ಹಾಂಗ್‌ಝೋ: ಕೋಟ್ಯಂತರ ಕ್ರೀಡಾಭಿಮಾನಿಗಳ ಪ್ರಾರ್ಥನೆ, ಹಾರೈಕೆ ಈಡೇರಿದೆ. ಈ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪದಕಗಳ ಸೆಂಚುರಿ ಬಾರಿಸಿ ಸಂಭ್ರಮಿಸಿದೆ. ಶುಕ್ರವಾರ ಒಂದೇ ದಿನ ಭಾರತ 1 ಚಿನ್ನ, 2 ಬೆಳ್ಳಿ ಸೇರಿದಂತೆ ಒಟ್ಟು 9 ಪದಕಗಳನ್ನು ಖಾತೆಗೆ ಸೇರ್ಪಡೆಗೊಳಿಸಿತು. ಹೀಗಾಗಿ ಪದಕ ಸಂಖ್ಯೆ 95ಕ್ಕೆ ಏರಿಕೆಯಾಗಿದೆ. ಇನ್ನೂ ಕನಿಷ್ಠ 7 ಪದಕಗಳು ಭಾರತಕ್ಕೆ ಖಚಿತವಾಗಿದ್ದು, ಶನಿವಾರ ಭಾರತದ ಪದಕ ಸಂಖ್ಯೆ ಅಧಿಕೃತವಾಗಿ 100ರ ಗಡಿ ದಾಟಲಿದೆ. ಈಗಾಗಲೇ ಚೀನಾ, ಜಪಾನ್, ದಕ್ಷಿಣ ಕೊರಿಯಾ ಈ ಬಾರಿ 100 ಪದಕಗಳ ಸಾಧನೆ ಮಾಡಿವೆ. ಶುಕ್ರವಾರ ಭಾರತ ಹಾಕಿಯಲ್ಲಿ ಐತಿಹಾಸಿಕ ಚಿನ್ನದ ಸಾಧನೆ ಮಾಡಿದರೆ, ಆರ್ಚರಿಯಲ್ಲಿ ಬೆಳ್ಳಿ ಜೊತೆ ಕಂಚಿನ ಪದಕವನ್ನೂ ತನ್ನದಾಗಿಸಿಕೊಂಡಿತು. ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಫೈನಲ್ ಪ್ರವೇಶಿಸಿ ಇತಿಹಾಸ ಬರೆದರು. ಕುಸ್ತಿಪಟುಗಳಿಗೆ ಚಿನ್ನ ಕೈಗೆಟುಕದಿದ್ದರೂ, 3 ಕಂಚು ಸಿಕ್ಕಿತು. ಇನ್ನು, ಸೆಪಕ್‌ಟಕ್ರಾ(ಕಿಕ್ ವಾಲಿಬಾಲ್) ಹಾಗೂ ಇಸ್ಪೀಟ್ ಎಲೆಗಳನ್ನು ಬಳಸಿ ಆಡುವ ಬ್ರಿಡ್ಜ್ ಕ್ರೀಡೆಯಲ್ಲೂ ಪದಕ ಒಲಿಯಿತು. ಸದ್ಯ ಭಾರತ 22 ಚಿನ್ನ, 34 ಬೆಳ್ಳಿ ಹಾಗೂ 39 ಕಂಚಿನೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ. ಇನ್ನುಳಿದಂತೆ ಕ್ರಿಕೆಟ್‌ನಲ್ಲಿ ಫೈನಲ್‌ಗೇರಿರುವ ತಂಡ ಚಿನ್ನ ಗೆಲ್ಲುವ ಸಾಧ್ಯತೆ ಹೆಚ್ಚು. ಕಬಡ್ಡಿಯಲ್ಲಿ ಪುರುಷ, ಮಹಿಳಾ ತಂಡಗಳೂ ಚಿನ್ನದ ಮೇಲೆ ಕಣ್ಣಿಟ್ಟಿವೆ. ಆರ್ಚರಿಯಲ್ಲೂ 3 ಪದಕ ಭಾರತಕ್ಕೆ ಖಚಿತವಾಗಿದೆ. ಬ್ಯಾಡ್ಮಿಂಟನ್‌ನಲ್ಲಿ ಭಾರತೀಯ ಜೋಡಿ ಐತಿಹಾಸಿಕ ಚಿನ್ನಕ್ಕಾಗಿ ಸೆಣಸಲಿದೆ. ಇನ್ನು ಚೆಸ್‌ನ ಪುರುಷ, ಮಹಿಳಾ ತಂಡ ವಿಭಾಗಗಳಲ್ಲಿ ಭಾರತ ಪದಕ ಗೆಲ್ಲುವ ಸನಿಹದಲ್ಲಿದೆ. ಶನಿವಾರ ಕಣದಲ್ಲಿರುವ ನಾಲ್ವರು ಕುಸ್ತಿಪಟುಗಳೂ ಪದಕ ನಿರೀಕ್ಷೆಯಲ್ಲಿದ್ದಾರೆ. == ಇಂದು ಭಾರತದ ಅಭಿಯಾನ ಅಂತ್ಯ ಹಾಂಗ್‌ಝೋ ಏಷ್ಯನ್ ಗೇಮ್ಸ್‌ಗೆ ಭಾನುವಾರ ಅಧಿಕೃತವಾಗಿ ತೆರೆ ಬೀಳಲಿದೆಯಾದರೂ, ಭಾರತೀಯರ ಸ್ಪರ್ಧೆ ಶನಿವಾರವೇ ಮುಕ್ತಾಯಗೊಳ್ಳಲಿದೆ. ಭಾನುವಾರ ಆರ್ಟಿಸ್ಟಿಕ್ ಸ್ವಿಮ್ಮಿಂಗ್ ಹಾಗೂ ಕರಾಟೆ ಸ್ಪರ್ಧೆಗಳು ಮಾತ್ರ ನಿಗದಿಯಾಗಿದ್ದು, ಈ ಎರಡರಲ್ಲೂ ಭಾರತೀಯರಿಲ್ಲ. ಭಾರತದ ಪದಕ ಬೇಟೆ ಶನಿವಾರ ಅಂತ್ಯಗೊಳ್ಳಲಿದೆ.