ರಾಜಧಾನಿ ಬೆಂಗಳೂರಿನ ಇಬ್ಬರು ಕಂದಮ್ಮಗೆ ಚೀನಾದಲ್ಲಿ ಸದ್ದು ಮಾಡುತ್ತಿರುವ ಎಚ್‌ಎಂಪಿವಿ ಸೋಂಕು

KannadaprabhaNewsNetwork |  
Published : Jan 07, 2025, 01:32 AM ISTUpdated : Jan 07, 2025, 04:55 AM IST
ಎಚ್‌ಎಂಪಿವಿ | Kannada Prabha

ಸಾರಾಂಶ

ರಾಜಧಾನಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಇಬ್ಬರು ಶಿಶುಗಳಲ್ಲಿ ಚೀನಾದಲ್ಲಿ ಸದ್ದು ಮಾಡುತ್ತಿರುವ ಎಚ್‌ಎಂಪಿವಿ ಸೋಂಕು ದೃಢಪಟ್ಟಿದೆ.

  ಬೆಂಗಳೂರು : ರಾಜಧಾನಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಇಬ್ಬರು ಶಿಶುಗಳಲ್ಲಿ ಚೀನಾದಲ್ಲಿ ಸದ್ದು ಮಾಡುತ್ತಿರುವ ಎಚ್‌ಎಂಪಿವಿ ಸೋಂಕು ದೃಢಪಟ್ಟಿದೆ.

ಐಸಿಎಂಆರ್‌ ಈ ಬಗ್ಗೆ ದೃಢಪಡಿಸಿದ ಬೆನ್ನಲ್ಲೇ ನಗರದ ಖಾಸಗಿ ಆಸ್ಪತ್ರೆಗೆ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ನಯನಾ ಪಾಟೀಲ್‌ ಸೇರಿದಂತೆ ಹಲವರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಸ್ಪತ್ರೆಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮೂರು ತಿಂಗಳ ಹೆಣ್ಣು ಮಗು, ಎಂಟು ತಿಂಗಳು ವಯಸ್ಸಿನ ಗಂಡು ಮಗುವಿನಲ್ಲಿ ಸೋಂಕು ದೃಢಪಟ್ಟಿದ್ದು, ಇಬ್ಬರಿಗೂ ಯಾವುದೇ ಅಂತರಾಷ್ಟ್ರೀಯ ಸಂಚಾರದ ಹಿನ್ನೆಲೆ ಇಲ್ಲ. ಹೀಗಾಗಿ ರಾಜ್ಯದಲ್ಲಿ ಈಗಾಗಲೇ ಸೋಂಕು ಸಕ್ರಿಯವಾಗಿದೆಯೇ ಎಂಬ ಅನುಮಾನ ಮೂಡಿದೆ. ಆದರೆ, ಎರಡೂ ಪ್ರಕರಣದಲ್ಲೂ ಗಂಭೀರ ಅನಾರೋಗ್ಯ ಲಕ್ಷಣಗಳು ಕಂಡಿಲ್ಲ. ಹೀಗಾಗಿ ಯಾವುದೇ ಆತಂಕ ಬೇಕಾಗಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಎಂಟು ತಿಂಗಳ ಮಗು ಮತ್ತು ಪೋಷಕರು ಇತ್ತೀಚೆಗೆ ತಿರುಪತಿಗೆ ಭೇಟಿ ನೀಡಿದ್ದರು. ಆದರೆ ತಿರುಪತಿಯಲ್ಲಿನ ದಟ್ಟಣೆಯಿಂದಾಗಿ ಸೋಂಕಿನ ಮೂಲ ಪತ್ತೆ ಹಚ್ಚುವುದು ಅಸಾಧ್ಯ. ಇದೊಂದು ಸಾಮಾನ್ಯ ಸೋಂಕು ಆಗಿರುವುದರಿಂದ ಸಂಪರ್ಕಿತರ ಪರೀಕ್ಷೆಗೂ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ.

ಮೊದಲ ಪ್ರಕರಣವಲ್ಲ: ದಿನೇಶ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌, ಬೆಂಗಳೂರಿನಲ್ಲಿ ವರದಿಯಾಗಿರುವ ಪ್ರಕರಣಗಳನ್ನು ಭಾರತದಲ್ಲಿಯೇ ಮೊದಲ ಪ್ರಕರಣ ಎಂದು ಬಣ್ಣಿಸುವುದು ತಪ್ಪು. ಎಚ್​ಎಂಪಿವಿ ಮೊದಲಿನಿಂದಲೂ ಸಕ್ರಿಯವಾಗಿರುವ ವೈರಸ್, ಇದು ಹೊಸದೇನಲ್ಲ. ವೈರಸ್​ ಕಂಡುಬಂದ ಮಗುವಿಗೆ ಯಾವುದೇ ಟ್ರಾವೆಲ್​ ಹಿಸ್ಟರಿ ಇಲ್ಲ. ಮಗುವಿನ ಪೋಷಕರು ಸ್ಥಳೀಯರೇ ಆಗಿದ್ದಾರೆ. ಇದೇನೂ ಚೀನಾ ಅಥವಾ ಮಲೇಷ್ಯಾದಿಂದ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಇದು ಚೀನಾದಲ್ಲಿ ಹರಡಿರುವ ಎಚ್ಎಂಪಿವಿ ಸೋಂಕಿನ ತಳಿಯೇ ಎಂಬ ಬಗ್ಗೆ ಜಿನೋಮ್‌ ಸೀಕ್ವೆನ್ಸ್‌ ಪರೀಕ್ಷೆ ಮಾಡಲು ನಿರ್ಧರಿಸಿಲ್ಲ. ಸದ್ಯಕ್ಕೆ ಅದರ ಅಗತ್ಯವೂ ಇಲ್ಲ. ಮುಂದೆ ಕೇಂದ್ರ ಸರ್ಕಾರ ಸೂಚಿಸಿದರೆ ನೋಡುತ್ತೇವೆ ಎಂದರು.

