ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ಗೆ ಡಬಲ್‌ ಲಕ್‌: ಸೂಪರ್‌-8ಗೆ ಲಗ್ಗೆ!

KannadaprabhaNewsNetwork |  
Published : Jun 17, 2024, 01:36 AM ISTUpdated : Jun 17, 2024, 04:50 AM IST
ಟಿ20 ವಿಶ್ವಕಪ್‌ನ ಸೂಪರ್‌-8 ಹಂತಕ್ಕೆ ಪ್ರವೇಶ ಪಡೆದ ಹಾಲಿ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌.  | Kannada Prabha

ಸಾರಾಂಶ

ಭರ್ಜರಿ ಆಟ, ಅದೃಷ್ಟದೊಂದಿಗೆ ಟಿ20 ವಿಶ್ವಕಪ್‌ ಸೂಪರ್‌-8 ಹಂತಕ್ಕೆ ಪ್ರವೇಶಿಸಿದ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌. ಜೋಸ್‌ ಬಟ್ಲರ್‌ ಪಡೆಗೆ ಆಸ್ಟ್ರೇಲಿಯಾ ನೆರವಾಗಿದ್ದು ಹೇಗೆ? ಸ್ಕಾಟ್ಲೆಂಡ್‌ ಕನಸು ನುಚ್ಚುನೂರು.

ಗ್ರಾಸ್‌ ಐಲೆಟ್‌/ನಾರ್ಥ್‌ಸೌಂಡ್‌: ನಮೀಬಿಯಾವನ್ನು ಡಕ್ವರ್ತ್‌ ಲೂಯಿಸ್‌ ನಿಮಯದನ್ವಯ 41 ರನ್‌ಗಳಿಂದ ಸೋಲಿಸಿ, ಸೂಪರ್‌-8 ಹಂತಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದ ಇಂಗ್ಲೆಂಡ್‌ಗೆ ಆಸ್ಟ್ರೇಲಿಯಾ ನಿರಾಸೆ ಉಂಟು ಮಾಡಲಿಲ್ಲ.

ಇಂಗ್ಲೆಂಡ್‌ ಗೆಲುವು ಸಾಧಿಸಿದರೂ, ಹಾಲಿ ವಿಶ್ವ ಚಾಂಪಿಯನ್‌ ತಂಡ ಸೂಪರ್‌-8 ಭವಿಷ್ಯ ಆಸ್ಟ್ರೇಲಿಯಾ-ಸ್ಕಾಟ್ಲೆಂಡ್‌ ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತಗೊಂಡಿತ್ತು. ಸ್ಕಾಟ್ಲೆಂಡ್‌ ಗೆದ್ದಿದ್ದರೆ ಅಥವಾ ಪಂದ್ಯ ಮಳೆಗೆ ಬಲಿಯಾಗಿದ್ದರೆ, ಇಂಗ್ಲೆಂಡ್‌ ಗುಂಪು ಹಂತದಲ್ಲೇ ಹೊರಬೀಳುತ್ತಿತ್ತು.

ಪಂದ್ಯಕ್ಕೂ ಮುನ್ನ ಆಸೀಸ್‌ನ ವೇಗಿ ಜೋಶ್‌ ಹೇಜಲ್‌ವುಡ್‌, ಇಂಗ್ಲೆಂಡ್‌ ಅನ್ನು ಹೊರಹಾಕಲು ತಾವು ಸೋಲಲು ಸಿದ್ಧ ಎನ್ನುವ ಅರ್ಥದಲ್ಲಿ ನೀಡಿದ್ದ ಹೇಳಿಕೆ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಸ್ಕಾಟ್ಲೆಂಡನ್ನು 5 ವಿಕೆಟ್‌ಗಳಿಂದ ಸೋಲಿಸಿದ ಆಸೀಸ್‌, ‘ಬಿ’ ಗುಂಪಿನಿಂದ 2ನೇ ತಂಡವಾಗಿ ತನ್ನ ಬದ್ಧವೈರಿ ಇಂಗ್ಲೆಂಡ್‌ ಸೂಪರ್‌-8 ಹಂತಕ್ಕೇರಲು ನೆರವಾಯಿತು.ತಲಾ 10 ಓವರ್ ಪಂದ್ಯ:

ಇಂಗ್ಲೆಂಡ್‌ಗೆ 41 ರನ್‌ ಜಯ

ನಾರ್ಥ್‌ಸೌಂಡ್‌: ನಮೀಬಿಯಾ ವಿರುದ್ಧದ ಪಂದ್ಯ ಮಳೆಗೆ ಬಲಿಯಾಗುವ ಭೀತಿಯೂ ಇತ್ತು. ಇದು ಇಂಗ್ಲೆಂಡ್‌ ಪಾಳಯದಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿತ್ತು. ಒಂದು ವೇಳೆ ಪಂದ್ಯ ರದ್ದಾಗಿದ್ದರೆ, ಆಸೀಸ್‌-ಸ್ಕಾಟ್ಲೆಂಡ್‌ ಪಂದ್ಯಕ್ಕೂ ಮೊದಲೇ ಇಂಗ್ಲೆಂಡ್‌ ಹೊರಬೀಳುತ್ತಿತ್ತು. ಆದರೆ, ವರುಣ ದೇವ ಕೃಪೆ ತೋರಿದ. ಇಂಗ್ಲೆಂಡ್‌ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 41 ರನ್‌ ಜಯ ಸಾಧಿಸಿತು.ತಲಾ 10 ಓವರ್‌ಗಳಿಗೆ ಕಡಿತಗೊಂಡ ಪಂದ್ಯದಲ್ಲಿ ಇಂಗ್ಲೆಂಡ್‌ ಮೊದಲ ಬ್ಯಾಟ್‌ ಮಾಡಿ 5 ವಿಕೆಟ್‌ಗೆ 122 ರನ್‌ ಪೇರಿಸಿತು.

13 ರನ್‌ ಆಗುವಷ್ಟರಲ್ಲಿ ಆರಂಭಿಕರಾದ ಬಟ್ಲರ್‌ (0) ಹಾಗೂ ಸಾಲ್ಟ್‌ (11)ರ ವಿಕೆಟ್‌ಗಳನ್ನು ಕಳೆದುಕೊಂಡರೂ, ಬೇರ್‌ಸ್ಟೋವ್‌ (31), ಬ್ರೂಕ್‌ (47), ಅಲಿ (16), ಲಿವಿಂಗ್‌ಸ್ಟೋನ್‌ (13)ರ ಸಾಹಸದಿಂದ ಇಂಗ್ಲೆಂಡ್‌ ದೊಡ್ಡ ಮೊತ್ತ ಕಲೆಹಾಕಿತು.ಬೃಹತ್‌ ಗುರಿ ಬೆನ್ನತ್ತಿದ ನಮೀಬಿಯಾ, 10 ಓವರಲ್ಲಿ 3 ವಿಕೆಟ್‌ಗೆ 84 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ವಾನ್‌ ಲಿನ್ಜೆನ್‌ 33, ವೀಸಾ 27 ರನ್‌ ಗಳಿಸಿದರು.

ಸ್ಕೋರ್‌: ಇಂಗ್ಲೆಂಡ್‌ 10 ಓವರಲ್ಲಿ 122/5 (ಬ್ರೂಕ್‌ 47, ಬೇರ್‌ಸ್ಟೋವ್‌ 31, ಟ್ರಂಪಲ್‌ಮನ್‌ 2-31), ನಮೀಬಿಯಾ 10 ಓವರಲ್ಲಿ 84/3 (ಲಿನ್ಜೆನ್‌ 33, ವೀಸಾ 27, ಆರ್ಚರ್‌ 1-15) 

ಪಂದ್ಯಶ್ರೇಷ್ಠ: ಹ್ಯಾರಿ ಬ್ರೂಕ್‌.

ಆಸೀಸ್‌ ವಿರುದ್ಧ ಹೋರಾಡಿ ಸೋಲುಂಡ ಸ್ಕಾಟ್ಲೆಂಡ್‌!

