ಶಿಕ್ಷಣ ಕ್ಷೇತ್ರದಲ್ಲಿ ಅಸಮರ್ಪಕ ಅನುದಾನ ಹಂಚಿಕೆ

Published : Jul 20, 2026, 12:55 PM ISTUpdated : Jul 20, 2026, 12:57 PM IST
Saving Money

ಸಾರಾಂಶ

ಉನ್ನತ ಶಿಕ್ಷಣದ ಸಾರ್ವಜನಿಕ ವೆಚ್ಚದ ಸುಮಾರು ಶೇ.50ಕ್ಕಿಂತ ಹೆಚ್ಚು ಭಾಗ ಮೀಸಲಾಗುತ್ತಿದೆ. ಇನ್ನೊಂದೆಡೆ, ದೇಶದ ಶೇ.97 ವಿದ್ಯಾರ್ಥಿಗಳು ಓದುತ್ತಿರುವ ನೂರಾರು ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಉಳಿದ ಸಂಪನ್ಮೂಲಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ.

-ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಿಗುವ ಅನುದಾನ ಶೇ.97ರಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ವಿವಿಗಳಿಗೆ ಏಕೆ ಇಲ್ಲ?

ಅನುದಾನ ಹಂಚಿಕೆಯ ಅಸಮಾನತೆ ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಚರ್ಚೆ ಆಗುತ್ತಿರುವ ವಿಷಯವೆಂದರೆ ಅನುದಾನ ಹಂಚಿಕೆಯ ಅಸಮಾನತೆ. ದೇಶದ ಒಟ್ಟು ಉನ್ನತ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಕೇವಲ ಶೇ.2.6ರಿಂದ 3 ವಿದ್ಯಾರ್ಥಿಗಳು ಮಾತ್ರ ಐಐಟಿ, ಐಐಎಂ ಮತ್ತು ಎನ್‌ಐಟಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಇವುಗಳಿಗೆ ಉನ್ನತ ಶಿಕ್ಷಣದ ಸಾರ್ವಜನಿಕ ವೆಚ್ಚದ ಸುಮಾರು ಶೇ.50ಕ್ಕಿಂತ ಹೆಚ್ಚು ಭಾಗ ಮೀಸಲಾಗುತ್ತಿದೆ. ಇನ್ನೊಂದೆಡೆ, ದೇಶದ ಶೇ.97 ವಿದ್ಯಾರ್ಥಿಗಳು ಓದುತ್ತಿರುವ ನೂರಾರು ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಉಳಿದ ಸಂಪನ್ಮೂಲಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಈ ಪರಿಸ್ಥಿತಿಯಲ್ಲಿ ಉದ್ಭವವಾಗುವ ಪ್ರಮುಖ ಪ್ರಶ್ನೆಯೆಂದರೆ ಅತ್ಯುತ್ತಮ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸಬೇಕೇ? ಅಥವಾ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಹೆಚ್ಚಿನ ಸಂಪನ್ಮೂಲ ಒದಗಿಸಬೇಕೇ ಎನ್ನುವುದು.

 -ಡಾ। ಬಿ.ಈ.ರಂಗಸ್ವಾಮಿ, ಕುಲಸಚಿವರು (ನಿಕಟಪೂರ್ವ), ವಿ.ತಾ.ವಿ. ಪ್ರಾಧ್ಯಾಪಕರು, ಜೈವಿಕ ತಂತ್ರಜ್ಞಾನ ವಿಭಾಗ, ಬಾಪೂಜಿ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಮಹಾವಿದ್ಯಾಲಯ, ದಾವಣಗೆರೆ

ಶಿಕ್ಷಣವು ವ್ಯಕ್ತಿಯ ಜೀವನದ ರೂಪುರೇಷೆಗಳನ್ನು ನಿರ್ಧರಿಸುವ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಅದು ಕೇವಲ ಜ್ಞಾನವನ್ನು ನೀಡುವುದಲ್ಲದೆ ವ್ಯಕ್ತಿತ್ವದ ವಿಕಾಸ, ಸಾಮಾಜಿಕ ಜಾಗೃತಿ, ಆರ್ಥಿಕ ಸ್ವಾವಲಂಬನೆ ಹಾಗೂ ರಾಷ್ಟ್ರನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕುತ್ತದೆ. ಇಂದಿನ ಜ್ಞಾನಾಧಾರಿತ ಮತ್ತು ತಂತ್ರಜ್ಞಾನ ಕೇಂದ್ರಿತ ಜಗತ್ತಿನಲ್ಲಿ ಉನ್ನತ ಶಿಕ್ಷಣವು ದೇಶದ ಆರ್ಥಿಕ ಬೆಳವಣಿಗೆ, ವೈಜ್ಞಾನಿಕ ಪ್ರಗತಿ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ.

ಸ್ವಾತಂತ್ರ್ಯಾ ನಂತರ ಭಾರತವು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿದ್ದು, ಇಂದು ವಿಶ್ವದಲ್ಲೇ ಅತೀ ದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು, ಭಾರತೀಯ ತಾಂತ್ರಿಕ ಸಂಸ್ಥೆಗಳು (ಐಐಟಿ), ಭಾರತೀಯ ನಿರ್ವಹಣಾ ಸಂಸ್ಥೆಗಳು (ಐಐಎಂ), ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (ಎನ್‌ಐಟಿ), ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಇತರೆ ಕಾಲೇಜುಗಳು ಹಾಗೂ ಸಂಶೋಧನಾ ಕೇಂದ್ರಗಳ ಮೂಲಕ ದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಒದಗಿಸಲಾಗುತ್ತಿದೆ.

ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯ ವಿಸ್ತರಣೆ ಕಳೆದೆರಡು ದಶಕಗಳಲ್ಲಿ ಭಾರತದ ಉನ್ನತ ಶಿಕ್ಷಣ ಕ್ಷೇತ್ರವು ಗಮನಾರ್ಹವಾಗಿ ವಿಸ್ತರಿಸಿದೆ. ಪ್ರಸ್ತುತ ದೇಶದಲ್ಲಿ, ಸುಮಾರು 1338 ವಿವಿಗಳು, 50,000ಕ್ಕೂ ಹೆಚ್ಚು ಕಾಲೇಜುಗಳು 70,000ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಿದ್ದು, ಪ್ರಸ್ತುತ 4 ಕೋಟಿ 46 ಲಕ್ಷ ವಿದ್ಯಾರ್ಥಿಗಳ ದಾಖಲಾತಿ ಪಡೆದಿದ್ದಾರೆ. AISHE (All India Survey on Higher Education) ವರದಿಯ ಪ್ರಕಾರ, ಸುಮಾರು 3.2 ಕೋಟಿ ವಿದ್ಯಾರ್ಥಿಗಳು ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇದು ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯ ನಿಜವಾದ ಆಧಾರವಾಗಿದೆ. ಭಾರತದ Gross Enrolment Ratio (GER) ಸುಮಾರು ಶೇ.31 ಆಗಿದ್ದು, 18-23 ವರ್ಷದ ವಯೋಮಾನದ ಪ್ರತೀ 100 ಯುವಕರಲ್ಲಿ ಕೇವಲ 31 ಜನಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಮಹಿಳಾ ಶಿಕ್ಷಣದ ಕ್ಷೇತ್ರದಲ್ಲಿಯೂ ಪ್ರಗತಿ ಕಂಡು ಬಂದಿದ್ದು, ಒಟ್ಟು ದಾಖಲಾತಿಯಲ್ಲಿ ಮಹಿಳೆಯರ ಪಾಲು ಸುಮಾರು ಶೇ.49 ತಲುಪಿದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಸುಮಾರು ಶೇ.15, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಶೇ.6 ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶೇ.37ಕ್ಕಿಂತ ಹೆಚ್ಚು ಪಾಲು ಹೊಂದಿದ್ದಾರೆ. ದೇಶದಲ್ಲಿ ಸುಮಾರು 75 ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಒಟ್ಟಾರೆ ಸುಮಾರು 10 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಉನ್ನತ ಶಿಕ್ಷಣದ ಮಹತ್ವ ಮತ್ತು ಶ್ರೇಷ್ಠ ಸಂಸ್ಥೆಗಳು ಉನ್ನತ ಶಿಕ್ಷಣವು ವ್ಯಕ್ತಿಯಲ್ಲಿ ವಿಶ್ಲೇಷಣಾತ್ಮಕ ಚಿಂತನೆ, ಸಮಸ್ಯೆ ಪರಿಹಾರ ಸಾಮರ್ಥ್ಯ, ನಾಯಕತ್ವ ಗುಣಗಳು ಹಾಗೂ ಸಂಶೋಧನಾ ಮನೋಭಾವವನ್ನು ಬೆಳೆಸುತ್ತದೆ. ಉನ್ನತ ಶಿಕ್ಷಣದ ಪ್ರಮುಖ ಉದ್ದೇಶಗಳೆಂದರೆ, ಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಮಾಡುವುದು, ಸಂಶೋಧನೆ ಮತ್ತು ನಾವಿನ್ಯತೆಗೆ ಉತ್ತೇಜನ ನೀಡುವುದು, ಉದ್ಯೋಗಾರ್ಹತೆ ಹೆಚ್ಚಿಸುವುದು, ಸಾಮಾಜಿಕ, ಆರ್ಥಿಕ ಪ್ರಗತಿಗೆ ಕೊಡುಗೆ ನೀಡುವುದು ಮತ್ತು ಜಾಗತಿಕ ಸ್ಪರ್ಧೆಗೆ ಸಿದ್ಧಗೊಳಿಸುವುದಾಗಿದೆ. ದೇಶದ ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೃಷಿ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆದ ಯುವಕರ ಪಾತ್ರ ನಿರ್ಣಾಯಕವಾಗಿದೆ.

ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಐಐಟಿ, ಐಐಎಂ ಮತ್ತು ಎನ್‌ಐಟಿಗಳಿಗೆ ವಿಶೇಷ ಸ್ಥಾನವಿದೆ. ಪ್ರಸ್ತುತ ದೇಶದಲ್ಲಿ 23 ಐಐಟಿಗಳು, 21 ಐಐಎಂಗಳು ಮತ್ತು 31 ಎನ್‌ಐಟಿಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳು ವಿಶ್ವಮಟ್ಟದ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗೆ ಹೆಸರುವಾಸಿಯಾಗಿವೆ. ಭಾರತದ ಅನೇಕ ವಿಜ್ಞಾನಿಗಳು, ತಂತ್ರಜ್ಞಾನ ತಜ್ಞರು, ಉದ್ಯಮಿಗಳು ಮತ್ತು ಜಾಗತಿಕ ಕಂಪನಿಗಳ ನಾಯಕರು ಈ ಸಂಸ್ಥೆಗಳಿಂದಲೇ ಹೊರಹೊಮ್ಮಿದ್ದಾರೆ. ಈ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವುದು ಅತ್ಯಂತ ಕಠಿಣವಾಗಿದೆ. ಐಐಟಿಗಳಲ್ಲಿ ಪ್ರವೇಶ ಪಡೆಯಲು ಜೆಇಇ ಮೇನ್ಸ್‌ ಪರೀಕ್ಷೆಗೆ ಪ್ರತಿವರ್ಷ ಸುಮಾರು 22–23 ಲಕ್ಷ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಆದರೆ, ಐಐಟಿಗಳಲ್ಲಿ ಲಭ್ಯವಿರುವ ಸೀಟುಗಳು ಕೇವಲ 18,000–19,000 ಮಾತ್ರ. ಅಂದರೆ ಪರೀಕ್ಷೆ ಬರೆಯುವ ಪ್ರತೀ 100 ವಿದ್ಯಾರ್ಥಿಗಳಲ್ಲಿ ಒಬ್ಬರಿಗಿಂತಲೂ ಕಡಿಮೆ ವಿದ್ಯಾರ್ಥಿಗೆ ಐಐಟಿ ಪ್ರವೇಶ ದೊರೆಯುತ್ತದೆ. ಇನ್ನು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೀಟ್‌ ಪರೀಕ್ಷೆಗೆ ಪ್ರತಿ ವರ್ಷ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಸರ್ಕಾರಿ ಎಂಬಿಬಿಎಸ್‌ ಸೀಟುಗಳು ಸುಮಾರು 63,600 ಮಾತ್ರ. ದೇಶದಲ್ಲಿಯ 20 ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌)ಗಳಲ್ಲಿ ಸುಮಾರು 2,257 ಎಂಬಿಬಿಎಸ್‌ ಸೀಟುಗಳು ಮಾತ್ರ ಇವೆ. ಇದು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಅವಕಾಶಗಳ ಬೇಡಿಕೆ ಎಷ್ಟು ಹೆಚ್ಚಿದೆ ಎಂಬುವುದನ್ನು ತೋರಿಸುತ್ತದೆ.

ಅನುದಾನ ಹಂಚಿಕೆಯ ಅಸಮಾನತೆ ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಚರ್ಚೆ ಆಗುತ್ತಿರುವ ವಿಷಯವೆಂದರೆ ಅನುದಾನ ಹಂಚಿಕೆಯ ಅಸಮಾನತೆ. ದೇಶದ ಒಟ್ಟು ಉನ್ನತ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಕೇವಲ ಶೇ.2.6ರಿಂದ 3 ವಿದ್ಯಾರ್ಥಿಗಳು ಮಾತ್ರ ಐಐಟಿ, ಐಐಎಂ ಮತ್ತು ಎನ್‌ಐಟಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಇವುಗಳಿಗೆ ಉನ್ನತ ಶಿಕ್ಷಣದ ಸಾರ್ವಜನಿಕ ವೆಚ್ಚದ ಸುಮಾರು ಶೇ.50ಕ್ಕಿಂತ ಹೆಚ್ಚು ಭಾಗ ಮೀಸಲಾಗುತ್ತಿದೆ. ಇನ್ನೊಂದೆಡೆ, ದೇಶದ ಶೇ.97 ವಿದ್ಯಾರ್ಥಿಗಳು ಓದುತ್ತಿರುವ ನೂರಾರು ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಉಳಿದ ಸಂಪನ್ಮೂಲಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಈ ಪರಿಸ್ಥಿತಿಯಲ್ಲಿ ಉದ್ಭವವಾಗುವ ಪ್ರಮುಖ ಪ್ರಶ್ನೆಯೆಂದರೆ ಅತ್ಯುತ್ತಮ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸಬೇಕೇ? ಅಥವಾ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಹೆಚ್ಚಿನ ಸಂಪನ್ಮೂಲ ಒದಗಿಸಬೇಕೇ ಎನ್ನುವುದು.

ಶಿಕ್ಷಣ ಬಜೆಟ್, ಆದ್ಯತೆಗಳು:

