ಕಲಬುರಗಿಯ ಬಿಸಿಲ ನಗರಿಗೆ ಈ ರಂಜಾನ್ ತಿಂಗಳು ಬಂದಾಗ ಏನೋ ಒಂದು ಖುಷಿ. ಪ್ರಮುಖವಾಗಿ ನಿಷ್ಕಳಂಕ ಜನರು, ಅವರ ಭಕ್ತಿ ಮತ್ತು ಜೊತೆಗೆ ಹಂಚಿ ತಿನ್ನುವ ಮುಗ್ಧ ಮನಸ್ಸಿನ ಪ್ರೀತಿ ಆಕರ್ಷಿಸಿದವು. ರಂಜಾನಿನ ಚಂದಿರನ ದರ್ಶನವಾಗುತ್ತಿದ್ದಂತೆ ನಗರದ ಐತಿಹಾಸಿಕ ಮಸೀದಿಗಳ ಮಿನಾರಗಳಿಂದ ಆಝಾನ್ ಶಬ್ದ ಮೊಳಗುತ್ತದೆ. ಬಿಳಿ ಗಡ್ಡ, ಶುಭ್ರವಾದ ಬಿಳಿ ಜುಬ್ಬಾ ಮತ್ತು ಪೈಜಾಮ ಧರಿಸಿದ ಹಿರಿಯರು ಒಬ್ಬರನ್ನೊಬ್ಬರು ಕಂಡಾಗ ಜೋರಾಗಿ "ಆಪ್ಕೋ ರಂಜಾನ್ ಮುಬಾರಕ್ ಹೋ " ಎಂದು ಖುಷಿ ಹಂಚಿಕೊಳ್ಳುತ್ತಾರೆ. ಮನ - ಮನೆಗಳೆಲ್ಲವೂ ಅಲಂಕೃತಗೊಳ್ಳುತ್ತವೆ. ಸಣ್ಣ ಮಕ್ಕಳು ಹೊಸ ಬಟ್ಟೆಗಳ ಸಡಗರದಲ್ಲಿ ಓಣಿಗಳಲ್ಲಿ ಓಡಾಡುವುದನ್ನು ಹೃದ್ಯ ಚಿತ್ರಣವನ್ನು ನೋಡುವುದೇ ಕಣ್ಣಿಗೆ ಹಬ್ಬ. ಮಸೀದಿಯಿಂದ "ಆಜ್ ರಂಜಾನ್ ಕಾ ಚಾಂದ್ ದಿಖಾ, ಕಲ್ ಸುಬಹ್ ಸಬ್ ಸೆಹರಿ ಕರೋ " (ಇಂದು ರಂಜಾನ್ ಚಂದಿರ ಕಂಡಿದೆ, ನಾಳೆ ಬೆಳಿಗ್ಗೆ ಎಲ್ಲರೂ ಸಹರಿ ಮಾಡಿ) ಎಂಬ ಘೋಷಣೆ ಕೇಳಿಬರುತ್ತಿದ್ದಂತೆ ಇಡೀ ನಗರವು ಒಂದು ತಿಂಗಳು ಪೂರ್ತಿ ವ್ರತಾಚರಣೆಗೆ ಸಜ್ಜಾಗುತ್ತದೆ. ರಂಜಾನ್ ತಿಂಗಳ ವಿಶೇಷ ತರಾವೀಹ್ ನಮಾಜಿಗಾಗಿ ಮಸೀದಿ ಕಿಕ್ಕಿರಿದು ತುಂಬುತ್ತದೆ. ನಮಾಜಿನ ನಂತರ ಎಲ್ಲರೂ ಪವಿತ್ರ ರೌಳಾ ಶರೀಫ್ ನತ್ತ ಮುಖಮಾಡಿ, ಗೌರವದಿಂದ ಎದ್ದು ನಿಲ್ಲುತ್ತಾರೆ. ಮಸೀದಿಯ ಇಮಾಮರು "ಮುಸ್ತಫಾ ಜಾನೇ ರಹ್ಮತ್ ಪೆ ಲಾಖೋ ಸಲಾಂ " ಎಂಬ ನಅತ್ ಹಾಡುತ್ತಾರೆ. ಜನರು ಭಕ್ತಿಪೂರ್ವಕವಾಗಿ ಏರುದನಿಯಲ್ಲಿ ಧ್ವನಿಗೂಡಿಸುತ್ತಾರೆ. ಅನೇಕರ ಕಣ್ಣುಗಳು ತೇವವಾಗುವುದನ್ನು ಕಾಣಬಹುದು. ಬಳಿಕ ಮಸೀದಿಯ ಹೊರಗೆ ಸಿದ್ಧಪಡಿಸಿದ ''ಖಾವಾ'' ಕುಡಿದು, ಎಲ್ಲರೂ ಪರಸ್ಪರ ಅಪ್ಪಿಕೊಂಡು ಅಲ್ಲಿಂದ ಹೊರಡುತ್ತಾರೆ. ಇದು ರಂಜಾನ್ ತಿಂಗಳ ಮೂವತ್ತು ದಿನಗಳೂ ಮುಂದುವರಿಯುತ್ತದೆ.ಬೆಳ್ಳಂಬೆಳಿಗ್ಗೆ ಉಪಹಾರವನ್ನು ''ಸಹರಿ'' ಎಂದು ಕರೆಯಲಾಗುತ್ತದೆ. ಸಹರಿಯ ಸಮಯವಾದಾಗ ಮಸೀದಿಯ ಮುಕ್ರಿಯವರು ಮೈಕ್‌ನಲ್ಲಿ "ಹೇ ರೋಜೆದಾರೋ, ಸೆಹರಿ ಕೆ ಲಿಯೇ ಉಠೋ " (ಓ ಉಪವಾಸಿಗರೇ, ಸಹರಿಗಾಗಿ ಏಳಿರಿ) ಎಂದು ಎಚ್ಚರಿಸುತ್ತಾರೆ. ಸಹರಿ ಸಮಯ ಮುಗಿದಿದೆ ಎಂದು ಜನರಿಗೆ ತಿಳಿಸಲು ದೊಡ್ಡ ಶಬ್ದದ ಸೈರನ್ ಮೊಳಗಿಸಲಾಗುತ್ತದೆ.ದಸ್ತರ್ಮಗ್ರಿಬ್ ಆಝಾನ್‌ಗಿಂತ ಮುಂಚೆಯೇ ಸಣ್ಣ ಮಕ್ಕಳು ಮಸೀದಿಗೆ ಬರುತ್ತಾರೆ. ಪ್ರತಿ ಮನೆಯ ತಾಯಂದಿರು ಮಸೀದಿಯಲ್ಲಿ ವ್ರತಾಚರಣೆ ಮಾಡುವವರಿಗಾಗಿ ತಟ್ಟೆಯಲ್ಲಿ ಹಣ್ಣುಗಳು ಮತ್ತು ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಕಳುಹಿಸಿಕೊಡುತ್ತಾರೆ. ನೆಲದ ಮೇಲೆ ಹಾಸಿದ ''ದಸ್ತರ್'' ಮೇಲೆ ಈ ಎಲ್ಲಾ ಖಾದ್ಯಗಳನ್ನು ಒಟ್ಟಿಗೆ ಸೇರಿಸಲಾಗುತ್ತದೆ.ಪ್ರತಿ ಐದು ಜನರ ಗುಂಪಿಗೆ ಹಣ್ಣುಗಳನ್ನು ಸಣ್ಣ ರಾಶಿಯಂತೆ ಇಟ್ಟಿರುತ್ತಾರೆ. ಜ್ಯೂಸ್‌ಗೆ ಬದಲಾಗಿ ಗುಲಾಬಿ ಬಣ್ಣದ ''ರೂಹ್ ಹಫ್ಝಾ'' ಪಾನೀಯವಿರುತ್ತದೆ. ಇಮಾಮರು ಮೈಕ್ ಆನ್ ಮಾಡಿ "ಅಲ್ಲಾಹುಮ್ಮ ಲಕ ಸುಮ್ತು... " ಎಂದು ಪ್ರಾರ್ಥನೆ ಹೇಳಿಕೊಡುವಾಗ ಜನರು ಖರ್ಜೂರ ಸೇವಿಸುವ ಮುಖಾಂತರ ಉಪವಾಸ ಮುರಿಯುತ್ತಾರೆ. ಕ್ಷಣಾರ್ಧದಲ್ಲಿ ದಸ್ತರ್ ಮೇಲಿರುವ ತಿನಿಸುಗಳು ಖಾಲಿಯಾಗುತ್ತವೆ. ಇದು ಅತ್ಯಂತ ಹೃದ್ಯವಾದ ದೃಶ್ಯ. ಇಲ್ಲಿನ ರಂಜಾನ್ ಆಚರಣೆಯು ಹಲವಾರು ವೈಶಿಷ್ಟ್ಯಗಳಿಂದ ಕೂಡಿದೆ. ಎಲ್ಲರೂ ತಿಂದ ನಂತರ ಕೆಲವೊಂದು ದಿನಗಳಲ್ಲಿ ಆಹಾರವು ಬಾಕಿಯುಳಿಯುತ್ತದೆ. ಹೀಗೆ ಉಳಿದ ಇಫ್ತಾರ್ ಖಾದ್ಯಗಳನ್ನು ಸಣ್ಣ ಮಕ್ಕಳಿಗೆ ಮನೆಗೆ ತೆಗೆದುಕೊಂಡು ಹೋಗಲು ನೀಡಲಾಗುತ್ತದೆ.ವೈವಿಧ್ಯಮಯ ಖಾದ್ಯಗಳ ಪಟ್ಟಣ ಮೋಮಿನ್ ಪುರಗುಲ್ಬರ್ಗಾದಲ್ಲಿ ರಾತ್ರಿಯಿಡೀ ಜೀವಂತವಾಗಿರುವ ಮಾರುಕಟ್ಟೆ ಎಂದರೆ ಅದು ಮೋಮಿನ್ ಪುರ. ಮಗ್ರಿಬಿನ ಇಫ್ತಾರಿನ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಹರೀಸ್, ಹಲೀಮ್, ಖೀರ್, ಕದ್ದೂ ಕಿ ಖೀರ್, ತಹಾರಿ, ಗಾಜರ್ ಕಿ ಹಲ್ವಾ, ಮೊಹಬ್ಬತ್ ಕಾ ಶರ್ಬತ್... ಹೀಗೆ ಹಲವಾರು ವಿಶೇಷ ಖಾದ್ಯಗಳು ಇಲ್ಲಿ ದೊರೆಯುತ್ತವೆ.ಹರೀಸ್ ಎಂಬ ಖಾದ್ಯಕ್ಕೆ ಜಾಗತಿಕ ಇತಿಹಾಸವಿದೆ. ನಾವು ಕಲಬುರಗಿಯ ಮೋಮಿನ್ ಪುರದಲ್ಲಿ ಸವಿಯುವ ಹರೀಸವು 17 ನೇ ಶತಮಾನದಲ್ಲಿ ಯೆಮನ್ ಸೈನಿಕರು ಭಾರತಕ್ಕೆ ಬಂದು ನಿಜಾಮರ ಸೈನ್ಯಕ್ಕೆ ಸೇರಿದ ಸಮಯದಲ್ಲಿ ಹರೀಸ್ ಕೂಡ ಇಲ್ಲಿಗೆ ಪ್ರವೇಶಿಸಿತು. ಇದು ಯೆಮನ್ ದೇಶದ ಪ್ರಭಾವ ಹೊಂದಿದ್ದರೆ, ಕಾಶ್ಮೀರದ ಶ್ರೀನಗರದಲ್ಲಿ ಸಿಗುವ ಸ್ವಾದಿಷ್ಟವಾದ ಹರೀಸ್, ''ಹರೀಸ-ಎ-ಜಫ್ರಾನಿ'' ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಕಾಶ್ಮೀರದಲ್ಲಿ ಇದನ್ನು ಇರಾನ್ ದೇಶದ ಉಡುಗೊರೆ ಎಂದು ಕರೆಯಲಾಗುತ್ತದೆ. ಅಲ್ಲಿನ ಜನರು ಚಳಿಗಾಲದ ಮುಂಜಾನೆ ಕೇಸರಿ ಮಸಾಲೆಯ ಹರೀಸಕ್ಕಾಗಿ ಅಂಗಡಿಗಳ ಮುಂದೆ ಕ್ಯೂ ನಿಲ್ಲುತ್ತಾರೆ. ಈ ಎರಡೂ ಕಡೆ ಹರೀಸವು ಕೇವಲ ಆಹಾರವಾಗಿ ಉಳಿಯದೆ, ಆಯಾ ಪ್ರದೇಶದ ಸಂಸ್ಕೃತಿಯ ಭಾಗವಾಗಿದೆ.