವಹಿವಾಟುಗಳು ಇಂದು ದೇಶದ ಮೂಲೆ ಮೂಲೆಗೂ ವಿಸ್ತರಿಸುತ್ತಿದ್ದು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು (ಎಂಎಸ್‌ಎಂಇ) ಕೇವಲ ಸ್ಥಳೀಯ ಅಂಗಡಿಗಳಾಗಿ ಉಳಿಯದೆ ಪ್ರಬಲ ರಾಷ್ಟ್ರೀಯ ಬ್ರ್ಯಾಂಡ್‌ಗಳಾಗಿ ಹೊರಹೊಮ್ಮುತ್ತಿವೆ. ಈ ಮಹತ್ವದ ಡಿಜಿಟಲ್ ರೂಪಾಂತರದ ಮುಂಚೂಣಿಯಲ್ಲಿರುವ ಅಮೆಜಾನ್ ಇಂಡಿಯಾದ ಸೇಲ್ಸ್, ಸೆಲ್ಲರ್ ಸಕ್ಸಸ್ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕಿ ಅರುಣಾ ದರ್ಯಾನಾನಿ ಅವರೊಂದಿಗೆ ನಡೆಸಿದ ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ.ಕಳೆದ ಕೆಲವು ವರ್ಷಗಳಲ್ಲಿ ಅಮೆಜಾನ್ ಇಂಡಿಯಾದಲ್ಲಿ ಮಾರಾಟಗಾರರ ಸಮುದಾಯ ಹೇಗೆ ವಿಕಸನಗೊಂಡಿದೆ? ಸಣ್ಣ ನಗರಗಳ ಭಾಗವಹಿಸುವಿಕೆ ಹೇಗಿದೆ?
ಕಳೆದ ಕೆಲವು ವರ್ಷಗಳಲ್ಲಿ ಅಮೆಜಾನ್ ಇಂಡಿಯಾದಲ್ಲಿ ಮಾರಾಟಗಾರರ ಸಂಖ್ಯೆ ಮತ್ತು ವ್ಯಾಪ್ತಿ ಗಣನೀಯವಾಗಿ ಬೆಳೆದಿದೆ. ಕೇವಲ ಆನ್‌ಲೈನ್‌ನಲ್ಲಿ ಸರಕು ಮಾರಾಟ ಮಾಡುವ ಮಾಧ್ಯಮವಾಗಿ ಆರಂಭವಾದ ಇದು, ಇಂದು ಉದ್ಯಮಿಗಳು ತಮ್ಮದೇ ಆದ ಸ್ವತಂತ್ರ ಬ್ರ್ಯಾಂಡ್‌ಗಳನ್ನು ನಿರ್ಮಿಸುವ ವಿಶಾಲ ಸಮುದಾಯವಾಗಿ ಬೆಳೆದುನಿಂತಿದೆ. ಪ್ರಸ್ತುತ ಅಮೆಜಾನ್ ವೇದಿಕೆಯಲ್ಲಿ 17 ಲಕ್ಷಕ್ಕೂ ಅಧಿಕ ನೋಂದಾಯಿತ ಮಾರಾಟಗಾರರಿದ್ದಾರೆ.ಇದರಲ್ಲಿ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಿ ಬದಲಾವಣೆಯೆಂದರೆ, ಶೇಕಡ 70ಕ್ಕಿಂತ ಹೆಚ್ಚು ಮಾರಾಟಗಾರರು 2ನೇ ಮತ್ತು 3ನೇ ಹಂತದ ಸಣ್ಣ ನಗರಗಳು ಹಾಗೂ ಗ್ರಾಮೀಣ ಭಾಗಗಳಿಂದ ಬರುತ್ತಿದ್ದಾರೆ. ಭೌಗೋಳಿಕ ಗಡಿಗಳನ್ನು ಮೀರಿ ಸಣ್ಣ ಪಟ್ಟಣಗಳ ಉದ್ಯಮಿಗಳು ತಮ್ಮ ಉತ್ಪನ್ನಗಳಿಗೆ ರಾಷ್ಟ್ರವ್ಯಾಪಿ ಬೇಡಿಕೆಯನ್ನು ಕಂಡುಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಉತ್ತರ ಪ್ರದೇಶದ ಟೀಲನ್ ಕೇವಲ ₹5,000 ಅಲ್ಪ ಬಂಡವಾಳದೊಂದಿಗೆ ಆರಂಭವಾಗಿ ಇಂದು ತಿಂಗಳಿಗೆ ₹10 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುವ ಹಾರ್ಡ್‌ವೇರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಹೈದರಾಬಾದ್‌ನ ಸೋಮಾನಿ ಪ್ಯಾಕೇಜಿಂಗ್ 10 ಉತ್ಪನ್ನಗಳಿಂದ ಆರಂಭಿಸಿ ಇಂದು 300ಕ್ಕೂ ಹೆಚ್ಚು ಉತ್ಪನ್ನ ಶ್ರೇಣಿಯೊಂದಿಗೆ ದೇಶದ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ 40,000ಕ್ಕೂ ಹೆಚ್ಚು ಗ್ರಾಹಕರಿಗೆ ನಿರಂತರ ಸೇವೆ ನೀಡುತ್ತಿದೆ.
