8 ವರ್ಷ ಬಳಿಕ ಬರ್ತಿದೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ! ದಿನಗಣನೆ ಶುರು - ಫೆ.19ರಿಂದ ಮಾ.9ರ ವರೆಗೂ ನಿಗದಿ

Published : Feb 15, 2025, 11:25 AM IST
success-story-of-1xBet-supporting-promoting-sports-in-India

ಸಾರಾಂಶ

‘ಮಿನಿ ಏಕದಿನ ವಿಶ್ವಕಪ್‌’  ಟೂರ್ನಿ    ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ‘ಕನ್ನಡಪ್ರಭ’ ತನ್ನ ಓದುಗರಿಗೆ ನೀಡಲಿದೆ.

8 ವರ್ಷ ಬಳಿಕ ಬರ್ತಿದೆ ಚಾಂಪಿಯನ್ಸ್‌ ಟ್ರೋಫಿ!

‘ಮಿನಿ ಏಕದಿನ ವಿಶ್ವಕಪ್‌’ ಎಂದೇ ಕರೆಸಿಕೊಳ್ಳುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ದಿನಗಣನೆ ಶುರುವಾಗಿದೆ. ಈ ಹೆಸರಿನ ಒಂದು ಟೂರ್ನಿ ಇದೆ ಎನ್ನುವುದೇ ಬಹುತೇಕರಿಗೆ ಮರೆತು ಹೋಗಿರುತ್ತೆ. ಕಾರಣ, ಚಾಂಪಿಯನ್ಸ್‌ ಟ್ರೋಫಿ ಕೊನೆ ಬಾರಿಗೆ ನಡೆದಿದ್ದು 2017ರಲ್ಲಿ. ಆನಂತರ ಕ್ರಿಕೆಟ್‌ ಜಗತ್ತಿನಲ್ಲೇ ಹಲವು ಐಸಿಸಿ ಟೂರ್ನಿಗಳು ಜರುಗಿವೆ.

ಹಾಗಿದ್ರೆ, ಟೂರ್ನಿ ಇಷ್ಟು ವರ್ಷ ನಡೆಯಲಿಲ್ಲ ಏಕೆ?, ಈ ಬಾರಿ ಆತಿಥ್ಯ ಹಕ್ಕು ಯಾರಿಗೆ ಸಿಕ್ಕಿದೆ?, ಯಾವೆಲ್ಲಾ ತಂಡಗಳು ಆಡುತ್ತವೆ, ಟೂರ್ನಿಗಾಗಿ ನಡೆದಿರುವ ಸಿದ್ಧತೆ ಎಂಥದ್ದು?, ಹೀಗೆ ಅನೇಕ ಪ್ರಶ್ನೆಗಳು ಮೂಡುವುದು ಸಹಜ. ಅದಕ್ಕೆಲ್ಲಾ ಉತ್ತರ ಇಲ್ಲಿದೆ. ಮುಂದಿನ 4 ದಿನ ಚಾಂಪಿಯನ್ಸ್‌ ಟ್ರೋಫಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ‘ಕನ್ನಡಪ್ರಭ’ ತನ್ನ ಓದುಗರಿಗೆ ನೀಡಲಿದೆ.

ಮೊದಲ ಬಾರಿಗೆ ಹೈಬ್ರಿಡ್‌ ಮಾದರಿ!

2025ರ ಚಾಂಪಿಯನ್ಸ್‌ ಟ್ರೋಫಿ ಫೆ.19ರಿಂದ ಮಾ.9ರ ವರೆಗೂ ನಿಗದಿಯಾಗಿದೆ. ಪ್ರತಿ ಬಾರಿಯಂತೆ ಈ ಸಲವೂ 8 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಇಂಗ್ಲೆಂಡ್‌, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಕಣದಲ್ಲಿವೆ. ಮಿನಿ ವಿಶ್ವಕಪ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ಗಳಾದ ವೆಸ್ಟ್‌ಇಂಡೀಸ್‌ ಹಾಗೂ ಶ್ರೀಲಂಕಾ ತಂಡಗಳಿಲ್ಲ.

ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯ ವಿಶೇಷತೆ ಏನು ಗೊತ್ತಾ? ಅದುವೇ, ಹೈಬ್ರಿಡ್‌ ಮಾದರಿ. ಪಂದ್ಯಗಳು ಪಾಕಿಸ್ತಾನದ ಲಾಹೋರ್‌, ಕರಾಚಿ ಹಾಗೂ ರಾವಲ್ಪಿಂಡಿಯ ಜೊತೆಗೆ ದುಬೈನಲ್ಲಿ ನಡೆಯಲಿವೆ.

