ಬೆಂಗಳೂರು : ಕರ್ನಾಟಕದ ಕ್ರೀಡಾಪಟುಗಳು ಒಲಿಂಪಿಕ್ಸ್, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದು ಇಡೀ ದೇಶಕ್ಕೆ ಹೆಮ್ಮೆ ತರಬೇಕು. ಕ್ರೀಡಾಕೂಟಗಳ ಸಂದರ್ಭ ಅಥ್ಲೀಟ್‌ಗಳಿಗೆ ಶಾಲಾ-ಕಾಲೇಜುಗಳಲ್ಲಿ ಹಾಜರಾತಿ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಅವರಿಗೆ ಶೇ.25ರಷ್ಟು ಹಾಜರಾತಿ ನೀಡುವ ಪ್ರಸ್ತಾಪವಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ಭಾನುವಾರ ನೃಪತುಂಗ ರಸ್ತೆಯ ಯವನಿಕಾದಲ್ಲಿ ನಡೆದ ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ(ಕೆಒಎ) ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಮಾತನಾಡಿದರು.
‘ವಿದ್ಯಾರ್ಥಿಗಳಿಗೆ ಶೇ.10ರಷ್ಟು ಗ್ರೇಸ್ ಮಾರ್ಕ್ ಕೊಡುವ ಬಗ್ಗೆಯೂ ನಾವು ಚಿಂತನೆ ನಡೆಸುತ್ತಿದ್ದೇವೆ. ಕ್ರೀಡೆಯ ಅಭಿವೃದ್ಧಿಗೆ ನೆರವಾಗುವ ಯಾವುದೇ ಕಾರ್ಯಕ್ರಮಕ್ಕೆ ಬಜೆಟ್ ಚರ್ಚೆಯಲ್ಲಿ ನಾನು ಇಲ್ಲ ಎಂದಿಲ್ಲ. ನಾನು ಸ್ವತಃ ಕ್ರೀಡಾಸಕ್ತ ಆಗಿರುವುದರಿಂದ ಕ್ರೀಡೆಗೆ ಬೇಕಾದ ಎಲ್ಲಾ ಸಹಕಾರ ನೀಡಲಿದ್ದೇನೆ.
ನಾವು ಜನಸಂಖ್ಯೆಯಲ್ಲಿ ಚೀನಾಗಿಂತ ಮುಂದಿದ್ದೇವೆ. ಆದರೆ ಒಲಿಂಪಿಕ್ಸ್‌ನಲ್ಲಿ ಒಂದೂ ಚಿನ್ನ ಗೆದ್ದಿಲ್ಲ ಎನ್ನುವುದು ನೋವಿನ ಸಂಗತಿ. ಅದಕ್ಕಾಗಿ ನಮ್ಮ ಕ್ರೀಡಾಪಟುಗಳು ಪ್ರಯತ್ನ ಪಡಬೇಕು. ಪ್ರಯತ್ನದಿಂದ ಸಾಧ್ಯವಾಗದೇ ಇರುವುದು ಯಾವುದೂ ಇಲ್ಲ’ ಎಂದು ಹುರಿದುಂಬಿಸಿದರು.
ಇನ್ನು, ಮಿನಿ ಒಲಿಂಪಿಕ್ಸ್ ಆಯೋಜನೆ ಮೂಲಕ ಗಮನ ಸೆಳೆಯುತ್ತಿರುವ ಕೆಒಎ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಸಿಎಂ, ‘ಕ್ರೀಡಾಪಟುಗಳಿಗೆ ವೇದಿಕೆ ಸಿದ್ಧಪಡಿಸಿಕೊಳ್ಳಲು ಮಿನಿ ಒಲಿಂಪಿಕ್ಸ್, ಹಿರಿಯರ ಒಲಿಂಪಿಕ್ಸ್ ಅಗತ್ಯ. ಇದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆ ಸೇರಿ ಎಲ್ಲಾ ನೆರವು ನೀಡಲು ನಮ್ಮ ಸರ್ಕಾರ ಬದ್ಧ.
