ಇವತ್ತು ಜಗತ್ತಿನಲ್ಲಿ ಎಲ್ಲರೂ ಆಧ್ಯಾತ್ಮದ ಪಾಠ ಮಾಡುವವರೇ - ಬದುಕಲು ಕಲಿಯಿರಿ

Published : Sep 20, 2026, 12:45 PM IST
Meditation

ಸಾರಾಂಶ

ಇವತ್ತು ಜಗತ್ತಿನಲ್ಲಿ ಎಲ್ಲರೂ ಆಧ್ಯಾತ್ಮದ ಪಾಠ ಮಾಡುವವರೇ. ಯಾರನ್ನಾದರೂ ಸುಮ್ಮನೆ ಐದು ನಿಮಿಷ ನೋಡುತ್ತಾ ಕುಳಿತರೆ, ಅವರು ನಮ್ಮ ಬದುಕನ್ನು ಸರಿಪಡಿಸುವ ಯಾವುದಾದರೂ ಒಂದು ಸಲಹೆ ಕೊಟ್ಟುಬಿಡುತ್ತಾರೆ.

- ಜೋಗಿ

ಇವತ್ತು ಜಗತ್ತಿನಲ್ಲಿ ಎಲ್ಲರೂ ಆಧ್ಯಾತ್ಮದ ಪಾಠ ಮಾಡುವವರೇ. ಯಾರನ್ನಾದರೂ ಸುಮ್ಮನೆ ಐದು ನಿಮಿಷ ನೋಡುತ್ತಾ ಕುಳಿತರೆ, ಅವರು ನಮ್ಮ ಬದುಕನ್ನು ಸರಿಪಡಿಸುವ ಯಾವುದಾದರೂ ಒಂದು ಸಲಹೆ ಕೊಟ್ಟುಬಿಡುತ್ತಾರೆ. ಹೇಗೆ ಬದುಕಬೇಕು, ಹೇಗೆ ನೋವನ್ನು ಎದುರಿಸಬೇಕು, ಹೇಗೆ ಸಂತೋಷವಾಗಿರಬೇಕು, ಹೇಗೆ ಸಂಬಂಧಗಳನ್ನು ಉಳಿಸಿಕೊಳ್ಳಬೇಕು, ಹೇಗೆ ದುಡ್ಡು ಮಾಡಬೇಕು, ಹೇಗೆ ದುಡ್ಡನ್ನು ಖರ್ಚು ಮಾಡಬೇಕು, ಬೆಳಿಗ್ಗೆ ಎಷ್ಟು ಗಂಟೆಗೆ ಏಳಬೇಕು, ಎಷ್ಟು ಹೊತ್ತು ಮಲಗಬೇಕು, ದಿನಕ್ಕೆ ಎಷ್ಟು ಹೆಜ್ಜೆ ನಡೆಯಬೇಕು, ಏನು ತಿನ್ನಬೇಕು, ಏನು ತಿನ್ನಬಾರದು, ಯಾರನ್ನು ಪ್ರೀತಿಸಬೇಕು, ಯಾರಿಂದ ದೂರ ಇರಬೇಕು- ಹೀಗೆ ಸಲಹೆಗಳ ಸರಮಾಲೆಯೇ ಎದುರಾಗುತ್ತದೆ. ಜೀವನದಲ್ಲಿ ಏನು ಮಾಡಬೇಕು ಎನ್ನುವುದಕ್ಕಿಂತ ನೀನು ಏನು ಮಾಡಬೇಕು ಎಂದು ಹೇಳುವವರ ಸಂಖ್ಯೆಯೇ ಜಾಸ್ತಿಯಾಗಿದೆ. ನಾವು ಬದುಕುತ್ತಿರುವ ಲೋಕ ಈಗ ‘ಹೌ ಟು ಡೂ ಇಟ್’ ಪ್ರಪಂಚ. ಬದುಕುವುದಕ್ಕಿಂತ ಬದುಕನ್ನು ಹೇಗೆ ನಡೆಸಬೇಕು ಎನ್ನುವುದೇ ದೊಡ್ಡ ಉದ್ಯಮವಾಗಿ ಹೋಗಿದೆ.

