ಚಾಂಪಿಯನ್ಸ್‌ ಟ್ರೋಫಿಗೆ ವಿಶ್ವಕಪ್‌ನಲ್ಲಿ ಅಗ್ರ-8 ಸ್ಥಾನ ಪಡೆದಿದ್ದ ಸೈನ್ಯ ಸಜ್ಜು : ತಂಡಗಳ ಸಾಮರ್ಥ್ಯ, ದೌರ್ಬಲ್ಯವೇನು?

KannadaprabhaNewsNetwork |  
Published : Feb 17, 2025, 12:35 AM ISTUpdated : Feb 17, 2025, 04:12 AM IST
ತಂಡಗಳು | Kannada Prabha

ಸಾರಾಂಶ

2023ರ ಏಕದಿನ ವಿಶ್ವಕಪ್‌ನಲ್ಲಿ ಅಗ್ರ-8 ಸ್ಥಾನ ಪಡೆದಿದ್ದ ತಂಡಗಳು ಮುಂದಿನ ಎರಡೂವರೆ ವಾರಗಳ ಕಾಲ ಚಾಂಪಿಯನ್ಸ್‌ ಟ್ರೋಫಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಲಿವೆ.

2025ರ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಬುಧವಾರ ಚಾಲನೆ ಸಿಗಲಿದೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಅಗ್ರ-8 ಸ್ಥಾನ ಪಡೆದಿದ್ದ ತಂಡಗಳು ಮುಂದಿನ ಎರಡೂವರೆ ವಾರಗಳ ಕಾಲ ಚಾಂಪಿಯನ್ಸ್‌ ಟ್ರೋಫಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಲಿವೆ. 

ಪಾಕಿಸ್ತಾನದ ಮೂರು ಹಾಗೂ ದುಬೈನ ಒಂದು ಕ್ರೀಡಾಂಗಣ ಟೂರ್ನಿಗೆ ಆತಿಥ್ಯ ವಹಿಸಲಿದೆ. ಮಿನಿ ವಿಶ್ವ ಕಾಳಗಕ್ಕೆ 8 ತಂಡಗಳು ಹೇಗೆ ಸಜ್ಜಾಗಿವೆ? ತಂಡಗಳ ಪ್ರಾಬಲ್ಯವೇನು? ದೌರ್ಬಲ್ಯವೇನು ? ತಾರಾ ಆಟಗಾರರು ಯಾರ್ಯಾರು ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.ಭಾರತ: 2 ಬಾರಿಯ ಚಾಂಪಿಯನ್‌ ಭಾರತ ತಂಡ ಈ ಬಾರಿಯೂ ಟ್ರೋಫಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡೇ ಟೂರ್ನಿಗೆ ಕಾಲಿಡಲಿದೆ. 

2023ರಲ್ಲಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಸೋತರೂ, 2024ರಲ್ಲಿ ಟಿ20 ವಿಶ್ವಕಪ್‌ ಗೆದ್ದಿರುವ ಟೀಂ ಇಂಡಿಯಾ ಈ ವರ್ಷ ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಸೀಮಿತ ಓವರ್‌ ಮಾದರಿಯಲ್ಲಿ ತಂಡದ ಇತ್ತೀಚಿಗಿನ ಆಕ್ರಮಣಕಾರಿ ಆಟ ಎದುರಾಳಿಗಳಲ್ಲಿ ನಡುಕ ಹುಟ್ಟಿಸುತ್ತಿದೆ. ಆದರೆ, ಜಸ್‌ಪ್ರೀತ್‌ ಬೂಮ್ರಾರ ಅನುಪಸ್ಥಿತಿ ತಂಡದ ಆತ್ಮವಿಶ್ವಾಸಕ್ಕೆ ಬಹಳ ದೊಡ್ಡ ಪೆಟ್ಟು ನೀಡಿರುವುದು ಸತ್ಯ. ಅವರ ಅಲಭ್ಯತೆ ತಂಡದ ಪ್ರದರ್ಶನದ ಮೇಲೆ ದುಷ್ಪರಿಣಾಮ ಬೀರದಂತೆ ನೋಡಿಕೊಂಡು ಟ್ರೋಫಿ ಗೆಲ್ಲುವುದೇ ಟೀಂ ಇಂಡಿಯಾ ಮುಂದಿರುವ ಪ್ರಮುಖ ಸವಾಲು.

