;Resize=(412,232))
ಇಪಿಎಫ್ ಮತ್ತು ಎನ್‌ಪಿಎಸ್ ಯಾವುದು ಉತ್ತಮ ಎಂಬ ಗೊಂದಲ ಬಹಳಷ್ಟು ಜನರಲ್ಲಿದೆ. ನಿವೃತ್ತಿ ಯೋಜನೆಗಳಲ್ಲಿ ಇಪಿಎಫ್ ಸುರಕ್ಷಿತ ಮತ್ತು ನಿಶ್ಚಿತ ಆದಾಯ ನೀಡಿದರೆ, ಎನ್‌ಪಿಎಸ್ ಷೇರುಪೇಟೆ ಆಧಾರಿತವಾಗಿದ್ದು ಹೆಚ್ಚಿನ ಲಾಭದ ನಿರೀಕ್ಷೆ ಹುಟ್ಟಿಸುತ್ತದೆ. 25 ವರ್ಷಗಳ ಹೂಡಿಕೆಯ ಬಳಿಕ ಯಾವುದು ಉತ್ತಮ ಎಂಬುದರ ವಿಶ್ಲೇಷಣೆ ಇಲ್ಲಿದೆ.
ಇಪಿಎಫ್: ಇದರಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತ ತಲಾ ಶೇ. 12ರಷ್ಟು ಪಾವತಿಸುತ್ತಾರೆ. ಉದ್ಯೋಗದಾತನ ಪಾಲಿನಲ್ಲಿ ಶೇ. 8.33ರಷ್ಟು (ಗರಿಷ್ಠ ರೂ. 2,083) ಇಪಿಎಸ್ ಖಾತೆಗೆ ಜಮೆಯಾಗುತ್ತದೆ. ಸರ್ಕಾರ ನಿಗದಿಪಡಿಸುವ ಬಡ್ಡಿ (ಪ್ರಸ್ತುತ ಶೇ. 8.25) ಸಿಗಲಿದ್ದು, ಇದು ಷೇರುಪೇಟೆ ಏರಿಳಿತಗಳಿಂದ ಮುಕ್ತವಾಗಿದೆ.
ಎನ್‌ಪಿಎಸ್: ಇದೊಂದು ಮಾರುಕಟ್ಟೆ ಆಧಾರಿತ ಯೋಜನೆ. ಇದರಲ್ಲಿ ಷೇರುಗಳು, ಕಾರ್ಪೊರೇಟ್ ಬಾಂಡ್ ಅಥವಾ ಸರ್ಕಾರಿ ಭದ್ರತೆಗಳಲ್ಲಿ ಹಣ ಹೂಡಬಹುದು. ಖಾಸಗಿ ವಲಯದ ಉದ್ಯೋಗಿಗಳಿಗೆ ತಮ್ಮ ಹೂಡಿಕೆಯ ಶೇ. 100ರಷ್ಟನ್ನೂ ಈಕ್ವಿಟಿಯಲ್ಲಿ (ಷೇರುಪೇಟೆ) ತೊಡಗಿಸುವ ಅವಕಾಶವೂ ಇದೆ.
ತಿಂಗಳಿಗೆ 50,000 ರೂ. ಮೂಲ ವೇತನ (ಪ್ರತಿ ವರ್ಷ ಶೇ. 5ರಷ್ಟು ಏರಿಕೆ) ಪಡೆಯುವ 35 ವರ್ಷದ ಇಬ್ಬರು ಉದ್ಯೋಗಿಗಳ 25 ವರ್ಷಗಳ ಹೂಡಿಕೆಯ ಲೆಕ್ಕಾಚಾರ:
ಇಪಿಎಫ್: ಮಾಸಿಕ ರೂ. 9,917 (ಉದ್ಯೋಗಿ + ಉದ್ಯೋಗದಾತನ ಇಪಿಎಫ್ ಪಾಲು) ಖಾತೆಗೆ ಜಮೆಯಾಗುತ್ತದೆ. ಶೇ. 8.25ರ ಬಡ್ಡಿ ಲೆಕ್ಕಾಚಾರದಲ್ಲಿ, 60ನೇ ವಯಸ್ಸಿಗೆ ಅಂದಾಜು ರೂ. 1.58 ಕೋಟಿ ಸಂಗ್ರಹವಾಗುತ್ತದೆ.