ತಮಾಷೆ ಅಂದರೆ, ಈ ಸಲಹೆ ಕೊಡುವ ಎಲ್ಲರೂ ತಮ್ಮ ಬದುಕಲ್ಲಿ ಇನ್ನೂ ಪ್ರಯೋಗ ಮಾಡುತ್ತಲೇ ಇರುವವರು. ಒಬ್ಬನಿಗೆ ತನ್ನ ಕೋಪವನ್ನು ಹೇಗೆ ನಿಯಂತ್ರಿಸಬೇಕು ಎನ್ನುವುದೇ ಗೊತ್ತಿಲ್ಲ. ಆದರೆ ಅವನು ಕೋಪವನ್ನು ನಿಯಂತ್ರಿಸುವುದರ ಬಗ್ಗೆ ಒಂದು ಗಂಟೆಯ ಉಪನ್ಯಾಸ ಮಾಡುತ್ತಾನೆ. ಇನ್ನೊಬ್ಬನಿಗೆ ರಾತ್ರಿ ಎರಡು ಗಂಟೆಯವರೆಗೂ ಮೊಬೈಲ್ ಬಿಟ್ಟು ಮಲಗಲಾಗುವುದಿಲ್ಲ. ಬೆಳಗ್ಗೆ ಎದ್ದು ‘ಬೆಳಗಿನ ಮೊದಲ ಒಂದು ಗಂಟೆ ನಿಮ್ಮ ಬದುಕನ್ನೇ ಬದಲಿಸುತ್ತದೆ’ ಎಂದು ರೀಲ್ ಮಾಡುತ್ತಾನೆ. ಮತ್ತೊಬ್ಬನಿಗೆ ತನ್ನ ಮನೆಯವರ ಜೊತೆ ಎರಡು ಮಾತು ಸರಿಯಾಗಿ ಮಾತನಾಡಲು ಆಗುವುದಿಲ್ಲ. ಆದರೆ ‘ಹೌ ಟು ಬಿಲ್ಡ್ ಹೆಲ್ತಿ ರಿಲೇಷನ್‌ಶಿಪ್ಸ್’ ಎನ್ನುವ ಪುಸ್ತಕ ಬರೆಯುತ್ತಾನೆ. ಬದುಕು ಅವನಿಗೇ ಪ್ರಶ್ನೆಪತ್ರಿಕೆ. ಉತ್ತರ ಗೊತ್ತಿಲ್ಲ. ಆದರೆ ಪಕ್ಕದವನಿಗೆ ಉತ್ತರ ಹೇಳುವುದರಲ್ಲಿ ಮಾತ್ರ ಅವನಿಗೆ ಯಾವ ಸಂಕೋಚವೂ ಇಲ್ಲ.

