ಬ್ರಿಸ್ಬೇನ್: ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಬ್ಯಾಟರ್ಸ್‌ಗಳ ಪ್ರದರ್ಶನ ಅದೇ ರಾಗ, ಅದೇ ಹಾಡು ಎಂಬಂತಾಗಿದೆ. ಆಸೀಸ್ ವೇಗಿಗಳ ಸವಾಲು ಮೆಟ್ಟಿನಿಲ್ಲಲು ಭಾರತ 3ನೇ ಟೆಸ್ಟ್‌ನಲ್ಲೂ ವಿಫಲವಾಗಿದ್ದು, ಆತಿಥೇಯರ ಮುಂದೆ ಅಕ್ಷರಶಃ ತತ್ತರಿಸಿ ಹೋಗಿದೆ.
ಪಂದ್ಯದ 3ನೇ ದಿನ ಮತ್ತೆ ಮಳೆಯದ್ದೇ ಆಟ ನಡೆದರೂ, ಭಾರತವನ್ನು ಈ ಟೆಸ್ಟ್‌ನಲ್ಲಿ ಸೋಲಿನಿಂದ ಕಾಪಾಡಬೇಕಿದ್ದರೆ ಬಹುಶಃ ಮಳೆರಾಯನೇ ಕೃಪೆ ತೋರಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.ಜಸ್‌ಪ್ರೀತ್ ಬೂಮ್ರಾರನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಭಾರತೀಯ ಬೌಲಿಂಗ್ ಪಡೆಯನ್ನು ಸರಿಯಾಗಿ ಬೆಂಡೆತ್ತಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕಲೆಹಾಕಿದ್ದು ಬರೋಬ್ಬರಿ 445 ರನ್. ಇದಕ್ಕುತ್ತರವಾಗಿ ದೊಡ್ಡ ಮೊತ್ತ ಗಳಿಸಬೇಕಿದ್ದ ಭಾರತ ಮತ್ತೆ ಜಾರಿ ಬಿದ್ದಿದೆ. 3ನೇ ದಿನದಂತ್ಯಕ್ಕೆ ಭಾರತ 4 ವಿಕೆಟ್‌ಗೆ 51 ರನ್ ಗಳಿಸಿದ್ದು, ಇನ್ನೂ 394 ರನ್ ಹಿನ್ನಡೆಯಲ್ಲಿದೆ. ಫಾಲೋ-ಆಣ್ ತಪ್ಪಿಸಬೇಕಿದ್ದರೂ ತಂಡ ಇನ್ನೂ 195 ರನ್ ಗಳಿಸಬೇಕಿದೆ.
40 ರನ್ ಸೇರ್ಪಡೆ: 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 405 ರನ್ ಗಳಿಸಿದ್ದ ಆಸ್ಟ್ರೇಲಿಯಾ, ಸೋಮವಾರ 16.1 ಓವರ್ ಆಡಿ 40 ರನ್ ಸೇರಿಸಿತು. ಮಿಚೆಲ್ ಸ್ಟಾರ್ಕ್(18)ಗೆ ಪೆವಿಲಿಯನ್ ಹಾದಿ ತೋರುವ ಮೂಲಕ ಬೂಮ್ರಾ, ದಿನದ ಮೊದಲ ವಿಕೆಟ್ ಪಡೆದರು. ಅಲೆಕ್ಸ್ ಕೇರಿ 88 ಎಸೆತಗಳಲ್ಲಿ 70 ರನ್ ಗಳಿಸಿ ತಂಡವನ್ನು 450ರ ಸನಿಹಕ್ಕೆ ತಂದು ನಿಲ್ಲಿಸಿದರು. ಬೂಮ್ರಾ 6, ಸಿರಾಜ್ 2, ನಿತೀಶ್ ರೆಡ್ಡಿ, ಆಕಾಶ್‌ದೀಪ್ ತಲಾ 1 ವಿಕೆಟ್ ಕಿತ್ತರು.
