ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಇಲಾಖೆಯ ಪರಿಶೀಲನಾ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಂಚಾರ ಸುಗಮಕ್ಕೆ ಟೋಯಿಂಗ್ ಆರಂಭ ಅನಿರ್ವಾಯವಾಗಿದೆ ಎಂದರು.
ನಗರ ವ್ಯಾಪ್ತಿ ಎಲ್ಲೆಂದರಲ್ಲಿ ವಾಹನಗಳನ್ನು ಸಾರ್ವಜನಿಕರು ನಿಲ್ಲಿಸುತ್ತಿರುವುದು ಸಂಚಾರ ಸಮಸ್ಯೆಗೆ ಪ್ರಮುಖ ಕಾರಣಗಳಲ್ಲೊಂದ್ದಾಗಿದೆ. ಹೀಗಾಗಿ ಈ ಮೊದಲು ಸ್ಥಗಿತಗೊಳಿಸಲಾಗಿದ್ದ ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಟೋಯಿಂಗ್ ವಾಹನಗಳು ರಸ್ತೆಗಿಳಿಯಲಿವೆ ಎಂದು ಹೇಳಿದರು.ಮೊದಲು ವಾರ್ಷಿಕ 28 ಕೋಟಿ ರು.ಗೆ ಖಾಸಗಿ ಸಂಸ್ಥೆಗಳಿಗೆ ಟೋಯಿಂಗ್ ಹೊರಗುತ್ತಿಗೆ ನೀಡುತ್ತಿದ್ದೆವು. ಆ ಖಾಸಗಿ ಸಂಸ್ಥೆಯವರು ಸಂಚಾರ ಉಲ್ಲಂಘನೆ ಸಂಬಂಧ ವಾಹನಗಳನ್ನು ಟೋಯಿಂಗ್ ಮಾಡುವ ವೇಳೆ ಸಾರ್ವಜನಿಕರ ಜತೆ ಅನುಚಿತ ವರ್ತನೆ ಆರೋಪಗಳಿದ್ದವು. ಈ ಸಮಸ್ಯೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ಖಾಸಗಿಯವರ ಬದಲಿಗೆ ಪೊಲೀಸ್ ಇಲಾಖೆಯ ವಾಹನಗಳನ್ನೇ ಟೋಯಿಂಗ್‌ಗೆ ಬಳಸಿಕೊಳ್ಳಲಾಗುತ್ತದೆ. ಇದಕ್ಕಾಗಿ ಪ್ರತಿ ಠಾಣಾ ಮಟ್ಟದಲ್ಲಿ ಟೋಯಿಂಗ್ ವಾಹನ ನೀಡಲಾಗುತ್ತದೆ. ಅಲ್ಲದೆ ಈ ಟೋಯಿಂಗ್‌ಗೆ ಕೆಲಸಕ್ಕೆ ಸಂಚಾರ ಪೊಲೀಸರ ನೆರವಿಗೆ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸಭೆಯಲ್ಲಿ ಡಿಜಿ-ಐಜಿಪಿ ಡಾ.ಎಂ.ಸಲೀಂ, ನಗರ ಆಯುಕ್ತ ಬಿ.ದಯಾನಂದ್, ಹೆಚ್ಚುವರಿ ಆಯುಕ್ತರಾದ ಡಾ.ಚಂದ್ರಗುಪ್ತ, ವಿಕಾಸ್ ಕುಮಾರ್ ವಿಕಾಸ್, ಜಂಟಿ ಆಯುಕ್ತರಾದ ಎಂ.ಎನ್.ಅನುಚೇತ್ ಹಾಗೂ ಬಿ.ರಮೇಶ್ ಹಾಜರಿದ್ದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೋಯಿಂಗ್ ವ್ಯವಸ್ಥೆ ನಿರ್ವಹಣೆ ಸರಿಯಿಲ್ಲದ ಕಾರಣ ಸಮಸ್ಯೆಯಾಗಿತ್ತು. ಈಗ ನಾವು ನ್ಯೂನತೆಗಳನ್ನು ಸರಿಪಡಿಸಿ ಸೂಕ್ತವಾಗಿ ಜಾರಿಗೊಳಿಸುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ವರ್ಷಾನುಗಟ್ಟಲೇ ಸಮಯ ತೆಗೆದುಕೊಂಡರೇ ಹೇಗೆ? ಚರಂಡಿ, ರಸ್ತೆ ಸರಿಪಡಿಸಿಲ್ಲವೆಂದರೆ ಬಿಬಿಎಂಪಿಯವರನ್ನೇ ಜನರು ಕೇಳೋದಿಲ್ಲ. ಆದರೆ ಟ್ರಾಫಿಕ್ ಸಮಸ್ಯೆಯಾದರೆ ಪೊಲೀಸರನ್ನೇ ಜನರು ಪ್ರಶ್ನಿಸೋದು ನೆನಪಿರಲಿ ಎಂದು ಅಧಿಕಾರಿಗಳಿಗೆ ಸಚಿವರು ಮಾತಿನ ಚಾಟಿ ಬೀಸಿದ್ದಾರೆ.
