ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್‌ಗೆ ಶನಿವಾರ ಚಾಲನೆ ಸಿಗಲಿದ್ದು, ಹಾಲಿ ಚಾಂಪಿಯನ್‌ ಭಾರತ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕದ ಸವಾಲು ಎದುರಿಸಲಿದೆ. ವಿಶ್ವಕಪ್‌ನಲ್ಲಿ ಈ ವರೆಗೂ ಯಾವುದೇ ತಂಡಕ್ಕೆ ಸತತ 2 ಬಾರಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ

ಮುಂಬೈ: ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್‌ಗೆ ಶನಿವಾರ ಚಾಲನೆ ಸಿಗಲಿದ್ದು, ಹಾಲಿ ಚಾಂಪಿಯನ್‌ ಭಾರತ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕದ ಸವಾಲು ಎದುರಿಸಲಿದೆ. ವಿಶ್ವಕಪ್‌ನಲ್ಲಿ ಈ ವರೆಗೂ ಯಾವುದೇ ತಂಡಕ್ಕೆ ಸತತ 2 ಬಾರಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಜೊತೆಗೆ ಯಾವ ದೇಶವೂ ಆತಿಥ್ಯ ವಹಿಸಿದಾಗ ಚಾಂಪಿಯನ್‌ ಆಗಿಲ್ಲ. ಈ ಎರಡೂ ದಾಖಲೆಗಳನ್ನು ಬರೆಯಲು ಪಣತೊಟ್ಟಿರುವ ಭಾರತ, 2011ರಲ್ಲಿ ತಾನು ಏಕದಿನ ವಿಶ್ವಕಪ್ ಗೆದ್ದ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಟ್ರೋಫಿ ಗೆಲ್ಲುವ ಫೇವರಿಟ್‌ ಆಗಿ ಭಾರತ ಟೂರ್ನಿಗೆ ಕಾಲಿಡಲಿದೆ. ತಂಡದ ಇತ್ತೀಚನ ಲಯ ಯಾವುದೇ ಎದುರಾಳಿಯನ್ನಾದರೂ ನಡುಗಿಸಲಿದೆ. ಇಶಾನ್‌ ಕಿಶನ್‌ರ ಸೇರ್ಪಡೆ, ತಂಡದ ಬ್ಯಾಟಿಂಗ್‌ ಬಲ ಹೆಚ್ಚಿಸಲಿದ್ದು, ಅಭಿಷೇಕ್‌ ಶರ್ಮಾ ಜೊತೆಗೂಡಿ ಕಿಶನ್‌ ಎದುರಾಳಿಗಳನ್ನು ಚೆಂಡಾಡಲು ಕಾಯುತ್ತಿದ್ದಾರೆ. ಸೂರ್ಯಕುಮಾರ್‌, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ, ರಿಂಕು ಸಿಂಗ್ ಹೀಗೆ ಟಿ20 ತಜ್ಞ ಬ್ಯಾಟರ್‌ಗಳ ದಂಡೇ ಇದೆ. ಬೂಮ್ರಾ, ಅರ್ಶ್‌ದೀಪ್‌, ವರುಣ್‌, ಕುಲ್ದೀಪ್‌, ಅಕ್ಷರ್‌ರಂಥ ಅನುಭವಿ ಬೌಲರ್‌ಗಳಿದ್ದು, ತಂಡ ಸಮತೋಲನದಿಂದ ಕೂಡಿದೆ.

ಮತ್ತೊಂದೆಡೆ ಅಮೆರಿಕ ತಂಡದಲ್ಲಿ ಭಾರತೀಯ ಮೂಲದ ಆಟಗಾರರೇ ಹೆಚ್ಚಿದ್ದು, ಪಾಕಿಸ್ತಾನ ಮೂಲದ ಮೂವರಿದ್ದಾರೆ. ಕಳೆದ ಆವೃತ್ತಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿ, ಸೂಪರ್‌-8 ಹಂತಕ್ಕೆ ಪ್ರವೇಶಿಸಿದ್ದ ಅಮೆರಿಕ ಈ ಬಾರಿಯೂ ಗಮನ ಸೆಳೆಯಲು ಎದುರು ನೋಡುತ್ತಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಅಭಿಷೇಕ್‌, ಕಿಶನ್‌, ತಿಲಕ್‌, ಸೂರ್ಯ(ನಾಯಕ), ಹಾರ್ದಿಕ್‌, ರಿಂಕು, ಶಿವಂ ದುಬೆ, ಅಕ್ಷರ್‌, ಅರ್ಶ್‌ದೀಪ್‌, ಬೂಮ್ರಾ, ವರುಣ್‌ ಚಕ್ರವರ್ತಿ.

ಅಮೆರಿಕ: ಸಾಯಿತೇಜ, ಆ್ಯಂಡ್ರೆಯೆಸ್‌, ಜಹಂಗೀರ್‌, ಮೊನಾಂಕ್‌(ನಾಯಕ್‌), ಮಿಲಿಂದ್‌, ಹರ್ಮೀತ್‌, ಶುಭಂ, ಮೊಹ್ಸಿನ್‌, ಶ್ಯಾಡ್ಲೆ, ಸೌರಭ್‌, ಅಲಿ ಖಾನ್‌.

ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಹಾಟ್‌ ಸ್ಟಾರ್‌

ಇಂದಿನ ಇತರ ಪಂದ್ಯಗಳು

ಪಾಕಿಸ್ತಾನ vs ನೆದರ್‌ಲೆಂಡ್ಸ್‌, ಕೊಲಂಬೊ, ಬೆಳಗ್ಗೆ 11ಕ್ಕೆ

ವೆಸ್ಟ್‌ಇಂಡೀಸ್‌ vs ಸ್ಕಾಟ್ಲೆಂಡ್‌, ಕೋಲ್ಕತಾ, ಮಧ್ಯಾಹ್ನ 3ಕ್ಕೆ