ಉಳಿದಂತೆ ತಂಡ ಸಮತೋಲಿತವಾಗಿದೆ. ಏಕದಿನದಲ್ಲಿ ಅಬ್ಬರಿಸುತ್ತಲೇ ಇರುವ ರೋಹಿತ್‌ ಶರ್ಮಾ ತಂಡದ ಟ್ರಂಪ್‌ಕಾರ್ಡ್‌. ಆದರೆ ವಿರಾಟ್‌ ಕೊಹ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಶುಭ್‌ಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌ ಅಭೂತಪೂರ್ವ ಲಯದಲ್ಲಿದ್ದು, ಕೆ.ಎಲ್‌.ರಾಹುಲ್‌ ಮೇಲೂ ತಂಡ ಹೆಚ್ಚಿನ ನಂಬಿಕೆ ಇಟ್ಟಿದೆ. ಆಲ್ರೌಂಡರ್‌ಗಳಾದ ಜಡೇಜಾ, ಅಕ್ಷರ್‌ ಪಟೇಲ್‌ ನಿರ್ಣಾಯಕ ಸಂದರ್ಭಗಳಲ್ಲಿ ತಂಡದ ಕೈ ಹಿಡಿಯುತ್ತಾರೆಂಬ ವಿಶ್ವಾಸವಿದೆ. ಒಟ್ಟು ಐವರು ಸ್ಪಿನ್ನರ್‌ಗಳನ್ನು ದುಬೈ ವಿಮಾನವೇರಿಸಲಿರುವ ಭಾರತ, ಬೌಲಿಂಗ್‌ ವಿಭಾಗವನ್ನು ಹೇಗೆ ಆಯ್ಕೆ ಮಾಡಲಿದೆ ಎಂಬುದೇ ಸದ್ಯದ ಕುತೂಹಲ.

ವೇಗದ ಬೌಲಿಂಗ್‌ ವಿಭಾಗದಲ್ಲಿ ಅನುಭವಿ ಮೊಹಮದ್ ಶಮಿಗೆ ಅರ್ಶ್‌ದೀಪ್‌, ಹರ್ಷಿತ್‌ ರಾಣಾ ಎಷ್ಟರ ಮಟ್ಟಿಗೆ ನೆರವಾಗಬಲ್ಲರು ಎಂಬುದರ ಮೇಲೆ ತಂಡದ ಟ್ರೋಫಿ ಭವಿಷ್ಯ ಅಡಗಿದೆ.

ಸಾಮರ್ಥ್ಯ

- ಯಾವುದೇ ಬೌಲಿಂಗ್‌ ಪಡೆಯನ್ನು ನಡುಗಿಸಬಲ್ಲ ಬಲಿಷ್ಠ ಬ್ಯಾಟರ್ಸ್.

- ಶ್ರೇಯಸ್‌, ಗಿಲ್‌ ಅಭೂತಪೂರ್ವ ಲಯ. ರೋಹಿತ್‌ ಆಕ್ರಮಣಕಾರಿ ಆಟ.

- ಸ್ಪಿನ್‌ ವಿಭಾಗ ಬಲಿಷ್ಠವಾಗಿದೆ. ಅನುಭವಿ ಆಲ್ರೌಂಡರ್‌ಗಳೂ ಇದ್ದಾರೆ.

ದೌರ್ಬಲ್ಯ- ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ ಟೂರ್ನಿಗೆ ಗೈರು.

- ಸ್ಥಿರ ಪ್ರದರ್ಶನ ಕಾಯ್ದುಕೊಳ್ಳದ ವಿರಾಟ್‌ ಕೊಹ್ಲಿ

- ಅನುಭವಿ ವೇಗಿಗಳು, ಮ್ಯಾಚ್‌ ಫಿನಿಶರ್‌ಗಳ ಕೊರತೆ.