ಎನ್‌ಪಿಎಸ್: ಉದ್ಯೋಗಿ ಮತ್ತು ಉದ್ಯೋಗದಾತ ತಲಾ ಶೇ.10ರಂತೆ ಮಾಸಿಕ ರೂ. 10,000 ಜಮೆಯಾಗುತ್ತದೆ. 25 ವರ್ಷದ ಬಳಿಕ, ವಾರ್ಷಿಕ ಶೇ. 8ರಷ್ಟು ರಿಟರ್ನ್ಸ್ ಬಂದರೆ ರೂ. 1.43 ಕೋಟಿ, ಶೇ. 10 ಬಂದರೆ ರೂ. 1.87 ಕೋಟಿ ಹಾಗೂ ಶೇ. 12ರಷ್ಟು ಬಂದರೆ ರೂ. 2.46 ಕೋಟಿ ಸಂಗ್ರಹವಾಗಬಹುದು.
ಹಣ ಹಿಂಪಡೆಯುವ ನಿಯಮ
ಇಪಿಎಫ್: ನಿವೃತ್ತಿ ಬಳಿಕ ಪೂರ್ಣ ಮೊತ್ತವನ್ನು ಒಟ್ಟಿಗೆ ಹಿಂಪಡೆಯಬಹುದು. ಮದುವೆ, ಮನೆ ಖರೀದಿ, ಅನಾರೋಗ್ಯದಂತಹ ತುರ್ತು ಸಂದರ್ಭಗಳಲ್ಲಿ ಸೇವಾ ಅವಧಿಯಲ್ಲೇ ಭಾಗಶಃ ಹಣ ಪಡೆಯುವ ಅವಕಾಶವಿದೆ.
ಎನ್‌ಪಿಎಸ್: ನಿವೃತ್ತಿಯ ಬಳಿಕ ಒಟ್ಟು ಮೊತ್ತದ ಶೇ. 80ರಷ್ಟನ್ನು ಮಾತ್ರ ಒಟ್ಟಿಗೆ ಪಡೆಯಬಹುದು. ಉಳಿದ ಶೇ. 20ರಷ್ಟು ಹಣದಲ್ಲಿ ಕಡ್ಡಾಯವಾಗಿ ಆನ್ಯುಯಿಟಿ ಖರೀದಿಸಬೇಕು (ಇದರಿಂದ ಮಾಸಿಕ ಪಿಂಚಣಿ ಬರುತ್ತದೆ). ಇದರಲ್ಲಿ ಸೇವಾ ಅವಧಿಯಲ್ಲಿ ಹಣ ಹಿಂಪಡೆಯುವ ನಿಯಮಗಳು ಬಹಳ ಬಿಗಿಯಾಗಿವೆ.
ತೆರಿಗೆ ವಿನಾಯಿತಿ
ಇಪಿಎಫ್ ಹೂಡಿಕೆ ಹಾಗೂ 5 ವರ್ಷಗಳ ಸೇವೆಯ ಬಳಿಕ ಹಿಂಪಡೆಯುವ ಮೊತ್ತಕ್ಕೆ ಪೂರ್ಣ ತೆರಿಗೆ ವಿನಾಯಿತಿ ಇದೆ. ಎನ್‌ಪಿಎಸ್‌ನಲ್ಲಿ ಉದ್ಯೋಗದಾತರ ಕೊಡುಗೆಗೆ ಹೆಚ್ಚುವರಿ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ, ನಿವೃತ್ತಿಯ ಬಳಿಕ ಎನ್‌ಪಿಎಸ್‌ನಿಂದ ಹಿಂಪಡೆಯುವ ಒಟ್ಟು ಮೊತ್ತದಲ್ಲಿ ಶೇ. 60ರಷ್ಟಕ್ಕೆ ಮಾತ್ರ ತೆರಿಗೆ ವಿನಾಯಿತಿ ಇದೆ. ಉಳಿದ ಮೊತ್ತ ಹಾಗೂ ಪಿಂಚಣಿ ತೆರಿಗೆ ವ್ಯಾಪ್ತಿಗೆ ಬರುತ್ತದೆ.
ಕೊನೆಯ ಮಾತು
ಸುರಕ್ಷತೆ, ನಿಶ್ಚಿತ ಆದಾಯ ಹಾಗೂ ತುರ್ತು ಸಂದರ್ಭದಲ್ಲಿ ಹಣ ಹಿಂಪಡೆಯುವ ಸೌಲಭ್ಯ ಬೇಕೆನ್ನುವವರಿಗೆ ಇಪಿಎಫ್ ಬೆಸ್ಟ್. ಷೇರುಪೇಟೆಯ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವಿದ್ದು, ಭವಿಷ್ಯದಲ್ಲಿ ಹೆಚ್ಚಿನ ಆದಾಯ ನಿರೀಕ್ಷಿಸುವವರಿಗೆ ಎನ್‌ಪಿಎಸ್ ಸೂಕ್ತ. ಎರಡರಲ್ಲೂ ಹೂಡಿಕೆ ಮಾಡುವುದು ಹೆಚ್ಚು ಜಾಣತನ.