ಟೂರ್ನಿಯು ಹೈಬ್ರಿಡ್‌ ಮಾದರಿಗೆ ಜಾರಲು ಭಾರತ ಕಾರಣ. ಬದ್ಧವೈರಿ ಪಾಕಿಸ್ತಾನದ ನೆಲಕ್ಕೆ ತನ್ನ ಕ್ರಿಕೆಟ್‌ ತಂಡ ಕಾಲಿಡಲು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ ಕಾರಣ, ತಂಡವನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿತು. ಟೂರ್ನಿಯನ್ನು ಹೈಬ್ರಿಡ್‌ ಮಾದರಿಯಲ್ಲಿ ನಡೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಮೇಲೆ ಒತ್ತಡ ಹೇರಿತು. ಐಸಿಸಿ ಪಾಲಿಗೆ ಬಿಸಿಸಿಐ ‘ಕಾಮಧೇನು’ ಇದ್ದಂತೆ. ಹೀಗಾಗಿ, ಬಿಸಿಸಿಐ ಬೇಡಿಕೆಯನ್ನು ತಿರಸ್ಕರಿಸುವಷ್ಟು ಸೌಕರ್ಯ ಐಸಿಸಿಗಿಲ್ಲ. ಅದರಲ್ಲೂ ಬಿಸಿಸಿಐನ ಮಾಜಿ ಕಾರ್ಯದರ್ಶಿ ಜಯ್‌ ಶಾ, ಐಸಿಸಿ ಅಧ್ಯಕ್ಷ ಕುರ್ಚಿಯಲ್ಲಿ ಕೂತ ಮೇಲೆ ಬಿಸಿಸಿಐನ ಬೇಡಿಕೆ ಈಡೇರದಿರಲು ಹೇಗೆ ಸಾಧ್ಯ?. ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ವಿರೋಧದ ನಡುವೆಯೂ ಐಸಿಸಿ, ಹೈಬ್ರಿಡ್‌ ಮಾದರಿಯ ಟೂರ್ನಿಯನ್ನು ಘೋಷಿಸಿತು. ಅದರನ್ವಯ, ಭಾರತದ ಪಂದ್ಯಗಳಿಗೆ ದುಬೈ ಆತಿಥ್ಯ ವಹಿಸಲಿದೆ. ಉಳಿದ 6 ತಂಡಗಳು ಪಾಕಿಸ್ತಾನದಲ್ಲಿ ಆಡಲಿದ್ದು, ಭಾರತ ವಿರುದ್ಧ ಪಂದ್ಯವಿದ್ದಾಗ ದುಬೈಗೆ ಬಂದು ಆಡಿ ಹೋಗಲಿವೆ.

ಹೋರಾಡಿ ಆತಿಥ್ಯ ಹಕ್ಕು ಉಳಿಸಿಕೊಂಡ ಪಾಕ್‌!

ಟೂರ್ನಿಯು ಹೈಬ್ರಿಡ್‌ ಮಾದರಿಯಲ್ಲಿ ನಡೆದರೂ, ಆತಿಥ್ಯ ಹಕ್ಕು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಬಳಿಯೇ ಉಳಿದಿದೆ. ಅಂದರೆ, ಟೂರ್ನಿ ಆಯೋಜನೆಗೆ ಬೇಕಿರುವ ವ್ಯವಸ್ಥೆಯನ್ನು ಪಿಸಿಬಿ ಮಾಡಲಿದೆ. ಇಡೀ ಟೂರ್ನಿಯನ್ನೇ ಬೇರೆ ದೇಶಕ್ಕೆ ಸ್ಥಳಾಂತರಿಸಬೇಕು ಎನ್ನುವುದು ಬಿಸಿಸಿಐ ಮುಂದಿಟ್ಟ ಬೇಡಿಕೆಗಳಲ್ಲಿ ಒಂದಾಗಿತ್ತು. ದಕ್ಷಿಣ ಆಫ್ರಿಕಾ ಅಥವಾ ಐಸಿಸಿಯ ಕೇಂದ್ರ ಕಚೇರಿ ಇರುವ ಯುಎಇಗೆ ಪಂದ್ಯಾವಳಿ ಶಿಫ್ಟ್‌ ಆಗಬಹುದು ಎನ್ನುವ ಸುದ್ದಿಗಳು ಹರಿದಾಡಿತ್ತು. ಆದರೆ, ಬಹಳಷ್ಟು ಕಸರತ್ತು ಮಾಡಿ ಪಿಸಿಬಿ ಆತಿಥ್ಯ ಹಕ್ಕು ಉಳಿಸಿಕೊಂಡಿತು.