ತಾರಾ ಆಟಗಾರರು: ವಿರಾಟ್‌, ರೋಹಿತ್‌, ಶ್ರೇಯಸ್‌, ಗಿಲ್‌, ಜಡೇಜಾ

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸಾಧನೆ: 2002, 2013ರಲ್ಲಿ ಚಾಂಪಿಯನ್‌

ಪಾಕಿಸ್ತಾನ

ಹಾಲಿ ಚಾಂಪಿಯನ್‌ ಪಟ್ಟ ಹಾಗೂ ತವರಿನಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಪಾಕಿಸ್ತಾನ ಈ ಬಾರಿ ಟ್ರೋಫಿ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದು. ರಿಜ್ವಾನ್‌, ಆಜಂ, ಫಖರ್‌ ಜಮಾನ್‌ರಂತಹ ಅನುಭವಿಗಳ ಜೊತೆ ಕೆಲ ಯುವ ಬ್ಯಾಟರ್‌ಗಳ ಬಲ ತಂಡಕ್ಕಿದೆ. ಜೊತೆಗೆ ವಿಶ್ವ ಶ್ರೇಷ್ಠ ವೇಗಿಗಳು ಪಾಕ್‌ನ ಪ್ಲಸ್‌ ಪಾಯಿಂಟ್‌. ಆದರೆ ಯುವ ತಾರೆ ಸೈಮ್‌ ಅಯೂಬ್‌ ಅಲಭ್ಯತೆ ತಂಡವನ್ನು ಕಾಡಬಹುದು.

ಸಾಮರ್ಥ್ಯ- ಅನುಭವಿ ಬ್ಯಾಟರ್‌ಗಳಾದ ರಿಜ್ವಾನ್‌, ಆಜಂ, ಫಖರ್‌.

- ಟೂರ್ನಿಯಲ್ಲಿ ಎಕ್ಸ್‌ ಫ್ಯಾಕ್ಟರ್‌ ಆಗಬಲ್ಲ ಆಘಾ ಸಲ್ಮಾನ್‌

- ಶಾಹೀನ್‌, ನಸೀಂ, ರೌಫ್‌ರಂತಹ ವಿಶ್ವ ಶ್ರೇಷ್ಠ ವೇಗಿಗಳು

ದೌರ್ಬಲ್ಯ- ದಿಢೀರ್ ಕೈಕೊಡುವ ಬ್ಯಾಟರ್ಸ್‌. ಸೈಮ್‌ ಅಯೂಬ್‌ ಇಲ್ಲ.

- ಕೇವಲ ಒಬ್ಬ ಸ್ಪಿನ್ನರ್‌ ಜೊತೆ ಕಣಕ್ಕಿಳಿಯಲಿರುವ ತಂಡ

- ವೇಗಿ ಶಾಹೀನ್‌, ನಸೀಂ ದುಬಾರಿಯಾಗಬಲ್ಲರು.ತಾರಾ ಆಟಗಾರರು: ರಿಜ್ವಾನ್‌, ಆಜಂ, ಶಾಹೀನ್‌, ಸಲ್ಮಾನ್.ತಂಡದ ಸಾಧನೆ: 2017ರಲ್ಲಿ ಚಾಂಪಿಯನ್‌

ನ್ಯೂಜಿಲೆಂಡ್‌

ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್‌ ಯಾವತ್ತೂ ಬಲಿಷ್ಠ ತಂಡ. ಅಲ್ಲದೆ, ತಂಡದ ಇತ್ತೀಚಿಗಿನ ಪ್ರದರ್ಶನ ಶ್ರೇಷ್ಠ ಮಟ್ಟದಲ್ಲಿದೆ. ಪಾಕಿಸ್ತಾನ, ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಪಾಕ್‌ ನೆಲದಲ್ಲೇ ತ್ರಿಕೋನ ಸರಣಿ ಗೆದ್ದಿದ್ದು ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿದೆ. ವಿಲಿಯಮ್ಸನ್‌, ಡ್ಯಾರಿಲ್ ಮಿಚೆಲ್‌, ಫಿಲಿಪ್ಸ್‌, ಸ್ಯಾಂಟ್ನರ್‌ ಸೇರಿ ಹಲವು ಅನುಭವಿ ತಾರಾ ಆಟಗಾರರು ತಂಡದ ಬಲ ಹೆಚ್ಚಿಸಲಿದ್ದಾರೆ.ಸಾಮರ್ಥ್ಯ

