ಎಐ ಕೇವಲ ಹಾನಿಕಾರಕ ವಿಷಯವನ್ನು ಸೃಷ್ಟಿಸುವ ಸಾಧನವಾಗಿ ಉಳಿದಿಲ್ಲ. ಬದಲಿಗೆ ಇತರೆ ಸಾಫ್ಟ್‌ವೇರ್‌ಗಳೊಂದಿಗೆ ಸಂಪರ್ಕ ಸಾಧಿಸಿ, ಒಂದು ಕಾರ್ಯಾಚರಣೆಯ ಹಲವು ಹಂತಗಳನ್ನು ಏಕಕಾಲದಲ್ಲಿ ಸಂಘಟಿಸುವ ಸಾಮರ್ಥ್ಯ ಗಳಿಸಿದೆ.

 ರಾಜೀವ್‌ ಚಂದ್ರಶೇಖರ್‌ 

ಭಾರತ ಸರ್ಕಾರದ ಮಾಜಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ

ಎಐ ಕೇವಲ ಹಾನಿಕಾರಕ ವಿಷಯವನ್ನು ಸೃಷ್ಟಿಸುವ ಸಾಧನವಾಗಿ ಉಳಿದಿಲ್ಲ. ಬದಲಿಗೆ ಇತರೆ ಸಾಫ್ಟ್‌ವೇರ್‌ಗಳೊಂದಿಗೆ ಸಂಪರ್ಕ ಸಾಧಿಸಿ, ಒಂದು ಕಾರ್ಯಾಚರಣೆಯ ಹಲವು ಹಂತಗಳನ್ನು ಏಕಕಾಲದಲ್ಲಿ ಸಂಘಟಿಸುವ ಸಾಮರ್ಥ್ಯ ಗಳಿಸಿದೆ. ಪರಿಣಾಮ, ಮೊದಲಿಗಿಂತ ಕಡಿಮೆ ಜನ ಮತ್ತು ಪರಿಣತಿ ಇದ್ದರೂ ಅತ್ಯಾಧುನಿಕ ದಾಳಿಗಳನ್ನು ನಡೆಸಲು ಸಾಧ್ಯವಾಗುತ್ತದೆ. ಸಾಲದ್ದಕ್ಕೆ ಅವು ಉಂಟುಮಾಡಬಲ್ಲ ಹಾನಿಯ ವೇಗ, ವ್ಯಾಪ್ತಿ ಮತ್ತು ತೀವ್ರತೆ ಹಿಂದೆಂದಿಗಿಂತ ಹೆಚ್ಚಿದೆ.

ಕೃತಕ ಬುದ್ಧಿಮತ್ತೆಯ (ಎಐ) ದುರುಪಯೋಗದ ಬಗ್ಗೆ ಆ್ಯಂಥ್ರೋಪಿಕ್‌ ಕಂಪನಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದರ ಬೆನ್ನಲ್ಲೇ ಸಿಇಒ ಡಾರಿಯೊ ಅಮೋಡೆ, ಎಐ ಅಭಿವೃದ್ಧಿಪಡಿಸುವ ವೇಗವನ್ನು ತಗ್ಗಿಸಬೇಕು ಎಂದು ಕರೆ ನೀಡಿದ್ದರು. ಇದಕ್ಕೆ ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಮತ್ತು ಎಲಾನ್ ಮಸ್ಕ್ ಕೂಡ ದನಿಗೂಡಿಸಿದ್ದರು. ಮೂವರು ಹೇಳಿದ್ದಿಷ್ಟೆ, ‘ಎಐ ಕಂಪನಿಗಳು ಇನ್ನು ಮುಂದೆ ಸ್ವಯಂಪ್ರೇರಿತವಾಗಿ ತಮ್ಮನ್ನು ತಾವೇ ನಿಯಂತ್ರಿಸಿಕೊಳ್ಳುತ್ತವೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಕಠಿಣ ಸುರಕ್ಷತಾ ನಿಯಮಗಳು ಮತ್ತು ರಕ್ಷಣಾತ್ಮಕ ಕ್ರಮಗಳ ಅಗತ್ಯವಿವೆ’ ಎಂದು.