ಆನ್‌ಲೈನ್‌ಗೆ ಕಾಲಿಡುವ ಸಣ್ಣ ವ್ಯಾಪಾರಿಗಳು ಎದುರಿಸುತ್ತಿರುವ ಪ್ರಮುಖ ಸವಾಲುಗಳೇನು? ಅಮೆಜಾನ್ ಅದಕ್ಕೆ ಯಾವ ಪರಿಹಾರ ನೀಡುತ್ತಿದೆ?ಡಿಜಿಟಲ್ ಮಾರುಕಟ್ಟೆಯಲ್ಲಿ ವೆಚ್ಚ ನಿರ್ವಹಣೆ, ಉತ್ತಮ ಗುಣಮಟ್ಟದ ಉತ್ಪನ್ನ ಲಿಸ್ಟಿಂಗ್, ದಾಸ್ತಾನು ಮತ್ತು ಲಾಜಿಸ್ಟಿಕ್ಸ್ ನಿರ್ವಹಣೆ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಸೂಕ್ತ ಜಾಹೀರಾತು ನೀಡಿ ಗ್ರಾಹಕರನ್ನು ತಲುಪುವುದು ಎಂಎಸ್‌ಎಂಇಗಳ ಮುಂದಿರುವ ಮುಖ್ಯ ಸವಾಲುಗಳು. ಈ ಸಂಕೀರ್ಣತೆಗಳನ್ನು ನಿವಾರಿಸಲು ಅಮೆಜಾನ್ ಕಡಿಮೆ ವೆಚ್ಚದ ಮತ್ತು ಅತ್ಯಂತ ಸರಳ ಮಾರಾಟ ಪ್ರಕ್ರಿಯೆಯನ್ನು ರೂಪಿಸಿದೆ. ಇತ್ತೀಚಿನ ಶುಲ್ಕ ಕಡಿತಗಳ ಜತೆಗೆ, ಸೆಲ್ಲರ್ ಅಸಿಸ್ಟೆಂಟ್, ಜೆನ್ಎಐ ಲಿಸ್ಟಿಂಗ್ ಟೂಲ್ಸ್, ಲಿಸ್ಟಿಂಗ್ ಐಕ್ಯೂ ಮತ್ತು ಪ್ರೈಸಿಂಗ್ ಐಕ್ಯೂ ಮುಂತಾದ ಅತ್ಯಾಧುನಿಕ ಎಐ ಆಧಾರಿತ ತಂತ್ರಜ್ಞಾನ ಪರಿಕರಗಳನ್ನು ಪರಿಚಯಿಸಲಾಗಿದೆ.
