ಮಸ್ಕತ್(ಒಮಾನ್): ಜೂನಿಯರ್ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ಸತತ 3ನೇ ಹಾಗೂ ಒಟ್ಟಾರೆ 5ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬುಧವಾರ ಬದ್ಧವೈರಿ ಪಾಕಿಸ್ತಾನ ವಿರುದ್ಧ ನಡೆದ 10ನೇ ಆವೃತ್ತಿ ಟೂರ್ನಿಯ ಫೈನಲ್‌ನಲ್ಲಿ ಭಾರತ 5-3 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ ಪಾಕ್‌ನ 4ನೇ ಟ್ರೋಫಿ ಕನಸು ಭಗ್ನಗೊಂಡಿತು.
ಗುಂಪು ಹಂತದಲ್ಲಿ ಎಲ್ಲಾ 4 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಉಳಿದಿದ್ದ ಭಾರತ, ಮಂಗಳವಾರ ಸೆಮಿಫೈನಲ್‌ನಲ್ಲಿ ಮಲೇಷ್ಯಾವನ್ನು ಮಣಿಸಿತ್ತು. ಫೈನಲ್‌ನಲ್ಲೂ ಪರಾಕ್ರಮ ಮೆರೆದ ತಂಡ, ಆರಂಭಿಕ ಹಿನ್ನಡೆಯನ್ನು ಹಿಮ್ಮೆಟ್ಟಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.3ನೇ ನಿಮಿಷದಲ್ಲೇ ಹನ್ನಾನ್ ಶಾಹಿದ್ ಬಾರಿಸಿದ ಗೋಲು ಪಾಕ್‌ಗೆ ಮುನ್ನಡೆ ಒದಗಿಸಿದರು.
ಬಳಿಕ ಅರೈಜಿತ್ ಸಿಂಗ್ 4 ಮತ್ತು 18ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಹಾಗೂ ದಿಲ್‌ರಾಜ್ ಸಿಂಗ್ 19ನೇ ನಿಮಿಷದಲ್ಲಿ ಫೀಲ್ಡ್ ಗೋಲಿನ ಮೂಲಕ ಭಾರತಕ್ಕೆ ಮೇಲುಗೈ ಒದಗಿಸಿದರು. ಪಾಕ್‌ನ ಸುಫ್ಯಾನ್ ಖಾನ್ 30 ಮತ್ತು 39ನೇ ನಿಮಿಷದಲ್ಲಿ ಗೋಲು ಬಾರಿಸಿ ಸಮಬಲಕ್ಕೆ ಕಾರಣರಾದರೂ, ಅರೈಜೀತ್ ಸಿಂಗ್ 47 ಮತ್ತು 54ನೇ ನಿಮಿಷಗಳಲ್ಲಿ ಬಾರಿಸಿದ ಗೋಲು ಭಾರತಕ್ಕೆ ಟ್ರೋಫಿ ತಂದುಕೊಟ್ಟಿತು.
4 ಸಲ ಫೈನಲ್‌ನಲ್ಲಿ ಪಾಕ್ ವಿರುದ್ಧ ಜಯ
ಭಾರತ ಈ ವರೆಗೂ 5 ಬಾರಿ ಪ್ರಶಸ್ತಿ ಗೆದ್ದಿದೆ. ಪೈಕಿ 4 ಬಾರಿ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದೆ ಟ್ರೋಫಿ ಜಯಿಸಿದೆ. 2004, 2015, 2023 ಹಾಗೂ 2024ರಲ್ಲಿ ಪಾಕ್ ವಿರುದ್ಧ, 2008ರಲ್ಲಿ ದ.ಕೊರಿಯಾ ವಿರುದ್ಧ ಭಾರತ ಫೈನಲ್‌ನಲ್ಲಿ ಗೆದ್ದಿದೆ. ಭಾರತ 2 ಬಾರಿ ರನ್ನರ್-ಅಪ್ ಕೂಡಾ ಆಗಿದೆ. 1996ರಲ್ಲಿ ಪಾಕಿಸ್ತಾನ, 2000ರಲ್ಲಿ ದ.ಕೊರಿಯಾ ವಿರುದ್ಧ ಭಾರತ ಫೈನಲ್‌ನಲ್ಲಿ ಸೋತಿತ್ತು.