ವರದಿಯಲ್ಲೇನಿದೆ?:

ಸೆ.10ರಂದು ಆ್ಯಂಥ್ರೋಪಿಕ್‌ ಬಿಡುಗಡೆ ಮಾಡಿದ 154 ಪುಟಗಳ ವರದಿಯಲ್ಲಿ, ಎಐ ಅನ್ನು ಯಾವೆಲ್ಲಾ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ವಿವರಿಸಲಾಗಿದೆ. ರಷ್ಯಾ ನಂಟಿನ ಗುಂಪೊಂದು, ತನ್ನ ಮಾಲ್‌ವೇರ್ ಪತ್ತೆ ಆಗುವುದನ್ನು ತಪ್ಪಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿತು. ಇನ್ನೊಂದು ಪ್ರಕರಣದಲ್ಲಿ ಬಾಂಗ್ಲಾದೇಶದ ವ್ಯಕ್ತಿಯೊಬ್ಬ 29 ಖಾತೆಗಳನ್ನು ಬಳಸಿಕೊಂಡು ಬಂಗಾಳಿ ಭಾಷೆಯಲ್ಲಿ ಸುಮಾರು 1,500 ನಕಲಿ ಸುದ್ದಿಗಳನ್ನು ಸೃಷ್ಟಿಸಿ, ಅವನ್ನು ಫೇಸ್‌ಬುಕ್, ಯೂಟ್ಯೂಬ್ ಮತ್ತು ಟಿಕ್‌ಟಾಕ್ ಮೂಲಕ ಹರಡುತ್ತಿದ್ದ. ಚೀನೀ ಭಾಷೆ ಮಾತನಾಡುವ ಗುಂಪೊಂದು ಸರ್ಕಾರ, ಆರೋಗ್ಯ, ಹಣಕಾಸು ಮತ್ತು ಇಂಧನದಂತಹ ಕ್ಷೇತ್ರಗಳ ಸುಮಾರು 50 ಸಂಸ್ಥೆಗಳ ಮೇಲೆ ದಾಳಿ ನಡೆಸಿತು. ಎಐ ಬಳಸಿ ಜೈವಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಯ ಬಗ್ಗೆಯೂ ಸಂಶೋಧನೆ ನಡೆಸಲಾಗಿತ್ತು.

ಅದೃಷ್ಟವಶಾತ್‌ ಇಂತಹ ಹಲವು ಪ್ರಕರಣಗಳನ್ನು ಪತ್ತೆಹಚ್ಚಿದ ಆ್ಯಂಥ್ರೋಪಿಕ್‌, ಕೂಡಲೇ ಅವುಗಳನ್ನು ನಿಲ್ಲಿಸಿತ್ತು.

ಎಐ ಸ್ವರೂಪ ಬದಲಾಗುತ್ತಿದೆ:

ಎಐ ಈಗ ಕೇವಲ ಹಾನಿಕಾರಕ ವಿಷಯವನ್ನು ಸೃಷ್ಟಿಸುವ ಸಾಧನವಾಗಿ ಉಳಿದಿಲ್ಲ. ಬದಲಿಗೆ ಇತರೆ ಸಾಫ್ಟ್‌ವೇರ್‌ಗಳೊಂದಿಗೆ ಸಂಪರ್ಕ ಸಾಧಿಸಿ, ಒಂದು ಕಾರ್ಯಾಚರಣೆಯ ಹಲವು ಹಂತಗಳನ್ನು ಏಕಕಾಲದಲ್ಲಿ ಸಂಘಟಿಸುವ ಸಾಮರ್ಥ್ಯ ಗಳಿಸಿಕೊಂಡಿದೆ. ಇದರ ಪರಿಣಾಮವಾಗಿ, ಮೊದಲಿಗಿಂತ ಕಡಿಮೆ ಜನರು ಮತ್ತು ಕಡಿಮೆ ಪರಿಣತಿ ಇದ್ದರೂ ಅತ್ಯಾಧುನಿಕ ದಾಳಿಗಳನ್ನು ನಡೆಸಲು ಸಾಧ್ಯವಾಗುತ್ತದೆ. ಸಾಲದ್ದಕ್ಕೆ ಅವು ಉಂಟುಮಾಡಬಲ್ಲ ಹಾನಿಯ ವೇಗ, ವ್ಯಾಪ್ತಿ ಮತ್ತು ತೀವ್ರತೆ ಹಿಂದೆಂದಿಗಿಂತ ಹೆಚ್ಚಿದೆ.