ಇವು ಮಾರಾಟಗಾರರಿಗೆ ಹೊಸ ಉತ್ಪನ್ನಗಳ ಕ್ಯಾಟಲಾಗ್ ರಚನೆ, ನೋಂದಣಿ ಪ್ರಕ್ರಿಯೆ, ಬೆಲೆ ನಿಗದಿ ಮತ್ತು ದಾಸ್ತಾನು ನಿರ್ವಹಣೆಯನ್ನು ಕ್ಷಿಪ್ರಗೊಳಿಸಿವೆ. ಇದರ ಪರಿಣಾಮವಾಗಿ ಮಾರಾಟಗಾರರು ದಿನನಿತ್ಯದ ವಾಡಿಕೆಯ ಆಡಳಿತಾತ್ಮಕ ಕೆಲಸಗಳಲ್ಲಿ ಶೇ. 70ರಷ್ಟು ಕಡಿಮೆ ಸಮಯವನ್ನು ವ್ಯಯಿಸುತ್ತಿದ್ದು, ತಮ್ಮ ಸಂಪೂರ್ಣ ಗಮನವನ್ನು ಉತ್ಪನ್ನಗಳ ಗುಣಮಟ್ಟ ಹಾಗೂ ಬ್ರ್ಯಾಂಡಿಂಗ್ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತಿದೆ.ಮಹಿಳಾ ಉದ್ಯಮಶೀಲತೆ ಮತ್ತು ಸಾಂಪ್ರದಾಯಿಕ ಕರಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಅಮೆಜಾನ್ ಕೈಗೊಂಡಿರುವ ಕ್ರಮಗಳೇನು?
ಮಹಿಳಾ ಉದ್ಯಮಿಗಳನ್ನು ಸಬಲೀಕರಿಸಲು ಅಮೆಜಾನ್ ಸಹೇಲಿ ಕಾರ್ಯಕ್ರಮವು ಪ್ರಮುಖ ಪಾತ್ರ ವಹಿಸುತ್ತಿದ್ದು, ದೇಶಾದ್ಯಂತ 18 ಲಕ್ಷಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ. ಲಖನೌದ ಬೇಬಿ ಕೇರ್ ಬ್ರ್ಯಾಂಡ್ ಪ್ರೊಮಾಮ್ ಸ್ಥಾಪಕಿ ಅನವಿ ಕಾಲಿಯಾ, ಕೋಲ್ಕತ್ತಾದ ಸಾಂಪ್ರದಾಯಿಕ ಚಿಕನ್‌ಕಾರಿ ಕಲೆಯ ದಿ ಕಲಾ ಚಿಕನ್ಸ್ ಸಂಸ್ಥಾಪಕಿ ದೇವಾಂಶಿ ಗುಪ್ತಾ ಹಾಗೂ ಅಹಮದಾಬಾದ್‌ನ ಹೆಲ್ತಿಗ್ರಾಬ್ಜ್ ಸಂಸ್ಥಾಪಕಿ ಡಾ. ಡಿಂಪಲ್ ಗಣಾತ್ರಾ ಅವರಂತಹ ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳು ಅಮೆಜಾನ್ ನೆರವಿನಿಂದ ದೇಶವ್ಯಾಪಿ ಮಾರುಕಟ್ಟೆ ವಿಸ್ತರಿಸಿಕೊಂಡಿವೆ.ಅದೇ ರೀತಿ, ಅಮೆಜಾನ್ ಕಾರಿಗರ್ ಯೋಜನೆಯು ವಾರಣಾಸಿ, ಜೈಪುರ, ಕೊಯಮತ್ತೂರು ಮುಂತಾದ ಐತಿಹಾಸಿಕ ನಗರಗಳ ನೇಕಾರರು ಮತ್ತು ಕುಶಲಕರ್ಮಿಗಳ 470ಕ್ಕೂ ಹೆಚ್ಚು ವಿಶಿಷ್ಟ ಕಲಾ ಪ್ರಕಾರಗಳನ್ನು ಪ್ರತಿನಿಧಿಸುವ 2 ಲಕ್ಷಕ್ಕೂ ಅಧಿಕ ಕರಕುಶಲ ಉತ್ಪನ್ನಗಳನ್ನು ಆನ್‌ಲೈನ್‌ಗೆ ತಂದು ದೇಶದ ಗ್ರಾಹಕರೊಂದಿಗೆ ನೇರ ಸಂಪರ್ಕ ಕಲ್ಪಿಸಿದೆ.
