ಒಬ್ಬ ರಾಜಕಾರಣಿ ಮುಂದಿನ ಚುನಾವಣೆಯ ಬಗ್ಗೆ ಯೋಚನೆ ಮಾಡುತ್ತಾನೆ. ಒಬ್ಬ ಮುತ್ಸದ್ದಿ ಜನನಾಯಕ ಮುಂದಿನ ಜನಾಂಗದ ಬಗ್ಗೆ ಯೋಚಿಸುತ್ತಾರೆ. ಪ್ರಧಾನಿ ಮೋದಿಯವರು ದೇಶದ ಮುಂದಿನ ಜನಾಂಗದ ಬಗ್ಗೆ ಯೋಚಿಸುವ ನಾಯಕರಾಗಿದ್ದು, ಆತ್ಮನಿರ್ಭರತೆಯ ಮೂಲಕ 2047ಕ್ಕೆ ವಿಕಸಿತ ಭಾರತವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದು ಅದೇ ದಾರಿಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ
ಭಾರತದ ರಾಜಕಾರಣ ಮತ್ತು ಜಾಗತಿಕ ಭೂಪಟದಲ್ಲಿ ಕಳೆದ ಒಂದು ದಶಕದಲ್ಲಿ ಅತ್ಯಂತ ಮಹತ್ವದ ಬದಲಾವಣೆಗಳು ಕಂಡು ಬಂದಿವೆ. 2014ರಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಯವರು ಭಾರತವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸುವಲ್ಲಿ ಐತಿಹಾಸಿಕ ಹೆಜ್ಜೆಗಳನ್ನು ಇಟ್ಟಿದ್ದಾರೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಎಂಬ ಧ್ಯೇಯದೊಂದಿಗೆ ಅವರು ಕೈಗೊಂಡಿರುವ ಜನಪರ ನೀತಿಗಳು ಹಾಗೂ ದೂರದೃಷ್ಟಿಯ ಆಡಳಿತವು ಇಂದು ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿ ರೂಪಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ಭಾರತದ ಆರ್ಥಿಕತೆಯು ತೀವ್ರಗತಿಯಲ್ಲಿ ಪ್ರಗತಿಯನ್ನು ಸಾಧಿಸಿದೆ. ಒಂದು ಕಾಲದಲ್ಲಿ ವಿಶ್ವದ ದುರ್ಬಲ ಆರ್ಥಿಕತೆಗಳ ಸಾಲಿನಲ್ಲಿ ಕಾಣಿಸುತ್ತಿದ್ದ ಭಾರತ, ಇಂದು ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಮತ್ತು ಶೀಘ್ರದಲ್ಲೇ ಮೂರನೇ ಸ್ಥಾನಕ್ಕೇರುವ ಹಾದಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಹಾಗೂ ಬಿಕ್ಕಟ್ಟುಗಳಿದ್ದರೂ, ಭಾರತ ಶೇ.7.8 ಕ್ಕಿಂತ ಹೆಚ್ಚಿನ ಬೆಳವಣಿಗೆ ದರ ಕಾಯ್ದುಕೊಳ್ಳುವ ಮೂಲಕ ಅಮೆರಿಕ ಹಾಗೂ ರಷ್ಯಾದಂಥ ದೊಡ್ಡ ರಾಷ್ಟ್ರಗಳಿಗಿಂತಲೂ ಮುಂಚೂಣಿಯಲ್ಲಿದೆ.
ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಮತ್ತು ಆತ್ಮನಿರ್ಭರ ಭಾರತದಂತಹ ಮಹತ್ವಾಕಾಂಕ್ಷಿ ಯೋಜನೆಗಳು ದೇಶದ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜೊತೆಗೆ ದೇಶವನ್ನು ಉತ್ಪಾದನಾ ಕೇಂದ್ರವನ್ನಾಗಿ ಪರಿವರ್ತಿಸುತ್ತಿವೆ. ಇಂದು ಭಾರತದಲ್ಲಿ ತಯಾರಾಗುವ ‘ಯುಪಿಐ’ ಡಿಜಿಟಲ್ ಪಾವತಿ ವ್ಯವಸ್ಥೆಯು ವಿಶ್ವದ ಗಮನ ಸೆಳೆದಿದ್ದು, ಜಾಗತಿಕ ಡಿಜಿಟಲ್ ವಹಿವಾಟಿನಲ್ಲಿ ಭಾರತ ಮುಂಚೂಣಿಯಲ್ಲಿದೆ.