ನಾವು ಒಲಿಂಪಿಕ್ಸ್ ಚಿನ್ನ ಗೆದ್ದವರಿಗೆ ₹6 ಕೋಟಿ, ಬೆಳ್ಳಿಗೆ ₹4 ಕೋಟಿ, ಕಂಚಿನ ಪದಕಕ್ಕೆ ₹3 ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದೇವೆ. ಆದರೆ ಯಾರೂ ಪದಕ ಗೆಲ್ಲುತ್ತಿಲ್ಲ. ಕರ್ನಾಟಕದಿಂದ ಒಲಿಂಪಿಕ್ಸ್ ಪದಕ ಗೆದ್ದರೆ ಅದಕ್ಕಿಂತ ದೊಡ್ಡ ಖುಷಿ ಬೇರೆ ಇಲ್ಲ’ ಎಂದು ಹೇಳಿದರು. ತಮ್ಮ ಬಾಲ್ಯದ ಕ್ರೀಡಾ ಚಟುವಟಿಕಗಳನ್ನು ಮೆಲುಕು ಹಾಕಿದ ಸಿದ್ದರಾಮಯ್ಯ, ‘ಚಿಕ್ಕವನಿರುವಾಗ ಎಲ್ಲಾ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಆದರೆ ಪ್ರಶಸ್ತಿ ಸಿಗುತ್ತಿರಲಿಲ್ಲ. ಶಾಸಕರ ದಿನಾಚರಣೆಯಲ್ಲಿ ಕುಸ್ತಿಯಲ್ಲಿ ನನಗೆ ಪ್ರಶಸ್ತಿ ಬಂದಿದೆ.
ಈಗ ಕ್ರೀಡೆಯಲ್ಲಿ ಇಲ್ಲದಿದ್ದರೂ ಅದರಲ್ಲಿ ಆಸಕ್ತಿ ಇದೆ. ಪತ್ರಿಕೆಯ ಯಾವುದೇ ಪುಟ ಓದದಿದ್ದರೂ ಕ್ರೀಡಾ ಪುಟ ಓದುತ್ತೇನೆ’ ಎಂದು ಹೇಳಿದರು. ಕರ್ನಾಟಕ ಅಥ್ಲೀಟ್‌ಗಳು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತಾಗಬೇಕು. ಪದಕ ಗೆಲ್ಲದಿದ್ದರೂ ಸ್ಪರ್ಧೆ ಮುಖ್ಯ. ಆರೋಗ್ಯ ಸದೃಢವಾಗಿರಬೇಕಾದರೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.
ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಕೆಒಎ ಅಧ್ಯಕ್ಷ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಾ.ಕೆ. ಗೋವಿಂದರಾಜು ಸೇರಿ ಪ್ರಮುಖರು ಹಾಜರಿದ್ದರು.
ವೀರಮಣಿ ಸೇರಿ 22 ಸಾಧಕರಿಗೆ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ಪತ್ರಿಕೆಯ ಹಿರಿಯ ಫೋಟೋಗ್ರಾಫರ್ ವೀರಮಣಿ ಸೇರಿದಂತೆ 22 ಸಾಧಕರಿಗೆ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಅಥ್ಲೆಟಿಕ್ಸ್‌ನ ಸಿಂಚಲ್ ಕಾವೇರಮ್ಮ, ಬಾಸ್ಕೆಟ್‌ಬಾಲ್‌ನ ಅಭಿಷೇಕ್ ಗೌಡ, ಈಜು ಸ್ಪರ್ಧಿ ಅನೀಶ್ ಗೌಡ, ನೆಟ್‌ಬಾಲ್ ಆಟಗಾರ್ತಿ ಸುರಭಿ ಬಿ.ಆರ್., ಫುಟ್ಬಾಲ್ ಪಟು ಅಂಕಿತಾ, ಕೆನೋಯ್ ಹಾಗೂ ಕಾಯಕಿಂಗ್ ಸ್ಪರ್ಧಿ ದಾದಾಪೀರ್, ಸೈಕ್ಲಿಂಗ್‌ನ ಕೀರ್ತಿ ರಂಗಸ್ವಾಮಿ, ಜಿಮ್ನಾಸ್ಟಿಕ್ ಪಟು ಕೀರ್ತನಾ, ಟೆನಿಸ್ ಆಟಗಾರ್ತಿ ಸುಹಿತಾ ಮರೂರಿ, ರೈಫಲ್ ಶೂಟಿಂಗ್ ಪಟು ಯುಕ್ತಿ ರಾಜೇಂದ್ರ, ವೇಟ್‌ಲಿಫ್ಟಿಂಗ್ ಸ್ಪರ್ಧಿ ಉಶಾ ಎಸ್.ಆರ್., ಫೆನ್ಸಿಂಗ್‌ನ ಸೆಜಲ್ ಹಾಗೂ ಇತರ 7 ಮಂದಿ ಮಾಜಿ ಕ್ರೀಡಾಪಟುಗಳು ಕೂಡಾ ಪ್ರಶಸ್ತಿ ಪಡೆದರು. ಬ್ಯಾಡ್ಮಿಂಟನ್ ಪಟು ಸಾಯಿಪ್ರತೀಕ್, ಹಾಕಿ ಆಟಗಾರ ಮೊಹಮ್ಮದ್ ರಾಹೀಲ್ ಮೌಸೀನ್ ಅನುಪಸ್ಥಿತಿಯಲ್ಲಿ ಅವರ ಪೋಷಕರು ಪ್ರಶಸ್ತಿ ಸ್ವೀಕರಿಸಿದರು.