ಲ್ಯಾಮ್ ರಿಸರ್ಚ್ ಕಾರ್ಪೊರೇಷನ್ ಭಾರತದಲ್ಲಿ ಅಂದಾಜು ₹10,000 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಈ ಕುರಿತ ವರದಿ ಇಲ್ಲಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು:

ಸೆಮಿಕಂಡಕ್ಟರ್ ತಯಾರಿಕಾ ಉಪಕರಣಗಳು ಮತ್ತು ಸೇವೆಗಳನ್ನು ಪೂರೈಸುವ ಜಾಗತಿಕ ಮುಂಚೂಣಿ ಸಂಸ್ಥೆ ಲ್ಯಾಮ್ ರಿಸರ್ಚ್ ಕಾರ್ಪೊರೇಷನ್ ಸೆಮಿಕಾನ್ ಇಂಡಿಯಾ 2026 ಸಮಾವೇಶದ ಸಂದರ್ಭದಲ್ಲಿ ಭಾರತದಲ್ಲಿ ಬೃಹತ್ ಹೂಡಿಕೆಗೆ ಮುಂದಾಗಿದ್ದು, ದೇಶದಲ್ಲಿ ತನ್ನ ಪ್ರಪ್ರಥಮ ಸಿಲಿಕಾನ್ ಬಿಡಿಭಾಗಗಳ ತಯಾರಿಕಾ ಘಟಕವನ್ನು ತೆರೆಯಲು ಹಾಗೂ ತನ್ನ ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಾಚರಣೆಗಳನ್ನು ಮತ್ತಷ್ಟು ವಿಸ್ತರಿಸಲು ಅಂದಾಜು ₹10,000 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ಈ ಯೋಜಿತ ಹೂಡಿಕೆಯು ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಪ್ರಮುಖ ವಲಯಗಳಲ್ಲಿ ದೀರ್ಘಕಾಲಿಕ ಬದ್ಧತೆಯೊಂದಿಗೆ ಹೂಡಿಕೆ ಮಾಡುವ ಲ್ಯಾಮ್ ಸಂಸ್ಥೆಯ ಕಾರ್ಯತಂತ್ರವನ್ನು ಸ್ಪಷ್ಟಪಡಿಸುತ್ತದೆ. ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಭಾರತದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿರುವ ಲ್ಯಾಮ್, ದೇಶದಲ್ಲಿ ಬೃಹತ್ ಎಂಜಿನಿಯರಿಂಗ್ ಕೇಂದ್ರ ಹಾಗೂ ಅತ್ಯಾಧುನಿಕ ಚಿಪ್ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಇದೇ ಅವಧಿಯಲ್ಲಿ ಸಂಸ್ಥೆಯು ಭಾರತವನ್ನು ತನ್ನ ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಿಸಿಕೊಂಡಿದ್ದಲ್ಲದೆ, ದೃಢವಾದ ಕಾರ್ಯಪಡೆ ಅಭಿವೃದ್ಧಿ ಕಾರ್ಯಕ್ರಮಗಳ ಮುಖಾಂತರ ಸೆಮಿಕಂಡಕ್ಟರ್ ಉದ್ಯಮಕ್ಕಾಗಿ ಸಾವಿರಾರು ಜನರಿಗೆ ತರಬೇತಿಯನ್ನು ನೀಡಿದೆ.

ಸಂಸ್ಥೆಯ ಈ ನೂತನ ಉತ್ಪಾದನಾ ಘಟಕವು ಸುಧಾರಿತ ಸೆಮಿಕಂಡಕ್ಟರ್ ತಂತ್ರಜ್ಞಾನಗಳು ಹಾಗೂ ಅತ್ಯಾಧುನಿಕ ನೋಡ್‌ಗಳಿಗಾಗಿ ಸಿಲಿಕಾನ್ ಇಂಗಾಟ್ ಉತ್ಪಾದನೆ ಮತ್ತು ಸಂಸ್ಕರಣೆಯನ್ನು ಒಳಗೊಂಡ ಲಂಬವಾಗಿ ಸಂಯೋಜಿತ ಪ್ರಕ್ರಿಯೆಗೆ (ವರ್ಟಿಕಲಿ ಇಂಟಿಗ್ರೇಟೆಡ್ ಪ್ರೊಸೆಸ್) ಸಂಪೂರ್ಣ ಬೆಂಬಲ ಒದಗಿಸಲಿದೆ. ಇದೇ ವೇಳೆ ಯೋಜಿತ ಆರ್&ಡಿ ವಿಸ್ತರಣೆಯು ಲ್ಯಾಮ್‌ನ ಇಂಡಿಯಾ ಸೆಂಟರ್ ಫಾರ್ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಕೇಂದ್ರವು ಈಗಾಗಲೇ ವಿನ್ಯಾಸ, ಪರೀಕ್ಷೆ, ದೃಢೀಕರಣ ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನ ಅಭಿವೃದ್ಧಿಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಜಾಗತಿಕ ಗ್ರಾಹಕರಿಗೆ ಸಮರ್ಥವಾಗಿ ಬೆಂಬಲ ನೀಡುತ್ತಾ ಬಂದಿದೆ.

