ಪೆರು ದೇಶದ ಲಿಮಾ ನಗರದಲ್ಲಿ ನಡೆಯಲಿರುವ ವಿಶ್ವ ಅಂಡರ್‌ - 20 ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ಗೆ ಕರ್ನಾಟಕದ 6 ಮಂದಿ

KannadaprabhaNewsNetwork | Updated : Aug 20 2024, 04:06 AM IST

ಸಾರಾಂಶ

ಆ.27ರಿಂದ 31ರ ವರೆಗೂ ಪೆರು ದೇಶದ ಲಿಮಾ ನಗರದಲ್ಲಿ ನಡೆಯಲಿರುವ ಕೂಟ. ಸಹನಾ ಕುಮಾರಿ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

 ಬೆಂಗಳೂರು :  ಆ.27ರಿಂದ 31ರ ವರೆಗೂ ನಡೆಯಲಿರುವ ಕೂಟ ಪೆರು ದೇಶದ ಲಿಮಾ ನಗರದಲ್ಲಿ ನಡೆಯಲಿರುವ ವಿಶ್ವ ಅಂಡರ್‌-20 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ 6 ಮಂದಿ ಪಾಲ್ಗೊಳ್ಳಲಿದ್ದಾರೆ. 

ಸೋಮವಾರ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಸ್ಪರ್ಧಿಗಳ ಹೆಸರು ಪ್ರಕಟಿಸಿತು. 400 ಮೀ. ಹರ್ಡಲ್ಸ್‌ನಲ್ಲಿ ಶ್ರೇಯಾ ರಾಜೇಶ್‌, ಲಾಂಗ್‌ಜಂಪ್‌ನಲ್ಲಿ ಪಾವನಾ ನಾಗರಾಜ್‌ ಕಣಕ್ಕಿಳಿಯಲಿದ್ದಾರೆ. ಉನ್ನತಿ ಅಯ್ಯಪ್ಪ 100 ಮೀ. ಹರ್ಡಲ್ಸ್‌ ಹಾಗೂ 200 ಮೀ. ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಹಿಳೆಯರ 4*100 ಮೀ. ರಿಲೇ ಓಟದಲ್ಲಿ ನಿಯೋಲ್‌ ಕಾರ್ನೆಲಿಯೊ, ಸುದೀಕ್ಷಾ ವಿ., ಪುರುಷರ 4*400 ಮೀ. ಓಟದ ಸ್ಪರ್ಧೆಯಲ್ಲಿ ರಿಹಾನ್‌ ಸಿ. ಭಾರತವನ್ನು ಪ್ರತಿನಿಧಿಸಲಿದ್ದಾರೆ. ಸಹನಾ ಕುಮಾರಿ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಲಖನೌ ತಂಡಕ್ಕೆ ಮೆಂಟರ್‌ ಆಗ್ತಾರಾ ಜಹೀರ್‌ ಖಾನ್‌?

ಲಖನೌ: ಐಪಿಎಲ್‌ನ ಲಖನೌ ಸೂಪರ್‌ ಜೈಂಟ್ಸ್‌ ತಂಡದ ಮಾರ್ಗದರ್ಶಕರಾಗಿ ಭಾರತದ ಮಾಜಿ ವೇಗಿ ಜಹೀರ್ ಖಾನ್‌ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಫ್ರಾಂಚೈಸಿಯು 45 ವರ್ಷದ ಜಹೀರ್‌ ಜೊತೆ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ವರದಿಯಾಗಿದೆ. 

ಕಳೆದ ಬಾರಿ ಗೌತಮ್‌ ಗಂಭೀರ್‌ ಲಖನೌ ತಂಡದ ಮೆಂಟರ್‌ ಆಗಿದ್ದರು. ಅವರು ಈಗ ಭಾರತದ ಕೋಚ್‌ ಆಗಿದ್ದಾರೆ. ಇನ್ನು, ದ.ಆಫ್ರಿಕಾದ ಮೊರ್ನೆ ಮೋರ್ಕೆಲ್‌ ಭಾರತ ತಂಡಕ್ಕೆ ಬೌಲಿಂಗ್‌ ಆಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಲಖನೌ ತಂಡದ ಬೌಲಿಂಗ್‌ ಕೋಚ್‌ ಹುದ್ದೆಯೂ ಖಾಲಿಯಿದೆ. ಹೀಗಾಗಿ ಜಹೀರ್‌ ಖಾನ್‌ ಲಖನೌ ತಂಡದ ಮೆಂಟರ್‌ ಜೊತೆ ಬೌಲಿಂಗ್‌ ಕೋಚ್‌ ಹುದ್ದೆಯನ್ನೂ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

Share this article