ದಾಳಿ ಭೀತಿ: ಐಪಿಎಲ್‌ ಪಂದ್ಯ ಅರ್ಧಕ್ಕೇ ರದ್ದು!

Published : May 09, 2025, 04:57 AM IST
Punjab Kings team. (Photo- IPL)

ಸಾರಾಂಶ

ಧರ್ಮಶಾಲಾದಲ್ಲಿ ಪಂಜಾಬ್‌-ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ನಡೆಯುತ್ತಿದ್ದ ಪಂದ್ಯ: 11ನೇ ಓವರ್‌ ವೇಳೆ ಕ್ರೀಡಾಂಗಣದ ಲೈಟ್‌ ಆಫ್‌ - ಭಾರತೀಯ ಸೇನೆಯ ಸೂಚನೆ ಹಿನ್ನೆಲೆಯಲ್ಲಿ ಪಂದ್ಯ ಸ್ಥಗಿತ

ಧರ್ಮಶಾಲಾ: ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಪರಿಸ್ಥಿತಿ ತಲೆದೋರಿರುವ ಬೆನ್ನಲ್ಲೇ ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಐಪಿಎಲ್‌ ಪಂದ್ಯ ಅರ್ಧದಲ್ಲೇ ಸ್ಥಗಿತಗೊಂಡಿದೆ. ಪಾಕಿಸ್ತಾನ ಭಾರತದ ಮೇಲೆ ದಾಳಿ ಆರಂಭಿಸಿರುವ ಕಾರಣ, ಭಾರತೀಯ ಸೇನೆಯ ಸೂಚನೆ ಮೇರೆಗೆ ಪಂದ್ಯ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಗುರುವಾರ ಪಂಜಾಬ್ ಕಿಂಗ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಪಂದ್ಯ ನಿಗದಿಯಾಗಿತ್ತು. ಮಳೆ ಕಾರಣಕ್ಕೆ ಪಂದ್ಯ 1 ಗಂಟೆ ತಡವಾಗಿ ಆರಂಭಗೊಂಡಿತು. ಮೊದಲು ಬ್ಯಾಟ್‌ ಮಾಡಿದ್ದ 10.1 ಓವರ್‌ಗಳಲ್ಲಿ 1 ವಿಕೆಟ್‌ಗೆ 122 ರನ್‌ ಗಳಿಸಿತ್ತು. ಈ ನಡುವೆ ವಾಯು ದಾಳಿ ಭೀತಿ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ಲೈಟ್ಸ್‌ ಆಫ್‌: ಕ್ರೀಡಾಂಗಣದ ಲೈಟ್‌ಗಳು ಕೈಕೊಟ್ಟ ಕಾರಣ ಪಂದ್ಯ ನಿಲ್ಲಿಸಲಾಗಿದೆ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ ವಾಯು ದಾಳಿ ಮುನ್ನೆಚ್ಚರಿಕೆ ಕ್ರಮವಾಗಿ ಕ್ರೀಡಾಂಗಣದ ಲೈಟ್‌ಗಳನ್ನು ಬಂದ್‌ ಮಾಡಲಾಗಿತ್ತು. ಕೆಲ ನಿಮಿಷಗಳ ಬಳಿಕ ಪಂದ್ಯ ಸ್ಥಗಿತಗೊಳಿಸಿದ್ದಾಗಿ ಆಯೋಜಕರು ಮಾಹಿತಿ ನೀಡಿದ್ದಾರೆ.

ಕ್ಷಣಾರ್ಧದಲ್ಲೆ ಕ್ರೀಡಾಂಗಣ ಖಾಲಿ

ಸೇನೆಯ ಸೂಚನೆ ಹಿನ್ನೆಲೆಯಲ್ಲಿ ಪಂದ್ಯ ಸ್ಥಗಿತಗೊಂಡ ಕೆಲ ನಿಮಿಷಗಳಲ್ಲೇ ಕ್ರೀಡಾಂಗಣವನ್ನು ಖಾಲಿ ಮಾಡಲಾಯಿತು. ಭದ್ರತಾ ಸಿಬ್ಬಂದಿ ಸ್ಟ್ಯಾಂಡ್‌ಗೆ ಆಗಮಿಸಿ ಪ್ರೇಕ್ಷಕರನ್ನು ಹೊರ ಹೋಗಲು ಸೂಚಿಸಿದರು. ಆಟಗಾರರನ್ನು ಕೂಡಾ ತಕ್ಷಣವೇ ಬೇರೆಡೆಗೆ ಕರೆದೊಯ್ಯಲಾಯಿತು.

