ಧ್ವನಿ ಕಳೆದುಕೊಂಡ ಪ್ರತಿಭಟನಾ ಟೆಂಟ್‌ಗಳು !

KannadaprabhaNewsNetwork | Published : Dec 16, 2023 2:00 AM

ಸಾರಾಂಶ

10 ದಿನಗಳ ಕಾಲ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಪ್ರತಿಭಟನೆ ಸ್ಥಳಗಳಾದ ಸುವರ್ಣ ಗಾರ್ಡನ್ ಮತ್ತು ಕೊಂಡಸಕೊಪ್ಪ ಶುಕ್ರವಾರ ಪ್ರತಿಭಟನೆಗಳು ಅಥವಾ ಜನರಿಲ್ಲದೆ ಬೀಕೋ ಎನ್ನುತ್ತಿದ್ದವು.

ಜಗದೀಶ ವಿಕರಕ್ತಮಠ

ಕನ್ನಡಪ್ರಭ ವಾರ್ತೆ ಬೆಳಗಾವಿ

10 ದಿನಗಳ ಕಾಲ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಪ್ರತಿಭಟನೆ ಸ್ಥಳಗಳಾದ ಸುವರ್ಣ ಗಾರ್ಡನ್ ಮತ್ತು ಕೊಂಡಸಕೊಪ್ಪ ಶುಕ್ರವಾರ ಪ್ರತಿಭಟನೆಗಳು ಅಥವಾ ಜನರಿಲ್ಲದೆ ಬೀಕೋ ಎನ್ನುತ್ತಿದ್ದವು.

ಡಿ.4 ರಿಂದ ಡಿ.15 ವರೆಗೆ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನಕ್ಕೆ ಅಂತಿಮ ತೆರೆ ಬಿದ್ದಿದೆ. ಈ ವೇಳೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಸರ್ಕಾರದ ಗಮನ ಸೆಳೆಯುವುದರ ಜತೆಗೆ ನೇರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ ಈ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದ ವೇಳೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಗ್ರಾಮಗಳಿಂದ ರೈತಪರ ಹೋರಾಟಗಾರರು, ಶಿಕ್ಷಕರ ಸಂಘ, ದಲಿತ ಪರ ಸಂಘ, ವೈದ್ಯಕೀಯ ಸಂಘ, ಪಿಂಚಣಿದಾರರು, ವಿಶೇಷ ಚೇತನ ಸಂಘಟನೆ, ಅಂಗನವಾಡಿ ಕಾರ್ಯಕರ್ತೆಯರು, ವಸತಿರಹಿತ, ಕಾರ್ಯನಿರತ ಗುತ್ತಿಗೆದಾರರ ಸಂಘ, ಮದ್ಯ ಪ್ರಿಯರ ಸಂಘ, ಪಾರಂಪರಿಕ ವೈದ್ಯ ಪರಿಷತ್‌, ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರು ಸೇರಿದಂತೆ ವಿವಿಧ ಹಲವು ಸಂಘಟನೆಗಳು ತಮ್ಮ ಸಮಸ್ಯೆಗಳನ್ನು ಪ್ರತಿಭಟನೆ ಮಾಡುವುದರ ಜತೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಡಿ.4 ರಿಂದ ಡಿ.15 ರವರೆಗೆ ಸುಮಾರು 50ಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದಿವೆ. ಈ ವೇಳೆ ಪ್ರತಿದಿನ ಸರಿ ಸುಮಾರು 6 ರಿಂದ 7 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಗಳಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆದಿದ್ದಾರೆ. ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ಜನರಿಗೆ ಹಲಗಾ ಗ್ರಾಮದ ಸುವರ್ಣ ಗಾರ್ಡನ್ ಹತ್ತಿರ ಹಾಗೂ ಕುಂಡುಸಕೊಪ್ಪ ಗ್ರಾಮದ ಹತ್ತಿರ ಪ್ರತ್ಯೇಕ ಪ್ರತಿಭಟನಾ ಸ್ಥಳಗಳೆಂದು ಜಿಲ್ಲಾಡಳಿತ ಗುರುತಿಸಿತ್ತು. ಅಲ್ಲದೇ ಪ್ರತಿಭಟನೆ ವೇಳೆ ಜನರಿಗೆ ನೆರಳು ನೀಡುವ ಉದ್ದೇಶದಿಂದ ಸುವರ್ಣ ಗಾರ್ಡನನಲ್ಲಿ ಪ್ರತ್ಯೇಕವಾಗಿ ದೊಡ್ಡ ಪ್ರಮಾಣದ ಮೂರು ಹಾಗೂ ಕೊಂಡಸಕೊಪ್ಪ ಒಂದು ಪೆಂಡಾಲ್ ನಿರ್ಮಿಸಲಾಗಿತ್ತು. ಈ ಮೂರು ಪೆಂಡಾಲ್‌ಗಳಲ್ಲಿ ಪ್ರತಿಭಟನಾ ಸ್ಥಳಗಳನ್ನಾಗಿ ವಿಂಗಡಿಸುವ ಮೂಲಕ ಏಕಕಾಲಕ್ಕೆ ಸಾವಿರರಾರು ಜನರು ಭಾಗವಹಿಸಬಹುದಾಗುತ್ತು. ಅಲ್ಲದೇ ಮೂರು ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್ ಶೌಚಾಲಯ ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬದಕು ಕಟ್ಟಿಕೊಂಡ ವ್ಯಾಪಾರಿಗಳು;