ಟೂರ್ನಿ ಆಯೋಜನೆಯಿಂದ

ಪಾಕ್‌ಗೆ ಕೋಟಿ ಕೋಟಿ ಹಣ!

ಯಾವುದೇ ಐಸಿಸಿ ಟೂರ್ನಿಗೆ ಆತಿಥ್ಯ ನೀಡುವ ರಾಷ್ಟ್ರಕ್ಕೆ ಹಣದ ಹೊಳೆಯೇ ಹರಿದು ಬರಲಿದೆ. ಪ್ರಾಯೋಜಕತ್ವ, ಟಿಕೆಟ್‌ ಮಾರಾಟದಿಂದ ದೊಡ್ಡ ಮಟ್ಟದಲ್ಲಿ ಹಣ ಸಂಗ್ರಹವಾಗಲಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಐಸಿಸಿಯಿಂದ ಆರ್ಥಿಕ ನೆರವು ಸಿಗಲಿದೆ. ಐಸಿಸಿಯು ಪ್ರಸಾರ ಹಕ್ಕು ಮಾರಾಟ ಹಾಗೂ ಪ್ರಾಯೋಜಕತ್ವದಿಂದ ನೂರಾರು ಕೋಟಿ ರು. ಹಣ ಸಂಪಾದಿಸಲಿದ್ದು, ಇದರಲ್ಲಿ ದೊಡ್ಡ ಪ್ರಮಾಣವನ್ನು ಟೂರ್ನಿಗೆ ಆತಿಥ್ಯ ನೀಡುವ ರಾಷ್ಟ್ರಕ್ಕೆ ನೀಡಲಿದೆ. ಒಂದು ಅಂದಾಜಿನ ಪ್ರಕಾರ, 2025ರ ಚಾಂಪಿಯನ್ಸ್‌ ಟ್ರೋಫಿ ನಡೆಸುವುದರಿಂದ ಪಿಸಿಬಿಗೆ ಐಸಿಸಿಯಿಂದ 100 ಕೋಟಿ ರು.ಗೂ ಹೆಚ್ಚಿನ ನೆರವು ಸಿಗಲಿದೆ.

ಕ್ರೀಡಾಂಗಣಗಳ ನವೀಕರಣಕ್ಕೆ

ನೀರಿನಂತೆ ಹಣ ಚೆಲ್ಲಿದೆ ಪಾಕ್‌!

2021ರ ನವೆಂಬರ್‌ನಲ್ಲೇ 2025ರ ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ ಎಂದು ಘೋಷಣೆಯಾಯಿತು. 2008ರಲ್ಲಿ ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕರ ದಾಳಿ ನಡೆದ ಬಳಿಕ, 10 ವರ್ಷಕ್ಕೂ ಹೆಚ್ಚು ಕಾಲ ಪಾಕಿಸ್ತಾನಕ್ಕೆ ಯಾವ ವಿದೇಶಿ ತಂಡವೂ ಹೋಗಿರಲಿಲ್ಲ. ಪಂದ್ಯಗಳ ಕೊರತೆಯಿಂದಾಗಿ, ಪಾಕಿಸ್ತಾನದ ಕ್ರಿಕೆಟ್‌ ಕ್ರೀಡಾಂಗಣಗಳು ಪಾಳು ಬಿದ್ದ ಸ್ಥಿತಿ ತಲುಪಿದ್ದವು. ಐಸಿಸಿ ಟೂರ್ನಿಗೆ ಆತಿಥ್ಯ ನೀಡಬೇಕಿದ್ದರೆ ವಿಶ್ವ ದರ್ಜೆಯ ಕ್ರೀಡಾಂಗಣಗಳು ಬೇಕು ಎನ್ನುವುದನ್ನು ಅರಿತ ಪಿಸಿಬಿ ಲಾಹೋರ್‌, ರಾವಲ್ಪಿಂಡಿ ಹಾಗೂ ಕರಾಚಿ ಕ್ರೀಡಾಂಗಣಗಳ ನವೀಕರಣಕ್ಕೆ ಕೈಹಾಕಿತು. ದುಡ್ಡನ್ನು ನೀರಿನಂತೆ ಚೆಲ್ಲಿ ನವೀಕರಣ ಕಾರ್ಯ ಕೈಗೊಳ್ಳುತ್ತಿದ್ದಾಗ, ಟೂರ್ನಿ ಪಾಕಿಸ್ತಾನದ ಸ್ಥಳಾಂತರಗೊಳ್ಳಬಹುದು ಎನ್ನುವ ಸುದ್ದಿ ಪಿಸಿಬಿ ಅಧಿಕಾರಿಗಳ ನಿದ್ದೆಗೆಡಿಸಿತ್ತು. ಹೋರಾಟ ನಡೆಸಿ ಆತಿಥ್ಯ ಹಕ್ಕು ಉಳಿಸಿಕೊಂಡರೂ, ಕ್ರೀಡಾಂಗಣಗಳ ನವೀಕರಣಕ್ಕೆ ತಗುಲಿರುವ ವೆಚ್ಚ ಕೈಮೀರಿದೆ.

