;Resize=(412,232))
ಇದು ವನ್ಯಮೃಗಗಳ ಲೋಕವೋ…ಈ ಭೂಮಿಗೆ ಇಳಿದ ನಾಕವೋ…
ಗಂಧದಗುಡಿ ಸಿನಿಮಾದಲ್ಲಿ ಡಾ ರಾಜಕುಮಾರ್ ಹಾಡಿದ ಈ ಹಾಡು ಅದೆಷ್ಟು ಅದ್ಭುತವಾಗಿದೆ ಎಂದರೆ, ಇಡೀ ಕರುನಾಡಿನ ಜೀವವೈವಿಧ್ಯತೆಯನ್ನು ಒಂದೇ ಸಿನಿಮಾ ಹಾಡಿನಲ್ಲಿ ಹಾಡಿ ತೋರಿಸಲಾಗಿತ್ತು. ಒಂದು ನಾಡಿನ ನೆಲ, ಜಲ ಮತ್ತು ಜೀವಜಾಲವನ್ನು ಇಷ್ಟೊಂದು ಸುಶ್ರಾವ್ಯ ಮತ್ತು ಸಾಹಿತ್ಯಬದ್ಧವಾಗಿ ಮೂಡಿಬಂದ ಸಿನಿಮಾ ಹಾಡು ದೇಶದ ಯಾವುದೇ ಭಾಷೆಯ ಸಿನಿಮಾದಲ್ಲಿ ಬಂದಿರಲಿಕ್ಕಿಲ್ಲ. ಈ ಗೀತೆಯ ಸಾಹಿತ್ಯದಂತೆ ನಮ್ಮ ನಾಡಿನ ಜೀವವೈವಿಧ್ಯತೆಯೂ ಸುಂದರವಾಗಿಯೇ ಇದೆ. ದೇಶದ ಬೃಹತ್ ರಾಜ್ಯಗಳಲ್ಲಿ ಒಂದಾದ ಕರ್ನಾಟಕ ಅತಿ ವಿಶಿಷ್ಟ ಹಾಗೂ ವಿಭಿನ್ನ ಪ್ರಾಕೃತಿಕ ಸಂಪತ್ತನ್ನೂ ಹೊಂದಿದೆ. ನಮ್ಮಲ್ಲಿರುವ ನದಿ, ತೊರೆಗಳೂ ಸಹ ಅಷ್ಟೇ ಜತನದಿಂದ ಈ ಜೀವಜಾಲವನ್ನು ಪೋಷಿಸಿಕೊಂಡು ಬರುತ್ತಿವೆ. ಕರ್ನಾಟಕದ ಜೀವವೈವಿಧ್ಯತೆಗೆ ಪಶ್ಚಿಮಘಟ್ಟಗಳ ಪಾಲು ಬಹಳ ದೊಡ್ಡದು. ದೇಶದ 6 ರಾಜ್ಯಗಳಿಗೆ ಸೇರಿದ 1600 ಕಿ ಮೀ ಉದ್ದದ ಪಶ್ಚಿಮ ಘಟ್ಟದ ಸಾಲುಗಳು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದೆ. ಈ ಪೈಕಿ ಕರ್ನಾಟಕದ ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ಬೆಳಗಾವಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುತ್ತವೆ. ರಾಜ್ಯದ ಶೇ. 60ರಷ್ಟು ಅರಣ್ಯ ಪ್ರದೇಶ ಈ ಪಶ್ಚಿಮ
ಘಟ್ಟದ ವ್ಯಾಪ್ತಿಯಲ್ಲೇ ಬರುತ್ತದೆ.
