ಸಂವಿಧಾನದಿಂದ ಮಾತ್ರ ದೇಶದ ಉಳಿವು ಸಾಧ್ಯ. ಸಂವಿಧಾನ ಈ ದೇಶದ ಜನತೆಗೆ ಘನತೆಯಿಂದ ಬದುಕುವ ಹಕ್ಕು ನೀಡಿದೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂವಿಧಾನದಿಂದ ಮಾತ್ರ ದೇಶದ ಉಳಿವು ಸಾಧ್ಯ. ಸಂವಿಧಾನ ಈ ದೇಶದ ಜನತೆಗೆ ಘನತೆಯಿಂದ ಬದುಕುವ ಹಕ್ಕು ನೀಡಿದೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಹೇಳಿದರು.

ಬುಧವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್‌ ಸಂವಿಧಾನ ಎಂಬ ರಾಷ್ಟೀಯ ಗ್ರಂಥವನ್ನು ಕೊಡುಗೆಯಾಗಿ ನೀಡಿದರು. ಸಂವಿಧಾನ ವಿಶ್ವದ ಸರ್ವಶೇಷ್ಠ ಸಂವಿಧಾನವಾಗಿದೆ. ಮನುಷ್ಯ ಬದುಕಿದ್ದಾಗ, ಸತ್ತ ಮೇಲು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಸಂವಿಧಾನದಲ್ಲಿ ಅವಕಾಶ ನೀಡಿದೆ ಎಂದು ಹೇಳಿದರು. ಅಂಬೇಡ್ಕರ್ ಚಿಂತನೆ, ಆದರ್ಶವನ್ನು ದೇಶದ ಎಷ್ಟು ಜನರು ಪಾಲಿಸುತ್ತಿದ್ದಾರೆ ಎಂಬ ಚಿಂತನೆ ಮಾಡಬೇಕು. ಅಂಬೇಡ್ಕರ್ ಚಿಂತನೆಗಳನ್ನು ಪಾಲಿಸುತ್ತಿಲ್ಲ, ಜಯಂತಿ ಅಚರಣೆ ಮಾಡಿ ಸುಮ್ಮನಾಗುತ್ತಾರೆ. ಪ್ರತಿಯೊಬ್ಬರು ಅಂಬೇಡ್ಕರ್ ಚಿಂತನೆಯಲ್ಲಿ ಸಾಗಬೇಕು ಎಂದರು. ನ್ಯಾ.ಎಚ್.ಟಿ.ನರೇಂದ್ರ ಪ್ರಸಾದ್ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಎಲ್ಲ ಸಮಾಜದವರು ಅಚರಿಸುತ್ತಾರೆ. ಅವರ ಹಾಕಿಕೊಟ್ಟ ಸಿದ್ದಾಂತಗಳನ್ನು ಆಳವಡಿಸಿಕೊಂಡು ಅಚರಿಸಿದಾಗ ಅರ್ಥ ಬರುತ್ತದೆ. ಲೋಕಸಭೆಯಲ್ಲಿ ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಜಾರಿಯಾಗಲು ಅಂಬೇಡ್ಕರ್ ಕೊಟ್ಟ ಸಂವಿಧಾನ ಕಾರಣವೆಂದರು. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ನಾಗರಿಕರ ಸಮಸ್ಯೆಗಳಿಗೆ ಸಂವಿಧಾನ ಬದ್ಧವಾಗಿ ಸಮಾನತೆಯಿಂದ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಬಡವರು, ಶೋಷಿತರ ನೋವು ನಿವಾರಣೆ ಮಾಡಬೇಕು. ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಬಗೆಹರಿಸಬೇಕು ಎಂದು ಹೇಳಿದರು. ಪದ್ಮಶ್ರೀ ಡಾ.ಎಸ್.ಜಿ.ಸುಶೀಲಮ್ಮ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಸಮಾಜಸೇವಾ ರತ್ನ ಪ್ರಶಸ್ತಿ ಮತ್ತು 17 ಜನರಿಗೆ ಡಾ.ಬಿ.ಆರ್.ಅಂಬೇಡ್ಕರ್ ರತ್ನ ಪ್ರಶಸ್ತಿ, ಪಾಲಿಕೆಯ ಸಾಧಕ ಅಧಿಕಾರಿ ಮತ್ತು ನೌಕರರಿಗೆ ಡಾ.ಬಿ.ಆರ್.ಅಂಬೇಡ್ಕರ್ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎಸ್.ರಾಚಯ್ಯ, ಅಧಿಕಾರಿಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಸೇರಿದಂತೆ ಇತರರಿದ್ದರು.