ಆರಂಭಿಕರು ಮತ್ತೆ ಫೇಲ್: ಬ್ಯಾಟರ್‌ಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ ಭಾರತವೂ ದೊಡ್ಡ ಮೊತ್ತ ದಾಖಲಿಸುವ ನಿರೀಕ್ಷೆಯಿತ್ತು. ಆದರೆ ಆಸೀಸ್ ವೇಗಿಗಳ ಮುಂದೆ ಭಾರತಕ್ಕೆ ಕ್ರೀಸ್‌ನಲ್ಲಿ ನೆಲೆಯೂರಲಾಗಲಿಲ್ಲ. ಒಬ್ಬರ ಹಿಂದೆ ಒಬ್ಬರಂತೆ ಡಗೌಟ್ ಸೇರಿದರು. ಯಶಸ್ವಿ ಜೈಸ್ವಾಲ್(04) ಮತ್ತೆ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರೆ, ಶುಭ್‌ಮನ್ ಗಿಲ್ ಕೇವಲ 1 ರನ್ ಗಳಿಸಿ ಸ್ಟಾರ್ಕ್‌ಗೆ ಬಲಿಯಾದರು. ಅನುಭವಿ ಬ್ಯಾಟರ್ ಆಗಿರುವ ವಿರಾಟ್ ಕೊಹ್ಲಿಯಾದರೂ ಸ್ವಲ್ಪ ತಾಳ್ಮೆಯಿಂದ ಆಡಲಿದ್ದಾರೆ ಎಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು. ತಮ್ಮ ಹಳೆ ತಪ್ಪು ಮುಂದುವರಿಸಿದ ಕೊಹ್ಲಿ, ಹೇಜಲ್‌ವುಡ್ ಓವರ್‌ನಲ್ಲಿ ಔಟ್ಸೈಡ್ ಆಫ್ ಸ್ಟಂಪ್ನಲ್ಲಿ ಹೋಗುವ ಚೆಂಡನ್ನು ಬಾರಿಸಲು ಹೋಗಿ ವಿಕೆಟ್ ಕೀಪರ್ ಅಲೆಕ್ಸ್ ಕೇರಿಗೆ ಕ್ಯಾಚ್ ನೀಡಿದರು. ಅವರ ಗಳಿಕೆ ಕೇವಲ 3 ರನ್. ಮೊದಲ ಪಂದ್ಯದ ಶತಕ ಹೊರತುಪಡಿಸಿ ಇತರ 4 ಇನ್ನಿಂಗ್ಸ್‌ಗಳಲ್ಲಿ ಅವರ ಸ್ಕೋರ್ ಕೇವಲ 26. ಅಪಾಯಕಾರಿ ಆಟಗಾರ ರಿಷಭ್ ಪಂತ್ ಕೂಡಾ(09) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ ಪೆವಿಲಿಯನ್‌ಗೆ ಮರಳಿದರು.
ಮೋಡಿ ಮಾಡ್ತಾರಾ ರಾಹುಲ್-ರೋಹಿತ್?: ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕೆಲ ಆಕರ್ಷಕ ಹೊಡೆತಗಳ ಮೂಲಕ ಭಾರತಕ್ಕೆ ನೆರವಾಗಿದ್ದು ಕನ್ನಡಿಗ ಕೆ.ಎಲ್.ರಾಹುಲ್. 44ಕ್ಕೆ 4 ವಿಕೆಟ್ ಕಳೆದುಕೊಂಡ ಬಳಿಕ ನಾಯಕ ರೋಹಿತ್ ಶರ್ಮಾ ಜೊತೆಗೂಡಿ ಆಡುತ್ತಿರುವ ರಾಹುಲ್ ಸದ್ಯ 64 ಎಸೆತಗಳಲ್ಲಿ 33 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ಭಾರತವನ್ನು ಸೋಲಿನಿಂದ ಪಾರು ಮಾಡಬೇಕಿದ್ದರೆ ಈ ಜೋಡಿ ದೊಡ್ಡ ಇನ್ನಿಂಗ್ಸ್ ಕಟ್ಟಲೇಬೇಕು. ರೋಹಿತ್ ದೀರ್ಘ ಕಾಲದಿಂದ ಲಯ ಕಂಡುಕೊಳ್ಳಲು ಪರದಾಡುತ್ತಿದ್ದು, ನಿರ್ಣಾಯಕ ಘಟ್ಟದಲ್ಲಿ ತಂಡಕ್ಕೆ ನೆರವಾಗಬಲ್ಲರೇ ಎಂಬ ಕುತೂಹಲವಿದೆ. ಸ್ಕೋರ್: ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 445/10 (ಅಲೆಕ್ಸ್ 70, ಬೂಮ್ರಾ 6-76, ಸಿರಾಜ್ 2-97), ಭಾರತ ಮೊದಲ ಇನ್ನಿಂಗ್ಸ್ 51/4 (3ನೇ ದಿನದಂತ್ಯಕ್ಕೆ) (ರಾಹುಲ್ ಔಟಾಗದೆ 33, ಸ್ಟಾರ್ಕ್ 2-25)