ಇದು ಇಲ್ಲಿಗೇ ನಿಲ್ಲದು. ತನ್ನ ಅತ್ಯಂತ ಸಮರ್ಥವಾದ ಎಐ ಟೂಲ್‌ಗಳು ಕೆಲವೊಮ್ಮೆ ಜೈವಿಕ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಸಂಶೋಧನೆಯಲ್ಲಿ ಪರಿಣಿತ ಬಳಕೆದಾರರಿಗೆ ನೆರವಾಗಬಹುದು ಎಂದು ಆ್ಯಂಥ್ರೋಪಿಕ್‌ ಒಪ್ಪಿಕೊಂಡಿದೆ. ಇದರರ್ಥ ಎಐ ಅನ್ನು ನಿಯಂತ್ರಿಸುವ ವ್ಯವಸ್ಥೆ ಸದ್ಯ ಸಾಕಷ್ಟು ಅಭಿವೃದ್ಧಿ ಆಗಿಲ್ಲವಾದ್ದರಿಂದ, ಗಂಭೀರ ಹಾನಿಯನ್ನು ತಡೆಗಟ್ಟಲು ಪ್ರಸ್ತುತ ಇರುವ ರಕ್ಷಣಾ ಕ್ರಮಗಳು ಸಾಕಾಗದೇ ಇರಬಹುದು ಎಂಬ ಎಚ್ಚರಿಕೆಯನ್ನು ಪರೋಕ್ಷವಾಗಿ ನೀಡಿದೆ.

ಬಾಂಗ್ಲಾ ಘಟನೆ ಭಾರತಕ್ಕೆ ಪಾಠ:

ಮೇಲೆ ತಿಳಿಸಲಾದ ಬಾಂಗ್ಲಾದ ಘಟನೆಯು ಭಾರತದ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ. ಆ ವ್ಯಕ್ತಿ ಮಾಡಿದಂತೆ, ದೊಡ್ಡ ಮತ್ತು ವೈವಿಧ್ಯಮಯ ಜನಸಂಖ್ಯೆಯನ್ನು ಹೊಂದಿರುವ ಯಾವುದೇ ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಮಾಡುವ ಸಾಧ್ಯತೆ ಇದೆ. ಹಿಂದಿ, ತಮಿಳು, ತೆಲುಗು, ಬೆಂಗಾಳಿ, ಮರಾಠಿಯಂತಹ ಭಾರತೀಯ ಭಾಷೆಗಳಲ್ಲಿ ಒಂದೇ ಬಾರಿಗೆ ಅಪಾರ ಪ್ರಮಾಣದ ತಪ್ಪು ಮಾಹಿತಿಯನ್ನು ಎಐ ಸೃಷ್ಟಿಸಿ ಹರಡಬಲ್ಲದು. ಹೀಗಾದಲ್ಲಿ, ಅವುಗಳನ್ನು ಪತ್ತೆ ಮಾಡುವುದು ಬಲು ಕಷ್ಟ. ಆದ್ದರಿಂದಲೇ, ವೇದಿಕೆಗಳು ಅಂತಹ ಚಟುವಟಿಕೆಗಳನ್ನು ಪತ್ತೆಹಚ್ಚಿ ತಡೆಯುವುದನ್ನು ಕಡ್ಡಾಯಗೊಳಿಸಬೇಕಿದೆ.