ಸಾಮಾಜಿಕ ಕಲ್ಯಾಣ:
ಸಾಮಾಜಿಕ ಭದ್ರತೆ ಮತ್ತು ಬಡವರ ಕಲ್ಯಾಣಕ್ಕೆ ಪ್ರಧಾನಿ ಮೋದಿಯವರು ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಜನ್ ಧನ್ ಯೋಜನೆ ಮೂಲಕ ಕೋಟ್ಯಂತರ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ತರಲಾಗಿದೆ. ದೇಶಾದ್ಯಂತ ಸುಮಾರು 4 ಕೋಟಿ ಮನೆಗಳ ನಿರ್ಮಾಣ. ಸ್ವಚ್ಛ ಭಾರತ ಅಭಿಯಾನದಡಿ 12 ಕೋಟಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಜಲಜೀವನ್ ಮಿಷನ್ ಅಡಿ ಸುಮಾರು 60 ಕೋಟಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಉಜ್ವಲಾ ಯೋಜನೆ ಮೂಲಕ ಎಲ್ಲಾ ಮನೆಗಳಿಗೆ ಎಲ್ಪಿಜಿ ಗ್ಯಾಸ್ ಸಂಪರ್ಕ ನೀಡುವ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿ ಮೋದಿ ಸರ್ಕಾರದಿಂದ 80 ಕೋಟಿ ಜನರಿಗೆ ತಲಾ 5 ಕೆ.ಜಿ. ಉಚಿತ ಅಕ್ಕಿ ವಿತರಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳ ಫಲವಾಗಿ ಸುಮಾರು 25 ಕೋಟಿ ಜನ ಬಡತನ ರೇಖೆಯಿಂದ ಹೊರಬಂದಿದ್ದಾರೆ. ಇದಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ರೈಲ್ವೆ ಜಾಲದ ಆಧುನೀಕರಣ, ವಂದೇ ಭಾರತ್ ರೈಲುಗಳು, ಮೆಟ್ರೋ ರೈಲುಗಳ ವಿಸ್ತರಣೆ ಮತ್ತು ದೇಶಾದ್ಯಂತ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಳ್ಳುವ ಮೂಲಕ ದೇಶದ ಮೂಲಸೌಕರ್ಯ ವ್ಯವಸ್ಥೆಯು ಅತ್ಯಂತ ಸದೃಢಗೊಂಡಿದೆ.
ರಾಜತಾಂತ್ರಿಕ ಯಶಸ್ಸು:
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನಮಾನ ಸಂಪೂರ್ಣ ಬದಲಾಗಿದೆ. ಇಂದು ಜಗತ್ತಿನ ಯಾವುದೇ ಪ್ರಮುಖ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತದ ಅಭಿಪ್ರಾಯಕ್ಕೆ ಅತ್ಯುನ್ನತ ಮೌಲ್ಯವಿದೆ. ಇತ್ತೀಚೆಗೆ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯು ಇತಿಹಾಸ ಸೃಷ್ಟಿಸಿತು. ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಭಾರತೀಯ ಸನಾತನ ತತ್ವದಡಿ ಜಾಗತಿಕ ನಾಯಕರನ್ನು ಒಗ್ಗೂಡಿಸುವಲ್ಲಿ ಪ್ರಧಾನಿ ಮೋದಿಯವರು ಯಶಸ್ವಿಯಾದರು. ಆಫ್ರಿಕನ್ ಒಕ್ಕೂಟವನ್ನು ಜಿ-20ಗೆ ಶಾಶ್ವತ ಸದಸ್ಯರನ್ನಾಗಿ ಸೇರಿಸಿದ್ದು ಭಾರತದ ದೊಡ್ಡ ರಾಜತಾಂತ್ರಿಕ ವಿಜಯವಾಗಿದೆ.
ವಸುಧೈವ ಕುಟುಂಬ ಭಾವನೆ:
ಕೋವಿಡ್ ಮಹಾಮಾರಿಯ ಸಂಕಷ್ಟದ ಕಾಲದಲ್ಲಿ ಇಡೀ ವಿಶ್ವವೇ ತತ್ತರಿಸಿ ಹೋಗಿತ್ತು. ತಮ್ಮ ದೇಶದ ಪ್ರಜೆಗಳನ್ನು ಉಳಿಸಿಕೊಳ್ಳಲು ವ್ಯಾಕ್ಸಿನ್‌ಗಾಗಿ ಅನೇಕ ರಾಷ್ಟ್ರಗಳು ಪರದಾಡುತ್ತಿದ್ದವು. ಅಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ಉದಾತ್ತ ಗುಣಗಳಿಂದ ‘ವ್ಯಾಕ್ಸಿನ್ ಮೈತ್ರಿ’ಯಡಿ ವಿಶ್ವದ ನೂರಾರು ರಾಷ್ಟ್ರಗಳಿಗೆ ಲಸಿಕೆಗಳನ್ನು ಪೂರೈಸುವ ಮೂಲಕ ಭಾರತವು ‘ವಿಶ್ವಗುರು’ ಸ್ಥಾನದ ಕಡೆಗೆ ಹೆಜ್ಜೆ ಹಾಕಿತು. ಸಂಕಷ್ಟದಲ್ಲಿರುವ ಜಾಗತಿಕ ದೇಶಗಳಿಗೆ ಮೊದಲು ಸ್ಪಂದಿಸುವ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ.