ಇದಕ್ಕಿಂತ ಇನ್ನೊಂದು ವಿಚಿತ್ರ ಇದೆ

ಇದಕ್ಕಿಂತ ಇನ್ನೊಂದು ವಿಚಿತ್ರ ಇದೆ. ಹದಿನೆಂಟು ವರ್ಷದ ಹುಡುಗ ಅರವತ್ತು ವರ್ಷದ ಮನುಷ್ಯನಿಗೆ ದಿನಕ್ಕೆ ಎಷ್ಟು ಹೆಜ್ಜೆ ನಡೆಯಬೇಕು ಎಂದು ಹೇಳುತ್ತಾನೆ. ಇಪ್ಪತ್ತೆರಡು ವರ್ಷದ ಹುಡುಗಿ ಐವತ್ತು ವರ್ಷದ ಹೆಂಗಸಿಗೆ ಜೀವನದಲ್ಲಿ ಹೇಗೆ ಆತ್ಮವಿಶ್ವಾಸದಿಂದ ಇರಬೇಕು ಎಂದು ಹೇಳುತ್ತಾಳೆ. ಇನ್ನೂ ಮದುವೆಯಾಗದವನು ದಾಂಪತ್ಯದ ರಹಸ್ಯಗಳನ್ನು ಹೇಳುತ್ತಾನೆ. ಮಕ್ಕಳಿಲ್ಲದವನು ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ಹೇಳುತ್ತಾನೆ. ಒಂದು ಕಾದಂಬರಿಯನ್ನೂ ಓದದವನು ಬದುಕಿನ ಅರ್ಥದ ಬಗ್ಗೆ ಮಾತನಾಡುತ್ತಾನೆ. ನಲವತ್ತು ವರ್ಷ ಬದುಕಿದವನು ತನ್ನ ಅನುಭವವನ್ನು ಹೇಳಿದರೆ ಅದು ಒಂದು ಅಭಿಪ್ರಾಯ. ಆದರೆ ನಾಲ್ಕು ವರ್ಷ ಬದುಕಿದವನು ಅದನ್ನೇ ‘ಲೈಫ್ ಲೆಸನ್’ ಎಂದು ಹೇಳಿದರೆ ಸಾವಿರ ಜನ ಕೇಳಲು ಕುಳಿತುಕೊಳ್ಳುತ್ತಾರೆ.

ಹಿಂದೆ ಜ್ಞಾನಕ್ಕೆ ಒಂದು ಅಂತರ ಇತ್ತು. ಯಾರಾದರೂ ಹಿರಿಯರಿದ್ದರೆ, ಅವರ ಬದುಕನ್ನು ನೋಡಿ ಏನಾದರೂ ಕಲಿಯಬಹುದು ಎಂದುಕೊಳ್ಳುತ್ತಿದ್ದೆವು. ಈಗ ಜ್ಞಾನಕ್ಕೆ ವಯಸ್ಸಿನ ಸಂಬಂಧವೇ ಇಲ್ಲ. ಮೊಬೈಲ್‌ನಲ್ಲಿ ಎರಡು ನಿಮಿಷ ಮಾತನಾಡಿದರೆ ಸಾಕು, ಒಬ್ಬನು ಗುರುವಾಗಿಬಿಡುತ್ತಾನೆ. ಒಂದು ಪುಸ್ತಕ ಓದಿದರೆ ತತ್ವಜ್ಞಾನಿ. ಐದು ಕಿಲೋ ತೂಕ ಇಳಿಸಿದರೆ ಆರೋಗ್ಯಗುರು. ಹತ್ತು ಲಕ್ಷ ದುಡ್ಡು ಉಳಿಸಿದರೆ ಹಣಕಾಸು ತಜ್ಞ. ಒಮ್ಮೆ ಹಿಮಾಲಯಕ್ಕೆ ಹೋಗಿ ಬಂದರೆ ಆಧ್ಯಾತ್ಮಿಕ ಗುರು. ಒಂದು ಸಲ ಪ್ರೀತಿಯಲ್ಲಿ ಬಿದ್ದು ಹೊರಬಂದರೆ ಸಂಬಂಧಗಳ ತಜ್ಞ. ತನ್ನ ಬದುಕಿನ ಒಂದು ಸಣ್ಣ ಅನುಭವವನ್ನೇ ಜಗತ್ತಿನ ಎಲ್ಲರಿಗೂ ಅನ್ವಯವಾಗುವ ನಿಯಮವನ್ನಾಗಿ ಮಾಡಿಕೊಳ್ಳುವ ಆತುರ ಎಲ್ಲರಲ್ಲೂ ಬಂದಿದೆ.