ವರದಿಗಳ ಪ್ರಕಾರ, ನವೀಕರಣ ಕಾರ್ಯಕ್ಕೆ ಪಿಸಿಬಿ 12.3 ಬಿಲಿಯನ್‌ ಪಾಕಿಸ್ತಾನಿ ರುಪಾಯಿ (ಅಂದಾಜು ₹383 ಕೋಟಿ) ಆಗಬಹುದು ಎಂದು ಅಂದಾಜಿಸಿತ್ತು. ಆದರೆ, ಈಗಾಗಲೇ 18 ಬಿಲಿಯನ್‌ ಪಾಕಿಸ್ತಾನಿ ರುಪಾಯಿ (ಅಂದಾಜು ₹561 ಕೋಟಿ) ಖರ್ಚಾಗಿದ್ದು, ಪಿಸಿಬಿ ಸಾಲದ ಸುಳಿಯಲ್ಲಿ ಸಿಲುಕಿದೆ.

ಭಾರತ ತಂಡ ಪಾಕಿಸ್ತಾನಕ್ಕೆ ಹೋಗಿದ್ದರೆ, ಪಿಸಿಬಿ ಮಾಡಿದ ವೆಚ್ಚ ಬಡ್ಡಿ ಸಮೇತ ವಸೂಲಿಯಾಗುತ್ತಿತ್ತು. ಆದರೆ, ತನ್ನ ತಂಡವನ್ನು ಕಳುಹಿಸಲ್ಲ ಎಂದು ಬಿಸಿಸಿಐ ಕಡ್ಡಿ ತುಂಡು ಮಾಡಿದ ರೀತಿ ಹೇಳಿದ್ದರಿಂದ ಪಿಸಿಬಿ ಅಧಿಕಾರಿಗಳಿಗೆ ಕನಸಿನಲ್ಲೂ ಸಾಲಗಾರರು ಕಾಡುತ್ತಿದ್ದರೂ ಅಚ್ಚರಿಯಿಲ್ಲ.

ಅಂದ ಹಾಗೆ, ಹಾಗೂ ಹೀಗೂ ಸರ್ಕಸ್‌ ಮಾಡಿ ಮೂರೂ ಕ್ರೀಡಾಂಗಣಗಳ ನವೀಕರಣ ಕಾರ್ಯವನ್ನು ಪೂರ್ತಿಗೊಳಿಸಿರುವ ಪಿಸಿಬಿ, ಕ್ರೀಡಾಂಗಣಗಳನ್ನು ಐಸಿಸಿ ಸುರ್ಪದಿಗೆ ನೀಡಿದೆ. ಕ್ರೀಡಾಂಗಣಗಳ ಗುಣಮಟ್ಟದ ಬಗ್ಗೆ ಐಸಿಸಿ ಸರ್ಟಿಫಿಕೇಟ್‌ ನೀಡಬೇಕಿದೆ.

ಟೂರ್ನಿಗೆ 8 ವರ್ಷ

ಬ್ರೇಕ್‌ ಬಿದ್ದಿದ್ದು ಏಕೆ?

ಚಾಂಪಿಯನ್ಸ್‌ ಟ್ರೋಫಿಯ ಈ ಹಿಂದಿನ ಆವೃತ್ತಿ ನಡೆದಿದ್ದು 2017ರಲ್ಲಿ. ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಪಾಕಿಸ್ತಾನ ಮೊದಲ ಬಾರಿಗೆ ಚಾಂಪಿಯನ್‌ ಆಗಿತ್ತು. 1998ರಲ್ಲಿ ಆರಂಭಗೊಂಡ ಟೂರ್ನಿಯನ್ನು 2 ವರ್ಷಗಳಿಗೊಮ್ಮೆ ನಡೆಸಲು ಐಸಿಸಿ ನಿರ್ಧರಿಸಿತ್ತು. ಮೊದಲ 5 ಆವೃತ್ತಿಗಳು 2 ವರ್ಷಗಳಿಗೊಮ್ಮೆ ನಡೆದವು. ಆನಂತರ ಅಂತರ 3 ವರ್ಷಕ್ಕೆ ಹೆಚ್ಚಿತು. 2009ರ ಬಳಿಕ 4 ವರ್ಷಗಳಿಗೊಮ್ಮೆ ಟೂರ್ನಿ ಆಯೋಜನೆಗೊಂಡು 2017ರ ಬಳಿಕ ನಿಂತೇ ಹೋಗಿತ್ತು.

ಚಾಂಪಿಯನ್ಸ್‌ ಟ್ರೋಫಿಯನ್ನು ಸ್ಥಗಿತಗೊಳಿಸಿ ಅದರ ಬದಲು ವರ್ಷಕ್ಕೊಂದು ಟಿ20 ವಿಶ್ವಕಪ್‌ ಅಯೋಜಿಸಲು ಐಸಿಸಿ ಚಿಂತನೆಯನ್ನೂ ನಡೆಸಿತ್ತು. ಇದೇ ಕಾರಣಕ್ಕೆ 2021ರಲ್ಲಿ ಟೂರ್ನಿ ನಡೆಯಲಿಲ್ಲ. ಆದರೆ ಐಸಿಸಿಯ ಆಲೋಚನೆ ಏಕದಿನ ಕ್ರಿಕೆಟ್‌ಗೆ ಮಾರಕ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರಿಂದ, 2025ರಿಂದ ಟೂರ್ನಿಯನ್ನು ಪುನಾರಂಭಿಸುವುದಾಗಿ ಐಸಿಸಿ ಘೋಷಿಸಿತು.

ಚಾಂಪಿಯನ್ಸ್‌ ಟ್ರೋಫಿಯನ್ನು ಮತ್ತೆ ಪರಿಚಯಿಸಿರುವುದರಿಂದ ಇನ್ಮುಂದೆ ವರ್ಷಕ್ಕೊಂದು ಐಸಿಸಿ ಟೂರ್ನಿ ನಡೆಯಲಿದೆ. 2025ರಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆದರೆ, 2026ರಲ್ಲಿ ಟಿ20 ವಿಶ್ವಕಪ್‌, 2027ರಲ್ಲಿ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌, 2028ರಲ್ಲಿ ಏಕದಿನ ವಿಶ್ವಕಪ್‌ ನಡೆಯಲಿದೆ.

1996ರ ಬಳಿಕ ಪಾಕ್‌

ನೆಲದಲ್ಲಿ ಐಸಿಸಿ ಟೂರ್ನಿ!

ಪಾಕಿಸ್ತಾನದಲ್ಲಿ ಕೊನೆ ಬಾರಿಗೆ ಐಸಿಸಿ ಟೂರ್ನಿಯೊಂದು ನಡೆದಿದ್ದು 1996ರಲ್ಲಿ. ಭಾರತ ಹಾಗೂ ಶ್ರೀಲಂಕಾದ ಜೊತೆ ಪಾಕಿಸ್ತಾನ ಏಕದಿನ ವಿಶ್ವಕಪ್‌ಗೆ ಜಂಟಿ ಆತಿಥ್ಯ ವಹಿಸಿತ್ತು. ಇದೀಗ, 29 ವರ್ಷ ಬಳಿಕ ಐಸಿಸಿ ಟೂರ್ನಿಗೆ ಆತಿಥ್ಯ ನೀಡಲು ಪಾಕಿಸ್ತಾನ ಉತ್ಸುಕಗೊಂಡಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!