ಬಾಂಧವ್ಯದ ಎಂಬುದು ಒಂದು ಹೃದಯದ ಭಾವ ಸಂಬಂಧ, ಅಂತರಂಗದಿಂದ ಹೊರಹೊಮ್ಮುವ ಮಧುರಾನುಭೂತಿ. ಇಲ್ಲಿ ಚಿತ್ರಗೀತೆಗಳ ಜೊತೆಗೆ ಡಾ.ರಾಜ್‌ಕುಮಾರ್‌ ಅವರ ಭವ್ಯ ವ್ಯಕ್ತಿತ್ವ, ಚಿತ್ರಗೀತೆಗಳ ಸಮನ್ವಯತೆ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ.ಡಿ. ಸತೀಶ್‌ ಚಂದ್ರ ಅವರ ‘ಡಾ.ರಾಜ್‌ ಚಿತ್ರಗೀತೆಗಳಲ್ಲಿ ಬಾಂಧವ್ಯದ ನೆಲೆಗಳು’ ಕೃತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿದೆ.

ಚಲನಚಿತ್ರಗಳಲ್ಲಿ ಸ್ವರೂಪ- ವಿಕಾಸದ ಪಯಣ ಅಧ್ಯಾಯದಲ್ಲಿ ಮೂಕಿಚಿತ್ರಗಳ ಬೆಳವಣಿಗೆ, ಕನ್ನಡದಲ್ಲಿ ಮೂಕಿ ಚಿತ್ರಗಳ ಪರಂಪರೆ, ಕನ್ನಡದಲ್ಲಿ ವಾಕ್ಚಿತ್ರಗಳ ಬೆಳವಣಿಗೆ, ಪ್ರಾಸಾನು ಪ್ರಾಸಗಳ ಬಳಕೆ ಬಗ್ಗೆ ಚರ್ಚಿಸಿ, ಚಿತ್ರಗೀತೆಗಳು ಕಥೆಯ. ಓಟಕ್ಕೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಿಸಿದ್ದಾರೆ.

ಡಾ.ರಾಜ್‌ಕುಮಾರ್‌ ಅವರ ಕೆಲವು ಚಿತ್ರಗೀತೆಗಳನ್ನು ಪ್ರಾತಿನಿಧಿಕವಾಗಿ ಆಯ್ಕೆ ಮಾಡಿಕೊಂಡು, ಭಕ್ತ- ಭಗವಂತರ ಮಧುರ ಭಕ್ತಿ ಸಂಬಂಧದ ನೆಲೆ, ಪ್ರಕೃತಿ ಮಾನವ ಸಂಬಂಧದ ನೆಲೆ, ನಾಡು- ನುಡಿಯ ಸಂಬಂಧದ ನೆಲೆ, ಕೌಟುಂಬಿಕ ಬಾಂಧವ್ಯದ ನೆಲೆ, ಗುರು ಶಿಷ್ಯ ಬಾಂಧವ್ಯದ ನೆಲೆ, ಸಮಾಜಿಕ ಸಂಬಂಧದ ನೆಲೆ- ಈ ಹಿನ್ನೆಲೆಯಲ್ಲಿ ಸತೀಶ್‌ ಚಂದ್ರ ಅವರು ಅಧ್ಯಯನ ನಡೆಸಿ, ಈ ಕೃತಿಯನ್ನು ರಚಿಸಿದ್ದಾರೆ.

ಬಾಂಧವ್ಯದ ಎಂಬುದು ಒಂದು ಹೃದಯದ ಭಾವ ಸಂಬಂಧ, ಅಂತರಂಗದಿಂದ ಹೊರಹೊಮ್ಮುವ ಮಧುರಾನುಭೂತಿ. ಇಲ್ಲಿ ಚಿತ್ರಗೀತೆಗಳ ಜೊತೆಗೆ ಡಾ.ರಾಜ್‌ಕುಮಾರ್‌ ಅವರ ಭವ್ಯ ವ್ಯಕ್ತಿತ್ವ, ಚಿತ್ರಗೀತೆಗಳ ಸಮನ್ವಯತೆ ಇದೆ. ಡಾ,ರಾಜ್‌ಕುಮಾರ್‌ ಅಭಿನಯದ ಚಿತ್ರಗಳಲ್ಲಿ ಆಯ್ದ ಗೀತೆಗಳಲ್ಲಿ ಬಾಂಧವ್ಯದ ನೆಲೆಗಳ ಬಗ್ಗೆ ಡಾ.ಡಿ. ಸತೀಶ್‌ ಚಂದ್ರ ಅವರು ಅಧ್ಯಯನ ನಡೆಸಿದ್ದರೂ ಇದೊಂದು ಕನ್ನಡ ಮತ್ತು ಸಂಸ್ಕೃತಿಯ ಅಧ್ಯಯನ ಎನಿಸುತ್ತದೆ. ಜೀವನದ ಮೌಲ್ಯಗಳು ಹಾಗೂ ಸಂಸ್ಕೃತಿಯ ಹಿರಿಮೆ ಇಲ್ಲಿ ಮೇಳೈಸಿದೆ. ಏಕೆಂದರೆ ಡಾ.ರಾಜ್‌ಕುಮಾರ್‌ ತಮ್ಮ ಚಿತ್ರಗಳ ಮೂಲಕ ಕೇವಲ ಮನರಂಜನೆಗೆ ಸೀಮಿತವಾಗದೇ ಮೌಲಿಕ ಸಂದೇಶವನ್ನು ಸಮುದಾಯದ ಮುಂದಿಟ್ಟಿದ್ದಾರೆ. ಸದಭಿರುಚಿಯ ಜೊತೆಗೆ ಮಾನವೀಯ ಸಂಬಂಧಗಳನ್ನು ಬೆಸೆದಿದ್ದಾರೆ. ಅವರ ನಟಿಸಿರುವ ಚಿತ್ರಗೀತೆಗಳಲ್ಲಿನ ಸಾಹಿತ್ಯ, ಆಶಯ, ಪರಿಣಾಮಗಳ ದೃಷ್ಟಿಯಿಂದ ಮೆಚ್ಚುಗೆಗೆ ಪಾತ್ರವಾಗಿವೆ. ಅದರಲ್ಲಿನ ಸದಾಶಯಗಳು ಎಲ್ಲರಲ್ಲೂ ಕ್ರಿಯಾಶೀಲವಾಗಿವೆ. ಏಕೆಂದರೆ ಎಲ್ಲಾ ಗೀತೆಗಳ ಕೇಳುಗರನ್ನು ಚಿಂತೆಗೆ ಹಚ್ಚುತ್ತವೆ.