ಇನ್ನು ಅಲಿಬಾಬಾ ಪ್ರಕರಣಕ್ಕೆ ಬಂದರೆ, ಆ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಎಐ ಟೂಲ್‌ ಕ್ವೆನ್‌ಗೆ ತರಬೇತಿ ನೀಡಲು ನಕಲಿ ಖಾತೆಗಳ ಮೂಲಕ ಕ್ಲಾಡ್‌ ಕಂಪನಿಯ ಸಾಮರ್ಥ್ಯಗಳನ್ನು ಕದಿಯುವ ಯತ್ನ ನಡೆದಿತ್ತು. ಭಾರತ ಸ್ವಂತ ಎಐ ವ್ಯವಸ್ಥೆ ಅಭಿವೃದ್ಧಿಪಡಿಸಿಕೊಳ್ಳುವತ್ತ ಕೆಲಸ ಮಾಡುತ್ತಿರುವ ಹೊತ್ತಿನಲ್ಲಿ, ನಮ್ಮ ಮೇಲೆಯೂ ಇಂತಹ ಕಾರ್ಯಾಚರಣೆಗಳು ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಕೈಗೊಳ್ಳಬೇಕಾದ ಕ್ರಮಗಳೇನು?:

-ಎಐ ದುರುಪಯೋಗದ ಕಡ್ಡಾಯ ವರದಿ:

ಎಐ ಅನ್ನು ದುರುಪಯೋಗಪಡಿಸಿಕೊಂಡದ್ದು ಪತ್ತೆ ಆಗುತ್ತಿದ್ದಂತೆ ಎಲ್ಲಾ ದೊಡ್ಡ ಎಐ ವೇದಿಕೆಗಳು ಆ ಬಗ್ಗೆ ವರದಿ ಮಾಡುವುದನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಬೇಕು. ಈ ವರದಿಗಳನ್ನು ಸಿಇಆರ್‌ಟಿ-ಇನ್‌ ಮತ್ತು ನಿರ್ದಿಷ್ಟಪಡಿಸಿದ ಎಐ ಸುರಕ್ಷತಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು.

-ಎಐ ಲೇಬಲಿಂಗ್‌:

ಎಐ ಸೃಷ್ಟಿಸಿದ ಎಲ್ಲಾ ವಿಷಯಗಳ ಮೇಲೆ ‘ಎಐ ಸೃಷ್ಟಿತ’ ಎಂಬ ಲೇಬಲ್‌ ಅಥವಾ ವಾಟರ್‌ಮಾರ್ಕ್‌ ಇರಲೇಬೇಕು. ಹೀಗೆ ಮಾಡುವುದರಿಂದ ನಕಲಿ ವಿಷಯಗಳನ್ನು ಪತ್ತೆ ಮಾಡುವುದು ಸುಲಭವಾಗುತ್ತದೆ.

-ಹೊಣೆಗಾರಿಕೆ:

ಮಾನವ ಹಸ್ತಕ್ಷೇಪದ ಅಗತ್ಯವೇ ಇಲ್ಲದೆ ಹಲವು ಹಂತಗಳ ಕೆಲಸಗಳನ್ನು ತನ್ನಷ್ಟಕ್ಕೇ ಮಾಡಬಲ್ಲ ಎಐ ಟೂಲ್‌ಗಳೇ ಅದರ ಹೊಣೆ ಹೊರುವುದನ್ನು ಕಡ್ಡಾಯಗೊಳಿಸಬೇಕು.

-ಭಾರತದ ಎಐ ಮೂಲಸೌಕರ್ಯ ರಕ್ಷಣೆ:

ಎಐ ಮಾದರಿಗಳನ್ನು ನಕಲು ಮಾಡುವ ವ್ಯವಸ್ಥಿತ ಪ್ರಯತ್ನಗಳನ್ನು ನಿಷೇಧಿಸಬೇಕು. ಮತ್ತೊಂದು ಆ್ಯಪ್ ಅಥವಾ ಸಾಫ್ಟ್‌ವೇರ್ ಎಐ ಮಾದರಿಯನ್ನು ಬಳಸಲು ಅನುವು ಮಾಡಿಕೊಡುವ ಎಪಿಐಗಳಿಗೆ ಸಾಮೂಹಿಕ ಪ್ರವೇಶವನ್ನು ಅಪರಾಧೀಕರಿಸಬೇಕು.

-ಎಐ ಸುರಕ್ಷತಾ ಪ್ರಾಧಿಕಾರ ರಚನೆ:

ಎಐ ಸುರಕ್ಷತೆಗಾಗಿ ಪ್ರಾಧಿಕಾರವೊಂದನ್ನು ರಚಿಸಬೇಕು. ಅದಕ್ಕೆ ಎಐ ಕಂಪನಿಗಳಿಂದ ಮಾಹಿತಿ ಪಡೆಯುವ, ಭದ್ರತಾ ಸಮಸ್ಯೆಗಳ ತನಿಖೆ ನಡೆಸುವ, ಅಗತ್ಯವಿದ್ದರೆ ನಿರ್ಬಂಧಗಳನ್ನು ಹೇರುವ ಅಧಿಕಾರ ಕೊಡಬೇಕು.

ಭಾರತದ ಮುಂದಿರುವ ಅವಕಾಶ:

ನಾನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವನಾಗಿದ್ದಾಗ, ‘ಸುರಕ್ಷಿತ, ವಿಶ್ವಾಸಾರ್ಹ ಮತ್ತು ಹೊಣೆಗಾರಿಕೆಯುಳ್ಳ ತಂತ್ರಜ್ಞಾನ’ದ ತತ್ವಗಳ ಆಧಾರದ ಮೇಲೆ ವೇದಿಕೆ-ಹೊಣೆಗಾರಿಕೆ (ಸಾಮಾಜಿಕ ಪರಿಣಾಮಗಳಿಗೆ ಡಿಜಿಟಲ್ ವೇದಿಕೆಗಳನ್ನು ಹೊಣೆಗಾರರನ್ನಾಗಿ ಮಾಡುವ ನಿಯಮ) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿತ್ತು. 2021ರ ಐಟಿ ನಿಯಮಗಳು, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೃಹತ್ ವೇದಿಕೆಗಳಿಗೆ ಕಾನೂನುಬದ್ಧ ಜವಾಬ್ದಾರಿಗಳನ್ನು ನೀಡಿದವು.

ಸದ್ಯ ಅಮೆರಿಕವು ಎಐ ಮೇಲಿನ ನಿಯಂತ್ರಣ ಸಡಿಲಿಕೆಯತ್ತ ಒಲವುಳ್ಳ ರಾಜಕೀಯ ವಾತಾವರಣವನ್ನು ಎದುರಿಸುತ್ತಿದೆ. ಅತ್ತ ತಂತ್ರಜ್ಞಾನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ, ಐರೋಪ್ಯ ಒಕ್ಕೂಟ (ಇಯು) ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಅತ್ಯಂತ ತ್ವರಿತವಾಗಿ ರೂಪಿಸಿತು.

ಆದರೆ ಭಾರತವು ಎಐ ಆಡಳಿತ ಮಾದರಿಯನ್ನು ಅಭಿವೃದ್ಧಿಪಡಿಸುವ ವಿಷಯದಲ್ಲಿ ಸದೃಢ ಸ್ಥಿತಿಯಲ್ಲಿದೆ. ಕಾರಣ, ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಈಗಾಗಲೇ ಡಿಪಿಐ (ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ), ಆಧಾರ್‌, ಯುಪಿಐ, ಐಟಿ ನಿಯಮಗಳಂತಹ ದೊಡ್ಡ ಮಟ್ಟದ ನೀತಿಗಳನ್ನು ರೂಪಿಸಿದ ಅನುಭವವನ್ನು ಹೊಂದಿದೆ.

ಡೆವಲಪರ್‌ಗಳು ಮತ್ತು ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಎಐ ಸಂಬಂಧಿತ ಅಪಾಯಗಳು ಹೆಚ್ಚಾಗಲಿವೆ ಎಂದು ಆ್ಯಂಥ್ರೊಪಿಕ್ ಸಂಸ್ಥೆಯ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಮತ್ತು ಅದನ್ನು ಜಾರಿಗೊಳಿಸುವ ಸಂಸ್ಥೆಗಳು ‘ಸಮಾಜದ ರಕ್ಷಕರು’ ಆಗಿರುತ್ತಾರೆ ಹೊರತು ಈ ತಂತ್ರಜ್ಞಾನದಿಂದ ಲಾಭ ಪಡೆಯುವ ಕಂಪನಿಗಳು, ಸ್ವಂತ ನಿಯಮಗಳು ಅಥವಾ ಕಂಪನಿಗಳು ಪ್ರಕಟಿಸುವ ಪಾರದರ್ಶಕ ವರದಿಗಳೂ ಅಲ್ಲ.