ಕನ್ನಡಪ್ರಭ ವಾರ್ತೆ ಬೆಂಗಳೂರು
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಸನ್ಮಾನಿಸಿ ಮಾತನಾಡಿದ ಅವರು, ಸದ್ಯ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಶೇ. 3ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಅದೇ ರೀತಿ ಇತರ ಇಲಾಖೆಗಳಲ್ಲೂ ಕ್ರೀಡಾ ಕೋಟದ ಅಡಿಯಲ್ಲಿ ಶೇ. 2ರಷ್ಟು ಉದ್ಯೋಗ ಮೀಸಲಾತಿ ನೀಡುವ ಬಗ್ಗೆ ಬೇಡಿಕೆಯಿದೆ. ಅದನ್ನು ಸಕಾರಾತ್ಮಕವಾಗಿ ಪರಿಶೀಲಿಸಿ ತೀರ್ಮಾನಿಸಲಾಗುವುದು ಎಂದರು.
ಚೀನಾದಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಈವರೆಗಿನ ಅತಿ ಹೆಚ್ಚು ಪದಕ ಗಳಿಸಿದ್ದಾರೆ. ಕಳೆದ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ 70 ಇದ್ದಂತಹ ಪದಕಗಳ ಸಂಖ್ಯೆ ಈ ಬಾರಿ 107ಕ್ಕೆ ಹೆಚ್ಚಾಗಿದೆ. ಪದಕ ವಿಜೇತರಲ್ಲಿ ಕನ್ನಡಿಗರೂ ಇದ್ದು, ಇದು ರಾಜ್ಯದ ಗೌರವ ಹೆಚ್ಚುವಂತೆ ಮಾಡಿದೆ. ರಾಜ್ಯದ 8 ಮಂದಿ ಕ್ರೀಡಾಪಟುಗಳು ಪದಕ ಪಡೆದಿದ್ದಾರೆ. ಸರ್ಕಾರ ಮತ್ತು ಏಳು ಕೋಟಿ ಕನ್ನಡಿಗರ ವತಿಯಿಂದ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವುದು ಸಣ್ಣ ವಿಷಯವಲ್ಲ. ಅದಕ್ಕೆ ಅಪಾರ ಪರಿಶ್ರಮದ ಅಗತ್ಯವಿದೆ. ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದವರು ಒಲಿಪಿಕ್ಸ್‌ನಲ್ಲೂ ಪದಕ ಗೆಲ್ಲಲು ಪ್ರಯತ್ನಿಸಬೇಕು ಎಂದು ಆಶಿಸಿದರು.ರಾಜ್ಯ ಸರ್ಕಾರ ಕ್ರೀಡೆಗೆ ಸಾಕಷ್ಟು ಉತ್ತೇಜನ ನೀಡುತ್ತಿದೆ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಏಷ್ಯನ್ ಗೇಮ್ಸ್, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದವರಿಗೆ ನಗದು ಬಹುಮಾನ ಘೋಷಿಸಿದ್ದೆ. ಅದರಲ್ಲೂ ದೇಶದ ಬೇರೆಲ್ಲ ರಾಜ್ಯಗಳಿಗಿಂತ ಅತಿಹೆಚ್ಚು ಮೊತ್ತದ ನಗದು ಬಹುಮಾನ ಘೋಷಿಸಿದ ಮೊದಲ ರಾಜ್ಯ ನಮ್ಮದು ಎಂಬ ಹೆಗ್ಗಳಿಕೆಯೂ ಇದೆ ಎಂದರು.
5ರಿಂದ 25 ಲಕ್ಷ ರು.ವರೆಗೆ ಬಹುಮಾನ:
ಇದರಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳಿಗೆ ತಲಾ 25 ಲಕ್ಷ ರು., ಬೆಳ್ಳಿ ಪದಕ ಗೆದ್ದ ಕ್ರೀಡಾಪಟುಗಳಿಗೆ ತಲಾ 15 ಲಕ್ಷ ರು. ಹಾಗೂ ಮೂವರು ರಾಜ್ಯದ ತರಬೇತುದಾರರಿಗೆ ತಲಾ 5 ಲಕ್ಷ ರು. ನೀಡುವುದಾಗಿ ನೀಡಲಾಯಿತು.
ಏಷ್ಯಾಡ್‌ನಲ್ಲಿ ರಾಜ್ಯದ 8 ಕ್ರೀಡಾಪಟುಗಳು ಪದಕ ಪಡೆದಿದ್ದಾರೆ. ಸರ್ಕಾರ ಮತ್ತು ಏಳು ಕೋಟಿ ಕನ್ನಡಿಗರ ವತಿಯಿಂದ ಅವರಿಗೆ ಅಭಿನಂದನೆ.- ಸಿದ್ದರಾಮಯ್ಯ, ಮುಖ್ಯಮಂತ್ರಿ