ಬದುಕು ಮಾತ್ರ ಹಾಗಲ್ಲ. ಅದು ಯಾರ ಮಾತನ್ನೂ ಕೇಳುವುದಿಲ್ಲ. ಒಬ್ಬನಿಗೆ ಬೆಳಗ್ಗೆ ಐದು ಗಂಟೆಗೆ ಎದ್ದರೆ ಯಶಸ್ಸು ಸಿಗಬಹುದು. ಇನ್ನೊಬ್ಬನಿಗೆ ಐದು ಗಂಟೆಗೆ ಎದ್ದರೆ ದಿನವೆಲ್ಲಾ ತಲೆನೋವು ಬರಬಹುದು. ಒಬ್ಬನಿಗೆ ಉಪವಾಸ ಒಳ್ಳೆಯದು. ಇನ್ನೊಬ್ಬನಿಗೆ ಊಟವೇ ನೆಮ್ಮದಿ. ಒಬ್ಬನಿಗೆ ಒಂಟಿತನದಲ್ಲಿ ಶಾಂತಿ ಸಿಗಬಹುದು. ಇನ್ನೊಬ್ಬನಿಗೆ ಜನರ ಮಧ್ಯೆಯೇ ಬದುಕು. ಒಬ್ಬನಿಗೆ ದುಡ್ಡು ಬೇಕು. ಇನ್ನೊಬ್ಬನಿಗೆ ಸಮಯ ಬೇಕು. ಒಬ್ಬನಿಗೆ ಮನೆ ಬೇಕು. ಮತ್ತೊಬ್ಬನಿಗೆ ಮನೆ ಬಿಟ್ಟು ಹೊರಟುಹೋಗಬೇಕು. ಬದುಕು ಒಂದೇ ಮಾದರಿಯ ಅಂಗಿ ಅಲ್ಲ. ಎಲ್ಲರಿಗೂ ಒಂದೇ ಅಳತೆ ಆಗಿ ಬರುವುದಿಲ್ಲ.

ಆದರೆ ಇವತ್ತು ನಾವು ಬದುಕನ್ನೂ ಹಾಗೆಯೇ ಅಳತೆ ಹಾಕುತ್ತಿದ್ದೇವೆ. ಬೆಳಿಗ್ಗೆ ಎದ್ದ ಸಮಯದಿಂದ ರಾತ್ರಿ ಮಲಗುವ ಸಮಯದವರೆಗೆ ಎಲ್ಲಕ್ಕೂ ಒಂದು ಸೂತ್ರ ಬೇಕು. ಸಂತೋಷಕ್ಕೂ ವಿಧಾನ. ದುಃಖಕ್ಕೂ ವಿಧಾನ. ಪ್ರೀತಿಗೂ ವಿಧಾನ. ಯಶಸ್ಸಿಗೂ ವಿಧಾನ. ವಿಫಲತೆಯನ್ನೂ ಹೇಗೆ ಅನುಭವಿಸಬೇಕು ಎನ್ನುವುದಕ್ಕೂ ವಿಧಾನ. ‘ನೋವು ಬಂದಾಗ ಹೀಗೆ ಮಾಡಿ’, ‘ದುಃಖವಾದಾಗ ಹೀಗೆ ಯೋಚಿಸಿ’, ‘ಹಣ ಕಡಿಮೆಯಾದಾಗ ಹೀಗೆ ಮಾಡಿ’, ‘ಹಣ ಜಾಸ್ತಿಯಾದಾಗ ಹೀಗೆ ಹೂಡಿಕೆ ಮಾಡಿ’ -ಮನುಷ್ಯನ ಬದುಕಿನಲ್ಲಿ ಉಳಿದಿರುವುದು ಅನುಭವಿಸುವುದೇನಾ, ಇಲ್ಲವೇ ಸೂಚನೆಗಳನ್ನು ಪಾಲಿಸುವುದೇನಾ ಎನ್ನುವ ಅನುಮಾನ ಬರುತ್ತದೆ.

