ಮೈಸೂರು : ರಂಗಭೂಮಿ ಕಲಾವಿದ ಹಾಗೂ ಜಾನಪದ ವಿದ್ವಾಂಸ ಯು.ಎಸ್. ರಾಮಣ್ಣ-75ರ ಗಡಿ ದಾಟಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಉಬ್ಬೂರು ಗ್ರಾಮದ ಪಟೇಲ್ ಯು.ಟಿ.ಶಾಮಯ್ಯಗೌಡ ಹಾಗೂ ಕಮಲಮ್ಮ ಅವರ ಪುತ್ರರಾಗಿ 1950ರ ಫೆ.23 ರಂದು ಜನಿಸಿದ ರಾಮಣ್ಣ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪಡೆದು 1974 ರಲ್ಲಿ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಆರಂಭಿಸಿದರು. 1975 ರಿಂದ 1981 ರವರೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಜಾನಪದ ವಸ್ತು ಸಂಗ್ರಹಾಲಯದ ಕ್ಷೇತ್ರ ಸಹಾಯಕರಾಗಿದ್ದರು.
ಕುಪ್ಪಳಿ ದೇಸಿ ವಸ್ತು ಸಂಗ್ರಹಾಲಯಕ್ಕಾಗಿ ಎರಡು ವರ್ಷ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಂಗ್ರಹಾಲಯಕ್ಕಾಗಿ ಮೂರು ವರ್ಷ ಕ್ಷೇತ್ರ ಕಾರ್ಯ ನಡೆಸಿದರು. 1982 ರಿಂದ 2005 ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಜಾನಪದ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಆಗಿದ್ದರು.
ವಸ್ತು ಸಂಗ್ರಹಾಲಯದ ಬಗ್ಗೆ ಹೆಚ್ಚಿನ ಅರಿವು ಪಡೆಯಲು ಮದ್ರಾಸ್ ಹಾಗೂ ಪೂನಾದಲ್ಲಿ ತರಬೇತಿ ಪಡೆದರು. ರಾಜ್ಯಾದ್ಯಂತ 35 ಬಾರಿ ಕ್ಷೇತ್ರ ಕಾರ್ಯ ನಡೆಸಿ, ಸಹಸ್ರಾರು ಅಪೂರ್ವ ಜಾನಪದ ವಸ್ತುಗಳನ್ನು ಸಂಗ್ರಹಿಸಿದರು. ಬ್ರಿಟಿಷ್‌ಕೌನ್ಸಿಲ್ ಆಮಂತ್ರಣದ ಮೇರೆಗೆ 1992ರ ಏಪ್ರಿಲ್‌ನಲ್ಲಿ ಇಂಗ್ಲೆಂಡ್‌ಪ್ರವಾಸ ಮಾಡಿದರು. ಅಲ್ಲಿನ ಸಂಗ್ರಹಾಲಯಗಳ ಬಗ್ಗೆ ಅಧ್ಯಯನ ನಡೆಸಿ, ‘ರಗ್‌ಬಿ’ ಏಕವ್ಯಕ್ತಿ ಪ್ರದರ್ಶನ ಏರ್ಪಡಿಸಿದ್ದರು.
ಕಂಸಾಳೆ ಮಹದೇವಯ್ಯ ಅವರ ಬಳಿ ಕಂಸಾಳೆ ತರಬೇತಿ ಪಡೆದರು. ಡಿ.ಪಟೇಲ್‌ನರಸಪ್ಪ ಅವರ ಬಳಿ ಮೂಡಲಪಾಯ ಯಕ್ಷಗಾನ, ಸಿದ್ದಪ್ಪ ಕೊನೇಹಳ್ಳಿ ಅವರ ಬಳಿ ಕರಪಾಲ ಮೇಳ ತರಬೇತಿ ಪಡೆದರು. 1975 ರಿಂದಲೂ ಶಾಲಾ- ಕಾಲೇಜುಗಳಲ್ಲಿ ಪ್ರಾತ್ಯಕ್ಷಿಕೆ, ಪ್ರದರ್ಶನ ಏರ್ಪಡಿಸುತ್ತಾ ಬಂದರು.