ವಿಸ್ತರಣೆಯ ಕುರಿತು ವಿವರ ನೀಡಿದ ಲ್ಯಾಮ್ ರಿಸರ್ಚ್ ಇಂಡಿಯಾದ ಕಾರ್ಪೊರೇಟ್ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಂಗೇಶ್ ರಾಘವನ್ ಅವರು , ‘ಲ್ಯಾಮ್ ಸಂಸ್ಥೆಯ ಜಾಗತಿಕ ಆವಿಷ್ಕಾರ ಮತ್ತು ಬೆಳವಣಿಗೆಯ ಕಾರ್ಯತಂತ್ರದಲ್ಲಿ ಭಾರತವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದೆ. ದೇಶದಲ್ಲಿನ ನಮ್ಮ ನಿರಂತರ ವಿಸ್ತರಣೆಯು ಇಲ್ಲಿನ ಅಗಾಧ ಪ್ರತಿಭೆ, ವೇಗವಾಗಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ಮತ್ತು ಸರ್ಕಾರದ ಪೂರಕ ನೀತಿಗಳ ಮೇಲಿನ ನಮ್ಮ ಬಲವಾದ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಜಾಗತಿಕವಾಗಿ ಇಡೀ ಉದ್ಯಮ ರಂಗಕ್ಕೆ ಪ್ರಯೋಜನವಾಗುವಂತಹ ಸೆಮಿಕಂಡಕ್ಟರ್ ಆವಿಷ್ಕಾರಗಳಿಗೆ ಮತ್ತಷ್ಟು ವೇಗ ನೀಡಲು ಸರ್ಕಾರ, ಶೈಕ್ಷಣಿಕ ವಲಯ, ಸ್ಥಳೀಯ ಪೂರೈಕೆದಾರರು, ಸ್ಟಾರ್ಟ್‌ಅಪ್‌ಗಳು ಹಾಗೂ ಇತರ ಪಾಲುದಾರರೊಂದಿಗೆ ನಿಕಟ ಸಹಯೋಗವನ್ನು ಮುಂದುವರಿಸಲು ನಾವು ಸದಾ ಬದ್ಧರಾಗಿದ್ದೇವೆ’ ಎಂದು ಹೇಳಿದರು.

ಲ್ಯಾಮ್ ಸಂಸ್ಥೆಯು ಮುಂದಿನ ಹಲವು ವರ್ಷಗಳ ಅವಧಿಯಲ್ಲಿ ಈ ಹೊಸ ಬಂಡವಾಳ ಹೂಡಿಕೆಯನ್ನು ಹಂತ ಹಂತವಾಗಿ ಮಾಡಲಿದೆ. ಈ ಹೊಸ ಉತ್ಪಾದನಾ ಘಟಕ ಮತ್ತು ವಿಸ್ತೃತ ಆರ್&ಡಿ ಕಾರ್ಯಾಚರಣೆಗಳು ಭಾರತದ ಸ್ಥಳೀಯ ಪೂರೈಕೆದಾರರೊಂದಿಗೆ ಹೊಸ ಪಾಲುದಾರಿಕೆ ಹಾಗೂ ವಾಣಿಜ್ಯಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಸೆಮಿಕಂಡಕ್ಟರ್ ಉದ್ಯಮಕ್ಕೆ ಅತ್ಯಂತ ನಿರ್ಣಾಯಕವಾಗಿ ಬೇಕಾಗುವ ವಿಶೇಷ ಕಚ್ಚಾವಸ್ತುಗಳು, ಸೂಕ್ಷ್ಮ ಹಾಗೂ ನಿಖರ ಬಿಡಿಭಾಗಗಳು (ಪ್ರಿಸಿಶನ್ ಕಾಂಪೊನೆಂಟ್ಸ್), ಕೈಗಾರಿಕಾ ಅನಿಲಗಳು, ರಾಸಾಯನಿಕಗಳು, ಮೆಟ್ರಾಲಜಿ ಹಾಗೂ ಉತ್ಪಾದನಾ ಸೇವೆಗಳಿಗಾಗಿ ಸ್ಥಳೀಯ ಕಂಪನಿಗಳೊಂದಿಗೆ ಲ್ಯಾಮ್ ಸಂಸ್ಥೆ ಈಗಾಗಲೇ ಸಕ್ರಿಯವಾಗಿ ಕೈಜೋಡಿಸುತ್ತಿದೆ.