ಗೀತೆಗಳು ಸಂಸ್ಕೃತಿಯ ಮೌಲ್ಯವಾಹಕಗಳಾಗಿವೆ. ನೊಂದವರಿಗೆ ಸಾಂತ್ವನ ಹೇಳುವ ಚಿಕಿತ್ಸಕ ಗುಣ ಹೊಂದಿವೆ. ‘ಆಕಸ್ಮಿಕ’ ಚಿತ್ರದ ‘ಬಾಳುವಂಥ ಹೂವೇ ಬಾಡುವಾಸೆ ಏಕೆ?. ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ?...’ ಗೀತೆಯನ್ನು ಗಮನಿಸಿದಾಗ ಭರವಸೆ ಹಾಗೂ ಧೈರ್ಯ ತುಂಬುವ ಗುಣ ಎದ್ದು ಕಾಣಿಸುತ್ತದೆ.

ಅಲ್ಲದೇ ಬಹುತೇಕ ಗೀತೆಗಳಲ್ಲಿ ಸ್ನೇಹ ಸೌಹಾರ್ದತೆ, ಮಾನವೀಯತೆ ಕಂಡು ಬರುತ್ತದೆ. ನಾಡು- ನುಡಿ, ಸಾಮಾಜಿಕ ಚಿಂತನೆ, ಸಾಂಸ್ಕೃತಿಕ ಹಿರಿಮೆ- ಗರಿಮೆ ವ್ಯಕ್ತಿತ್ವ ವಿಕಸನದ ಬಗ್ಗೆ ಸಕಾರಾತ್ಮಕ ಆಲೋಚನೆ ಇದೆ.

ಇತ್ತೀಚಿನ ದಿನಮಾನಗಳಲ್ಲಿ ಚಲನಚಿತ್ರ ಗೀತೆಗಳಲ್ಲಿ ಸಾಹಿತ್ಯಕ್ಕಿಂತ ಸಂಗೀತದ್ದೆ ಅಬ್ಬರ!. ಆದರೆ ಡಾ.ರಾಜ್‌ ಅಭಿನಯನದ ಚಿತ್ರಗಳೆಂದರೆ ಕಿವಿಗಳಿಗೆ ಇಂಪು. ತಮ್ಮ ಸಾಹಿತ್ಯ, ಸಂಗೀತ, ಸಂದೇಶಗಳಿಂದಾಗಿ ನಿತ್ಯ ಬದುಕಿಗೆ ಪೂರಕವಾಗಿರುವಂಥವು. ‘ನಾದಮಯ...’ ಗೀತೆಗಾಗಿ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಗಾಯಕ ಪ್ರಶಸ್ತಿಯನ್ನು ಪಡೆದ ಡಾ.ರಾಜ್‌ಕುಮಾರ್‌ ಅವರ ಸುಮಧುರ ಗೀತೆಗಳ ಬಗ್ಗೆ ಮೆಲಕು ಹಾಕಲು ಈ ಕೃತಿ ನೆರವಾಗುತ್ತದೆ.

ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ, ಡಾ.ರಾಜ್‌ಕುಮಾರ್‌ ಅಧ್ಯಯನ ಪೀಠದ ಸಂಚಾಲಕ ಡಾ.ಎ.ಎಸ್. ಪ್ರಭಾಕರ ಅವರ ಅಭಿಪ್ರಾಯಗಳಿವೆ.

ಆಸಕ್ತರು ಡಾ.ಡಿ. ಸತೀಶ್‌ ಚಂದ್ರ, ಮೊ. 94826 40555 ಅಥವಾ ಹಂಪಿ ವಿವಿ ಸರಸ್ವತಿ ಪುಸ್ತಕ ಮಾರಾಟ ಮಳಿಗೆ, ಮೊ. 70228 52677 ಸಂಪರ್ಕಿಸಬಹುದು.