ಇದ್ದಕ್ಕಿದ್ದಂತೆ, ಈ ಜಗತ್ತು ಬದುಕುವುದನ್ನೇ ಮರೆತು ಬದುಕುವ ಬಗ್ಗೆ ಮಾತನಾಡಲು ಶುರುಮಾಡಿದೆಯೇನೋ?. ಊಟ ಮಾಡುವಾಗ ಊಟ ಮಾಡುವುದಿಲ್ಲ. ‘ಹೆಲ್ತಿ ಫುಡ್’ ತಿನ್ನುತ್ತಿದ್ದೇನೆ ಎಂದು ಯೋಚಿಸುತ್ತೇವೆ. ನಡೆಯುವಾಗ ನಡೆಯುವುದಿಲ್ಲ. ಎಷ್ಟು ಹೆಜ್ಜೆ ಆಯಿತು ಎಂದು ನೋಡುತ್ತೇವೆ. ಮಲಗುವಾಗ ಮಲಗುವುದಿಲ್ಲ. ಎಷ್ಟು ಗಂಟೆ ನಿದ್ರೆ ಆಯಿತು ಎಂದು ಬೆಳಗ್ಗೆ ನೋಡುತ್ತೇವೆ. ಪ್ರವಾಸಕ್ಕೆ ಹೋದಾಗ ಜಾಗವನ್ನು ನೋಡುವುದಿಲ್ಲ. ಫೋಟೋ ತೆಗೆದುಕೊಳ್ಳುತ್ತೇವೆ. ಪುಸ್ತಕ ಓದುವಾಗ ಕಥೆಯೊಳಗೆ ಹೋಗುವುದಿಲ್ಲ. ಅದರಿಂದ ಏನು ಕಲಿಯಬಹುದು ಎಂದು ಹುಡುಕುತ್ತೇವೆ. ಬದುಕಿನ ಅನುಭವವೂ ಈಗ ವರದಿಯಾಗಬೇಕಾಗಿದೆ.

ಒಂದು ಕಾಲದಲ್ಲಿ ಮನುಷ್ಯ ಬಾಳಿ ಬದುಕಿ ಸಂದ ನಂತರ ಅವನ ಬದುಕಿನಿಂದ ಯಾವುದಾದರೂ ಅರ್ಥವನ್ನು ನಾವು ಹುಡುಕುತ್ತಿದ್ದೆವು. ಈಗ ಬದುಕುವ ಮೊದಲೇ ಅರ್ಥವನ್ನು ಹುಡುಕುತ್ತಿದ್ದೇವೆ. ಏನು ಮಾಡಬೇಕು ಎಂದು ತಿಳಿದುಕೊಂಡು ಬದುಕು ಶುರುಮಾಡಬೇಕು ಎಂದುಕೊಳ್ಳುತ್ತಿದ್ದೇವೆ. ಆದರೆ ಬದುಕು ಹಾಗೆ ನಡೆಯುವುದಿಲ್ಲ. ಕೆಲವು ವಿಷಯಗಳನ್ನು ಮಾಡಿ ತಪ್ಪು ಮಾಡಿದ ಮೇಲೆ ಮಾತ್ರ ಗೊತ್ತಾಗುತ್ತದೆ. ಕೆಲವು ನೋವುಗಳನ್ನು ಅನುಭವಿಸಿದ ಮೇಲೆ ಮಾತ್ರ ಅವುಗಳ ಅರ್ಥ ಗೊತ್ತಾಗುತ್ತದೆ. ಕೆಲವು ಜನರನ್ನು ಕಳೆದುಕೊಂಡ ಮೇಲೆ ಮಾತ್ರ ಅವರ ಬೆಲೆ ಗೊತ್ತಾಗುತ್ತದೆ. ಕೆಲವು ದಾರಿಗಳು ತಪ್ಪು ಎಂದು ತಿಳಿಯಲು ಆ ದಾರಿಯಲ್ಲಿ ಸ್ವಲ್ಪ ದೂರ ನಡೆಯಲೇಬೇಕು. ಬದುಕಿಗೆ ಮುಂಚಿತವಾಗಿ ಸಂಪೂರ್ಣ ಮಾರ್ಗಸೂಚಿ ಸಿಗುವುದಿಲ್ಲ.