ಈ ವಿಸ್ತರಣಾ ಯೋಜನೆಗಳಿಂದಾಗಿ ಭಾರತಕ್ಕೆ ವಿಶೇಷ ಉತ್ಪಾದನಾ ಪರಿಣತಿ ಮತ್ತು ಸಾಮರ್ಥ್ಯಗಳು ಲಭ್ಯವಾಗಲಿದ್ದು, ಸೆಮಿಕಂಡಕ್ಟರ್ ಉದ್ಯಮದ ಭವಿಷ್ಯಕ್ಕೆ ಅತ್ಯಗತ್ಯವಾದ ತಾಂತ್ರಿಕ ಕೌಶಲ್ಯಗಳನ್ನು ರೂಪಿಸಲು ಇದು ನೆರವಾಗಲಿದೆ. ಸುಧಾರಿತ ಎಂಜಿನಿಯರಿಂಗ್ ಮತ್ತು ಹೈಟೆಕ್ ಉತ್ಪಾದನಾ ಕ್ಷೇತ್ರಗಳಲ್ಲಿ ನೂತನ ಉದ್ಯೋಗಗಳನ್ನು ಸೃಷ್ಟಿಸುವುದರ ಜೊತೆಗೆ, ದೇಶದ ತಾಂತ್ರಿಕ ಪ್ರತಿಭಾ ನೆಲೆಯನ್ನು ಭದ್ರಪಡಿಸಲು ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ನಿಲ್ಲಬಲ್ಲ ಸೆಮಿಕಂಡಕ್ಟರ್ ಕಾರ್ಯಪಡೆಯನ್ನು ರೂಪಿಸಲು ಈ ಹೂಡಿಕೆ ನೇರ ಕೊಡುಗೆ ನೀಡಲಿದೆ.

ಸಂಸ್ಥೆಯ ಈ ಹೂಡಿಕೆಯು ಪ್ರಸ್ತುತ ನಡೆಯುತ್ತಿರುವ ಕಾರ್ಯಪಡೆ ಅಭಿವೃದ್ಧಿ ಪ್ರಯತ್ನಗಳ ಮುಂದುವರಿದ ಭಾಗವಾಗಿದೆ. ಇದರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐಎಸ್‌ಎಂ) ಜೊತೆಗಿನ ಸಹಭಾಗಿತ್ವವೂ ಒಳಗೊಂಡಿದೆ. ಸೆಮಿಕಂಡಕ್ಟರ್ ಉತ್ಪಾದನಾ ಶಿಕ್ಷಣದ ವ್ಯಾಪ್ತಿಯನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯೊಂದಿಗೆ, ಲ್ಯಾಮ್‌ನ ಸೆಮಿವರ್ಸ್ ಸೊಲ್ಯೂಷನ್ಸ್ ವರ್ಚುವಲ್ ಪ್ಲಾಟ್‌ಫಾರ್ಮ್ ಮುಖಾಂತರ ಮುಂದಿನ ಹಲವು ವರ್ಷಗಳಲ್ಲಿ ಬರೋಬ್ಬರಿ 60,000 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ. ಇದರ ಜೊತೆಗೆ, ಯುವಕರು ಉದ್ಯಮ-ಸಂಬಂಧಿತ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಮುಂದುವರಿದ ಉತ್ಪಾದನಾ ವೃತ್ತಿಪರರಾಗಿ ಹೊರಹೊಮ್ಮಲು ಸಂಸ್ಥೆಯು ಲ್ಯಾಮ್ ರಿಸರ್ಚ್ ಸ್ಕಿಲ್ ಡೆವಲಪ್‌ಮೆಂಟ್ ಪ್ರೋಗ್ರಾಂ ಅನ್ನು ಕೂಡ ಜಾರಿಗೆ ತಂದಿದೆ.