ಪಶ್ಚಿಮ ಘಟ್ಟಗಳು ಜಾಗತಿಕ ಜೀವವೈವಿಧ್ಯತೆಯ ತಾಣವಾಗಿದ್ದು, ದಕ್ಷಿಣ ಭಾರತದ ಎಲ್ಲ ಪ್ರಮುಖ ನದಿಗಳ ಉಗಮಸ್ಥಾನವೂ ಹೌದು. ರಾಜ್ಯದ ಇನ್ನೊಂದು ವಿಶೇಷವೇನೆಂದರೆ, ಹೇಗೆ ನಮ್ಮ ರಾಜ್ಯದ ಮೇಲೆ ಪಶ್ಚಿಮ ಘಟ್ಟದ ಪ್ರಭಾವ ಗಾಢವಾಗಿದೆಯೋ ಅದೇ ರೀತಿ ಪೂರ್ವ ಘಟ್ಟಗಳ ಕೊಡುಗೆಯೂ ಇದೆ. ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಭೂಮಿಯ ಜೊತೆಗೆ ಬೆಸೆಯುವ ಪೂರ್ವಘಟ್ಟವು ನಮ್ಮ ರಾಜ್ಯದ ಅರಣ್ಯ ಪ್ರದೇಶದ ವೈವಿಧ್ಯತೆಗೆ ಮಹತ್ವದ ಕೊಡುಗೆ ನೀಡಿದೆ. ಪೂರ್ವ ಮತ್ತು ಪಶ್ಚಿಮಘಟ್ಟ ಎರಡೂ ಜೀವವೈವಿಧ್ಯತೆ ಹೊಂದಿರುವ ವಿಶಿಷ್ಟ ರಾಜ್ಯ ನಮ್ಮದು. ಇದರ ಜೊತೆಗೆ ಶೋಲಾ ಅರಣ್ಯಗಳು ನಮ್ಮೆಲ್ಲ ನದಿಗಳ ಉಗಮ ಸ್ಥಾನ. ಶೋಲಾ ಅರಣ್ಯಗಳು ಸ್ಪಂಜಿನಂತೆ ಕೆಲಸ ನಿರ್ವಹಿಸುತ್ತವೆ. ಇವು ತಮ್ಮೊಡಲಲ್ಲಿ ನೀರನ್ನು ಹಿಡಿದಿಟ್ಟುಕೊಂಡು ವರ್ಷವಿಡೀ ಝರಿಗಳ ರೂಪದಲ್ಲಿ ನೀರನ್ನು ಕೊಡುತ್ತಿರುತ್ತವೆ. ಅತ್ಯಂತ ವಿಶಿಷ್ಟ ಹಾಗೂ ಮಹತ್ವಪೂರ್ಣ ಅರಣ್ಯ ಈ ಶೋಲಾ.
ಇದರ ಜೊತೆಗೆ ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕುರುಚಲು ಕಾಡು, ಒಣ ಎಲೆ ಉದುರುವ ಕಾಡು, ತೇವ ಭರಿತ ಕಾಡು, ನಿತ್ಯ ಹರಿದ್ವರ್ಣ ಕಾಡು ಹೀಗೆ ವೈವಿಧ್ಯಮಯ ಅರಣ್ಯ ನಮ್ಮಲ್ಲಿದೆ. ಅಷ್ಟೇ ಅಲ್ಲ, ಕಾಂಡ್ಲ ಕಾಡು ನಮ್ಮ ಕರಾವಳಿಯನ್ನು ಸಂರಕ್ಷಿಸಿಕೊಂಡು ಬರುತ್ತಿದೆ. ಇದೂ ಕೂಡ ಅತ್ಯಂತ ವಿಶೇಷ ಗುಣ ರಚನೆಯುಳ್ಳ ಕರಾವಳಿ ಸಂರಕ್ಷಣೆಯ ಅರಣ್ಯ ಪ್ರದೇಶ. ನಮ್ಮ ರಾಜ್ಯದ ಮಧ್ಯ ಕರ್ನಾಟಕಕ್ಕೆ ಹೋದರೆ, ಅಲ್ಲಿ ಬೃಹತ್ ಬಂಡೆಗಳ ಕುರುಚಲು ಕಾಡು ಸಿಗುತ್ತದೆ. ತುಮಕೂರು, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ದಾವಣಗೆರೆಯ ಕೆಲ
ಭಾಗಗಳು, ಕೊಪ್ಪಳ ಇವೆಲ್ಲವೂ ಅತ್ಯಂತ ವಿಶಿಷ್ಟವಾದ ಬಯಲು ಸೀಮೆಯ ಅರಣ್ಯ ಪ್ರದೇಶಗಳು. ಈ ಭೂಭಾಗಗಳು ಬೇರೆಯದ್ದೇ ರೀತಿಯ ಜೀವಸಂಕುಲವನ್ನು ಪೋಷಿಸಿಕೊಂಡು ಬರುತ್ತಿವೆ.
