ಕಿಂಗ್‌ಸ್ಟನ್/ಗ್ರಾಸ್ ಐಲೆಟ್: ಸೂಪರ್-8ಗೆ 7 ತಂಡಗಳ ಪ್ರವೇಶ ಖಚಿತವಾಗಿದ್ದು, ಇನ್ನೊಂದು ಸ್ಥಾನಕ್ಕಾಗಿ ಬಾಂಗ್ಲಾದೇಶ ಹಾಗೂ ನೆದರ್‌ಲೆಂಡ್ಸ್ ತಂಡಗಳ ನಡುವೆ ಪೈಪೋಟಿ ಇದೆ. ಸೋಮವಾರ ಎರಡೂ ತಂಡಗಳಿಗೆ ಪಂದ್ಯವಿದ್ದು, ಸೂಪರ್-8ಗೆ ಪ್ರವೇಶಿಸುವ ಕೊನೆಯ ತಂಡ ಯಾವುದು ಎನ್ನುವುದು ನಿರ್ಧಾರವಾಗಲಿದೆ.
ಕಿಂಗ್‌ಸ್ಟನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ನೇಪಾಳ ಸವಾಲು ಎದುರಾಗಲಿದೆ. ಹೆಚ್ಚೂ ಕಡಿಮೆ ದಕ್ಷಿಣ ಆಫ್ರಿಕಾಕ್ಕೆ ಸೋಲುಣಿಸುವ ಹಂತ ತಲುಪಿದ್ದ ನೇಪಾಳದ ಆತ್ಮವಿಶ್ವಾಸ ವೃದ್ಧಿಸಿದ್ದು ಬಾಂಗ್ಲಾಕ್ಕೆ ಸೋಲುಣಿಸುವ ವಿಶ್ವಾಸದಲ್ಲಿದೆ. ಇನ್ನು ಬಾಂಗ್ಲಾ, ಹಿಂದಿನ ಪಂದ್ಯಗಳಲ್ಲಿ ಆದ ಎಡವಟ್ಟುಗಳನ್ನು ಬದಿಗೊತ್ತಿ, ನೇಪಾಳವನ್ನು ಹೊಸಕಿ ಹಾಕಿ ಮುಂದಿನ ಹಂತಕ್ಕೇರಲು ಕಾತರಿಸುತ್ತಿದೆ.ಗ್ರಾಸ್ ಐಲೆಟ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ಗೆ ಈಗಾಗಲೇ ಸೂಪರ್-8 ರೇಸ್‌ನಿಂದ ಹೊರಬಿದ್ದಿರುವ ಶ್ರೀಲಂಕಾ ಎದುರಾಗಲಿದೆ. ನೆಟ್ ರನ್‌ರೇಟ್ ಆಧಾರದಲ್ಲಿ ಬಾಂಗ್ಲಾಗಿಂತ ಡಚ್ ಬಹಳ ಹಿಂದಿದ್ದರೂ, ಈ ವಿಶ್ವಕಪ್ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಿರುವ ಕಾರಣ, ಯಾವ ತಂಡವನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.
ಸೂಪರ್-8 ಲೆಕ್ಕಾಚಾರ ಹೇಗೆ?ನೇಪಾಳ ವಿರುದ್ಧ ಬಾಂಗ್ಲಾದೇಶ ಗೆದ್ದರೆ, ನೆದರ್‌ಲೆಂಡ್ಸ್-ಲಂಕಾ ಪಂದ್ಯದ ಫಲಿತಾಂಶ ಏನೇ ಆದರೂ, ಬಾಂಗ್ಲಾ ಸೂಪರ್-8ಗೆ ಪ್ರವೇಶಿಸಲು ಯಾವುದೇ ಅಡ್ಡಿ ಇರುವುದಿಲ್ಲ. ಒಂದು ವೇಳೆ ನೇಪಾಳ ವಿರುದ್ಧ ಬಾಂಗ್ಲಾ ಸೋತು, ಲಂಕಾ ವಿರುದ್ಧ ಡಚ್ ಗೆದ್ದರೆ ಆಗ ನೆಟ್ ರನ್‌ರೇಟ್ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ. ಬಾಂಗ್ಲಾದ +0.478, ನೆದರ್‌ಲೆಂಡ್ಸ್ ನೆಟ್ ರನ್‌ರೇಟ್ -0.408 ಹೊಂದಿವೆ. ಬಾಂಗ್ಲಾವನ್ನು ಹಿಂದಿಕ್ಕಿ ನೆದರ್‌ಲೆಂಡ್ಸ್ ಸೂಪರ್-8ಗೆ ಅರ್ಹತೆ ಪಡೆಯಬೇಕಿದ್ದರೆ, ಈ ಎರಡೂ ಪಂದ್ಯಗಳನ್ನು ಒಟ್ಟುಗೂಡಿಸಿ ಗೆಲುವಿನ ಅಂತರ ಕನಿಷ್ಠ 53 ರನ್ ಇರಬೇಕು (ಮೊದಲು ಬ್ಯಾಟ್ ಮಾಡಿದ ತಂಡ 140 ರನ್ ಗಳಿಸಿತು ಎನ್ನುವ ಅಂದಾಜಿನ ಆಧಾರದ ಮೇಲೆ).
ಉದಾಹರಣೆಗೆ, ನೇಪಾಳ ವಿರುದ್ಧ ಬಾಂಗ್ಲಾ 38 ರನ್‌ಗಳಿಂದ ಸೋತರೆ, ಆಗ ಲಂಕಾವನ್ನು ನೆದರ್‌ಲೆಂಡ್ಸ್ ಕನಿಷ್ಠ 15 ರನ್‌ಗಳಿಂದ ಸೋಲಿಸಬೇಕು. ಎರಡೂ ಪಂದ್ಯಗಳಲ್ಲಿ ಇದಕ್ಕಿಂತ ಕಡಿಮೆ ಅಂತರದಲ್ಲಿ ಫಲಿತಾಂಶ ದಾಖಲಾದರೆ, ಆಗ ಬಾಂಗ್ಲಾ ಸೂಪರ್-8ಗೆ ಪ್ರವೇಶಿಸಲಿದೆ.