- ಆತ್ಮವಿಶ್ವಾಸ ಹೆಚ್ಚಿಸಿರುವ ತ್ರಿಕೋನ ಸರಣಿ ಗೆಲುವು

- ಆರಂಭಿಕ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಬಲ

- ಡ್ಯಾರಿಲ್‌, ಸ್ಯಾಂಟ್ನರ್‌, ಫಿಲಿಪ್ಸ್‌ರಂತಹ ಅಲ್ರೌಂಡರ್ಸ್‌ದೌರ್ಬಲ್ಯ

- ಅನುಭವಿ ಟಿಮ್‌ ಸೌಥಿ, ಟ್ರೆಂಟ್‌ ಬೌಲ್ಟ್‌ ಇಲ್ಲ

- ಸ್ಪಿನ್ನರ್‌ಗಳ ಎದುರು ಪರದಾಡುವ ಬ್ಯಾಟರ್ಸ್‌

- ಲಾಕಿ ಫರ್ಗ್ಯೂಸನ್‌ಗೆ ಗಾಯ: ಟೂರ್ನಿಗೆ ಗೈರು ಸಾಧ್ಯತೆ.

ತಾರಾ ಆಟಗಾರರು: ವಿಲಿಯಮ್ಸನ್‌, ಡ್ಯಾರಿಲ್‌, ಫಿಲಿಪ್ಸ್‌.

ತಂಡದ ಸಾಧನೆ: 2000ರಲ್ಲಿ ಚಾಂಪಿಯನ್‌

ಬಾಂಗ್ಲಾದೇಶ

3 ಮಾದರಿ ಕ್ರಿಕೆಟ್‌ ಪೈಕಿ ಬಾಂಗ್ಲಾದೇಶ ಬಲಿಷ್ಠವಾಗಿರುವುದು ಏಕದಿನದಲ್ಲಿ. ಏಷ್ಯಾಕಪ್‌ ಫೈನಲ್‌, 2015ರ ಏಕದಿನ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ಗೇರಿದ್ದ ತಂಡವನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಮಹ್ಮೂದುಲ್ಲಾ, ಮುಷ್ಫಿಕುರ್‌ ರಹೀಂ ಸೇರಿದಂತೆ ಹಲವು ಹಿರಿಯ ಆಟಗಾರರು ತಂಡದಲ್ಲಿದ್ದಾರೆ. ಆದರೆ ಮ್ಯಾಚ್‌ ವಿನ್ನರ್‌ಗಳ ಕೊರತೆಯಿದೆ. ಕಳೆದ 6 ಏಕದಿನದಲ್ಲಿ 5ರಲ್ಲಿ ಸೋತಿರುವುದು ತಂಡದ ಆತ್ಮವಿಶ್ವಾಸ ಕುಗ್ಗಿಸಿದೆ.ಸಾಮರ್ಥ್ಯ

- ಅನುಭವಿ ನಜ್ಮುಲ್‌, ಮಹ್ಮೂದುಲ್ಲಾ, ಮುಷ್ಫಿಕುರ್‌ ಉಪಸ್ಥಿತಿ

- ಪಂದ್ಯದ ಗತಿ ಬದಲಿಸಬಲ್ಲ ಸರ್ಕಾರ್‌, ತಂಜೀಮ್.

- ಸ್ಪಿನ್‌ ವಿಭಾಗದಲ್ಲಿ ಮೆಹಿದಿ, ರಿಶಾದ್‌ ಹೊಸೈನ್‌ ಬಲ.ದೌರ್ಬಲ್ಯ

- ಅನುಭವಿ ಶಕೀಬ್‌, ಲಿಟನ್‌ ದಾಸ್‌ ಟೂರ್ನಿಗೆ ಗೈರು.