ಹೀಗಾಗಿ ನನಗೆ ಇವತ್ತಿನ ಈ ‘ಬದುಕುವುದನ್ನು ಕಲಿಸುವ’ ಜಗತ್ತನ್ನು ನೋಡಿದಾಗ ನಗು ಬರುತ್ತದೆ. ಎಲ್ಲರೂ ಶಿಕ್ಷಕರು. ವಿದ್ಯಾರ್ಥಿಗಳು ಮಾತ್ರ ಯಾರೂ ಇಲ್ಲ. ಎಲ್ಲರೂ ತಮ್ಮದೇ ಬದುಕಿನ ಬಗ್ಗೆ ಸಲಹೆ ಕೊಡುತ್ತಿದ್ದಾರೆ. ಆದರೆ ರಾತ್ರಿ ಒಬ್ಬೊಬ್ಬರೂ ತಮ್ಮ ತಮ್ಮ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಾಗ, ಅವರಿಗೆ ಗೊತ್ತಾಗುತ್ತದೆ- ಬದುಕಿನ ಕೆಲವು ಪ್ರಶ್ನೆಗಳಿಗೆ ಗೂಗಲ್‌ನಲ್ಲೂ ಉತ್ತರವಿಲ್ಲ, ಗುರುಗಳ ಬಳಿಯೂ ಇಲ್ಲ, ಪುಸ್ತಕದಲ್ಲೂ ಇಲ್ಲ. ಅಲ್ಲಿಂದ ಶುರುವಾಗುತ್ತದೆ ನಿಜವಾದ ಬದುಕು. ಅಲ್ಲಿ ನಾವು ಇನ್ನೊಬ್ಬರಿಗೆ ಕಲಿಸಲು ಸಾಧ್ಯವಿಲ್ಲ. ನಮ್ಮದೇ ಬದುಕಿನ ಜೊತೆಗೆ ಕುಳಿತುಕೊಳ್ಳಬೇಕು.

ಬಹುಶಃ ಆಧ್ಯಾತ್ಮ ಎಂದರೆ ಇದೇ ಇರಬಹುದು. ಮತ್ತೊಬ್ಬರಿಗೆ ಹೇಗೆ ಬದುಕಬೇಕು ಎಂದು ಹೇಳುವುದಲ್ಲ. ನಮ್ಮ ಬದುಕನ್ನು ನಾವು ಸ್ವಲ್ಪ ಗಮನಿಸುವುದು. ಎಷ್ಟು ಹೆಜ್ಜೆ ನಡೆದಿದ್ದೇವೆ ಎನ್ನುವುದಕ್ಕಿಂತ, ನಡೆದ ದಾರಿಯಲ್ಲಿ ಏನು ನೋಡಿದ್ದೇವೆ ಎನ್ನುವುದು. ಎಷ್ಟು ದುಡ್ಡು ಮಾಡಿದ್ದೇವೆ ಎನ್ನುವುದಕ್ಕಿಂತ, ಅದಕ್ಕಾಗಿ ಏನು ಕಳೆದುಕೊಂಡಿದ್ದೇವೆ ಎನ್ನುವುದು. ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ, ಆ ವರ್ಷಗಳಲ್ಲಿ ನಿಜವಾಗಿ ಎಷ್ಟು ಬದುಕಿದ್ದೇವೆ ಎನ್ನುವುದು.

ಉಳಿದದ್ದೆಲ್ಲ ನಿರರ್ಥಕ ‘ಹೌ ಟು’. ಬದುಕು ಮಾತ್ರ ಇನ್ನೂ ‘ಹೇಗೆ’ ಎನ್ನುವುದನ್ನು ಯಾರಿಗೂ ಹೇಳಿಕೊಟ್ಟಿಲ್ಲ.

PREV
Read more Articles on

Recommended Stories

ಎಐ ಅಭಿವೃದ್ಧಿಗಿಂತ ತ್ವರಿತ ನಿಯಂತ್ರಣ ಅಗತ್ಯ
‘ಸಿಕ್ಕಿಂ ಗಡಿ’ ದೇಶದಲ್ಲೇ ಅತಿ ವಿಭಿನ್ನ ಪ್ರವಾಸೋದ್ಯಮ ತಾಣ