ಭಾರತ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದ ಅನುದಾನವನ್ನು ಹೆಚ್ಚಿಸಿದೆ. 2026–27ರ ಕೇಂದ್ರ ಬಜೆಟ್‌ ಪ್ರಕಾರ, ಶಿಕ್ಷಣ ಕ್ಷೇತ್ರಕ್ಕೆ ಒಟ್ಟು ₹1.4 ಲಕ್ಷ ಕೋಟಿಗಿಂತ ಹೆಚ್ಚು ಅನುದಾನ ನೀಡಲಾಗಿದೆ. ಅದರಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ₹55,727 ಕೋಟಿ, ವಿದ್ಯಾರ್ಥಿಗಳ ಆರ್ಥಿಕ ನೆರವಿಗೆ ₹2,160 ಕೋಟಿ, ಡಿಜಿಟಲೀಕರಣಕ್ಕೆ ₹670 ಕೋಟಿ ಮತ್ತು ಕೇಂದ್ರ ಯೋಜನೆಗಳಿಗೆ ₹8,292 ಕೋಟಿ ಮೀಸಲಿಡಲಾಗಿದೆ. ಇನ್ನು, ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಹಂಚಿಕೆ ಮಾಡಿರುವುದನ್ನು ನೋಡಿದರೆ, ಐಐಟಿಗಳಿಗೆ ₹12,123 ಕೋಟಿ, ಎನ್‌ಐಟಿಗಳಿಗೆ ₹6,260 ಕೋಟಿ, ಐಐಎಂಗಳಿಗೆ ₹292 ಕೋಟಿ, ಐಐಎಸ್‌ಸಿ ಬೆಂಗಳೂರಿಗೆ ₹845 ಕೋಟಿ ಹಾಗೂ 57 ಕೇಂದ್ರ ವಿಶ್ವವಿದ್ಯಾಲಯಗಳಿಗೆ ₹17,440 ಕೋಟಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಅಂಕಿ ಅಂಶಗಳು ಉನ್ನತ ಶಿಕ್ಷಣದಲ್ಲಿನ ಸರ್ಕಾರದ ಆದ್ಯತೆಗಳನ್ನು ಸ್ಪಷ್ಟಪಡಿಸುತ್ತವೆ.

ಸಂಶೋಧನೆ ಮತ್ತು ಅಭಿವೃದ್ಧಿ:

ಜಾಗತಿಕ ಸ್ಪರ್ಧೆಯಲ್ಲಿ ಯಶಸ್ವಿಯಾಗಲು ಸಂಶೋಧನೆ ಮತ್ತು ನಾವಿನ್ಯತೆ ಅತ್ಯಗತ್ಯ. ಆದರೆ, ಭಾರತದಲ್ಲಿನ ಆರ್‌ ಆ್ಯಂಡ್‌ ಡಿ ವೆಚ್ಚ ಜಿಡಿಪಿಯ ಕೇವಲ ಶೇಕಡ 0.6–0.7. ಪ್ರಮುಖ ಇತರ ದೇಶಗಳೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಆರ್‌ ಆ್ಯಂಡ್‌ ಡಿ ವೆಚ್ಚವನ್ನು ಹೋಲಿಕೆ ಮಾಡಿ ನೋಡಿದಾಗ ಅಮೆರಿಕದಲ್ಲಿ ಸುಮಾರು ಶೇ.3.5, ಚೀನಾದಲ್ಲಿ ಶೇ.2.4, ದಕ್ಷಿಣ ಕೊರಿಯಾದಲ್ಲಿ ಶೇ.4.5, ಜಪಾನ್ ಶೇ.3.7 ಹಾಗೂ ಇಸ್ರೇಲ್ ಶೇ.5.8ಕ್ಕಿಂತ ಹೆಚ್ಚು ಇದೆ. ಕೇಂದ್ರ ಬಜೆಟ್‌ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ (ಆರ್‌ ಆ್ಯಂಡ್‌ ಡಿ) ಮೀಸಲಾದ ಅನುದಾನವು ಕೇವಲ ₹418 ಕೋಟಿ, ಇದು ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ಭಾರತವು ಎಐ, ಕ್ವಾಂಟಮ್‌ ತಂತ್ರಜ್ಞಾನ, ಜೈವಿಕ ವಿಜ್ಞಾನ ಮತ್ತು ಸುಧಾರಿತ ಉತ್ಪಾದನಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಬೇಕಾದರೆ, ಆರ್‌ ಆ್ಯಂಡ್‌ ಡಿ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸುವುದು ಅಗತ್ಯವಾಗಿದೆ.

