ಬೆಲಾರಸ್‌ ಟೆನಿಸ್‌ ತಾರೆ ಸಬಲೆಂಕಾಗೆ ಸತತ 2ನೇ ಯುಎಸ್‌ ಕಿರೀಟ

KannadaprabhaNewsNetwork |  
Published : Sep 08, 2025, 01:00 AM IST
ಸಬಲೆಂಕಾ | Kannada Prabha

ಸಾರಾಂಶ

ಯುಎಸ್‌ ಓಪನ್‌ ಟೆನಿಸ್‌ನಲ್ಲಿ ಸತತ 2ನೇ ಸಲ ಚಾಂಪಿಯನ್‌. ಫೈನಲ್‌ನಲ್ಲಿ ಅಮಾಂಡ ವಿರುದ್ಧ ಜಯಭೇರಿ. ಒಟ್ಟಾರೆ 4ನೇ ಗ್ರ್ಯಾನ್‌ಸ್ಲಾಂ ಕಿರೀಟ

ನ್ಯೂಯಾರ್ಕ್‌: ಬೆಲಾರುಸ್‌ನ ಟೆನಿಸ್‌ ತಾರೆ, ವಿಶ್ವ ನಂಬರ್‌ 1 ಆಟಗಾರ್ತಿ ಅರೈನಾ ಸಬಲೆಂಕಾ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಸತತ 2ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.  

ಈ ಮೂಲಕ ತಮ್ಮ ಒಟ್ಟಾರೆ ಗ್ರ್ಯಾನ್‌ಸ್ಲಾಂ ಕಿರೀಟಗಳ ಗಳಿಕೆಯನ್ನು 4ಕ್ಕೆ ಹೆಚ್ಚಿಸಿದ್ದಾರೆ.ಭಾರತೀಯ ಕಾಲಮಾನ ಶನಿವಾರ ಮಧ್ಯರಾತ್ರಿ ನಡೆದ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ 27 ವರ್ಷದ ಸಬಲೆಂಕಾ, ಅಮೆರಿಕದ ಅಮಾಂಡ ಅನಿಸಿಮೋವಾ ವಿರುದ್ಧ 6-3, 7-6(7/3) ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 

ಕ್ರೀಡಾಂಗಣದಲ್ಲಿ ತುಂಬಿದ್ದ ಬಹುತೇಕ ಪ್ರೇಕ್ಷಕರ ಬೆಂಬಲ ಸ್ಥಳೀಯ ಆಟಗಾರ್ತಿಯಾಗಿರುವ ಅಮಾಂಡಗೆ ಇದ್ದರೂ, ಅದು ಸಬಲೆಂಕಾರ ಅಭೂತಪೂರ್ವ ಆಟದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಮೊದಲ ಸೆಟ್‌ಅನ್ನು ಸುಲಭದಲ್ಲಿ ಗೆದ್ದ 27 ವರ್ಷದ ಸಬಲೆಂಕಾ, 2ನೇ ಸೆಟ್‌ನಲ್ಲಿ 8ನೇ ಶ್ರೇಯಾಂಕಿತ ಅಮಾಂಡರಿಂದ ತೀವ್ರ ಪ್ರತಿರೋಧ ಎದುರಿಸಿದರು.  

ಆದರೆ ತಮ್ಮ ಅನುಭವ ಬಳಸಿಕೊಂಡ ಸಬಲೆಂಕಾ, ಟೈ ಬ್ರೇಕರ್‌ನಲ್ಲಿ ಗೆಲುವು ತಮ್ಮದಾಗಿಸಿಕೊಂಡರು. 2023ರಲ್ಲಿ ಯುಎಸ್‌ ಓಪನ್‌ ಫೈನಲ್‌ಗೇರಿದ್ದ ಸಬಲೆಂಕಾ, ಅಮೆರಿಕದ ಕೊಕೊ ಗಾಫ್‌ ವಿರುದ್ಧ ಸೋತು ರನ್ನರ್‌-ಅಪ್‌ ಆಗಿದ್ದರು. ಕಳೆದ ವರ್ಷ ಅಮೆರಿಕದ ಜೆಸ್ಸಿಕಾ ಪೆಗುಲಾರನ್ನು ಸೋಲಿಸಿ ಚೊಚ್ಚಲ ಯುಎಸ್‌ ಓಪನ್‌ ಪಡೆದಿದ್ದರು. ಈ ವರ್ಷವೂ ಅವರಿಗೆ ಫೈನಲ್‌ನಲ್ಲಿ ಅಮೆರಿಕದ ಆಟಗಾರ್ತಿ ಎದುರಾಗಿದ್ದು ವಿಶೇಷ. 

