ಚೆನ್ನೈ: ಭಾರತ ತಂಡಕ್ಕೆ ವಿಶ್ವಕಪ್ ಆರಂಭಕ್ಕೂ ಮೊದಲೇ ಆಘಾತವಾಗಿದ್ದು, ಡೆಂಘಿ ಜ್ವರಕ್ಕೆ ತುತ್ತಾಗಿರುವ ತಾರಾ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಕೆಲ ಪಂದ್ಯಗಳಿಗೆ ಅಲಭ್ಯರಾಗಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ‘ಗಿಲ್ ಆರೋಗ್ಯ ಸರಿಯಿಲ್ಲ. ವೈದ್ಯಕೀಯ ತಂಡ ಅವರ ಮೇಲೆ ತೀವ್ರ ನಿಗಾ ವಹಿಸುತ್ತಿದ್ದು, ಇನ್ನೂ ಕೆಲ ಪರೀಕ್ಷೆಗಳ ವರದಿ ಬರಬೇಕಿದೆ. ಆದಷ್ಟು ಬೇಗ ಅವರು ಗುಣಮುಖರಾಗುವ ವಿಶ್ವಾಸವಿದೆ’ ಎಂದು ಬಿಸಿಸಿಐ ವೈದ್ಯಕೀಯ ತಂಡ ಮಾಹಿತಿ ನೀಡಿದೆ. ‘ಚೆನ್ನೈಗೆ ಬಂದಿಳಿದಾಗಿನಿಂದ ಗಿಲ್ ಜ್ವರದಿಂದ ಬಳಲುತ್ತಿದ್ದಾರೆ. ಡೆಂಘಿಯಿಂದ ಸಂಪೂರ್ಣ ಚೇತರಿಕೆ ಕಾಣಲು ಸಾಮಾನ್ಯವಾಗಿ 7-10 ದಿನಗಳ ಬೇಕಾಗುತ್ತದೆ. ಒಂದು ವೇಳೆ ಪ್ಲೇಟ್ಲೆಟ್‌ಗಳ ಸಂಖ್ಯೆ ಕಡಿಮೆಯಾದರೆ, ಆಗ ಮತ್ತಷ್ಟು ಸಮಯ ಹಿಡಿಯಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ವೇಳೆ ಗಿಲ್ ಹೊರಬಿದ್ದರೆ, ಇಶಾನ್ ಕಿಶನ್ ಆರಂಭಿಕನಾಗಿ ಆಡುವ ಸಾಧ್ಯತೆ ಹೆಚ್ಚು.