ರಂಜಾನ್ ಹಬ್ಬದ ಸಂದರ್ಭದಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ಇದ್ದರೂ, ಖಾಲಿ ಹೊಟ್ಟೆಯಲ್ಲಿ ಮಗ್ರಿಬಿನ ಸೂರ್ಯ ಮುಳುಗುವವರೆಗೂ ಹನಿ ನೀರು ಸೇವಿಸದೆ ದಿನಪೂರ್ತಿ ಉಪವಾಸವಿದ್ದು, ಇಫ್ತಾರಿನ ವೇಳೆಗಳಲ್ಲಿ ಹಣ್ಣು ಹಂಪಲು ತಿಂದು ಬಳಿಕ ಆಹಾರದ ಸಮತೋಲನ ಕಾಪಾಡಿಕೊಳ್ಳುವುದಕ್ಕಾಗಿ ಪೌಷ್ಟಿಕಾಂಶ ಭರಿತವಾದ ಹರೀಸ್ ತಿಂಡಿ ಸೇವಿಸುತ್ತಾರೆ. ಗುಲ್ಬರ್ಗಾದ ಪಟ್ಟಣಗಳ ಹೋಟೆಲ್‌ಗಳ ಮುಂದೆ ಆಯತಾಕಾರದಲ್ಲಿ ಮಣ್ಣಿನಲ್ಲಿ 6 ಅಡಿ ಅಗಲ ಹಾಗೂ 6 ಅಡಿ ಉದ್ದ ಮತ್ತು ಮೂರು ಅಡಿ ಎತ್ತರ ಮಾಡಿ, ದೊಡ್ಡ ತಾಮ್ರದ ಪಾತ್ರೆಗಳನ್ನು ಹೂತಿಟ್ಟು, ಅದರ ಸುತ್ತಲೂ ಇಟ್ಟಿಗೆ ಮತ್ತು ಮಣ್ಣಿನಿಂದ ಹರೀಸ್ ತಯಾರಿಸಲು ಬೃಹದಾಕಾರದ ಒಲೆಗಳನ್ನು ನಿರ್ಮಿಸಲಾಗುತ್ತದೆ. ಮೋಮಿನ್ ಪುರದ ಪ್ರತಿಯೊಂದು ಮೂಲೆಯಲ್ಲೂ ಆಕರ್ಷಕ ಒಲೆಗಳನ್ನು ಕಾಣಬಹುದು. ಒಂದು ಬದಿಗೆ ಮಾತ್ರ ಕಿಂಡಿ ಬಿಟ್ಟು ಒಳಗಡೆ ಕಟ್ಟಿಗೆ ಉರಿದು ದಿನದ ಹತ್ತು ಗಂಟೆಗಳ ಕಾಲ ಕಿಚ್ಚು ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಮೋಮಿನ್ ಪುರ ಮಾರುಕಟ್ಟೆಯಲ್ಲಿ ಚಿಕನ್ ಮತ್ತು ಮಟನ್ ಹರೀಸ್ ಸಿಗುತ್ತದೆ. ಚಿಕನ್ ಹರೀಸ್ ತಯಾರಾಗಲು, ಅದು ಮೆದುವಾಗಿರುವ ಕಾರಣ ಕನಿಷ್ಠ 8 ಗಂಟೆಯಾದರೂ ಬೇಕು. ಮಾಂಸದ ಸಣ್ಣ ಸಣ್ಣ ತುಣುಕು ಮಾಡಿ ಅದಕ್ಕೆ ಖೀಮಾ ರೂಪ ನೀಡಲಾಗುತ್ತದೆ. ನಂತರ ಹಸಿ ಮೆಣಸಿನಕಾಯಿ, ಪುದಿನಾ, ಕೊತ್ತಂಬರಿ, ಸಾಸಿವೆ, ಕಾಳುಮೆಣಸು, ಗರಂ ಮಸಾಲೆ, ಜಾಜಿಕಾಯಿ ಸೇರಿ ವಿವಿಧ ಬಗೆಯ ಮಸಾಲೆ ಸಾಮಗ್ರಿ, ರವಾ, ತುಪ್ಪ, ಹಾಲು ಬಳಸಿ, ದಿನವಿಡಿ ಕುದಿಸಿ ಅದಕ್ಕೆ ಪಾಯಸ ರೂಪ ನೀಡಲಾಗುತ್ತದೆ. ಬಳಿಕ ಬಿಸಿ ಬಿಸಿ ಹರೀಸ್ ಸೇವಿಸಲು ಸಿದ್ಧವಾಗುತ್ತದೆ.ಹೋಟೇಲ್‌ಗಳಲ್ಲಿ ಸಾಧಾರಣವಾಗಿ ಮಗ್ರಿಬ್ ಹೊತ್ತು ತಯಾರಾಗುವ ಹರೀಸ್ ಗಂಟೆಯೊಳಗೆ ಖಾಲಿಯಾಗುತ್ತದೆ. ಹದಿನೈದು ಕೆಜಿ ಮಾಂಸದಿಂದ ಸುಮಾರು ನೂರು ಜನರಿಗೆ ತಿನ್ನಬಹುದು. ಒಮ್ಮೆ ತಯಾರಾದ ಹರೀಸ್ ಅನ್ನು ನಾಳೆಗಾಗಿ ಇಡುವ ಹಾಗಿಲ್ಲ. ಅವತ್ತೇ ಸೇವಿಸಬೇಕಾಗುತ್ತದೆ. ಇಲ್ಲದೆ ಹೋದರೆ ಅದರ ರುಚಿ ಕಡಿಮೆಯಾಗುತ್ತದೆ ಎನ್ನುತ್ತಾರೆ ಸ್ಥಳೀಯರು. ಹರೀಸ್ ದೇಹಕ್ಕೆ ಆರೋಗ್ಯಕರವಾಗಿದೆ. ಅದು ದೇಹದಲ್ಲಿ ಚೈತನ್ಯ ತುಂಬಿ, ಕ್ಯಾಲ್ಸಿಯಂ ಪ್ರಮಾಣ ಹಾಗೂ ಪೋಷಕಾಂಶಗಳು ಕಡಿಮೆಯಾಗದಂತೆ ಮಾಡುತ್ತದೆ.ಜನರು ಇಷ್ಟಪಡುವ ಮತ್ತೊಂದು ಖಾದ್ಯವೆಂದರೆ ''ಕದ್ದೂ ಕಿ ಖೀರ್''. ಸೋರೆಕಾಯಿಯಿಂದ ತಯಾರಿಸುವ ಈ ಖಾದ್ಯವು ಸಿಹಿಯಾಗಿರುತ್ತದೆ. ಪೈಗಂಬರ್ ಮುಹಮ್ಮದರಿಗೆ ಸೋರೆಕಾಯಿ ಎಂದರೆ ಇಷ್ಟವಾದ್ದರಿಂದ, ಗೌರವ ಸೂಚಕವಾಗಿ ಇಲ್ಲಿನ ಜನರು ಸೋರೆಕಾಯಿಯನ್ನು ''ಕದ್ದು ಶರೀಫ್'' ಎಂಬ ಪ್ರೀತಿಯಿಂದ ಕರೆಯುತ್ತಾರೆ. ಹೀಗೆ ಬೇರೆ ಬೇರೆ ದೇಶಗಳಿಂದ ವಲಸೆ ಬಂದ ಅನೇಕ ಖಾದ್ಯಗಳು ಇಲ್ಲಿ ಲಭ್ಯವಿವೆ. ಮೋಮಿನ್ ಪುರವು ರಂಜಾನಿನ ಮೂವತ್ತು ದಿನಗಳ ಕಾಲ ಜನರಿಂದ ತುಂಬಿ ತುಳುಕುತ್ತಿರುತ್ತದೆ.- ಅಶ್ರಫ್ ನಾವೂರು