ಮಳೆ ಕಣ್ಣಾಮುಚ್ಚಾಲೆ: 6 ಬಾರಿ ಪಂದ್ಯ ಸ್ಥಗಿತ
3ನೇ ದಿನ ಮಳೆ ಕಣ್ಣಾಮುಚ್ಚಾಳೆ ಆಡಿತು. 6 ಬಾರಿ ಪಂದ್ಯ ಮಳೆಯಿಂದಾಗಿ ಸ್ಥಗಿತಗೊಂಡಿತು. ಭಾರತೀಯ ಕಾಲಮಾನ ಬೆಳಗ್ಗೆ 5.20ಕ್ಕೆ ಸರಿಯಾಗಿ ಪಂದ್ಯ ಆರಂಭಗೊಂಡಿತಾದರೂ, ಮಳೆ ಸುರಿದ ಕಾರಣ ಬೆಳಗ್ಗೆ 6.05ಕ್ಕೆ ಪಂದ್ಯ ಮೊದಲ ಬಾರಿ ಸ್ಥಗಿತಗೊಂಡಿತು. ಪದೇ ಪದೇ ಸುರಿಯುತ್ತಿದ್ದರಿಂದ ಮತ್ತೆ 5 ಬಾರಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಮಧ್ಯಾಹ್ನ 12.25ಕ್ಕೆ ಮಳೆ ಹೆಚ್ಚಾದ ಕಾರಣ 1 ಗಂಟೆ ವೇಳೆ ದಿನದಾಟ ಮುಕ್ತಾಯಗೊಳಿಸಿದ್ದಾಗಿ ರೆಫ್ರಿಗಳು ಘೋಷಿಸಿದರು.
ತವರಿನಾಚೆ ಟೆಸ್ಟ್‌ನಲ್ಲಿ ರಾಹುಲ್ 2000 ರನ್
ಕರ್ನಾಟಕದ ಬ್ಯಾಟರ್ ಕೆ.ಎಲ್.ರಾಹುಲ್ ತವರಿನಾಚೆ ಟೆಸ್ಟ್‌ನಲ್ಲಿ 2000 ರನ್ ಪೂರ್ಣಗೊಳಿಸಿದ್ದಾರೆ. ಅವರು 2014ರಿಂದ ಈ ವರೆಗೂ ವಿದೇಶದಲ್ಲಿ 64 ಇನ್ನಿಂಗ್ಸ್ ಆಡಿದ್ದು, 31.93ರ ಸರಾಸರಿಯಲ್ಲಿ 2012 ರನ್ ಗಳಿಸಿದ್ದಾರೆ. ಭಾರತದಲ್ಲಿ ಆಡಿರುವ 32 ಇನ್ನಿಂಗ್ಸ್‌ಗಳಲ್ಲಿ 39.62ರ ಸರಾಸರಿಯಲ್ಲಿ 1149 ರನ್ ಕಲೆಹಾಕಿದ್ದಾರೆ.
23 ವರ್ಷ ಬಳಿಕ ಭಾರತಕ್ಕೆ ಫಾಲೋ-ಆನ್ ಭೀತಿ!
ಟೆಸ್ಟ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಕೊನೆ ಬಾರಿ ಫಾಲೋ-ಆನ್‌ಗೆ ತುತ್ತಾಗಿದ್ದು 2001ರಲ್ಲಿ. ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾರತದ ಮೇಲೆ ಆಸೀಸ್ ಫಾಲೋ-ಆನ್ ಹೇರಿತ್ತು. 23 ವರ್ಷ ಬಳಿಕ ಭಾರತ ಮತ್ತೆ ಫಾಲೋ-ಆನ್ ಭೀತಿಯಲ್ಲಿದೆ. ಇದನ್ನು ತಪ್ಪಿಸಲು ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕನಿಷ್ಠ 246 ರನ್ ಗಳಿಸಬೇಕಿದೆ.
11 ಬಾರಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೇಜಲ್‌ವುಡ್ ಎಸೆತದಲ್ಲಿ ಕೊಹ್ಲಿ 11ನೇ ಬಾರಿ ಔಟಾದರು. ಇದು ಜಂಟಿ ಗರಿಷ್ಠ. ಟಿಮ್ ಸೌಥಿ ಕೂಡಾ ಕೊಹ್ಲಿಯನ್ನು 11 ಬಾರಿ ಔಟ್ ಮಾಡಿದ್ದಾರೆ.
18 ಬಾರಿ: ಮಿಚೆಲ್ ಸ್ಟಾರ್ಕ್ ಟೆಸ್ಟ್ ಪಂದ್ಯದ ಮೊದಲ ಓವರ್‌ನಲ್ಲಿ 18ನೇ ಬಾರಿ ವಿಕೆಟ್ ಪಡೆದರು.