ಕಳೆದ 10 ದಿನಗಳಿಂದ ನಡೆದ ಅಧಿವೇಶನದ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಹಲವು ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಕಾವಿನಲ್ಲಿಯೂ ಬಾಳೆ ಹಣ್ಣು, ಚಹಾ, ಚುನಮುರಿ, ಬಜ್ಜಿ, ಗಿರಮೀಟ್, ಕಲ್ಲಂಗಡಿ, ಕಡಲೆ, ನೀರು ಬಾಟಲ್, ಪುಸಕ್ತ ಮಾರಾಟ, ಎಳೆನೀರು, ವಿವಿಧ ಬಗೆಯ ಜ್ಯೂಸ್‌ಗಳು, ಊಟ ಹಾಗೂ ತಿಂಡಿ ತಿನಿಸುಗಳ ವ್ಯಾಪಾರಿಗಳು ಪ್ರತಿಭಟನಾ ಟೆಂಟ್‌ಗಳ ಹತ್ತಿರ ವ್ಯಾಪಾರ ನಡೆಸಿದರು. ಪ್ರತಿಭಟನೆಯಲ್ಲಿ ತಮ್ಮ ಬೇಡಿಕೆಗಳ ಧ್ವನಿ ಸರ್ಕಾರಕ್ಕೆ ಕೆಳುವಂತೆ ಚೀರಿದ್ದವರ ಹಸಿವನ್ನು ಹಿಂಗಿಸಿ ಅನ್ನ, ನೀರು ನೀಡಿ ದಣಿವಾರಿಸಿದರು. ಈ ವೇಳೆ ಹಾಕಲಾಗಿದ್ದ ಅಂಗಡಿ ಮುಂಗಟ್ಟುಗಳಲ್ಲಿ ತಮ್ಮ ಮನೆಯಲ್ಲಿನ ಮಕ್ಕಳು, ಮಹಿಳೆಯರು ಕಾರ್ಯನಿರ್ವಹಿಸುವದರ ಜತೆಗೆ ಪ್ರತಿಭಟನಾ ಕಾವಿನಲ್ಲಿಯೂ ನೂರಾರು ಬೀದಿ ವ್ಯಾಪಾರಿಗಳು ತಮ್ಮ ಬದುಕಿನ ಬಂಡಿ ಸಾಗಿಸಿದ್ದರು. ಆದರೆ ಡಿ.15 ರಂದು ಅಧಿವೇಶನದ ಕೊನೆಯ ದಿನವಾಗಿದ್ದರಿಂದ ಬೆರಳೆಣಿಯಷ್ಟು ಜನರು ಪ್ರತಿಭಟನಾ ಸ್ಥಳಗಳಲ್ಲಿ ಇದ್ದರಿಂದ ದಿನನಿತ್ಯದಂತೆ ವ್ಯಾಪಾರ ಆಗದೇ ಇರುವುದರಿಂದ ಬಡ ವ್ಯಾಪಾರಿಗಳಲ್ಲಿ ನಿರಾಶ ಭಾವನೆ ಮೂಡಿತ್ತು. ಮುಂದಿನ ವ್ಯಾಪಾರ ಎಲ್ಲಿ ಎಂಬ ಚಿಂತೆ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಗೂಡು ಸೇರಿದ ಪೊಲೀಸ್ ಪಡೆ:

ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನಿಗಾವಹಿಸುವ ಉದ್ದೇಶದಿಂದ ಸುಮಾರು ಐದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಅಧಿವೇಶನ ಆರಂಭವಾಗುವ ಮೊದಲ ದಿನವೇ ಖಾಕಿ ಪಡೆ ಭದ್ರತೆಗಾಗಿ ಟೊಂಕಕಟ್ಟಿ ನಿಂತಿತ್ತು. ಅಲ್ಲದೇ ಕೊರೆಯುವ ಚಳಿ ಹಾಗೂ ಬಿಸಿಲು ಎನ್ನದೇ ಕರ್ತವ್ಯ ನಿರ್ವಹಿಸಿದ ಪೊಲೀಸರು ಶುಕ್ರವಾರ ಅಧಿವೇಶನದ ಕರ್ತವ್ಯ ಬಿಡುಗಡೆಗಾಗಿ ಹಿರಿಯ ಅಧಿಕಾರಿಗಳ ಎದುರು ನೋಡುತ್ತಿದ್ದರು. ಕಳೆದ ಎರಡ್ಮೂರು ದಿನಗಳಿಂದ ಚಳಿ ಪ್ರಮಾಣ ಹೆಚ್ಚಿದ್ದು, ಗೂಡು ಸೇರುವ ತವಕದಲ್ಲಿದ್ದರು.---ಕಳೆದ ವರ್ಷ ನಡೆದ ಚಳಿಗಾಲದ ಅಧಿವೇಶನದಲ್ಲಿ 80ಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಯಲಿರುವ ಅಧಿವೇಶನ ಎಂದರೆ ಕೆಲವ ಪ್ರತಿಭಟನೆ ಎಂದು ಶಾಸಕರು, ಸಚಿವರು ಭಾವಿಸುತ್ತಾರೆ. ಆದ್ದರಿಂದ ಅಧಿವೇಶನ ಆರಂಭಕೂ ಮೊದಲೇ ಅಧಿಕಾರಿಗಳ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳಿಗೆ ಪರಹಾರ ಕಲ್ಪಿಸಿ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ ಹಾಗೂ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಪತ್ರಬರೆದಿದ್ದರು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಚಳಿಗಾಲದ ಅಧಿವೇಶನದ ಸಮಯದಲ್ಲಿ ಪ್ರತಿಭಟನೆಗಳ ಸಂಖ್ಯೆ 50ಕ್ಕೆ ಇಳಿಕೆಯಾಗಿದೆ.

---

15ಬಿಇಎಲ್‌32

Share this article