ಬಿಡುಗಡೆ ಬಳಿಕ ಸೋಂಕು ದೃಢ

ಕಳೆದ ಡಿಸೆಂಬರ್‌ ಕೊನೆಯ ವಾರದಲ್ಲಿ ಸಾಮಾನ್ಯ ಶೀತ, ಕೆಮ್ಮಿನ ಲಕ್ಷಣಗಳಿಂದ 3 ತಿಂಗಳ ಹೆಣ್ಣು ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಬ್ಯಾಂಕೊನ್ಯುಮೋನಿಯಾ ಕಂಡು ಬಂದಿತ್ತು. ಈ ವೇಳೆ ಎಚ್‌ಎಂಪಿವಿ ಪರೀಕ್ಷೆ ನಡೆಸಿದ್ದು, ಮಗು ಚೇತರಿಸಿಕೊಂಡು ಬಿಡುಗಡೆಯಾದ ಬಳಿಕ ಸೋಂಕು ದೃಢಪಟ್ಟಿರುವುದು ತಿಳಿದು ಬಂದಿದೆ.

ಚೇತರಿಸಿಕೊಳ್ಳುತ್ತಿದೆ ಮತ್ತೊಂದು ಮಗು

ಎರಡನೇ ಪ್ರಕರಣದಲ್ಲಿ ಇತ್ತೀಚೆಗೆ ಕೆಮ್ಮು, ಶೀತದ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ 8 ತಿಂಗಳ ಮಗುವಿಗೆ ಜನವರಿ 3ರಂದು ಎಚ್‌ಎಂಪಿವಿ ದೃಢಪಟ್ಟಿದೆ. ಈ ಮಗುವಿಗೂ ಬ್ಯಾಂಕೋನ್ಯುಮೋನಿಯಾ ಸಮಸ್ಯೆ ಕಂಡು ಬಂದಿದೆ. ಸದ್ಯ ಮಗು ಚೇತರಿಸಿಕೊಳ್ಳುತ್ತಿದ್ದು, ಯಾವುದೇ ಗಂಭೀರ ಅನಾರೋಗ್ಯ ಸಮಸ್ಯೆಯಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹುಣಸಮಾರನಹಳ್ಳಿಯ 8 ತಿಂಗಳ ಮಗು

ಪ್ರಸ್ತುತ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿಗೆ 8 ತಿಂಗಳು 10 ದಿನಗಳಷ್ಟು ವಯಸ್ಸಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಣಸಮಾರನಹಳ್ಳಿ ಮೂಲದ ಮಗುವು ಅನಾರೋಗ್ಯ ಲಕ್ಷಣದಿಂದ ಆಸ್ಪತ್ರೆಗೆ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಡಾ। ನಮಿತಾ ವಲ್ಸಲನ್‌ ಅವರು ಎಚ್‌ಎಂಪಿವಿ ವಿವಿಧ ಪರೀಕ್ಷೆಗಳಿಗೆ ಶಿಫಾರಸು ಮಾಡಿದ್ದರಿಂದ ಜ.2 ರಂದು ಪರೀಕ್ಷೆಗಳನ್ನು ನಡೆಸಲಾಗಿತ್ತು.ಜ.3ರಂದು ಮಧ್ಯಾಹ್ನ 1.22 ಗಂಟೆಗೆ ವರದಿ ಬಂದಿದೆ. ವರದಿಯಲ್ಲಿ ಹ್ಯೂಮನ್‌ ಮೆಟಾನ್ಯುಮೊವೈರಸ್‌ (ಎಚ್‌ಎಂಪಿವಿ) ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

PREV

Recommended Stories

ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?
ಗ್ರೇಟರ್‌ ಬೆಂಗ್ಳೂರು ಜಾರಿಗೆ ಅಂತಿಮ ಸಿದ್ಧತೆ : ಸೆ.2ರಿಂದಲೇ ಆಡಳಿತಾತ್ಮಕವಾಗಿ ಜಿಬಿಎ ಅಸ್ತಿತ್ವಕ್ಕೆ