ಸದೃಢ ವಿದೇಶಾಂಗ ನೀತಿ:
ಪ್ರಧಾನಿ ಮೋದಿಯವರು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಪ್ರಥಮ ಆದ್ಯತೆ ನೀಡಿ, ಜಾಗತಿಕ ಒತ್ತಡಗಳಿಗೆ ಮಣಿಯದೆ ಸ್ವತಂತ್ರ ವಿದೇಶಾಂಗ ನೀತಿ ಅನುಸರಿಸುವ ಮೂಲಕ ಭಾರತದ ಘನತೆ ಹೆಚ್ಚಿಸಿದ್ದಾರೆ. ಇಂದು ಅಮೆರಿಕ, ರಷ್ಯಾ, ಯುರೋಪ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಭಾರತವು ಸಮಾನತೆಯ ಮತ್ತು ಸ್ನೇಹಪರ ಸಂಬಂಧ ಹೊಂದಿದೆ. ರಷ್ಯಾ ಉಕ್ರೇನ್ ಯುದ್ದ, ಇರಾನ್ ಅಮೆರಿಕ ಯುದ್ದದ ಸಂದರ್ಭದಲ್ಲಿಯೂ ಪ್ರಧಾನಿ ಮೋದಿಯವರು ಯುದ್ಧನಿರತ ಎಲ್ಲ ನಾಯಕರೊಂದಿಗೂ ಸೌಹಾರ್ದಯುತ ಮಾತುಕತೆ ನಡೆಸಿ ಶಾಂತಿಯ ಮಂತ್ರ ಪಠಿಸಿದರು.
ಸಾಂಸ್ಕೃತಿಕ ಪುನರುತ್ಥಾನ:
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವಲ್ಲಿ ಪ್ರಧಾನಿ ಮೋದಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ. ಯೋಗದ ಮಹತ್ವ ವಿಶ್ವಕ್ಕೆ ಸಾರಿದ ಪರಿಣಾಮ, ಇಂದು ಜೂ.21ನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ವನ್ನಾಗಿ ಇಡೀ ವಿಶ್ವವೇ ಆಚರಿಸುವಂತಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ, ಕಾಶಿ ವಿಶ್ವನಾಥ ಕಾರಿಡಾರ್ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ತಾಣಗಳ ಜೀರ್ಣೋದ್ಧಾರವು ದೇಶದ ಜನರ ರಾಷ್ಟ್ರೀಯ ಹೆಮ್ಮೆಯನ್ನು ಇಮ್ಮಡಿಗೊಳಿಸಿವೆ.
ವಿಕಸಿತ ಭಾರತ:
ಒಬ್ಬ ರಾಜಕಾರಣಿ ಮುಂದಿನ ಚುನಾವಣೆಯ ಬಗ್ಗೆ ಯೋಚನೆ ಮಾಡುತ್ತಾನೆ. ಒಬ್ಬ ಮುತ್ಸದ್ದಿ ಜನನಾಯಕ ಮುಂದಿನ ಜನಾಂಗದ ಬಗ್ಗೆ ಯೋಚಿಸುತ್ತಾರೆ. ಪ್ರಧಾನಿ ಮೋದಿಯವರು ದೇಶದ ಮುಂದಿನ ಜನಾಂಗದ ಬಗ್ಗೆ ಯೋಚಿಸುವ ನಾಯಕರಾಗಿದ್ದು, ಆತ್ಮನಿರ್ಭರತೆಯ ಮೂಲಕ 2047ಕ್ಕೆ ವಿಕಸಿತ ಭಾರತವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದು ಅದೇ ದಾರಿಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.
ಪ್ರಧಾನಿ ಮೋದಿಯವರ ದೃಢ ನಿರ್ಧಾರಗಳು, ಕಠಿಣ ಪರಿಶ್ರಮ ಮತ್ತು ದೂರದೃಷ್ಟಿ ನಾಯಕತ್ವದಿಂದಾಗಿ ಇಂದು ಭಾರತವು ಬದಲಾಗುತ್ತಿರುವ ಜಗತ್ತಿನ ನಾಯಕತ್ವ ವಹಿಸುವತ್ತ ಸಾಗುತ್ತಿದೆ. ದೇಶೀಯವಾಗಿ ಆರ್ಥಿಕ ಹಾಗೂ ಸಾಮಾಜಿಕ ಸುಧಾರಣೆಗಳನ್ನು ತರುತ್ತಲೇ, ಜಾಗತಿಕ ಮಟ್ಟದಲ್ಲಿ ಭಾರತದ ಧ್ವನಿ ಬಲಪಡಿಸಿರುವ ಅವರ ಕೊಡುಗೆಯು ಎಂದೆಂದಿಗೂ ಸ್ಮರಣೀಯ. ಭಾರತವನ್ನು ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯುವ ಅವರ ಈ ಪಯಣ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೊಸ ಆಸೆ ಮತ್ತು ಭರವಸೆ ಮೂಡಿಸಿದೆ.