ಸಣ್ಣ ನಗರಗಳ ವ್ಯಾಪಾರಿಗಳು ದೇಶಾದ್ಯಂತ ವೇಗದ ವಿತರಣೆ ಒದಗಿಸಲು ನಿಮ್ಮ ಲಾಜಿಸ್ಟಿಕ್ಸ್ ನೆಟ್‌ವರ್ಕ್ ಹೇಗೆ ಸಹಕಾರಿಯಾಗಿದೆ?ಎಂಎಸ್‌ಎಂಇಗಳು ತಾವೇ ಸ್ವತಃ ಬೃಹತ್ ಗೋದಾಮು ಅಥವಾ ಸಾಗಣೆ ಜಾಲ ನಿರ್ಮಿಸುವ ಅಗತ್ಯವಿಲ್ಲದಂತೆ ನಮ್ಮ ಪೂರೈಕೆ ಮೂಲಸೌಕರ್ಯ ಬೆನ್ನೆಲುಬಾಗಿ ನಿಂತಿದೆ. ದೇಶದ 16 ಪ್ರಮುಖ ರಾಜ್ಯಗಳಲ್ಲಿ 4.3 ಕೋಟಿ ಘನ ಅಡಿ ಶೇಖರಣಾ ಸಾಮರ್ಥ್ಯದ ಪೂರೈಕೆ ಕೇಂದ್ರಗಳು, 30 ಲಕ್ಷ ಚದರ ಅಡಿ ವಿಂಗಡಣಾ ಪ್ರದೇಶ, ಸುಮಾರು 2,000 ಕೊನೆಯ ಹಂತದ ವಿತರಣಾ ಕೇಂದ್ರಗಳು ಮತ್ತು 28,000ಕ್ಕೂ ಹೆಚ್ಚು ಐ ಹ್ಯಾವ್ ಸ್ಪೇಸ್ ಪಾಲುದಾರರಿದ್ದಾರೆ.
ಫುಲ್‌ಫಿಲ್‌ಮೆಂಟ್ ಬೈ ಅಮೆಜಾನ್ ಮತ್ತು ಈಸಿ ಶಿಪ್ ಪರಿಹಾರಗಳ ಮೂಲಕ ಸಣ್ಣ ವ್ಯಾಪಾರಿಗಳು ತಮ್ಮ ಸರಕುಗಳ ಸಂಗ್ರಹಣೆ, ಪ್ಯಾಕಿಂಗ್, ಗುಣಮಟ್ಟ ಪರಿಶೀಲನೆ ಹಾಗೂ ತ್ವರಿತ ವಿತರಣೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅಮೆಜಾನ್‌ಗೆ ಬಿಡಬಹುದು. ಇದರಿಂದ ಯಾವುದೇ ಭಾರಿ ಹೂಡಿಕೆಯಿಲ್ಲದೆಯೇ ಮಹಾನಗರಗಳ ಜತೆಗೆ ಎರಡನೇ ಮತ್ತು ಮೂರನೇ ಹಂತದ ಪಟ್ಟಣಗಳ ಗ್ರಾಹಕರಿಗೂ ತ್ವರಿತ ಸೇವೆ ನೀಡಲು ಸಾಧ್ಯವಾಗುತ್ತಿದೆ.ಬದಲಾಗುತ್ತಿರುವ ಗ್ರಾಹಕರ ನಡವಳಿಕೆ ಮತ್ತು ಓಮ್ನಿಚಾನಲ್ ತಂತ್ರಗಳ ಮಹತ್ವವೇನು?