ಎಸಿ ರೂಂ ಬಿಟ್ಟು ರಸ್ತೆಗೆ ಬನ್ನಿ
ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಟೋಯಿಂಗ್ ಜಾರಿ ಅನಿವಾರ್ಯವಾಗಿದೆ. ರಸ್ತೆಗಳಲ್ಲಿ ಜನರು ಬೇಕಾಬಿಟ್ಟಿ ವಾಹನ ನಿಲ್ಲಿಸುವುದು ತಪ್ಪುತ್ತದೆ. ಟೋಯಿಂಗ್ ವೇಳೆ ಸೌಜನ್ಯ ನಡವಳಿಕೆ ಇರಲಿ ಎಂದು ಪೊಲೀಸರಿಗೆ ಸೂಚಿಸಿದ್ದೇನೆ.
-ಡಾ.ಜಿ.ಪರಮೇಶ್ವರ್, ಗೃಹ ಸಚಿವಮಳೆಗಾಲದ ಸಂಚಾರ ಸಮಸ್ಯೆ-ವರದಿಗೆ ಸೂಚನೆ
ಮಳೆಯಿಂದ ಸಂಚಾರ ಸಮಸ್ಯೆ ಉಂಟಾಗುವ ಪ್ರದೇಶಗಳ ಕುರಿತು ವಾರದಲ್ಲಿ ವರದಿ ನೀಡುವಂತೆ ಸಂಚಾರ ವಿಭಾಗದ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು. ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತು ಕೊಟ್ಟು ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿಯೇ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರು, ಸಾರಿಗೆ ಸಚಿವರು ಹಾಗೂ ಗೃಹ ಸಚಿವರ ಸಮನ್ವಯ ಸಭೆ ನಡೆಸಲಾಗಿದೆ. ಅದೇ ರೀತಿ ಬಿಬಿಎಂಪಿ ಹಾಗೂ ಪೊಲೀಸರು ಒಮ್ಮತದಿಂದ ಸಹಭಾಗಿತ್ವದಲ್ಲಿ ಕೆಲಸ ಮಾಡಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಸಂಚಾರ ಸಮಸ್ಯೆ ಬಗ್ಗೆ ವಾರದಲ್ಲಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ವಿವರಿಸಿದರು.-ಎಚ್ಚರ! ವಾಹನ ಮಾಲೀಕರೇ, ಎಲ್ಲೆಂದರಲ್ಲೇ ವಾಹನ ನಿಲ್ಲಿಸದಿರಿ-3 ವರ್ಷಗಳ ಬಳಿಕ ಮತ್ತೆ ಟೋಯಿಂಗ್ ವಾಹನ ವ್ಯವಸ್ಥೆ ಜಾರಿಗೆ ಸಿದ್ಧತೆ2022 ರಲ್ಲಿ ಜನಾಕ್ರೋಶದ ಕಾರಣ ಟೋಯಿಂಗ್‌ಗೆ ಬ್ರೇಕ್ ಬಿದ್ದಿತುಸುಗಮ ಸಂಚಾರ ವ್ಯವಸ್ಥೆಗೆ ಟೋಯಿಂಗ್ ಅನಿವಾರ್ಯ ಈ ಬಾರಿ ಖಾಸಗಿ ಬದಲು ಪೊಲೀಸ್ ವಾಹನಗಳ ಬಳಕೆ