ಫುಟ್ಬಾಲ್‌ ಸ್ಟೇಡಿಯಂ ರಣರಂಗ: ಅಭಿಮಾನಿಗಳ ನಡುವೆ ಘರ್ಷಣೆ, ಕಾಲ್ತುಳಿತಕ್ಕೆ 56 ಬಲಿ!

KannadaprabhaNewsNetwork |  
Published : Dec 03, 2024, 12:36 AM ISTUpdated : Dec 03, 2024, 05:45 AM IST
ಕ್ರೀಡಾಂಗಣ | Kannada Prabha

ಸಾರಾಂಶ

ಗಿನಿಯಾ ದೇಶದಲ್ಲಿ ನಡೆದ ಭೀಕರ ಘಟನೆ: ಪಂದ್ಯದ ವೇಳೆ 2 ತಂಡದ ಬೆಂಬಲಿಗರ ಘರ್ಷಣೆ. ಕ್ರೀಡಾಂಗಣದ ಬಳಿ ಎಲ್ಲೆಂದರಲ್ಲಿ ಶವಗಳು. ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

ಕೊನಾಕ್ರಿ(ಗಿನಿಯಾ): ಫುಟ್ಬಾಲ್‌ ಪಂದ್ಯದ ವೇಳೆ ಉಂಟಾದ ಭಾರಿ ಘರ್ಷಣೆ, ಕಾಲ್ತುಳಿತದಿಂದಾಗಿ ಮಹಿಳೆಯರು, ಮಕ್ಕಳು ಸೇರಿದಂತೆ 56ಕ್ಕೂ ಹೆಚ್ಚು ಮಂದಿ ಮೃತಪಟ್ಟ ಭೀಕರ ಘಟನೆ ಪಶ್ಚಿಮ ಆಫ್ರಿಕಾದ ಗಿನಿಯಾ ಎಂಬ ದೇಶದಲ್ಲಿ ನಡೆದಿದೆ.ಭಾನುವಾರ ಮಧ್ಯಾಹ್ನ ದಕ್ಷಿಣ ಗಿನಿಯಾದ ಎನ್ಜೆರೆಕೋರ್‌ ನಗರದಲ್ಲಿ ಲೇಬ್‌ ಮತ್ತು ಎನ್ಜೆರೆಕೋರ್‌ ತಂಡಗಳ ನಡುವೆ ಫುಟ್ಬಾಲ್‌ ಪಂದ್ಯ ಆಯೋಜಿಸಲಾಗಿತ್ತು. ಈ ವೇಳೆ ರೆಫ್ರಿ ನೀಡಿದ ತೀರ್ಪೊಂದು ಭಾರಿ ಘರ್ಷಣೆಗೆ ಕಾರಣವಾಗಿದೆ ಎಂದು ವರದಿಯಾಗಿದೆ. ಕ್ರೀಡಾಂಗಣದಲ್ಲೇ ಎರಡೂ ತಂಡದ ಬೆಂಬಲಿಗರ ನಡುವೆ ಗಲಾಟೆ ಉಂಟಾಗಿದ್ದು, ಇದರಿಂದಾಗಿ ಕಾಲ್ತುಳಿತ ಸಂಭವಿಸಿದೆ. ಬಳಿಕ ಕ್ರೀಡಾಂಗಣದ ಹೊರಗಡೆಯೂ ಅಭಿಮಾನಿಗಳ ನಡುವೆ ಭಾರಿ ಕಾಳಗ ಉಂಟಾಗಿದೆ. ಘಟನೆಯಲ್ಲಿ 56 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘಟನೆ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ.

ಕ್ರೀಡಾಂಗಣದ ಒಳಗೆ ಹಾಗೂ ಹೊರಗೆ ಹಿಂಸಾಚಾರ ನಡೆಯುತ್ತಿರುವ ದೃಶ್ಯಗಳಿರುವ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.ಜೂ. ಏಷ್ಯಾ ಹಾಕಿ: ಇಂದು ಭಾರತ vs ಮಲೇಷ್ಯಾ ಸೆಮಿ

ಮಸ್ಕತ್‌: 10ನೇ ಆವೃತ್ತಿ ಕಿರಿಯರ ಏಷ್ಯಾಕಪ್‌ ಹಾಕಿ ಟೂರ್ನಿಯ ಸೆಮಿಫೈನಲ್‌ಗೆ ವೇದಿಕೆ ಸಜ್ಜಾಗಿದೆ. ಸೋಮವಾರ ಸೆಮಿಫೈನಲ್‌ನಲ್ಲಿ 4 ಬಾರಿ ಚಾಂಪಿಯನ್‌ ಭಾರತ ಹಾಗೂ 2012ರ ಚಾಂಪಿಯನ್‌ ಮಲೇಷ್ಯಾ ತಂಡಗಳು ಸೆಣಸಾಡಲಿವೆ.ಹಾಲಿ ಚಾಂಪಿಯನ್‌ ಭಾರತ ತಂಡ ಈ ಸಲ ‘ಎ’ ಗುಂಪಿನಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದೆ. 4 ಪಂದ್ಯಗಳಲ್ಲಿ ಬರೋಬ್ಬರಿ 38 ಗೋಲು ಬಾರಿಸಿರುವ ತಂಡ, ಕೇವಲ 3 ಗೋಲುಗಳನ್ನು ಬಿಟ್ಟುಕೊಟ್ಟಿದೆ. ತಂಡ ಟೂರ್ನಿಯ ಇತಿಹಾಸದಲ್ಲೇ 7ನೇ ಬಾರಿ ಫೈನಲ್‌ಗೇರುವ ಕಾತರದಲ್ಲಿದೆ. 1996, 2000ರಲ್ಲಿ ರನ್ನರ್‌-ಅಪ್‌ ಆಗಿದ್ದ ಭಾರತ, 2004, 2008, 2015 ಹಾಗೂ 2023ರಲ್ಲಿ ಪ್ರಶಸ್ತಿ ಗೆದ್ದಿವೆ.

ಮತ್ತೊಂದೆಡೆ ಮಲೇಷ್ಯಾ ಈ ಬಾರಿ ಟೂರ್ನಿಯಲ್ಲಿ 4 ಪಂದ್ಯಗಳ ಪೈಕಿ 2ರಲ್ಲಿ ಗೆದ್ದಿದ್ದು, ‘ಬಿ’ ಗುಂಪಿನಲ್ಲಿ 2ನೇ ಸ್ಥಾನಿಯಾಗಿತ್ತು. ತಂಡ 2012ರ ಬಳಿಕ ಮೊದಲ, ಒಟ್ಟಾರೆ 3ನೇ ಬಾರಿ ಫೈನಲ್‌ಗೇರುವ ನಿರೀಕ್ಷೆಯಲ್ಲಿದೆ.ಸೋಮವಾರ ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಹಾಗೂ ಜಪಾನ್‌ ಸೆಣಸಾಡಲಿವೆ. ಫೈನಲ್‌ ಬುಧವಾರ ನಡೆಯಲಿದೆ.

ಭಾರತದ ಪಂದ್ಯ: ಸಂಜೆ 7 ಗಂಟೆಗೆ(ಭಾರತೀಯ ಕಾಲಮಾನ)

PREV

Recommended Stories

5ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ 6 ರನ್‌ ಅತಿ ರೋಚಕ ಗೆಲುವು
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !