ಬೆಂಗಳೂರು : ಕೆಲಸದ ಅಭದ್ರತೆ, ವಜಾ ಮತ್ತು ವೇತನ ವಿಳಂಬದ ಭಯದಿಂದ ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಂಡಿರುವುದರಿಂದ ಈಗ ಅವರು ಘನತೆಯಿಂದ ಬದುಕಲು ಸಾಧ್ಯವಾಗಿದೆ ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾ ಹೇಳಿದರು.
ಭಾನುವಾರ ನಗರದಲ್ಲಿ ಅಖಿಲ ಭಾರತ ಪುರಸಭೆ ಮತ್ತು ನೈರ್ಮಲ್ಯ ಕಾರ್ಮಿಕರ ಒಕ್ಕೂಟ (ಎಐಸಿಸಿಟಿಯು) ಆಯೋಜಿಸಿದ್ದ ಪೌರಕಾರ್ಮಿಕರ ವಿಜಯೋತ್ಸವ ಸಮಾವೇಶದಲ್ಲಿ ಮಾತನಾಡಿದ ಅವರು, ಇಡೀ ದೇಶ ಬಿಬಿಎಂಪಿಯ ಪೌರಕಾರ್ಮಿಕರ ವಿಜಯದ ಬಗ್ಗೆ ಮಾತನಾಡುತ್ತಿದೆ. ಈ ಗೆಲುವು ಕಾರ್ಮಿಕ ಸಂಘ ಮತ್ತು ಕಾರ್ಮಿಕರ ಅವಿರತ ಪ್ರಯತ್ನದಿಂದ ಸಾಧ್ಯವಾಗಿದೆ. ಕೇವಲ ಎರಡರರಿಂದ ಐದು ಸಾವಿರ ವೇತನ ಪಡೆಯುತ್ತಿದ್ದ ಪೌರಕಾರ್ಮಿಕರು ಕಾಯಂಗೊಂಡ ನಂತರ 41 ಸಾವಿರ ರು. ವೇತನ ಪಡೆಯುತ್ತಿದ್ದಾರೆ ಎಂದರು.
ಸಂಘದ ನಾಯಕಿ ಸಖಿ ಮಣಿಯಮ್ಮ ಮಾತನಾಡಿ, ಗುತ್ತಿಗೆ ಪೌರಕಾರ್ಮಿಕರ ಕಾಯಂಗೊಳಿಸುವ ಪ್ರಕ್ರಿಯೆ ಇಲ್ಲಿಗೆ ನಿಲ್ಲಿಸಬಾರದು. ಪೌರಕಾರ್ಮಿಕರು ಮಾತ್ರವಲ್ಲ ಎಲ್ಲ ವಲಯ ಕಾರ್ಮಿಕರಿಗೆ ಕಾಯಂಗೊಳಿಸುವುದನ್ನು ವಿಸ್ತರಿಸಬೇಕು. ಪೌರಕಾರ್ಮಿಕರ ಗೆಲುವು ನಮ್ಮ ಸಂಘದ ಮೂಲಕ ದಶಕಗಳ ಕಾಲ ನಿರಂತರ ಹೋರಾಟದ ಫಲವಾಗಿದೆ. ಗುತ್ತಿಗೆಯಲ್ಲಿದ್ದಾಗ ಮೂರು ಅಥವಾ ಆರು ತಿಂಗಳಿಗೊಮ್ಮೆ ವೇತನ ಸಿಗುತ್ತಿತ್ತು. ಇದೀಗ ಕಾಯಂಗೊಂಡಿದ್ದರಿಂದ ಪ್ರತಿ ತಿಂಗಳಿಗೆ 41 ಸಾವಿರ ರು. ಸಿಗುತ್ತಿದೆ ಎಂದರು.
ಎಐಸಿಸಿಟಿಯು ರಾಷ್ಟ್ರೀಯ ಅಧ್ಯಕ್ಷ ವಿ. ಶಂಕರ್ ಮಾತನಾಡಿ, ಹಲವು ರಾಜ್ಯಗಳಲ್ಲಿ ಕಾರ್ಮಿಕರು ಕಾಯಂಗೊಳಿಸುವಿಕೆಗಾಗಿ ನ್ಯಾಯಾಲಯಗಳಲ್ಲಿ ಇನ್ನೂ ಹೋರಾಡುತ್ತಿದ್ದಾರೆ. ಪೌರಕಾರ್ಮಿಕರು ಹೋರಾಟಗಳ ಗೆದ್ದು ಕರ್ನಾಟಕ ರಾಜ್ಯವು ವಿಭಿನ್ನವಾಗಿದೆ. ಈ ಗೆಲುವು ಇತರೆ ಕಾರ್ಮಿಕರ ಹೋರಾಟಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಎಐಎಂಎಸ್‌ಡಬ್ಲ್ಯೂಎಫ್‌ನ ಅಧ್ಯಕ್ಷ ಉದಯ್ ಭಟ್ ಮಾತನಾಡಿ, ಪೌರಕಾರ್ಮಿಕರ ಹೋರಾಟವು ಕಾರ್ಮಿಕರ ಹೋರಾಟ ಮಾತ್ರವಲ್ಲದೆ ಜಾತಿ ವ್ಯವಸ್ಥೆಯ ವಿರುದ್ಧದ ಜಾತಿ ವಿರೋಧಿ ಹೋರಾಟವೂ ಆಗಿದೆ ಎಂದು ಹೇಳಿದರು.
ಈ ವೇಳೆ ಎಐಸಿಸಿಟಿಯು ದೇಶಾದ್ಯಂತದ ಪೌರಕಾರ್ಮಿಕರ ಪರಿಸ್ಥಿತಿ, ಹೋರಾಟಗಳ ಕುರಿತ ವರದಿ ಸಫಾಯಿ ಕರ್ಮಾಚಾರಿಗಳು ಮತ್ತು ಇತರ ನೈರ್ಮಲ್ಯ ಕಾರ್ಮಿಕರ ಒಕ್ಕೂಟ- ವಿಮೋಚನೆಗಾಗಿ ಹೋರಾಟ ಎಂಬ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು.
ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್, ರಾಜ್ಯ ಅಧ್ಯಕ್ಷ ಪಿ.ಪಿ. ಅಪ್ಪಣ್ಣ, ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್, ಮಹೇಂದ್ರ ಪರಿದಾ, ಆರ್‌ಎಸ್ ಮಣಿ, ನಾಗರಾಜ್ ಪೂಜಾರ್, ಲೇಖಾ ಮೊದಲಾದವರಿದ್ದರು.