- ಬ್ಯಾಟಿಂಗ್‌ ವೇಳೆ ದಿಢೀಸ್‌ ಕುಸಿಯುವ ಮಧ್ಯಮ ಕ್ರಮಾಂಕ

- ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಆಟಗಾರರಿಲ್ಲ.ತಾರಾ ಆಟಗಾರರು: ನಜ್ಮುಲ್‌, ಮುಸ್ತಾಫಿಜುರ್‌, ಮಹ್ಮೂದುಲ್ಲಾ

ತಂಡದ ಸಾಧನೆ: 2017ರಲ್ಲಿ ಸೆಮಿಫೈನಲ್‌

ಆಸ್ಟ್ರೇಲಿಯಾ

ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾದಷ್ಟು ಯಶಸ್ವಿ ತಂಡ ಮತ್ತೊಂದಿಲ್ಲ. 2 ಬಾರಿ ಚಾಂಪಿಯನ್ಸ್‌ ಟ್ರೋಫಿ, ಹಾಲಿ ಏಕದಿನ ವಿಶ್ವಕಪ್‌ ವಿಜೇತ ತಂಡ ಈ ಬಾರಿಯೂ ಟ್ರೋಫಿ ಗೆಲ್ಲುವ ಫೇವರಿಟ್‌. ಆದರೆ ಸ್ಟಾರ್‌ ಆಟಗಾರರ ಗೈರು, ಸ್ಟೋಯ್ನಿಸ್‌ ನಿವೃತ್ತಿ, ವೇಗಿ ಮಿಚೆಲ್‌ ಸ್ಟಾರ್ಕ್‌ ಟೂರ್ನಿಯಿಂದ ಹಿಂದೆ ಸರಿದಿದ್ದು ತಂಡಕ್ಕೆ ಹಿನ್ನಡೆಯಾಗಿದೆ. ಶ್ರೀಲಂಕಾ ಸರಣಿ ಸೋತಿದ್ದು ಮತ್ತಷ್ಟು ಕುಗ್ಗಿಸಿದೆ. ಅಲ್ಲದೆ, 2009ರಿಂದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಒಂದೂ ಪಂದ್ಯ ಗೆದ್ದಿಲ್ಲ. ಆದರೆ ಎಲ್ಲವನ್ನೂ ಮೆಟ್ಟಿ ನಿಂತು ಗೆಲ್ಲುವುದು ಆಸೀಸ್‌ ಶೈಲಿ.ಸಾಮರ್ಥ್ಯ

- ಐಸಿಸಿ ಟೂರ್ನಿಗಳಲ್ಲಿ ತಂಡದ ದಾಖಲೆ ಅತ್ಯುತ್ತಮ.

- ವಿಶ್ವ ಶ್ರೇಷ್ಠ ಬ್ಯಾಟರ್ಸ್, ಆಲ್ರೌಂಡರ್‌ಗಳ ಬಲ.

- ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಆಟಗಾರರೇ ಹೆಚ್ಚು.ದೌರ್ಬಲ್ಯ

- ಕಮಿನ್ಸ್, ಹೇಜಲ್‌ವುಡ್‌, ಮಾರ್ಷ್‌, ಸ್ಟಾರ್ಕ್‌ ಗೈರು.

- ಲಬುಶೇನ್‌, ಮೆಕ್‌ಗರ್ಕ್‌ ಲಯದಲ್ಲಿಲ್ಲ.

- ಅನುಭವಿ ಬೌಲರ್‌ಗಳ ಕೊರತೆ ಎದುರಾಗಬಹುದು.ತಾರಾ ಆಟಗಾರರು: ಸ್ಮಿತ್‌, ಹೆಡ್‌, ಮ್ಯಾಕ್ಸ್‌ವೆಲ್‌

ತಂಡದ ಸಾಧನೆ: 2006, 2009ರಲ್ಲಿ ಚಾಂಪಿಯನ್‌.