ಗ್ರ್ಯಾನ್‌ಸ್ಲಾಂ ಕನಸು ಭಗ್ನ: ಅಮಾಂಡ ಕೆಲ ತಿಂಗಳುಗಳ ಅಂತರದಲ್ಲೇ 2 ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ ಸೋತು, ಟ್ರೋಫಿ ತಪ್ಪಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ವಿಂಬಲ್ಡನ್‌ ಟೂರ್ನಿಯ ಫೈನಲ್‌ಗೇರಿದ್ದ 24 ವರ್ಷದ ಅಮಾಂಡ, ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ವಿರುದ್ಧ ಸೋತಿದ್ದರು. ಈ ಬಾರಿ ಸಬಲೆಂಕಾ ವಿರುದ್ಧ ಸೋತಿದ್ದು, ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ಕನಸು ಭಗ್ನಗೊಂಡಿದೆ.

4ನೇ ಗ್ರ್ಯಾನ್‌ಸ್ಲಾಂ ಗೆದ್ದ ಸಬಲೆಂಕಾ

ಸಬಲೆಂಕಾ ಒಟ್ಟು 4 ಗ್ರ್ಯಾನ್‌ಸ್ಲಾಂ ಕಿರೀಟ ಗೆದ್ದಿದ್ದಾರೆ. 2023, 2024ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಗೆದ್ದಿದ್ದ ಅವರು, 2024, 2025ರಲ್ಲಿ ಯುಎಸ್‌ ಓಪನ್‌ ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷ ಆಸ್ಟ್ರೇಲಿಯನ್‌ ಓಪನ್‌, ಫ್ರೆಂಚ್‌ ಓಪನ್‌ನಲ್ಲಿ ಫೈನಲ್‌ಗೇರಿದ್ದರು. 

 11 ವರ್ಷಗಳ ಬಳಿಕ ಸತತ 2ನೇ ಟ್ರೋಫಿ

ಕಳೆದ 11 ವರ್ಷಗಳಲ್ಲೇ ಸತತವಾಗಿ 2 ವರ್ಷ ಯುಎಸ್‌ ಓಪನ್‌ ಗೆದ್ದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಸಬಲೆಂಕಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಮೆರಿಕದ ದಿಗ್ಗಜ ಆಟಗಾರ್ತಿ ಸೆರೆನಾ 2012-14ರಲ್ಲಿ ಸತತ 3 ಬಾರಿ ಯುಎಸ್‌ ಓಪನ್‌ ಗೆದ್ದಿದ್ದರು. ಆ ಬಳಿಕ ಯಾರೂ ಸತತವಾಗಿ 2 ಟ್ರೋಫಿ ಗೆದ್ದಿರಲಿಲ್ಲ. ಈಗ ಸಬಲೆಂಕಾ ಅದನ್ನು ಸಾಧಿಸಿದ್ದಾರೆ.

₹44 ಕೋಟಿ: ಚಾಂಪಿಯನ್‌ ಅರೈನಾ ಸಬಲೆಂಕಾಗೆ ₹44 ಕೋಟಿ ನಗದು ಬಹುಮಾನ ಲಭಿಸಿದೆ.

₹22 ಕೋಟಿ: ರನ್ನರ್‌-ಅಪ್‌ ಅಮಾಂಡ ₹22 ಕೋಟಿ ನಗದು ಬಹುಮಾನ ಪಡೆದರು.

PREV
Read more Articles on

Recommended Stories

ವಿಶ್ವದ ಅತಿ ಎತ್ತರದ ರಸ್ತೆ ಉಮ್ಲಿಂಗ್‌ ಲಾಗೆ 60 ವರ್ಷದ ರಾಜೇಶ್‌ ಕಾಲ್ರಾ ಸೈಕ್ಲಿಂಗ್‌
ಜೋಕೋ ಅಭಿಯಾನ ಅಂತ್ಯ : ಯುಎಸ್ ಓಪನ್‌ ಫೈನಲ್‌ನಲ್ಲಿ ಆಲ್ಕರಜ್‌ vs ಸಿನ್ನರ್‌