ಬಾಗಲಕೋಟೆ ನವನಗರ ಸಾಂಸ್ಕೃತಿಕ ವಸ್ತು ಸಂಗ್ರಹಾಲಯ, ಹಂಪಿ ಕನ್ನಡ ವಿವಿ ವಸ್ತು ಸಂಗ್ರಹಾಲಯ, ಸುತ್ತೂರು ಶ್ರೀಮಠದ ಜಾನಪದ ವಸ್ತು ಸಂಗ್ರಹಾಲಯ, ಸಹ್ಯಾದ್ರಿ ದೇಸಿ ವಸ್ತು ಸಂಗ್ರಹಾಲಯ, ಪಿಳಿಕುಳ ನಿಸರ್ಗಧಾಮ ಸೇರಿದಂತೆ ರಾಜ್ಯದ ನಾನಾ ಜಾನಪದ ವಸ್ತು ಸಂಗ್ರಹಾಲಯಗಳಿಗೆ ತಜ್ಞ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ್ದಾರೆ. ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ಆಂಗಿಕ, ಭಾಷಿಕ ಮತ್ತು ವ್ಯಕ್ತಿತ್ವ ಅಂಶಗಳನ್ನಿಟ್ಟುಕೊಂಡು 280 ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ. ಕುವೆಂಪು, ಶ್ರೀರಂಗ ಮೊದಲಾದ ದಿಗ್ಗಜರ ನಾಟಕಗಳನ್ನು ರಂಗಪ್ರಯೋಗ ಮಾಡಿದ್ದಾರೆ. 10 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಸೇರಿದಂತೆ 109 ನಾಟಕಗಳಲ್ಲಿ ನಟಿಸಿದ್ದಾರೆ. ಹಲವಾರು ನಾಟಕಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಇವರು ಅಭಿನಯಿಸಿದ ನಾಟಕಗಳು ದೂರದರ್ಶನದಲ್ಲೂ ಪ್ರಸಾರವಾಗಿವೆ. ಜಾಣನರಿ- ಮಕ್ಕಳ ಪುಸ್ತಕ, ಜಾನವದ ವಸ್ತು ಸಂಗ್ರಹಾಲಯ- ಸಂಪಾದಿತ ಕೃತಿ ಪ್ರಕಟಿಸಿದ್ದಾರೆ.
13 ರಂದು ಸನ್ಮಾನ:
ಕದಂಬ ರಂಗವೇದಿಕೆಯು ಯು,ಎಸ್. ರಾಮಣ್ಣ ಅವರನ್ನು ಮೇ 13ರಂದು ಬೆಳಗ್ಗೆ 11ಕ್ಕೆ ವಿಜಯನಗರದ ಶ್ರೀಕಲಾನಿಕೇತನ ಕಲಾ ಶಾಲೆಯಲ್ಲಿ ಸನ್ಮಾನಿಸಲಿದೆ. ಚಿತ್ರಗಳ ಪ್ರದರ್ಶನವನ್ನು ಹಿರಿಯ ಜಾನಪದ ವಿದ್ವಾಂಸ ಡಾ.ಡಿ.ಕೆ. ರಾಜೇಂದ್ರ ಉದ್ಘಾಟಿಸುವರು. ರಂಗ ನಿರ್ದೇಶಕ ಪ್ರೊ.ಎಚ್.ಎಸ್. ಉಮೇಶ್ ಅಭಿನಂದನಾ ಭಾಷಣ ಮಾಡುವರು. ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಪ್ರಾಸ್ತಾವಿಕ ಭಾಷಣ ಮಾಡುವರು. ಶಾಲೆಯ ಪ್ರಾಂಶುಪಾಲ ಕೆ.ಸಿ. ಮಹದೇವಶೆಟ್ಟಿ ಅಧ್ಯಕ್ಷತೆ ವಹಿಸುವರು.