ಇಂಗ್ಲೆಂಡ್‌

ಪೇಪರ್‌ ಮೇಲೆ ಅತ್ಯಂತ ಬಲಿಷ್ಠವಾಗಿ ಕಾಣಿಸುವ ತಂಡ. ಸ್ಫೋಟಕ ಬ್ಯಾಟರ್‌ಗಳು, ಮ್ಯಾಚ್‌ ಫಿನಿಶರ್‌ಗಳು ಹಾಗೂ ಯಾವುದೇ ಬ್ಯಾಟಿಂಗ್‌ ಪಡೆಯನ್ನು ನಿಯಂತ್ರಿಸುವ ಬೌಲಿಂಗ್ ಪಡೆ ತಂಡಕ್ಕಿದೆ. ಆದರೆ ಇತ್ತೀಚೆಗೆ ಭಾರತ ಸರಣಿಯಲ್ಲಿ ತಂಡ ಕಳಪೆ ಪ್ರದರ್ಶನ ತೋರಿದೆ. ಆಕ್ರಮಣಕಾರಿ ಆಟವೋ ಅಥವಾ ಪರಿಸ್ಥಿತಿಗೆ ತಕ್ಕಂತೆ ಆಡುವುದೋ ಎಂಬ ಗೊಂದಲದಲ್ಲೇ ತಂಡ ಕಣಕ್ಕಿಳಿಯುತ್ತಿತ್ತು. ಈ ಸಮಸ್ಯೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಗೋಚರಿಸದಂತೆ ಆಡಬೇಕಿದೆ.ಸಾಮರ್ಥ್ಯ

- ಅಬ್ಬರಿಸಬಲ್ಲ ಸಾಲ್ಟ್‌, ಬ್ರೂಕ್‌, ಲಿವಿಂಗ್‌ಸ್ಟೋನ್‌

- ಬಟ್ಲರ್‌, ಜೋ ರೂಟ್‌ರಂತಹ ಅನುಭವಿ ಆಟಗಾರರು.

- ವುಡ್‌, ಆರ್ಚರ್‌ರಂತಹ ಪ್ರಚಂಡ ವೇಗಿಗಳ ಬಲದೌರ್ಬಲ್ಯ

- ಪರಿಸ್ಥಿಗೆ ತಕ್ಕಂತೆ ಆಡುತ್ತಿಲ್ಲ ತಂಡದ ಬ್ಯಾಟರ್ಸ್.

- ದಿಢೀರ್‌ ಕುಸಿಯುವ ಮಧ್ಯಮ ಕ್ರಮಾಂಕ.

- ಆದಿಲ್‌ಗೆ ಬೆಂಬಲ ನೀಡುವ ಸ್ಪಿನ್ನರ್‌ಗಳ ಕೊರತೆ.

ತಾರಾ ಆಟಗಾರರು: ಬಟ್ಲರ್‌, ರೂಟ್‌, ಲಿವಿಂಗ್‌ಸ್ಟೋನ್‌, ಆರ್ಚರ್‌.

ತಂಡದ ಸಾಧನೆ: 2009, 2017ರಲ್ಲಿ ಸೆಮಿಫೈನಲ್‌

ದಕ್ಷಿಣ ಆಫ್ರಿಕಾ

ಭಾರತ ಹೊರತುಪಡಿಸಿದರೆ ಅತ್ಯಂತ ಸಮತೋಲಿತ ತಂಡ ಹೊಂದಿರುವುದು ದಕ್ಷಿಣ ಆಫ್ರಿಕಾ. ಕಳೆದ ವರ್ಷ ಟಿ20 ವಿಶ್ವಕಪ್‌ ಫೈನಲ್‌ಗೇರಿದ್ದ ತಂಡ. ಪರಿಸ್ಥಿಗೆ ತಕ್ಕಂತೆ ಆಡಬಲ್ಲ ತೆಂಬಾ ಬವುಮಾ, ಮಾರ್ಕ್‌ರಮ್‌, ಯಾವುದೇ ಕ್ಷಣದಲ್ಲಿ ಅಬ್ಬರಿಸಬಲ್ಲ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌ ತಂಡದ ಆಧಾರಸ್ತಂಭ. ಬೌಲಿಂಗ್‌ ಪಡೆ ಕೂಡಾ ಉತ್ತಮವಾಗಿದೆ. ಉತ್ತಮ ಆಲ್ರೌಂಡರ್‌ಗಳು ತಂಡದಲ್ಲಿದ್ದಾರೆ. ಆದರೆ ಐಸಿಸಿ ಟೂರ್ನಿಗಳಲ್ಲಿ ಅದೃಷ್ಟ ಚೆನ್ನಾಗಿಲ್ಲ.ಸಾಮಥ್ಯ

- ಬವುಮಾ, ಮಾರ್ಕ್‌ರಮ್‌ರಂತಹ ಉತ್ತಮ ಬ್ಯಾಟರ್ಸ್‌

- ಪಂದ್ಯದ ಗತಿ ಬದಲಿಸಬಲ್ಲ ಕ್ಲಾಸೆನ್‌, ಮಿಲ್ಲರ್‌.