ಗ್ರಾಸ್‌ ಐಲೆಟ್‌: ಸ್ಕಾಟ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ ಉದ್ದೇಶಪೂರ್ವಕವಾಗಿ ಸೋಲಲು ಪ್ರಯತ್ನಿಸಿತೇ?. ಪಂದ್ಯ ವೀಕ್ಷಿಸಿದವರಿಗೆ ಖಂಡಿತವಾಗಿಯೂ ಇಂಥದ್ದೊಂದು ಅನುಮಾನ ಮೂಡದಿರಲು ಸಾಧ್ಯವಿಲ್ಲ. ಬಲಿಷ್ಠ ಆಸೀಸ್‌, ಮೊದಲು ಹಲವು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿ ಸ್ಕಾಟ್ಲೆಂಡ್‌ 20 ಓವರಲ್ಲಿ 180 ರನ್‌ ಕಲೆಹಾಕಲು ನೆರವಾಯಿತು. ಈ ವಿಶ್ವಕಪ್‌ನಲ್ಲಿ ದಾಖಲಾಗುತ್ತಿರುವ ಮೊತ್ತಗಳನ್ನು ನೋಡಿದಾಗ 180 ರನ್‌ ಬೃಹತ್‌ ಮೊತ್ತ ಅನಿಸದೆ ಇರುವುದಿಲ್ಲ.ಬಳಿಕ ನಿಧಾನವಾಗಿ ಬ್ಯಾಟ್‌ ಮಾಡಿದ ಆಸೀಸ್‌ಗೆ ಒಂದು ಹಂತದಲ್ಲಿ ಗೆಲ್ಲಲು 7 ಓವರಲ್ಲಿ 89 ರನ್‌ ಬೇಕಿತ್ತು. ಆದರೆ ಬೇಕಂತಲೇ ಸೋತ ‘ಕಳಂಕ’ ಅಂಟಿಕೊಳ್ಳದಂತೆ ಎಚ್ಚರ ವಹಿಸಿದ ಆಸೀಸ್‌, 2 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿತು.

ಮೊದಲು ಸ್ಕಾಟ್ಲೆಂಡ್‌ ಪರ ಮುನ್ಸಿ (35), ಮೆಕ್‌ಮ್ಯೂಲನ್‌ (34 ಎಸೆತದಲ್ಲಿ 60 ರನ್‌, 6 ಸಿಕ್ಸರ್‌), ಬೆರಿಂಗ್ಟನ್‌ (42) ಸ್ಫೋಟಕ ಆಟವಾಡಿ ತಂಡ ದೊಡ್ಡ ಮೊತ್ತ ಕಲೆಹಾಕಲು ಸಹಕಾರಿಯಾದರು. 60ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ಗೆ ಟ್ರ್ಯಾವಿಸ್‌ ಹೆಡ್‌ (68) ಹಾಗೂ ಸ್ಟೋಯ್ನಿಸ್‌ (59)ರ ಅರ್ಧಶತಕಗಳು, ಟಿಮ್‌ ಡೇವಿಡ್‌ (14 ಎಸೆತದಲ್ಲಿ ಔಟಾಗದೆ 24 ರನ್‌)ರ ಸಮಯೋಚಿತ ಆಟ 5 ವಿಕೆಟ್‌ ಜಯ ತಂದುಕೊಟ್ಟಿತು.

ಸ್ಕೋರ್‌: ಸ್ಕಾಟ್ಲೆಂಡ್‌ 20 ಓವರಲ್ಲಿ 180/5 (ಮೆಕ್‌ಮ್ಯೂಲನ್‌ 60, ಬೆರಿಂಗ್ಟನ್‌ 42, ಮ್ಯಾಕ್ಸ್‌ವೆಲ್‌ 2-44), ಆಸ್ಟ್ರೇಲಿಯಾ 19.4 ಓವರಲ್ಲಿ 186/5 (ಹೆಡ್‌ 68, ಸ್ಟೋಯ್ನಿಸ್‌ 59, ವ್ಯಾಟ್‌ 2-34) ಪಂದ್ಯಶ್ರೇಷ್ಠ: ಸ್ಟೋಯ್ನಿಸ್‌6 ಕ್ಯಾಚ್‌ ಬಿಟ್ಟ ಆಸೀಸ್‌: ಟಿ20 ವಿಶ್ವಕಪ್‌ ದಾಖಲೆ!ಗ್ರಾಸ್‌ ಐಲೆಟ್‌: ಐಸಿಸಿ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಅತಿಹೆಚ್ಚು ಕ್ಯಾಚ್‌ ಬಿಟ್ಟ ಅನಗತ್ಯ ದಾಖಲೆಗೆ ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ಗುರಿಯಾಗಿದೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಬರೋಬ್ಬರಿ 6 ಕ್ಯಾಚ್‌ಗಳನ್ನು ಕೈಚೆಲ್ಲಿತು. ತಂಡದ ಕ್ಷೇತ್ರರಕ್ಷಣೆಗೆ ವೀಕ್ಷಕ ವಿವರಣೆಗಾರರು, ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳಿಂದ ಭಾರಿ ಟೀಕೆ ವ್ಯಕ್ತವಾಗಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯ
ಮದುವೆಯಾಗಿ 11 ತಿಂಗಳ ಬಳಿಕ ನೀರಜ್‌ರ ಆರತಕ್ಷತೆ : ಪ್ರಧಾನಿ ಮೋದಿ ಶುಭಹಾರೈಕೆ