ಇಂದಿನ ಗ್ರಾಹಕರು ಸಾಮಾಜಿಕ ಮಾಧ್ಯಮ, ಆನ್‌ಲೈನ್ ಮಾರುಕಟ್ಟೆಗಳು ಮತ್ತು ಸ್ಥಳೀಯ ಭೌತಿಕ ಮಳಿಗೆಗಳು ಹೀಗೆ ಬಹು ಆಯಾಮಗಳಲ್ಲಿ ಉತ್ಪನ್ನಗಳನ್ನು ಹುಡುಕಿ, ಹೋಲಿಸಿ ಖರೀದಿಸುತ್ತಾರೆ. ಹೀಗಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಏಕರೂಪದ ಗ್ರಾಹಕ ಅನುಭವ ನೀಡುವ ಓಮ್ನಿಚಾನಲ್ ತಂತ್ರ ಅತ್ಯಂತ ನಿರ್ಣಾಯಕವಾಗಿದೆ. ಅಮೆಜಾನ್‌ನ ಮಲ್ಟಿ-ಚಾನಲ್ ಫುಲ್‌ಫಿಲ್‌ಮೆಂಟ್ ಸೌಲಭ್ಯದ ಮೂಲಕ ವ್ಯಾಪಾರಿಗಳು ತಮ್ಮದೇ ಸ್ವಂತ ವೆಬ್‌ಸೈಟ್‌ಗಳು ಅಥವಾ ಇತರೆ ಮಾರಾಟ ಮಾರ್ಗಗಳಿಂದ ಬರುವ ಆರ್ಡರ್‌ಗಳನ್ನು ಒಂದೇ ಕೇಂದ್ರೀಕೃತ ದಾಸ್ತಾನಿನ ಮೂಲಕ ಅತ್ಯಂತ ದಕ್ಷತೆಯಿಂದ ಪೂರೈಸಲು ಸಾಧ್ಯವಾಗುತ್ತಿದೆ.ಮುಂದಿನ 3 ರಿಂದ 5 ವರ್ಷಗಳಲ್ಲಿ ಭಾರತದ ಇ-ಕಾಮರ್ಸ್ ಪರಿಸರದ ಭವಿಷ್ಯವನ್ನು ಹೇಗೆ ನೋಡುತ್ತೀರಿ?
ಭಾರತದ ಡಿಜಿಟಲ್ ಕಾಮರ್ಸ್ ಪರಿಸರ ವ್ಯವಸ್ಥೆಯು 2030ರ ವೇಳೆಗೆ ಬರೋಬ್ಬರಿ 250 ಬಿಲಿಯನ್ ಡಾಲರ್ ಮೌಲ್ಯವನ್ನು ತಲುಪುವ ನಿರೀಕ್ಷೆಯಿದೆ. ಈ ಬೆಳವಣಿಗೆಯ ಮುಂದಿನ ಹಂತವು ಕೇವಲ ಮೆಟ್ರೋ ನಗರಗಳಿಗೆ ಸೀಮಿತವಾಗಿರದೆ, ಸಣ್ಣ ಪಟ್ಟಣಗಳ ಸಣ್ಣ ಉದ್ದಿಮೆಗಳ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಎಐ ತಂತ್ರಜ್ಞಾನದ ಸಮ್ಮಿಲನದಿಂದಲೇ ಸಾಧ್ಯವಾಗಲಿದೆ.2030ರ ವೇಳೆಗೆ ಭಾರತದ 1.5 ಕೋಟಿ ಸಣ್ಣ ವ್ಯಾಪಾರಗಳಿಗೆ ಎಐ ನೈಜ ಪ್ರಯೋಜನಗಳನ್ನು ತಲುಪಿಸುವ ಬದ್ಧತೆಯೊಂದಿಗೆ ಅಮೆಜಾನ್ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಎಂಎಸ್‌ಎಂಇಗಳು ಸ್ಥಳೀಯವಾಗಿ ಆರಂಭವಾಗಿ, ಡಿಜಿಟಲ್ ಸಾಮರ್ಥ್ಯಗಳನ್ನು ಬೆಳೆಸಿಕೊಂಡು, ಜಾಗತಿಕ ಸ್ಪರ್ಧಾತ್ಮಕ ಬ್ರ್ಯಾಂಡ್‌ಗಳಾಗಿ ರೂಪಾಂತರಗೊಳ್ಳಲು ಅಗತ್ಯವಿರುವ ತಂತ್ರಜ್ಞಾನ, ಮಾರುಕಟ್ಟೆ ಜಾಲ ಮತ್ತು ದೀರ್ಘಾವಧಿಯ ಬೆಂಬಲವನ್ನು ನೀಡುವುದೇ ನಮ್ಮ ಪ್ರಮುಖ ಗುರಿಯಾಗಿದೆ.