ಇಲ್ಲಿಂದ ಮುಂದೆ, ಬಯಲು ಸೀಮೆಯಲ್ಲೇ ಅತ್ಯಂತ ವಿಶಿಷ್ಟ ಎನಿಸಿಕೊಳ್ಳುವ ಹುಲ್ಲುಗಾವಲುಗಳು ಸಹ ಇವೆ. ಈ ಹುಲ್ಲುಗಾವಲುಗಳು ತೋಳ ಹಾಗೂ ಎರ್ಲಡ್ಡು ಹೀಗೆ ವಿಶೇಷ ತಳಿಯ ಜೀವಿಗಳಿಗೆ ಆಶ್ರಯತಾಣಗಳಾಗಿವೆ. ಈ ಹುಲ್ಲುಗಾವಲುಗಳು ಅಸಂಖ್ಯಾತ ಪಶು-ಪಕ್ಷಿಗಳನ್ನು ಪೋಷಿಸುತ್ತಿವೆ. ಅತ್ಯಂತ ವಿಶಿಷ್ಟವಾದ ನೀಲಕುರುಂಜಿ ಹೂವುಗಳೇ ಇರಬಹುದು, ಸಿಂಹ ಬಾಲದ ಕೋತಿ(ಸಿಂಗಲೀಕ)ವೇ ಇರಲಿ, ಮಂಗಟ್ಟೆ(ಹಾರ್ನಬಿಲ್), ಅನೇಕ ಜಾತಿಯ ಸೀತಾಳೆ ಹೂವುಗಳು, ಅಣಬೆಗಳು, ಅಗಣಿತ ಸಸ್ಯ ಸಂಪತ್ತು, ಕಶೇರುಕಗಳು, ಸರೀಸೃಪಗಳ ತಾಣ ನಮ್ಮ ನಾಡು. ನೈಸರ್ಗಿಕವಾಗಿ ನಮ್ಮ ರಾಜ್ಯ ಅದೆಷ್ಟು ಅದೃಷ್ಟದ ಭಾಗದಲ್ಲಿದೆ ಎಂದರೆ, ಪಶ್ಚಿಮ ಘಟ್ಟಗಳನ್ನು ಹಾದು ಬರುವ ಮೋಡಗಳಿಂದ ಮಳೆ ಸುರಿದರೆ, ನಮ್ಮಲ್ಲಿ ಹರಿವ ನದಿಗಳು ಜೀವಜಾಲವನ್ನು ಪೋಷಿಸಿಕೊಂಡು ಹೋಗುತ್ತಿವೆ. ಒಂದೆಡೆ, ಗೋವಾ ಮತ್ತು ಮಹಾರಾಷ್ಟ್ರ, ಮತ್ತೊಂದೆಡೆ ಆಂಧ್ರಪ್ರದೇಶ ಮತ್ತು ತೆಲಂಗಾಣ. ಇನ್ನೊಂದು ಕಡೆ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಭೂ ಪ್ರದೇಶವನ್ನು ನಮ್ಮ ಅರಣ್ಯ ಪ್ರದೇಶಗಳು ಬೆಸೆದಿರುವುದರಿಂದ ವನ್ಯಜೀವಿಗಳ ಸಂಚಾರವೂ ಅಬಾಧಿತ. ಇದರಿಂದ ನಮ್ಮಲ್ಲಿ ಅತ್ಯಂತ ನೈಸರ್ಗಿಕವಾದ “ಜೀನ್ ಪೂಲ್” ನಿರ್ಮಾಣವಾಗಲು ನೆರವಾಗುತ್ತಿದೆ. ಈ ಎಲ್ಲ ಅಂಶಗಳು ಕರ್ನಾಟಕವನ್ನು ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ನೈಸರ್ಗಿಕ ಸಂಪತ್ಭರಿತ ನಾಡು ಎನ್ನುವ ಹಿರಿಮೆ ತಂದು ಕೊಟ್ಟಿದೆ. ಇಷ್ಟೆಲ್ಲಾ ಅರಣ್ಯ ಸಂಪತ್ತು ಇದ್ದರೂ, ಇತ್ತೀಚೆಗೆ ಅಭಿವೃದ್ಧಿಯ ಹೆಸರಿನಲ್ಲಿ ಸೃಷ್ಟಿಯಾಗುತ್ತಿರುವ ಒತ್ತಡ ನಮ್ಮ ಅರಣ್ಯ ಪ್ರದೇಶದ ಬಲವನ್ನು ಕ್ಷೀಣಿಸುತ್ತಿದೆ. ವಿದೇಶಿ ಕಳೆಗಳು ವೈವಿಧ್ಯತೆಯನ್ನು ಹಾಳು ಮಾಡುತ್ತಿವೆ. ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರಿದೆ. ನದಿಗಳು ಮಾಲಿನ್ಯಕಾರಕಗೊಂಡಿವೆ. ಭೂಮಿಗೆ ರಾಸಾಯನಿಕಗಳನ್ನು ಸುರಿದು ಅದರ ಫಲವತ್ತತೆ ಹಾಳು ಮಾಡಲಾಗಿದೆ. ಇವುಗಳನ್ನು ನಿಗ್ರಹಿಸಲು ಅರಣ್ಯ ಇಲಾಖೆ ಸಾಕಷ್ಟು ಪರಿಶ್ರಮ ಹಾಕುತ್ತಿದೆಯಾದರೂ, ಅರಣ್ಯ ಸಂರಕ್ಷಣೆ ಎನ್ನುವುದು ನಮ್ಮಲ್ಲಿ ಇನ್ನೂ ಜನಾಂದೋಲನದ ರೂಪ ಪಡೆದುಕೊಂಡಿಲ್ಲ.
ಕರ್ನಾಟಕದಲ್ಲಿ ಅಗಾಧ ಜೀವವೈವಿಧ್ಯತೆ ಇದೆ. ನಮ್ಮಲ್ಲಿ ಸಂಶೋಧನೆಗೆ ಬಹಳ ಕೊರತೆ ಇದೆ. ಅಂದರೆ, ಈಗಾಗಲೇ ಸಂಶೋಧನೆ ಮಾಡಿ ಗುರುತಿಸಲಾದ ಜೀವಿಗಳ ಸ್ಥಿತಿಗತಿಯೇ ನಮಗೆ ಸಮರ್ಪಕವಾಗಿ ತಿಳಿದಿಲ್ಲ, ವಿಜ್ಞಾನಿಗಳ ಪ್ರಕಾರ ಇನ್ನೂ ಸಂಶೋಧನೆಯಾಗದ, ಗುರುತಿಸಿಯೇ ಇಲ್ಲದ ಅಸಂಖ್ಯಾತ ಜೀವಸಂಕುಲ ಕರುನಾಡ ಗರ್ಭದಲ್ಲಿ ಅಡಗಿದೆ. ಅವು ಅಳಿದು ಹೋಗದಂತೆ ನೋಡಿಕೊಳ್ಳಬೇಕಿದೆ. ಕರುನಾಡಿನ ಪರಿಸರಕ್ಕೆ ಹೊಸ ಅರಿವಿನ ಶಕ್ತಿ ತುಂಬುವ ಕೆಲಸ ಆಗಬೇಕಿದೆ.