ಶಿಕ್ಷಣ, ಉದ್ಯೋಗದ ನಡುವಿನ ಅಂತರ:

ಭಾರತದ ಉನ್ನತ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಮತ್ತೊಂದು ಪ್ರಮುಖ ಸವಾಲು ಶಿಕ್ಷಣ ಮತ್ತು ಉದ್ಯೋಗಗಳ ನಡುವಿನ ಹೊಂದಾಣಿಕೆಯ ಕೊರತೆ. ವಿವಿಧ ಅಧ್ಯಯನಗಳ ಪ್ರಕಾರ, ಸುಮಾರು ಶೇ.82 ಎಂಜಿನಿಯರಿಂಗ್‌ ಪದವೀಧರರು ಉದ್ಯೋಗಾರ್ಹ ಕೌಶಲ್ಯಗಳಲ್ಲಿ ಕೊರತೆಯನ್ನು ಹೊಂದಿದ್ದಾರೆ. ಜೊತೆಗೆ, ಶೇ.80ಕ್ಕಿಂತ ಹೆಚ್ಚು ಉದ್ಯೋಗಿಗಳು ತಮ್ಮ ವಿದ್ಯಾರ್ಹತೆಗೆ ಹೊಂದಿಕೆಯಾಗದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಭಾರತೀಯ ಕಾರ್ಮಿಕ ಶಕ್ತಿಯಲ್ಲಿ ಕೇವಲ ಶೇ.56 ಜನರನ್ನು ಮಾತ್ರ ಸಮರ್ಪಕ ಕೌಶಲ್ಯ ಹೊಂದಿದವರು ಎಂದು ಪರಿಗಣಿಸಲಾಗುತ್ತದೆ. ಈ ಅಂಕಿ-ಅಂಶಗಳು ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟದ ಸುಧಾರಣೆ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿರುವ ಅಗತ್ಯವನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಏಕೆಂದರೆ ಶಿಕ್ಷಣ ಮತ್ತು ಉದ್ಯೋಗಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು ಪ್ರಮುಖ ಸಮಸ್ಯೆಯಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ- 2020 ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಉದ್ದೇಶಿಸಿದೆ. ಅವುಗಳೆಂದರೆ, ಬಹುಶಿಸ್ತೀಯ ಶಿಕ್ಷಣ, ಕೌಶಲ್ಯಾಧಾರಿತ ಕಲಿಕೆ, ಸಂಶೋಧನೆಗೆ ಉತ್ತೇಜನ, ನಾವಿನ್ಯತೆ ಮತ್ತು ಉದ್ಯಮಶೀಲತೆ ಹಾಗೂ ಅಂತಾರಾಷ್ಟ್ರೀಯ ಸಹಯೋಗ ಪ್ರಮುಖ ಅಂಶಗಳು. ಎನ್‌ಇಪಿ- 2020ರ ಗುರಿಯು 2035ರ ವೇಳೆಗೆ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತವನ್ನು ಶೇ.50ಕ್ಕೆ ಹೆಚ್ಚಿಸುವುದು ಆಗಿದೆ.

ಪ್ರಮುಖ ಸವಾಲುಗಳು ಮತ್ತು ಗುರಿ:

ಭಾರತದ ಉನ್ನತ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಪ್ರಮುಖ ಸವಾಲುಗಳೆಂದರೆ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಸಮಾನತೆ, ಗುಣಮಟ್ಟದ ಶಿಕ್ಷಣದ ಕೊರತೆ, ಸಂಶೋಧನೆಗೆ ಕಡಿಮೆ ಹೂಡಿಕೆ, ಬೋಧಕ ಸಿಬ್ಬಂದಿಯ ಕೊರತೆ, ಹೆಚ್ಚಿನ ಖಾಸಗಿ ಶಿಕ್ಷಣ ಶುಲ್ಕ, ಉದ್ಯೋಗಾರ್ಹ ಕೌಶಲ್ಯಗಳ ಕೊರತೆ, ಅನುದಾನ ಹಂಚಿಕೆಯ ಅಸಮಾನತೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೀಮಿತ ಸ್ಪರ್ಧಾತ್ಮಕತೆ. ಭಾರತವು ವಿಶ್ವಗುರುವಾಗುವ ಗುರಿಯನ್ನು ಹೊಂದಿದ್ದರೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ಸುಧಾರಣೆ ಅಗತ್ಯ. ಇದಕ್ಕಾಗಿ, ಶಿಕ್ಷಣ ವೆಚ್ಚವನ್ನು ಜಿಡಿಪಿಯ ಕನಿಷ್ಠ ಶೇ.6 ಹೆಚ್ಚಿಸಬೇಕು. ರಾಜ್ಯಗಳಲ್ಲಿನ ಸರ್ಕಾರಿ ವಿವಿಗಳನ್ನು ಬಲಪಡಿಸುವುದರ ಜೊತೆಗೆ ಸಂಶೋಧನಾ ಹೂಡಿಕೆಯನ್ನು ಹೆಚ್ಚಿಸಬೇಕು. ಅಲ್ಲದೆ, ಕೈಗಾರಿಕೆ ವಿಶ್ವವಿದ್ಯಾಲಯ ಸಹಭಾಗಿತ್ವ ವಿಸ್ತರಿಸುವುದರೊಂದಿಗೆ, ಡಿಜಿಟಲೀಕರಣವನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವುದು ಜೊತೆಗೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾರ್ಹತೆಯನ್ನು ಹೆಚ್ಚಿಸುವುದಾಗಿದೆ.

ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯು ಒಂದು ಕಡೆ ವಿಶ್ವಮಟ್ಟದ ಸಂಸ್ಥೆಗಳನ್ನುನಿರ್ಮಿಸುವಲ್ಲಿ ಯಶಸ್ಸು ಕಂಡಿದ್ದರೆ, ಮತ್ತೊಂದು ಕಡೆ ಅನುದಾನ ಅಸಮಾನತೆ, ಸಂಶೋಧನಾ ಕೊರತೆ, ಗುಣಮಟ್ಟದ ವ್ಯತ್ಯಾಸ ಮತ್ತು ಉದ್ಯೋಗಾರ್ಹತೆಯ ಸವಾಲುಗಳನ್ನು ಎದುರಿಸುತ್ತಿದೆ. ಐಐಟಿಗಳು, ಐಐಎಂಗಳು, ಮತ್ತು ಎನ್‌ಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಬಲಪಡಿಸುವುದು ಅಗತ್ಯವಾದರೂ, ದೇಶದ ಶೇ.97 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಸಾಮಾನ್ಯ ಕಾಲೇಜುಗಳ ಅಭಿವೃದ್ಧಿಯೂ ಅಷ್ಟೇ ಮುಖ್ಯವಾಗಿದೆ. ಹೀಗಾಗಿ ಭಾರತದ ಮುಂದಿರುವ ಮೂಲಭೂತ ಪ್ರಶ್ನೆ ಏನೆಂದರೆ, ಸೀಮಿತ ಸಂಪನ್ಮೂಲಗಳನ್ನು ಮರುಹಂಚಿಕೆ ಮಾಡಬೇಕೇ? ಅಥವಾ ಶಿಕ್ಷಣ ಕ್ಷೇತ್ರದ ಒಟ್ಟು ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕೇ? ಈ ಎರಡರ ನಡುವೆ ಸಮತೋಲನ ಸಾಧಿಸುವ ಮೂಲಕವೇ ಭಾರತವು ಸಮಾನತೆ, ಗುಣಮಟ್ಟ ಮತ್ತು ನವೀನತೆಯ ಮೇಲೆ ಜ್ಞಾನಾಧಾರಿತ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ.

PREV
Read more Articles on

Recommended Stories

ಏನ್‌ ಮಾಡೋಕ್ಕಾಗುತ್ತೆ ? ನಿಮ್ಮ ಹೆಸರಿಗೆ ಏನೂ ಆಗಲ್ಲ ಬಿಡಿ !
ರೈಲೊಂದರ ರಿಯಲ್‌ ಸ್ಟೋರಿ