ವಿಶೇಷ ರೈಲು ಮೂಲಕ ಆಟಗಾರರು, ಸಿಬ್ಬಂದಿ ಬೇರಡೆಗೆ ಸ್ಥಳಾಂತರ

ಪಂದ್ಯ ಸ್ಥಗಿತಗೊಂಡ ಕಾರಣ ಆಟಗಾರರು, ಕೋಚ್‌, ಸಹಾಯಕ ಸಿಬ್ಬಂದಿ, ಫ್ರಾಂಚೈಸಿಗಳ ಮಾಲಿಕರು, ಪ್ರಾಯೋಜಕರು, ಮೈದಾನ ಸಿಬ್ಬಂದಿಗಳನ್ನು ಸ್ಥಳಾಂತರಿಸಲು ಬಿಸಿಸಿಐ ವಿಶೇಷ ರೈಲು ಸಜ್ಜುಗೊಳಿಸಿದೆ. ಶುಕ್ರವಾರ ಅವರನ್ನು ಸ್ಥಳಾಂತರಿಸಲಾಗುತ್ತದೆ. ಸದ್ಯದ ಮಟ್ಟಿಗೆ ಕ್ರೀಡಾಂಗಣದ ಸಮೀಪದ ಹೋಟೆಲ್‌ಗಳಲ್ಲಿ ಇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಐಪಿಎಲ್‌ ಸ್ಥಗಿತ ಸಾಧ್ಯತೆ: ಇಂದು ನಿರ್ಧಾರ?

ಭಾರತ ಹಾಗೂ ಪಾಕ್‌ ನಡುವೆ ಯುದ್ಧ ಪರಿಸ್ಥಿತಿ ಉಂಟಾಗಿರುವ ಕಾರಣ ಐಪಿಎಲ್‌ ಪಂದ್ಯಗಳನ್ನು ಮುಂದುವರಿಸಬೇಕೇ ಬೇಡವೇ ಎಂಬುದರ ಬಗ್ಗೆ ಬಿಸಿಸಿಐ ಶುಕ್ರವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಬಿಸಿಸಿಐ ಅಧಿಕಾರಿಗಳು ತುರ್ತು ಸಭೆ ಕರೆದಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ‘ಭದ್ರತೆ ಕಾರಣಕ್ಕೆ ಗುರುವಾರದ ಪಂದ್ಯವನ್ನು ಅರ್ಧಕ್ಕೇ ಸ್ಥಗಿತಗೊಳಿಸಲಾಗಿದೆ. ಐಪಿಎಲ್ ಮುಂದುವರಿಸುವ ಬಗ್ಗೆ ನಾವು ನಾಳೆ(ಶುಕ್ರವಾರ) ನಿರ್ಧಾರ ಕೈಗೊಳ್ಳಲಿದ್ದೇವೆ. ಸದ್ಯದ ಮಟ್ಟಿಗೆ, ಆಟಗಾರರ ಭದ್ರತೆಯೇ ನಮ್ಮ ಮೊದಲ ಆದ್ಯತೆ’ ಎಂದು ತಿಳಿಸಿದ್ದಾರೆ.

ಸಾಮಾಜಿಕ ತಾಣಗಳಲ್ಲೂ ಕ್ರೀಡಾಪ್ರೇಮಿಗಳು ಐಪಿಎಲ್‌ ಸ್ಥಗಿತಗೊಳಿಸಲು ಒತ್ತಾಯಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಐಪಿಎಲ್‌ ನಡೆಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

PREV

Recommended Stories

ಇಂದಿನಿಂದ ರಣಜಿ ಟ್ರೋಫಿ - 91ನೇ ಆವೃತ್ತಿಯ ದೇಸಿ ಪ್ರ.ದರ್ಜೆ ಕ್ರಿಕೆಟ್‌ ಟೂರ್ನಿ
ಗಿಲ್‌ ನಾಯಕತ್ವದಲ್ಲಿ ಮೊದಲ ಸರಣಿ ಜಯ