ಫುಟ್ಬಾಲ್‌ ಸ್ಟೇಡಿಯಂ ದುಸ್ಥಿತಿ : ಕನ್ನಡಪ್ರಭ ವರದಿಯಿಂದ ಭಾರೀ ಸಂಚಲನ! ರಾಜ್ಯ ಫುಟ್ಬಾಲ್‌ ಸಂಸ್ಥೆ ವಿರುದ್ಧ ಆಕ್ರೋಶ

KannadaprabhaNewsNetwork | Updated : Aug 20 2024, 04:08 AM IST

ಸಾರಾಂಶ

ರಾಜ್ಯ ಫುಟ್ಬಾಲ್‌ ಸಂಸ್ಥೆ ವಿರುದ್ಧ ಜೆಡಿಎಸ್‌ ಆಕ್ರೋಶ. ಅಭಿಮಾನಿಗಳಿಂದಲೂ ಸಾಮಾಜಿಕ ತಾಣದಲ್ಲಿ ಟೀಕೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಟ್ಯಾಗ್‌ ಮಾಡಿ, ಶೀಘ್ರದಲ್ಲೇ ಕ್ರೀಡಾಂಗಣ ಸರಿಪಡಿಸಲು ಒತ್ತಾಯ.

 ಬೆಂಗಳೂರು  : ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆಎಸ್‌ಎಫ್‌ಎ)ಯ ಬೆಂಗಳೂರಿನಲ್ಲಿರುವ ಕ್ರೀಡಾಂಗಣದ ದುಸ್ಥಿತಿಯ ಬಗ್ಗೆ ‘ಕನ್ನಡಪ್ರಭ’ ಸೋಮವಾರ ಪ್ರಕಟಿಸಿದ್ದ ವರದಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಸಾಮಾಜಿಕ ತಾಣಗಳಲ್ಲಿ ಫುಟ್ಬಾಲ್‌ ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಸೋಮವಾರ ಜೆಡಿಎಸ್‌ ತನ್ನ ಅಧಿಕೃತ ‘ಎಕ್ಸ್‌’ (ಟ್ವೀಟರ್‌) ಖಾತೆಯಲ್ಲಿ ‘ಕನ್ನಡಪ್ರಭ’ ವರದಿಯನ್ನು ಉಲ್ಲೇಖಿಸಿ ಕೆಎಸ್‌ಎಫ್‌ಎ ವಿರುದ್ಧ ಕಿಡಿಕಾರಿದೆ. 

‘ಬೆಂಗಳೂರಿನ ಅಶೋಕ ನಗರದಲ್ಲಿರುವ ರಾಜ್ಯ ಫುಟ್ಬಾಲ್ ಕ್ರೀಡಾಂಗಣ ಫುಟ್ಬಾಲ್ ಆಟಗಾರರನ್ನು ತಯಾರು ಮಾಡಬೇಕಿತ್ತು. ಆದರೆ ನಲಪಾಡ್‌ ಗ್ಯಾಂಗ್‌ನ ಪುಂಡ ಪೋಕರಿಗಳು, ಗಾಂಜಾ ವ್ಯಸನಿಗಳ ನೆಚ್ಚಿನ ತಾಣವಾಗಿದೆ. ಇಲ್ಲಿ ಫುಟ್ಬಾಲ್ ಆಟಕ್ಕಿಂತ ಡ್ರಗ್ಸ್, ಗಾಂಜಾ ಮತ್ತು ಗಮ್ಮತ್ತು ಜೋರಾಗಿದ್ದು, ಜನರು ಪ್ರಶ್ನೆ ಮಾಡಿದ್ರೆ ಚಾಕು, ಚೂರಿ ಇರಿತ ಗ್ಯಾರಂಟಿ. 

ಭ್ರಷ್ಟ ಕಾಂಗ್ರೆಸ್‌ ಸರಕಾರಕ್ಕೆ ರಾಜ್ಯ ಫುಟ್ಬಾಲ್ ಸ್ಟೇಡಿಯಂ ದುಸ್ಥಿತಿಯ ಬಗ್ಗೆ ಚಿಂತೆಯೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ತಮ್ಮ ಕ್ಷೇತ್ರವ್ಯಾಪ್ತಿಯ ಈ ಕ್ರೀಡಾಂಗಣ ಅಕ್ರಮ ಚುಟುವಟಿಕೆಗಳ ತಾಣವಾಗಿರುವ ಬಗ್ಗೆ ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್‌.ಎ.ಹ್ಯಾರಿಸ್‌ ಕಣ್ಣಿದ್ದು ಕುರುಡರಾಗಿದ್ದಾರೆ. ತಮ್ಮದೇ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದರೂ ಈ ಮೈದಾನದ ಕಾಮಗಾರಿ, ಅಭಿವೃದ್ಧಿಗೆ ಎಳ್ಳಷ್ಟು ಕೆಲಸ ಮಾಡದ ಹ್ಯಾರಿಸ್ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಅಧ್ಯಕ್ಷರಾಗಿ ಮಾಡುತ್ತಿರುವುದು ಏನು..? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.

ಹಲವು ಫುಟ್ಬಾಲ್‌ ಅಭಿಮಾನಿಗಳು ತಮ್ಮ ಎಕ್ಸ್‌, ಫೇಸ್‌ಬುಕ್ ಖಾತೆಗಳಲ್ಲೂ ರಾಜ್ಯದ ಫುಟ್ಬಾಲ್‌ ಕ್ರೀಡಾಂಗಣದ ದುರವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯಕ್ಕೆ ಇರುವ ಒಂದು ಫುಟ್ಬಾಲ್‌ ಕ್ರೀಡಾಂಗಣವೂ ಸರಿಯಾದ ನಿರ್ವಹಣೆ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿದೆ. ಈ ಬಗ್ಗೆ ಕೂಡಲೇ ಕೆಎಸ್‌ಎಫ್‌ಎ, ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ. 

ಕೆಎಸ್‌ಎಫ್‌ಎ ಪದಾಧಿಕಾರಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನೂ ಟ್ಯಾಗ್‌ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Share this article