- ರಬಾಡ, ಮಹಾರಾಜ್‌ರಂತದ ಅನುಭವಿ ಬೌಲರ್ಸ್‌,ದೌರ್ಬಲ್ಯ

- ಗಾಯಾಳು ಏನ್ರಿಕ್‌ ನೋಕಿಯಾ ಟೂರ್ನಿಗಿಲ್ಲ.

- ತ್ರಿಕೋನ ಸರಣಿಯಲ್ಲಿ ಸೋತಿದ್ದರಿಂದ ಆತ್ಮವಿಶ್ವಾಸಕ್ಕೆ ಪೆಟ್ಟು.

- ರಬಾಡಾಗೆ ನೆರವಾಗಬಲ್ಲ ವೇಗಿಗಳ ಕೊರತೆ.

ತಾರಾ ಆಟಗಾರರು: ಕ್ಲಾಸೆನ್‌, ಮಿಲ್ಲರ್‌, ಬವುಮಾ.

ತಂಡದ ಸಾಧನೆ: 1998ರಲ್ಲಿ ಚಾಂಪಿಯನ್‌

ಅಫ್ಘಾನಿಸ್ತಾನ

ಯಾವುದೇ ಐಸಿಸಿ ಟೂರ್ನಿಗಳಲ್ಲೂ ಆಘಾತಕಾರಿ ಫಲಿತಾಂಶ ನೀಡುವುದಕ್ಕೆ ಅಫ್ಘಾನಿಸ್ತಾನ ಹೆಸರುವಾಸಿ. ತನ್ನ ದಿನದಂದು ಎಷ್ಟೇ ಬಲಿಷ್ಠ ತಂಡವನ್ನು ಬೇಕಿದ್ದರೂ ಸೋಲಿಸುವ ಸಾಮರ್ಥ್ಯವಿದೆ. 2024ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಆಫ್ಘನ್‌, ಚಾಂಪಿಯನ್ಸ್‌ ಟ್ರೋಫಿಯಲ್ಲೂ ಚಮತ್ಕಾರ ಮಾಡುವ ಕಾತರದಲ್ಲಿದೆ. ಆದರೆ ಕಳೆದ ಡಿಸೆಂಬರ್‌ ಬಳಿಕ ಯಾವುದೇ ಏಕದಿನ ಪಂದ್ಯವಾಡದ ತಂಡ, ಸೂಕ್ತ ಸಿದ್ಧತೆ ಕೊರತೆ ಎದುರಿಸುತ್ತಿದೆ.ಸಾಮರ್ಥ್ಯ

- ನಬಿ, ರಶೀದ್‌ರಂತದ ವಿಶ್ವಶ್ರೇಷ್ಠ ಆಲ್ರೌಂಡರ್ಸ್‌.

- ಯಾರನ್ನು ಬೇಕಿದ್ದರೂ ಕಾಡಬಲ್ಲ ಯುವ ಸ್ಪಿನ್ನರ್‌ಗಳ ಪಡೆ.

- ಜದ್ರಾನ್‌, ಗುರ್ಬಾಜ್‌ರಂತಹ ಉತ್ತಮ ಬ್ಯಾಟರ್ಸ್‌ದೌರ್ಬಲ್ಯ

- ಯಾವುದೇ ಕ್ಷಣದಲ್ಲಿ ಕುಸಿಯುವ ಬ್ಯಾಟಿಂಗ್‌ ಪಡೆ

- ಟೂರ್ನಿಗೆ ಸೂಕ್ತ ಸಿದ್ಧತೆ ನಡೆಸದ ತಂಡ.

- ಸ್ಪಿನ್ನರ್‌ಗಳ ಮೇಲೆ ಅತಿಯಾದ ಅವಲಂಬನೆ

ತಾರಾ ಆಟಗಾರರು: ರಶೀದ್‌, ನಬಿ, ಗುರ್ಬಾಜ್‌,

ತಂಡದ ಸಾಧನೆ: ಮೊದಲ ಬಾರಿ ಕಣಕ್ಕೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!